ಶನಿವಾರ, ಜನವರಿ 18, 2020
19 °C

ಇತಿಹಾಸದ ನೆನಪು, ಭವಿಷ್ಯದ ಕನಸು...

ನಿರೂಪಣೆ: ಪ್ರಮೋದ್‌ ಜಿ.ಕೆ. Updated:

ಅಕ್ಷರ ಗಾತ್ರ : | |

ಐದಾರು ವರ್ಷಗಳ ಹಿಂದೆ ಪಂಕಜ್‌ ಅಡ್ವಾಣಿ ಅವರು ಬಿಲಿಯರ್ಡ್ಸ್‌ನಲ್ಲಿ ಭಾರತದ ಕೀರ್ತಿಯನ್ನು ವಿಶ್ವಮಟ್ಟದಲ್ಲಿ ರಾರಾಜಿಸುವಂತೆ ಮಾಡಿದರು. ಆಗಲೇ ಭಾರತ ಅಂತರರಾಷ್ಟ್ರೀಯ ಮಟ್ಟದಲ್ಲಿ ಮೆರೆದಾಡುವ ಭರವಸೆ ಮೂಡಿತ್ತು. ಈಗ ಆ ಎಲ್ಲಾ ನಿರೀಕ್ಷೆ, ಕನಸುಗಳು ಕೈಗೂಡುವ ಹಾದಿಯಲ್ಲಿದೆ. ಸ್ನೂಕರ್‌ ಮತ್ತು ಬಿಲಿಯರ್ಡ್ಸ್‌ನಲ್ಲಿ ಸಾಕಷ್ಟು ಹೆಸರು ಮಾಡಿರುವ ಇಂಗ್ಲೆಂಡ್‌ಗೆ ಸವಾಲೊಡ್ಡುವ ಸಾಮರ್ಥ್ಯ ಈಗ ಭಾರತಕ್ಕಿದೆ.ಬಿಲಿಯರ್ಡ್ಸ್‌ನಲ್ಲಿ ಇತ್ತೀಚಿನ ವರ್ಷಗಳಲ್ಲಿ ತೋರಿರುವ ಸಾಧನೆ ಭಾರತಕ್ಕೆ ಭವ್ಯ ಭವಿಷ್ಯವಿದೆ ಎಂಬುದಕ್ಕೆ ಸಾಕ್ಷಿಯಾಗಿದೆ. ವಿಶ್ವ ಮಟ್ಟದಲ್ಲಿ ಭಾರತದ ಸಾಧನೆ ಬೆಳಗುತ್ತಿದ್ದರೂ, ದೇಶಿಯವಾಗಿ ಈ ಕ್ರೀಡೆಯಲ್ಲಿ ತೊಡಗಿಕೊಂಡವರ ಸಂಖ್ಯೆ ಬೆರಳೆಣಿಕೆಯಷ್ಟು ಮಾತ್ರ. ಕೆಲವರು ಇದು ಶ್ರೀಮಂತರ ಕ್ರೀಡೆ ಎಂದು ಭಾವಿಸಿ ದೂರ ಉಳಿದಿದ್ದಾರೆ. ಇನ್ನೂ ಕೆಲವರು ಮನರಂಜನೆಗಾಗಿ ಮಾತ್ರ ಆಡುತ್ತಿದ್ದಾರೆ. ಆದರೆ, ಈ ಎಲ್ಲಾ ತಪ್ಪು ತಿಳಿವಳಿಕೆಗಳ ನಡುವೆಯೂ ಬಿಲಿಯರ್ಡ್ಸ್‌ ಹಾಗೂ ಸ್ನೂಕರ್‌ ಅನ್ನು ವೃತ್ತಿಪರವಾಗಿ ಆಯ್ಕೆ ಮಾಡಿಕೊಳ್ಳುತ್ತಿರುವವರ ಸಂಖ್ಯೆ ನಿಧಾನವಾಗಿ ಹೆಚ್ಚುತ್ತಿರುವುದು ಸಮಾಧಾನದ ಸಂಗತಿ.ಭಾರತದಲ್ಲಿ ಸ್ನೂಕರ್‌ ಈಗ ಜನಕ್ಕೆ ಹತ್ತಿರವಾಗಿ ಬೆಳೆಯುತ್ತಿದೆ. ಜಿಲ್ಲಾ ಮಟ್ಟಕ್ಕೂ ಸ್ನೂಕರ್‌ ಸಂಸ್ಥೆಗಳು ವಿಸ್ತಾರಗೊಳ್ಳುತ್ತಿವೆ.  ಮಧುರೈ, ಕೊಯಮತ್ತೂರು, ಈರೋಡ್‌ನಲ್ಲಿ ಆಗ ಆಗಿರುವ ಬೆಳವಣಿಗೆ ಇದಕ್ಕೆ ಉದಾಹರಣೆಯಾಗಿ ನೀಡಬಹುದು. ಹೋದ ವಾರ ಬೆಂಗಳೂರಿನಲ್ಲಿ ನಡೆದ ರಾಜ್ಯ ರ್‍ಯಾಂಕಿಂಗ್‌ ಸ್ನೂಕರ್‌ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದ ಯೋಗೇಶ್‌ ದಾವಣಗೆರೆಯವರು. ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿಯೂ ಸ್ನೂಕರ್‌ ಮತ್ತು ಬಿಲಿಯರ್ಡ್ಸ್‌ ನಿಧಾನವಾಗಿ ಬೆಳವಣಿಗೆ ಕಾಣುತ್ತಿದೆ ಎನ್ನುವುದಕ್ಕೆ ಯೋಗೇಶ್‌ ಸಾಧನೆ ನಿದರ್ಶನ.ವಿಶ್ವ ಮಟ್ಟದಲ್ಲಿ ಹೆಸರು ಮಾಡಿದ ಬಿಲಿಯರ್ಡ್ಸ್‌ ಮತ್ತು ಸ್ನೂಕರ್‌ ತಾರೆಯರ ಕಣ್ಣು ಈಗ ಭಾರತದ ಮೇಲೆ ನೆಟ್ಟಿದೆ. ಅಕ್ಟೋಬರ್‌ನಲ್ಲಿ ನವದೆಹಲಿಯಲ್ಲಿ ಇಂಡಿಯನ್‌ ಓಪನ್‌ ವೃತ್ತಿಪರ ಸ್ನೂಕರ್‌ ಚಾಂಪಿಯನ್‌ಷಿಪ್‌ ನಡೆದಿತ್ತು. ಇದು ಭಾರತದಲ್ಲಿ ನಡೆದ ಮೊದಲ ವೃತ್ತಿಪರ ಟೂರ್ನಿ. ಇಲ್ಲಿ ಖ್ಯಾತನಾಮ ಆಟಗಾರರು ಪಾಲ್ಗೊಂಡಿದ್ದರು. ಪಂಕಜ್‌ ಮತ್ತು ಆದಿತ್ಯ ಮೆಹ್ತಾ ಅವರು ಅಂತರರಾಷ್ಟ್ರೀಯ ಮಟ್ಟದಲ್ಲಿ ತೋರಿರುವ ಸಾಮರ್ಥ್ಯ ಭಾರತದಲ್ಲಿ ಈ ಕ್ರೀಡೆ ಬೆಳವಣಿಗೆಗೆ ಸಹಕಾರಿಯಾಯಿತು.ಪಂಕಜ್‌ ಮತ್ತು ಆದಿತ್ಯ ಅವರು ಹಾಕಿಕೊಟ್ಟ ಅಡಿಪಾಯದ ಮೇಲೆ ಮನುಜಾ, ವಿದ್ಯಾ ಪಿಳ್ಳೈ, ವರ್ಷಾ ಸಂಜೀವ್‌, ಯಾಸೀನ್‌ ಮರ್ಚಂಟ್‌, ಮನನ್‌ ಚಂದ್ರ ಈ ಕ್ರೀಡೆಯತ್ತ ಆಸಕ್ತಿ ತೋರಿಸಿದ್ದಾರೆ. ಐರ್ಲೆಂಡ್‌ನಲ್ಲಿ ನಡೆದ ಐಬಿಎಸ್‌ಎಫ್‌ ಸ್ನೂಕರ್‌ ಟೂರ್ನಿಯಲ್ಲಿ ತಂಡ ವಿಭಾಗದಲ್ಲಿ ಭಾರತಕ್ಕೆ ಚಿನ್ನದ ಪದಕ ಲಭಿಸಿತು. ಭಾರತದಲ್ಲಿ ವೃತ್ತಿಪರ ಆಟಗಾರರ ಸಂಖ್ಯೆ ಗಣನೀಯವಾಗಿ ಹೆಚ್ಚಾಗುತ್ತಿದೆ ಎನ್ನುವುದಕ್ಕೆ ಇದು ಸಾಕ್ಷಿ. ಆದರೆ, ಭಾರತದಲ್ಲಿ ಈ ಕ್ರೀಡೆಯನ್ನು ನಂಬಿಕೊಂಡವರಿಗೆ ಉದ್ಯೋಗದ ಅವಕಾಶಗಳಿಲ್ಲ ಎನ್ನುವ ಕಹಿಯನ್ನೂ ನಂಬಲೇಬೇಕಾಗಿದೆ!ಸ್ನೂಕರ್ ಆಗಲಿ ಅಥವಾ ಬಿಲಿಯರ್ಡ್ಸ್‌ ಆಗಲಿ ತುಂಬಾಹೊತ್ತು ನಿಂತುಕೊಂಡು ಆಡುವ ಕ್ರೀಡೆ. ಅದಕ್ಕಾಗಿ ಹೆಚ್ಚು ದೈಹಿಕ ಶ್ರಮ ಬೇಕಿಲ್ಲ ಎನ್ನುವುದು ಕೆಲವರ ವಾದ. ಆದರೆ, ಇದನ್ನು ನಾನು ಒಪ್ಪುವುದಿಲ್ಲ. ಒಂದು ಏಕದಿನ ಕ್ರಿಕೆಟ್‌ ಪಂದ್ಯ ಆಡಲು ಪಡಬೇಕಾದಷ್ಟೇ ಶ್ರಮ ಇಲ್ಲಿಯೂ ಇರುತ್ತದೆ. ಚತುರತೆಗೆ ಸವಾಲಾಗುವ ಚೆಸ್‌ನಂತೆಯೇ ಸ್ನೂಕರ್‌ಗೂ ಸಾಕಷ್ಟು ಶ್ರಮ ಹಾಕಬೇಕಾಗುತ್ತದೆ.ಗಮನ ಬೇರೆಡೆ ಎಲ್ಲಿಯೂ ಹರಿಯದಂತೆ ಕಾಳಜಿ ವಹಿಸಬೇಕಾಗುತ್ತದೆ. ಇದಕ್ಕೆ ಸಾಕಷ್ಟು ಧ್ಯಾನ, ಯೋಗಾಸನ ಅಗತ್ಯವಾಗುತ್ತದೆ. ಚೆನ್ನೈನಲ್ಲಿ ನಡೆದ ವಿಶ್ವ ಚೆಸ್‌ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿ ಗೆದ್ದ ನಾರ್ವೆಯ ಮ್ಯಾಗ್ನಸ್‌ ಕಾರ್ಲಸನ್‌ ಅವರನ್ನು ಭೇಟಿಯಾದಾಗ ಇದೇ ಮಾತು ಹೇಳಿದ್ದರು. ‘ಯೋಗ ಮತ್ತು ಧ್ಯಾನ ಇಲ್ಲದೇ ಹೋಗಿದ್ದರೆ  ವಿಶ್ವನಾಥನ್‌ ಆನಂದ್‌ ಅವರನ್ನು ಮಣಿಸಲು ಸಾಧ್ಯವಿತ್ತೇ’ ಎಂದು ಪ್ರಶ್ನಿಸಿದ್ದರು.ಭಾರತದಲ್ಲಿ ಸ್ನೂಕರ್‌ ಮತ್ತು ಬಿಲಿಯರ್ಡ್ಸ್‌ ಬೆಳೆಯಲು ಮತ್ತೊಂದು ವೇದಿಕೆ ನಮ್ಮ ಮುಂದಿದೆ. 2014ರಲ್ಲಿ ಬೆಂಗಳೂರಿ ನಲ್ಲಿಯೇ ಐಬಿಎಸ್‌ಎಫ್‌ ಟೂರ್ನಿ ಆಯೋಜನೆಯಾಗಿದೆ. ಇದರಿಂದ ವಿಶ್ವ ನಕ್ಷೆಯಲ್ಲಿ ಬೆಂಗಳೂರು ಕಂಗೊಳಿಸಲು ಸಹಕಾರಿಯಾಗುತ್ತದೆ. ಇದರಿಂದ ನಮ್ಮ ರಾಜ್ಯದಲ್ಲಿಯೂ ಈ ಕ್ರೀಡೆ ಸಾಮಾನ್ಯ ಜನರಿಗೆ ಮುಟ್ಟಲು ಸಾಧ್ಯವಾಗುತ್ತದೆ ಎನ್ನುವ ಆಶಾಭಾವನೆ ನನ್ನದು.ಚಿತ್ರಾ ಕುರಿತು...

ಸ್ನೂಕರ್‌ ಮತ್ತು ಬಿಲಿಯರ್ಡ್ಸ್‌ನಲ್ಲಿ ಚಿತ್ರಾ ಅವರದ್ದು ಪ್ರಮುಖ ಹೆಸರು. ಇದೇ ವರ್ಷ ಏಷ್ಯನ್‌ ಒಳಾಂಗಣ ಕ್ರೀಡಾಕೂಟದ ಸ್ನೂಕರ್‌ನಲ್ಲಿ ಕಂಚು ಜಯಿಸಿದ್ದರು. ಈ ಸಾಧನೆ ಮಾಡಿದ ಮೊದಲ ಭಾರತೀಯ ಸ್ಪರ್ಧಿ ಎನ್ನುವ ಕೀರ್ತಿ  ಹೊಂದಿದ್ದಾರೆ.

ಹಲವು ಅಂತರರಾಷ್ಟ್ರೀಯ ಟೂರ್ನಿಗಳಲ್ಲಿ ಪದಕ ಜಯಿಸಿರುವ ಚಿತ್ರಾ  ಡಿಸೆಂಬರ್‌ ಮೊದಲ ವಾರದಲ್ಲಿ ಲಾಟ್ವಿಯಾ ದಲ್ಲಿ ನಡೆದ ಐಬಿಎಸ್‌ಎಫ್‌ ವಿಶ್ವ ಸ್ನೂಕರ್‌ ಟೂರ್ನಿಯಲ್ಲಿ ಕಂಚು ಜಯಿಸಿದ್ದಾರೆ.‘ದೊಡ್ಡ ಸವಾಲಿದೆ’

‘ಈಗ ಮಾಡಿರುವ ಸಾಧನೆಗಿಂತ ಮುಂದೆ ಮಾಡಬೇಕಾದ ಸಾಧನೆಯ ಪಟ್ಟಿ ದೊಡ್ಡದಿದೆ. ಸಾಮಾನ್ಯ ಜನರಿಗೂ ಕ್ರೀಡೆಯ ನಿಯಮಾವಳಿಗಳು ಸುಲಭವಾಗಿ ಅರ್ಥವಾಗುವಂತಾದರೆ ಸ್ನೂಕರ್‌ ಬೆಳವಣಿಗೆ ಸಾಧ್ಯವಾಗುತ್ತದೆ’ ಎಂದು ವಿದ್ಯಾ ಪಿಳ್ಳೈ ಹೇಳುತ್ತಾರೆ.

ಸಾಕಷ್ಟು ರಾಜ್ಯ ಮತ್ತು ರಾಷ್ಟ್ರೀಯ ಟೂರ್ನಿಗಳಲ್ಲಿ ವಿದ್ಯಾ ಪ್ರಶಸ್ತಿ ಜಯಿಸಿದ್ದಾರೆ. ಅಕ್ಟೋಬರ್‌ನಲ್ಲಿ ವಿಶ್ವ 6 ರೆಡ್‌ ಸ್ನೂಕರ್‌ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನ ಗೆದ್ದಿದ್ದರು.

ಪ್ರತಿಕ್ರಿಯಿಸಿ (+)