ಮಂಗಳವಾರ, ಜನವರಿ 28, 2020
21 °C
ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ರೂಪಾಯಿ ವಂಚನೆ; ಕಣ್ಮುಚ್ಚಿ ಕುಳಿತ ಜಿಲ್ಲಾಡಳಿತ

ಇಟ್ಟಿಗೆ ಭಟ್ಟಿ ಅವ್ಯವಹಾರ ಅವ್ಯಾಹತ

ಪ್ರಜಾವಾಣಿ ವಾರ್ತೆ/ ಎಸ್‌. ಶರತ್‌ಕುಮಾರ್‌ Updated:

ಅಕ್ಷರ ಗಾತ್ರ : | |

ದಾವಣಗೆರೆ: ಜನಪ್ರತಿನಿಧಿಗಳ ನಿರ್ಲಕ್ಷ್ಯ, ಅಧಿಕಾರಿಗಳ ಅಸಡ್ಡೆ ಧೋರಣೆಯಿಂದ ಸರ್ಕಾರಕ್ಕೆ ಕೋಟಿ ರೂಪಾಯಿಗಟ್ಟಲೇ ತೆರಿಗೆ ವಂಚನೆಯಾಗುತ್ತಿದೆ. ನಿರೀಕ್ಷಿತ ತೆರಿಗೆ ವಸೂಲಿಗೆ ಪರದಾಡುತ್ತಿರುವ ಸರ್ಕಾರ ಈ ಅಕ್ರಮವನ್ನು ನೋಡಿಯೂ ಸುಮ್ಮನೆ ಕುಳಿತಿರುವುದು ಗ್ರಾಮವಾಸಿಗಳ ಆಕ್ರೋಶಕ್ಕೆ ಕಾರಣವಾಗಿದೆ.ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನ ಗುತ್ತೂರು ಬಳಿ ಸುಮಾರು 20 ವರ್ಷಗಳಿಂದ ನಡೆಯುತ್ತಿರುವ ಇಟ್ಟಿಗೆ ಭಟ್ಟಿ ವ್ಯವಹಾರವೇ ಸರ್ಕಾರಕ್ಕೆ ವಂಚಿಸುತ್ತಿರುವ ಬೃಹತ್‌ ಜಾಲ. ಸುಮಾರು ಸಾವಿರ ಎಕರೆ ಪ್ರದೇಶದಲ್ಲಿ ಹರಡಿರುವ ಈ ವ್ಯವಹಾರ ಬಹಳಷ್ಟು ಅಕ್ರಮಗಳಿಂದ ಕೂಡಿದೆ. ಕಂದಾಯ ಭೂಮಿಯನ್ನು ವ್ಯಾಪಾರದ ಉದ್ದೇಶಕ್ಕೆ ಬಳಸುತ್ತಿದ್ದರೂ ಜಿಲ್ಲಾಡಳಿತ, ತಾಲ್ಲೂಕು ಆಡಳಿತ ಸುಮ್ಮನಿದೆ. ಇವರು ಕೂಡ ಈ ಅಕ್ರಮದಲ್ಲಿ ಶಾಮೀಲಾಗಿದ್ದಾರೆ ಎಂಬುದು ಇಲ್ಲಿನ ಜನರ ಆರೋಪ.ಕಂದಾಯ ಭೂಮಿ: ಕೃಷಿ ಭೂಮಿಯನ್ನು ವಾಣಿಜ್ಯ ಉದ್ದೇಶಕ್ಕೆ ಬಳಸುವ ಮೊದಲು ಜಿಲ್ಲಾಡಳಿತ, ಪರಿಸರ ಇಲಾಖೆಯ ಅನುಮತಿ ಪಡೆಯುವುದು ಕಡ್ಡಾಯ. ಜಿಲ್ಲಾಡಳಿತದ ದಾಖಲೆಗಳ ಪ್ರಕಾರ ಬೆರಳೆಣಿಕೆಯಷ್ಷ್ಟು ಮಂದಿ ಮಾತ್ರ ಅನುಮತಿ ಪಡೆದಿದ್ದಾರೆ.ಉಳಿದಂತೆ ನೂರಾರು ಭೂ ಮಾಲೀಕರು ಸರ್ಕಾರಕ್ಕೆ ವಂಚಿಸುತ್ತಿದ್ದಾರೆ. ಇಲ್ಲಿಂದ ನೆರೆಯ ಅನೇಕ ಜಿಲ್ಲೆಗಳಿಗೆ ಇಟ್ಟಿಗೆ ರವಾನೆಯಾಗುತ್ತದೆ. 500ಕ್ಕೂ ಹೆಚ್ಚು ಇಟ್ಟಿಗೆ ಭಟ್ಟಿಗಳಿಂದ ವಾರ್ಷಿಕ ಸುಮಾರು ₨ 100 ಕೋಟಿಯವರೆಗೂ ವಹಿವಾಟು ನಡೆಯುತ್ತಿದೆ. ಆದರೆ, ಸರ್ಕಾರಕ್ಕೆ ಸಿಗುತ್ತಿರುವ ಆದಾಯವೆಷ್ಟು? ಎಂದು ಪ್ರಶ್ನಿಸುತ್ತಾರೆ ಇಲ್ಲಿನ ಹೆಸರು ಹೇಳಲು ಇಚ್ಛಿಸದ ನಿವಾಸಿ.ಕಾನೂನು ಉಲ್ಲಂಘನೆ:  ಸುಪ್ರೀಂಕೋರ್ಟ್‌ ಇಟ್ಟಿಗೆ ತಯಾರಿಕೆಗೆ ಎಲ್ಲೆಂದರಲ್ಲಿ ಭೂಮಿ ಅಗೆಯುವಂತಿಲ್ಲ. ಇದಕ್ಕೆ ಸರ್ಕಾರದ ಅನುಮತಿ ಪಡೆಯಬೇಕು ಎಂದು ನಿರ್ದೇಶನ ನೀಡಿದೆ. ಆದರೂ, ಈ ನಿಯಮಗಳನ್ನು ಗಾಳಿಗೆ ತೂರಲಾಗಿದೆ. ನದಿ ದಡದಲ್ಲಿ ನಿರಂತರವಾಗಿ ಭೂಮಿ ಅಗೆದಿರುವುದರಿಂದ ನದಿ ಪಾತ್ರ ವಿಸ್ತಾರಗೊಂಡಿದೆ. ನದಿ ನೀರು ಹೆಚ್ಚಾದರೆ ಅಕ್ಕಪಕ್ಕದ ಗದ್ದೆ, ಹೊಲಗಳು ನೀರಿನಲ್ಲಿ ಮುಳುಗುತ್ತಿವೆ.ಇದು ಪರಿಸರದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಸದಾ ದೂಳಿನಿಂದ ಕೂಡಿರುವ ವಾತಾವರಣದಿಂದ ಜನರು ಆಸ್ತಮಾ ಕಾಯಿಲೆಗೆ ಗುರಿಯಾಗುತ್ತಿದ್ದಾರೆ.  ನದಿ ತೀರದಲ್ಲಿ ಅಲ್ಲಲ್ಲಿ ದೊಡ್ಡ ಗುಂಡಿಗಳಿರುವುದರಿಂದ ಅನೇಕರು ಅಪಘಾತಕ್ಕೆ ಒಳಗಾಗಿದ್ದಾರೆ. ಅಲ್ಲದೇ ಬಹುತೇಕ ಬಾಲಕಾರ್ಮಿಕರು ಕೆಲಸ ಮಾಡುತ್ತಿದ್ದರೂ ಯಾರೂ ಪ್ರಶ್ನಿಸಿಲ್ಲ ಎನ್ನುತ್ತಾರೆ ಅವರು.ಸಾಧು ಸಿದ್ದಪ್ಪ ಮಠಕ್ಕೆ ಕುತ್ತು: ಇಲ್ಲಿನ ನದಿ ಪಾತ್ರಕ್ಕೆ ಹೊಂದಿಕೊಂಡತಿರುವ ಸಾಧು ಸಿದ್ದಪ್ಪ ಮಠ  ಎಂದಿನ ವೈಭವ ಕಳೆದುಕೊಳ್ಳುತ್ತ ಹೊರಟಿದೆ. ಮಠದ ಜಾಗ ಬಿಟ್ಟು ಸುತ್ತಲೂ 30 ಅಡಿಗೂ ಹೆಚ್ಚು ಆಳದ ಕಂದಕಗಳು ನಿರ್ಮಾಣಗೊಂಡಿದೆ. ಮಠದ ಅಸ್ತಿತ್ವ ಉಳಿಸಲು ಈ ಹಿಂದೆ ಅನೇಕ ಹೋರಾಟಗಳು ನಡೆದಿವೆ. ಆದರೂ, ಯಾವುದೇ ಪ್ರಯೋಜನವಾಗಿಲ್ಲ. ಹೋರಾಟ ಮಾಡಿದವರ ವಿರುದ್ಧ ಪ್ರಾಣ ಬೆದರಿಕೆಗಳು ಬಂದಿವೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.ರೈತ ಸಂಘಟನೆಗಳು ವಿಫಲ: ಕೃಷಿ ಭೂಮಿಯನ್ನು ಕೈಗಾರಿಕೆ ಸ್ಥಾಪನೆಗೆ ಬಳಸಿಕೊಳ್ಳಲು ಹೋದರೆ ರೈತ ಸಂಘಟನೆಗಳು ಹೋರಾಟ ಮಾಡಿ ಅವುಗಳನ್ನು ತಡೆಯುತ್ತವೆ. ಆದರೆ, ಈ ಭಾಗದಲ್ಲಿ ಕಣ್ಣಿಗೆ ಕಾಣುವಂತೆ ವಿಸ್ತಾರವಾಗಿ ಹರಡಿರುವ ಈ ಜಾಲವನ್ನು ನೋಡಿಯೂ ಸುಮ್ಮನಿರುವುದು ರೈತ ಸಂಘಟನೆಗಳ ವಿಫಲತೆಯನ್ನು   ತೋರಿಸುತ್ತದೆ ಎನ್ನುತ್ತಾರೆ.

ಪ್ರತಿಕ್ರಿಯಿಸಿ (+)