ಶನಿವಾರ, ಮೇ 28, 2022
30 °C
ಟೆಲಿಗ್ರಾಂ ಎಂಬ ಅದ್ಭುತ ವ್ಯವಸ್ಥೆಗೆ ವಿದಾಯ ಹೇಳುವ ಮುನ್ನ ಒಂದು ಹಿನ್ನೋಟ...

ಇತಿಹಾಸದ ಪುಟ ಸೇರಲಿರುವ ಟೆಲಿಗ್ರಾಂ...

-ಸುಮಂಗಲಾ ಎಸ್. ಮುಮ್ಮಿಗಟ್ಟಿ ಬೆಂಗಳೂರು Updated:

ಅಕ್ಷರ ಗಾತ್ರ : | |

ಟೆಲಿಗ್ರಾಂ, ತಾರ್, ತಂತಿ ಎಂದೆಲ್ಲಾ ಪ್ರಚಲಿತದಲ್ಲಿದ್ದ ಸಂಪರ್ಕ ವ್ಯವಸ್ಥೆ ಇದೇ 15 ರಿಂದ ಭಾರತದಲ್ಲಿ ಸ್ಥಗಿತಗೊಳ್ಳಲಿದೆ. ಇಂದಿನ ಮೊಬೈಲ್, ಇಂಟರ್‌ನೆಟ್ ಯುಗದಲ್ಲಿ ಇದೇನೂ ಅಂತಹ ಮಹತ್ತರ ಬದಲಾವಣೆಯನ್ನು ನಮ್ಮ ಜೀವನದಲ್ಲಿ ಉಂಟು ಮಾಡಲಾರದು. ಆದರೆ ಇದನ್ನೋದಿದ ಹಿರಿಯರಿಗೆ ನೆನಪಾಗುವುದು ಅದು ಹೆಚ್ಚಿಸುತ್ತಿದ್ದ `ಹೃದಯದ ಬಡಿತ'. ಶೀಘ್ರ ಸಂಪರ್ಕಕ್ಕಾಗಿ ತೊಂಬತ್ತರ ದಶಕದವರೆಗೆ ವ್ಯಾಪಕವಾಗಿ ಬಳಕೆಯಲ್ಲಿದ್ದ ಈ `ಟೆಲಿಗ್ರಾಂ' ಕ್ರಮೇಣ ಮರೆಯಾಗಲು ಪ್ರಾರಂಭಿಸಿತು.`ಟೆಲಿಗ್ರಾಫಿ' ಎಂಬ ಮೂಲ ಗ್ರೀಕ್ ಪದ `ದೂರದಲ್ಲಿರುವ' ಮತ್ತು `ಬರಹ' ಎಂಬ ಎರಡು ಪದಗಳಿಂದಾದ `ಪದ'. ದೂರದಲ್ಲಿರುವವರಿಗೆ ಸಂದೇಶವನ್ನು ತ್ವರಿತವಾಗಿ ಹೃಸ್ವ ರೂಪದಲ್ಲಿ ಕಳಿಸುವ ವ್ಯವಸ್ಥೆಯನ್ನು `ಟೆಲಿಗ್ರಾಫಿ' ಎನ್ನುತ್ತಾರೆ. ಯೂರೋಪಿನಲ್ಲಿ `ಟೆಲಿಗ್ರಾಫ್' ವ್ಯವಸ್ಥೆ 1792 ರಿಂದ `ಸಿಮಪೋರ್' ರೇಖೆಗಳ ರೂಪದಲ್ಲಿ ಬಳಕೆಯಲ್ಲಿತ್ತು. 1837ರಲ್ಲಿ ಅಮೆರಿಕದ ಸಂಶೋಧಕ ಸ್ಯಾಮುಯಲ್ ಎಫ್. ಬಿ. ಮೋರ್ಸ್ ವಿದ್ಯುತ್ ಚಾಲಿತ ಟೆಲಿಗ್ರಾಫ್ ವ್ಯವಸ್ಥೆಯನ್ನು ಯಶಸ್ವಿಯಾಗಿ ಪ್ರದರ್ಶಿಸಿದ. ಅದಾದ ನಂತರ `ಮೋರ್ಸ್' ಸಂಕೇತದ ರೂಪದಲ್ಲಿರುವ ಈ `ಟೆಲಿಗ್ರಾಫ್' ಕಾರ್ಯ ನಿರ್ವಹಿಸಲಾರಂಭಿಸಿತು.ಭಾರತದಲ್ಲಿ ಈ ಟೆಲಿಗ್ರಾಫ್ ಸಂಪರ್ಕ ವ್ಯವಸ್ಥೆಗೆ 163 ವರ್ಷಗಳ ಇತಿಹಾಸವಿದೆ. 1833 ರಲ್ಲಿ 24 ವರ್ಷದ ಶಸ್ತ್ರ ವೈದ್ಯ ವಿಲಿಯಂ ಬ್ರೂಕ್ ಓ ಶೋಹೆನ್ಸೆ ಈಸ್ಟ್ ಇಂಡಿಯಾ ಕಂಪೆನಿಯಿಂದ ನಿಯುಕ್ತನಾಗಿ ಭಾರತಕ್ಕೆ ಬಂದ. ಸಹಾಯಕ ಶಸ್ತ್ರ ವೈದ್ಯನಾಗಿದ್ದ ಶೋಹೆನ್ಸೆ ವಿದ್ಯುತ್ ಉಪಕರಣಗಳಲ್ಲಿ ಆಸಕ್ತಿಯನ್ನು ಹೊಂದಿದ್ದ. ಎಲೆಕ್ಟ್ರಿಕ್ ಮೋಟಾರ್ ಮತ್ತು ಸಿಲ್ವರ್ ಕ್ಲೋರೈಡ್ ಬ್ಯಾಟರಿಗಳನ್ನು ತಯಾರಿಸಿದ್ದ.ಮೋರ್ಸ್ ತನ್ನ ಸಂಶೋಧನೆಯನ್ನು ಪ್ರಕಟಿಸಿದ ಎರಡೇ ವರ್ಷಗಳಲ್ಲಿ ಅಂದರೆ 1839 ರಲ್ಲಿ ಓ ಶೋಹೆನ್ಸೆ ಕಲ್ಕತ್ತ(ಇಂದಿನ ಕೋಲ್ಕತ್ತಾ)ದಲ್ಲಿ ತನ್ನದೇ ಆದ ವೈಯಕ್ತಿಕ ಹದಿಮೂರೂವರೆ ಮೈಲು ಉದ್ದದ ಟೆಲಿಗ್ರಾಫ್ ಸಂಪರ್ಕವನ್ನು ರೂಪಿಸಿದ್ದ. ಇವನು ಬಳಸಿದ ಸಂಕೇತಗಳು ಮೋರ್ಸ್‌ನ ಸಂಕೇತಗಳಿಗಿಂತ ಭಿನ್ನವಾಗಿದ್ದು ಆಪರೇಟರ್‌ನ ಬೆರಳಿಗೆ ಸಣ್ಣ, ಸಣ್ಣ, ಸರಣಿ ವಿದ್ಯುತ್ ಆಘಾತಗಳನ್ನು ಕೊಡುವುದನ್ನು ಅವನು ಸಂಕೇತವಾಗಿ ಬಳಸಿಕೊಂಡ. ಅವನ ಸಂಪರ್ಕ ವ್ಯವಸ್ಥೆಯ ಹದಿಮೂರೂವರೆ ಮೈಲಿಯಲ್ಲಿ ಎರಡೂವರೆ ಮೈಲು ಉದ್ದದ ಹೂಗ್ಲಿ ನದಿ ಕೂಡಾ ತಂತಿಗೆ ಬದಲಾಗಿ ವಾಹಕವಾಗಿತ್ತು. ಇವನು ಅದನ್ನು ಪ್ರಕಟಿಸಿಯೂ ಬಿಟ್ಟ. 1847ರಲ್ಲಿ ಲಾರ್ಡ್ ಡಾಲ್ ಹೌಸಿ ಭಾರತದ ಗವರ್ನರ್ ಜನರಲ್ ಆಗಿದ್ದ ಸಂದರ್ಭದಲ್ಲಿ ಓ ಶೋಹೆನ್ಸೆಯನ್ನು ಭಾರತದಲ್ಲಿ ಟೆಲಿಗ್ರಾಫ್ ವ್ಯವಸ್ಥೆಯನ್ನು ಅಭಿವೃದ್ಧಿ ಪಡಿಸಲು ನೇಮಿಸಲಾಯಿತು. ಇದು ಕಲ್ಕತ್ತಾ ಮತ್ತು ಡೈಮಂಡ್ ಹಾರ್ಬರ್ ನಡುವಿನ 27 ಮೈಲು (43.5 ಕಿ.ಮೀ.) ದೂರದ ತಂತಿ ವ್ಯವಸ್ಥೆಯಾಗಿತ್ತು. ಇದು 1850ರಲ್ಲಿ ಕಾರ್ಯಾರಂಭ ಮಾಡಿತು. ಇದೊಂದು ಅತೀ ಸಣ್ಣ ಪ್ರಾರಂಭವಾಗಿದ್ದರೂ, ಭಾರತ ಮುಂದೆ ವಿಶ್ವದ ಆರನೆಯ ಅತಿ ದೊಡ್ಡ ಒಳನಾಡು ಟೆಲಿಗ್ರಾಫ್ ವ್ಯವಸ್ಥೆಯಾಗಿ ಬೆಳೆಯಿತು.ಡೇವಿಡ್ ಅರ್ನಾಲ್ಡ್‌ನ ಪ್ರಕಾರ 1939ರಲ್ಲಿ ಭಾರತದಲ್ಲಿ 100,000 ಮೈಲುಗಳುದ್ದದ ಟೆಲಿಗ್ರಾಫ್ ವ್ಯವಸ್ಥೆಯಿತ್ತು. ಅದು ಪ್ರತಿ ವರ್ಷ 17 ದಶಲಕ್ಷ ಸಂದೇಶಗಳನ್ನು ರವಾನಿಸುತ್ತಿತ್ತು. 1856ರಲ್ಲಿ ಭಾರತೀಯ ಟೆಲಿಗ್ರಾಫ್ ವ್ಯವಸ್ಥೆಯಲ್ಲಿ ಒಟ್ಟು 46 ಕೇಂದ್ರಗಳಿದ್ದವು. 1857ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ನಂತರ, ಅಷ್ಟೇ ಏಕೆ 1882ರಲ್ಲಿ ದೂರವಾಣಿ ಸಂಪರ್ಕ ವ್ಯವಸ್ಥೆ ಭಾರತವನ್ನು ಪ್ರವೇಶಿಸಿದ ನಂತರವೂ, ಭಾರತದಲ್ಲಿ ಟೆಲಿಗ್ರಾಫ್ ವ್ಯವಸ್ಥೆ ವ್ಯಾಪಕವಾಗಿ ಬಳಕೆಯಾಗಿತ್ತು. 1985ರಲ್ಲಿ ಅತ್ಯಂತ ಉಚ್ಛ್ರಾಯ ಸ್ಥಿತಿಯಲ್ಲಿದ್ದ ಭಾರತೀಯ ಟೆಲಿಗ್ರಾಫ್ ವ್ಯವಸ್ಥೆಯಲ್ಲಿ 45,000 ಕಾರ್ಯಾಲಯಗಳಿದ್ದವು. ಅಲ್ಲಿಂದ ಪ್ರತಿ ವರ್ಷ ಅರವತ್ತು ದಶಲಕ್ಷ ಟೆಲಿಗ್ರಾಮುಗಳ ವಹಿವಾಟು ನಡೆಯುತ್ತಿತ್ತು. ಇಂದು ಇದು ಭಾರತದ 671 ಜಿಲ್ಲೆಗಳ 75 ಆಫೀಸುಗಳಿಗೆ ಇಳಿದಿದೆ. ಅಂದು ಈ ವ್ಯವಸ್ಥೆಯಲ್ಲಿದ್ದ 12,500 ಉದ್ಯೋಗಿಗಳ ಸಂಖ್ಯೆ ಇಂದು 998ಕ್ಕೆ ಇಳಿದಿದೆ. ಇಪ್ಪತ್ತನೆಯ ಶತಮಾನದ ಪೂರ್ವಾರ್ಧದಲ್ಲಿ ಎಲ್ಲ ಸರ್ಕಾರೀ ಕಾರ್ಯಾಲಯಗಳೂ ಸಾಮಾನ್ಯವಾಗಿ ಟೆಲಿಗ್ರಾಫ್ ವ್ಯವಸ್ಥೆಯನ್ನು ತಮ್ಮ ಸಂದೇಶಗಳ ರವಾನೆಗಾಗಿ ಬಳಸುತ್ತಿದ್ದವು.1953ರಲ್ಲಿ ಭಾರತೀಯ ಅಂಚೆ ಇಲಾಖೆ ತನ್ನ ಶತಮಾನೋತ್ಸವವನ್ನು ಆಚರಿಸಿದ ಸಂದರ್ಭದಲ್ಲಿ ಪ್ರಕಟಿಸಿದ ಕೃಷ್ಣಲಾಲ್ ಶ್ರೀಧರಣಿ ಅವರ `ಇಂಡಿಯನ್ ಟೆಲಿಗ್ರಾಫ್: ಎ ಸೆಂಚುರಿ ಆಫ್ ಪ್ರೋಗ್ರೆಸ್' ಎಂಬ ಪುಸ್ತಕ ಭಾರತೀಯ ಟೆಲಿಗ್ರಾಫ್ ವ್ಯವಸ್ಥೆಯ ಯಶಸ್ಸಿನ ಹಾದಿಯನ್ನು ದಾಖಲಿಸಿತು. ಅದರ ಪ್ರಕಾರ ಭಾರತದ ದೂರದೂರದ ಹಳ್ಳಿಗಳನ್ನೂ ಸಂಪರ್ಕಿಸುವ ಜಾಲವನ್ನು ಹೊಂದಿದ್ದ ಭಾರತೀಯ ಟೆಲಿಗ್ರಾಫ್ ವ್ಯವಸ್ಥೆ ಅತ್ಯಂತ ಶಕ್ತಿಶಾಲಿ ಸಂಪರ್ಕ ಮಾಧ್ಯಮವಾಗಿತ್ತು. ರಾಜಧಾನಿ ದೆಹಲಿಯೊಂದಕ್ಕೇ ಪ್ರತಿ ದಿನ 100,000ಕ್ಕೂ ಹೆಚ್ಚು ಟೆಲಿಗ್ರಾಂಗಳು ಬರುತ್ತಿದ್ದವು.ಕೇವಲ ಮೂರು ರೂಪಾಯಿ ಐವತ್ತು ಪೈಸೆಗಳಲ್ಲಿ ಸಂದೇಶವನ್ನು ರವಾನಿಸುವ ಈ ವ್ಯವಸ್ಥೆಯಲ್ಲಿ ಬಳಸುವ ಭಾಷೆಯೂ ವಿಶಿಷ್ಟವಾಗಿತ್ತು. ಅಂದಿನ ಶಾಲಾ ಇಂಗ್ಲಿಷ್ ಪಠ್ಯಗಳಲ್ಲಿ ಟೆಲಿಗ್ರಾಂ ಬರೆಯುವ ವಿಧಾನವೂ ಇದ್ದು ಪರೀಕ್ಷೆಗಳಲ್ಲಿ ಇದಕ್ಕೆ ಸಂಬಂಧಿಸಿದ ಪ್ರಶ್ನೆಯೂ ಇರುತ್ತಿತ್ತು.90ರ ದಶಕದಲ್ಲಿ ಅಂತರ್ಜಾಲದ ಬಳಕೆ, ನಂತರ ಸೆಲ್‌ಫೋನ್‌ಗಳು, ಎಸ್.ಎಂ.ಎಸ್.ಗಳ ಭರಾಟೆಯಲ್ಲಿ ಟೆಲಿಗ್ರಾಂ ರವಾನೆ ಕ್ರಮೇಣ ಕ್ಷೀಣಿಸಿತು. ಇದು ಜಗತ್ತಿನ ಬೇರೆ ದೇಶಗಳಿಗೂ ಅನ್ವಯಿಸುತ್ತದೆ.ಭಾರತ ಸಂಚಾರ ನಿಗಮದ(ಬಿಎಸ್‌ಎನ್‌ಎಲ್) ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಈ ವ್ಯವಸ್ಥೆ ನಷ್ಟದಲ್ಲಿ ಇರುವುದರಿಂದ ಸರ್ಕಾರದ ಸಹಾಯವನ್ನು ಕೇಳಿತು. ಎರಡು ವರ್ಷಗಳ ಹಿಂದೆ, ಅರವತ್ತು ವರ್ಷಗಳಲ್ಲಿ ಮೊದಲ ಸಲ ಬೆಲೆಯನ್ನು ನಾಲ್ಕು ರೂಪಾಯಿಗಳಿಗೆ ಹೆಚ್ಚಿಸಿತು. ಈ ಎಲ್ಲ ಪ್ರಯತ್ನಗಳ ನಂತರವೂ ಬಿಎಸ್‌ಎನ್‌ಎಲ್ ಕಳೆದೆರಡು ವರ್ಷಗಳಲ್ಲಿ 1.70 ಕೋಟಿ ರೂಪಾಯಿಗಳ ನಷ್ಟವನ್ನು ಅನುಭವಿಸಿದ ನಂತರ, ಮತ್ತೆ ಸರ್ಕಾರದ ಸಹಕಾರವನ್ನು ಕೋರಿದಾಗ, ಇದರ ಅವಶ್ಯಕತೆಯ ಅಧ್ಯಯನವೂ ಆಯಿತು. ಭಾರತೀಯ ಅಂಚೆ ಇಲಾಖೆಯೊಂದಿಗೆ ಸಮಾಲೋಚನೆ ನಡೆಸಿದ ನಂತರ ಇದೀಗ ಇದೇ ಜುಲೈ 15ರಂದು ಟೆಲಿಗ್ರಾಂ ಎಂಬ ವ್ಯವಸ್ಥೆಯನ್ನು ಇತಿಹಾಸದ ಪುಟಗಳಿಗೆ ಸೇರಿಸಲು ನಿರ್ಧರಿಸಲಾಯಿತು.ಭಾರತದ ಇತಿಹಾಸದ ಪುಟಗಳನ್ನು ಸೇರಲಿರುವ ಈ ವ್ಯವಸ್ಥೆಯ ಬಗೆಗೆ ಇಂದಿನ ಯುವ ಪೀಳಿಗೆಗೆ ಹೆಚ್ಚೇನೂ ಗೊತ್ತಿಲ್ಲ. ಇಂತಹ ಸಂಪರ್ಕ ವ್ಯವಸ್ಥೆ ಇದುವರೆಗೂ ಕಾರ್ಯ ನಿರ್ವಹಿಸುತ್ತಿತ್ತೇ ಎನ್ನುವವರೂ ಇದ್ದಾರೆ.  ತಂತ್ರಜ್ಞಾನ ಹಳೆಯದಾದಂತೆ, ಅನವಶ್ಯಕ ಎಂಬ ಅಭಿಪ್ರಾಯ ಮೂಡುತ್ತದೆ. ಆದರೆ ಮುಂದಿನ ಆಧುನಿಕ ವ್ಯವಸ್ಥೆಯ ತಳಹದಿಯಾಗಿ ಮೊದಲ ವ್ಯವಸ್ಥೆ ಕಾರ್ಯ ನಿರ್ವಹಿಸುತ್ತಿತ್ತು; ಅಂದಿನ ದಿನಗಳಲ್ಲಿ ಅದು ತನ್ನದೇ ಆದ ಕೊಡುಗೆಯನ್ನು ನೀಡಿತ್ತು ಎನ್ನುವುದನ್ನು ಮರೆಯುವಂತಿಲ್ಲ. ಇಡೀ ಏಷ್ಯಾದಲ್ಲಿ ಶಕ್ತಿ ಶಾಲಿ ಟೆಲಿಗ್ರಾಫ್ ನೆಟ್‌ವರ್ಕ್ ಭಾರತದ್ದಾಗಿತ್ತು ಎನ್ನುವುದು ಹೆಮ್ಮೆಯ ಸಂಗತಿ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.