ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇತಿಹಾಸ ಮರುಕಳಿಸಿದ ಹೋರಾಟ

ಬಂಡವಾಳಶಾಹಿಗಳ ಹಿತರಕ್ಷಣೆಯೇ ಹೊಸ ನೀತಿಯ ಹಿಂದಿನ ಮರ್ಮ: ಮುಖಂಡರ ಅಭಿಮತ
Last Updated 24 ಏಪ್ರಿಲ್ 2016, 19:45 IST
ಅಕ್ಷರ ಗಾತ್ರ

ಬೆಂಗಳೂರು: ‘ಇತಿಹಾಸ ಮರುಕಳಿಸಿದೆ’ –ಗಾರ್ಮೆಂಟ್‌ ಕಾರ್ಖಾನೆಗಳ ಮಹಿಳಾ ಕಾರ್ಮಿಕರ ಚಳವಳಿ ಇತಿಹಾಸವನ್ನು ಬಲ್ಲವರು ಮೊನ್ನಿನ ಪ್ರತಿಭಟನೆಯನ್ನು ಎರಡೇ ಪದಗಳಲ್ಲಿ ವಿಶ್ಲೇಷಿಸುವುದು ಹೀಗೆ.

‘2001ರಲ್ಲಿ ಅಟಲ್‌ ಬಿಹಾರಿ ವಾಜಪೇಯಿ ಅವರ ನೇತೃತ್ವದ ಆಗಿನ ಸರ್ಕಾರ ಇಂತಹುದೇ ನಿರ್ಣಯ ಕೈಗೊಂಡು ವೃದ್ಧಾಪ್ಯದಲ್ಲಿ ಸಾಮಾಜಿಕ ಹಾಗೂ ವರಮಾನ ಭದ್ರತೆ ಯೋಜನೆಯನ್ನು (ಒಎಎಸ್‌ಐಎಸ್‌) ಜಾರಿಗೆ ತಂದಿತ್ತು. ಆ ಮೂಲಕ ಭವಿಷ್ಯದ ಹೆಸರಿನಲ್ಲಿ ವರ್ತಮಾನದ ಬದುಕನ್ನು ಕಸಿದುಕೊಳ್ಳುವ ಯತ್ನ ನಡೆಸಿತ್ತು. ಅದರ ವಿರುದ್ಧ ಪೀಣ್ಯದ ಗಾರ್ಮೆಂಟ್‌ ಕಾರ್ಖಾನೆಗಳ ಮಹಿಳಾ ಕಾರ್ಮಿಕರೇ ಬೀದಿಗಿಳಿದಿದ್ದರು’ ಎಂದು ಚಿಂತಕ ಶಿವಸುಂದರ್‌ ನೆನಪಿಸಿಕೊಳ್ಳುತ್ತಾರೆ.

‘ಹತ್ತಾರು ಸಾವಿರ ಸಂಖ್ಯೆಯಲ್ಲಿ ಕಾರ್ಮಿಕರು ಬೀದಿಗಿಳಿದು ಪ್ರತಿಭಟಿಸಿದ ಫಲವಾಗಿ ಆಗಿನ  ಸರ್ಕಾರ ಒಎಎಸ್‌ಐಎಸ್‌ ಜಾರಿ ನಿರ್ಧಾರದಿಂದ ಹಿಂದೆ ಸರಿದಿತ್ತು. ಕಾಕತಾಳೀಯ ಎನ್ನುವಂತೆ ಮತ್ತೆ ಎನ್‌ಡಿಎ ಸರ್ಕಾರವೇ ಪಿಎಫ್‌ಗೆ ಸಂಬಂಧಿಸಿದಂತೆ ಅಂತಹುದೇ ನೀತಿಯನ್ನು ತರಲು ಯತ್ನಿಸಿ ಹಿಂದೆ ಸರಿದಿದೆ’ ಎಂದು ಅವರು ವಿವರಿಸುತ್ತಾರೆ.

‘45 ವರ್ಷ ಆಗುವತನಕ ಭವಿಷ್ಯ ನಿಧಿಯಿಂದ (ಪಿಎಫ್‌) ಹಣ ತೆಗೆಯಲು ಸಾಧ್ಯವಿಲ್ಲ ಎಂಬ ವದಂತಿ ಕಾಳ್ಗಿಚ್ಚಿನಂತೆ ಎಲ್ಲ ಗಾರ್ಮೆಂಟ್‌ ಕಾರ್ಖಾನೆಗಳಿಗೆ ಹಬ್ಬಿತ್ತು. 2001ರ ಜುಲೈ 24ರಂದು ಅಪೆಕ್ಸ್‌ ಗಾರ್ಮೆಂಟ್‌ ಕಾರ್ಖಾನೆಯಿಂದ ಹೊರಬಿದ್ದ ಕಾರ್ಮಿಕರು ಉಳಿದ ಘಟಕಗಳಲ್ಲಿ ಕೆಲಸ ಮಾಡುತ್ತಿದ್ದವರನ್ನೂ ಕರೆದುಕೊಂಡು ಬೀದಿಗಿಳಿದರು. ಆ ವಿಶೇಷ ಘಟನೆ ಪೊಲೀಸರು, ಮಾಧ್ಯಮ ಪ್ರತಿನಿಧಿಗಳು ಹಾಗೂ ಸ್ವತಃ ಕಾರ್ಮಿಕ ಸಂಘಟನೆಗಳ ಮುಖಂಡರಲ್ಲೂ ಸೋಜಿಗ ಉಂಟುಮಾಡಿತ್ತು’ ಎಂದು ಆ ಹೋರಾಟದ ನೆನಪು ಹೆಕ್ಕಿ ತೆಗೆಯುತ್ತಾರೆ ಕಾರ್ಮಿಕ ಮುಖಂಡ ಜಗದೀಶ್‌.

‘ಗುಪ್ತಚರ ದಳಕ್ಕೂ ಚಳ್ಳೆಹಣ್ಣು ತಿನ್ನಿಸಿದ್ದರು ಮಹಿಳಾ ಕಾರ್ಮಿಕರು. ಆದರೆ, ಆಗಲೂ ಪ್ರತಿಭಟನೆ ಹಿಂಸಾತ್ಮಕ ಸ್ವರೂಪ ಪಡೆದಿತ್ತು’ ಎಂದು ಅವರು ಹೇಳುತ್ತಾರೆ.

‘ಜಾಗತೀಕರಣದ ನೀತಿಗಳ ಭಾಗವಾಗಿ ಕಾರ್ಮಿಕರಿಗೆ ಕೊಡಬೇಕಿರುವ ನಿವೃತ್ತಿ ಭತ್ಯೆಗಳನ್ನು ಕಡಿತಗೊಳಿಸಿ ಅದರ ಮೊತ್ತವನ್ನು ಬಂಡವಾಳವಾಗಿ ಬಳಸಲು ಅಮೆರಿಕದಲ್ಲಿ ‘401-k’ ಎಂಬ ಕಾರ್ಮಿಕ ವಿರೋಧಿ-ಬಂಡವಾಳಿಗ ಪರ ನೀತಿ ಜಾರಿ ಆಗುತ್ತಿತ್ತು. ಅಮೆರಿಕದ ಜತೆ ಬಂಡವಾಳ ಹೂಡಿಕೆ ಸಖ್ಯ ಮಾಡಿಕೊಳ್ಳುತ್ತಿದ್ದ ಎಲ್ಲಾ ಸರ್ಕಾರಗಳು ಇದೇ ಬಗೆಯ ನೀತಿಯನ್ನು ತಮ್ಮ ದೇಶಗಳಲ್ಲಿ ಜಾರಿಗೆ ತರಲು ಒಪ್ಪಂದಗಳು ಕಡ್ಡಾಯವಾದವು’ ಎಂದು ವಿವರಿಸುತ್ತಾರೆ ಪ್ರೊ.ವಿ.ಎಸ್‌.ಶ್ರೀಧರ್‌.

‘ಅಟಲ್‌ ಬಿಹಾರಿ ವಾಜಪೇಯಿ ಅವರ ಸರ್ಕಾರ 2000ರ ಜನವರಿಯಲ್ಲಿ ಡಾ.ಎಸ್‌.ಎ.ದವೆ ಸಮಿತಿಯನ್ನು ರಚಿಸಿತ್ತು. ವಿಪರ್ಯಾಸವೆಂದರೆ ಆ ವರದಿಗೆ ವೃದ್ಧಾಪ್ಯದಲ್ಲಿ ಸಾಮಾಜಿಕ ಹಾಗೂ ವರಮಾನ ಭದ್ರತೆ ಯೋಜನೆ ಎಂಬ ಹೆಸರಿಡಲಾಗಿತ್ತು’ ಎಂದು ಅವರು ವ್ಯಂಗ್ಯವಾಡುತ್ತಾರೆ.

‘ಅಮೆರಿಕದ ‘401-k’ ನೀತಿಯ ಯಥಾವತ್‌ ನಕಲು ಒಎಎಸ್‌ಐಎಸ್‌ ಯೋಜನೆ.  ಮೇಲ್ನೋಟಕ್ಕೆ ಸ್ಪಷ್ಟವಾಗುವಂತೆ ಇದರ ನೇರ ಲಾಭವಾಗುವುದು ಬಂಡವಾಳ ಹೂಡಿಕೆಗೆ ಬೇಕಾದ ಸುಲಭದ ದರದ ‘ಸಾಲ’ದ ಕೊರತೆಯಿಂದ ಬಿಕ್ಕಟ್ಟಿನಲ್ಲಿದ್ದ ಬಂಡವಾಳಶಾಹಿಗಳಿಗೆ’ ಎಂದು ಹೇಳುತ್ತಾರೆ ಶಿವಸುಂದರ್‌.

‘ಯೋಜನೆಯಿಂದ ಅತಂತ್ರವಾದುದು ಕಾರ್ಮಿಕರ ಭವಿಷ್ಯ. ಏಕೆಂದರೆ ಭವಿಷ್ಯ ನಿಧಿಯು ‘ಹೂಡಿಕೆಯಾಗಬಲ್ಲ ನಿಧಿ’ ಆಗಬೇಕೆಂದರೆ ಅದನ್ನು ಪದೇ ಪದೇ ಹಿಂಪಡೆಯಬಾರದು. ಆದರೆ, ಕಾರ್ಮಿಕರು ಇದನ್ನು ತಮ್ಮ ತುರ್ತು ಅಗತ್ಯಗಳಿಗೆ ಬಳಸಿಕೊಳ್ಳುತ್ತಾರೆ. 2000ರ ನೀತಿಯಾಗಲಿ, ಇತ್ತೀಚಿನ ಪಿಎಫ್‌ ನೀತಿಯಾಗಲಿ ಕಾರ್ಮಿಕರ ಈ ಹಕ್ಕನ್ನು ನಿರ್ದಯವಾಗಿ ಕಸಿದುಕೊಳ್ಳುತ್ತಿತ್ತು. ಭವಿಷ್ಯದ ಹೆಸರಲ್ಲಿ ವರ್ತಮಾನದ ಬದುಕನ್ನು ಕಸಿದು ಬಂಡವಾಳಿಗರ ಲಾಭಕ್ಕೆ ಒದಗಿಸುವ ನೀತಿ ಅದಾಗಿತ್ತು’ ಎಂದು ಅವರು ಒಳನೋಟ ಬೀರುತ್ತಾರೆ. 

‘ಉದಾರೀಕರಣ ಪ್ರಕ್ರಿಯೆ ಪ್ರಾರಂಭವಾಗುವ ಮುನ್ನ ಕಾರ್ಮಿಕರಿಗೆ ನಿವೃತ್ತಿಯಾಗುವ ವೇಳೆಗೆ ಪೆನ್ಷನ್, ಪಿಎಫ್, ಮತ್ತು ಗ್ರಾಚ್ಯುಟಿ ಎಂಬ ಮೂರು ಬಗೆಯ ಸೌಲಭ್ಯಗಳನ್ನು ಸರ್ಕಾರ ಕೊಡುತ್ತಿತ್ತು. ಇದರಲ್ಲಿ ಪೆನ್ಷನ್ ಅನ್ನು ಸಂಪೂರ್ಣವಾಗಿ ಸರ್ಕಾರವೇ ಭರಿಸುತ್ತಿತ್ತು. ಪಿಎಫ್‌ನಲ್ಲಿ ಅರ್ಧಾಂಶ ಮತ್ತು ಗ್ರಾಚ್ಯುಟಿಯಲ್ಲಿ ಪೂರ್ಣಾಂಶವನ್ನು ಮಾಲೀಕರೇ ಕಾರ್ಮಿಕರಿಗೆ ನಿವೃತ್ತಿಯ ಸಮಯದಲ್ಲಿ ಕೊಡಬೇಕಿದ್ದ ಇಡುಗಂಟಾಗಿತ್ತು’ ಎಂದು ಪ್ರೊ. ಶ್ರೀಧರ್‌ ವಿವರಿಸುತ್ತಾರೆ.

‘ಉದಾರೀಕರಣ ಮತ್ತು ಜಾಗತೀಕರಣ ಪ್ರಾರಂಭವಾದ ನಂತರ ಮಾಲೀಕರು ಕೊಡುತ್ತಿದ್ದ ಗ್ರಾಚ್ಯುಟಿ ಬಹುತೇಕ ನಿಂತಿದೆ. ಇಲ್ಲವೆ ಕೊಡದಿರಲು ಬೇಕಾದ ತಂತ್ರ ಹೂಡಲಾಗುತ್ತದೆ. 1986ರ ನಂತರದಲ್ಲಿ ಸರ್ಕಾರಿ ಉದ್ಯೋಗಿಗಳಿಗೆ ನಿವೃತ್ತಿ ವೇತನ ಇಲ್ಲವೆಂಬ ಷರತ್ತಿನ ಮೇಲೆಯೇ ನೇಮಕ ಮಾಡಿಕೊಳ್ಳಲಾಗುತ್ತಿದೆ’ ಎಂದು ಹೇಳುತ್ತಾರೆ.

‘ನಿವೃತ್ತಿಯ ಬಳಿಕ ಬಡ ಕಾರ್ಮಿಕರಿಗೆ ದೊರಕಬೇಕಿದ್ದ ಸೌಲಭ್ಯಗಳಲ್ಲಿ ಉಳಿದದ್ದು ಕೇವಲ ಪಿಎಫ್‌ ಮಾತ್ರ. ಇದರಲ್ಲಿ ಮೂಲ ವೇತನದ ಶೇ 12ರಷ್ಟು ಮೊತ್ತ ಪ್ರತಿ ತಿಂಗಳು ಕಡಿತವಾಗುತ್ತಿದ್ದರೆ ಅದರಷ್ಟೇ ಭಾಗವನ್ನು ಮಾಲೀಕರು ಕೊಡಬೇಕಿತ್ತು. ಆದರೆ ಬಹುಪಾಲು ಮಾಲೀಕರು ತಮ್ಮ ಕೊಡುಗೆಯನ್ನು ಕೊಡದೇ ಇರುವುದು ಈ ಬಾಬತ್ತಿನಲ್ಲಿ ತುಂಬಾ ಹಳೆಯ ಸಮಸ್ಯೆ. ಈ ಸಮಸ್ಯೆಗೆ ದೊಡ್ಡ ಲೂಟಿಕೋರ ಆಯಾಮ ಒದಗಿದ್ದು 2001ರಲ್ಲಿ’ ಎಂದು ಅವರು ಸ್ಪಷ್ಟವಾಗಿ ತಿಳಿಸುತ್ತಾರೆ.

ದವೆ ಸಮಿತಿ ಹೇಳಿದ್ದೇನು?
ಕೇಂದ್ರ ಸರ್ಕಾರ 2000ರಲ್ಲಿ ರಚಿಸಿದ್ದ ಡಾ.ಎಸ್‌.ಎ.ದವೆ ಸಮಿತಿ ನೀಡಿದ ವರದಿಯ ಸಾರಾಂಶ ಇಲ್ಲಿದೆ: ಭಾರತದಲ್ಲಿ ಬರಲಿರುವ ವರ್ಷಗಳಲ್ಲಿ ನಿವೃತ್ತಿದಾರರ ಸಂಖ್ಯೆ ತುಂಬಾ ಹೆಚ್ಚಾಗುತ್ತದೆ. ಸರ್ಕಾರದ ಬೊಕ್ಕಸಕ್ಕೆ ಈ ಬಾಬತ್ತಿನ ವೆಚ್ಚವೇ ಅತಿ ಹೆಚ್ಚಾಗಿ ಅಭಿವೃದ್ಧಿ ಯೋಜನೆಗಳಿಗೆ ಹಣ ಇಲ್ಲವಾಗುತ್ತದೆ. ಆದ್ದರಿಂದ ಇನ್ನು ಮುಂದೆ ಪೆನ್ಷನ್ ಮತ್ತು ಭವಿಷ್ಯ ನಿಧಿಗೆ ಪ್ರತ್ಯೇಕ ನಿಧಿಯನ್ನು ಸ್ಥಾಪಿಸಬೇಕು.

ಕಾರ್ಮಿಕರಿಗೆ ಮಾಹೆಯಾನ ಕೊಡುವ ಸಂಬಳದಲ್ಲೇ ಒಂದು ಭಾಗವನ್ನು ಪೆನ್ಷನ್ ನಿಧಿಗೆ ಎತ್ತಿಡಬೇಕು. (ಸರ್ಕಾರದ ಅಥವಾ ಮಾಲೀಕರ ಪಾಲು ಇದರಲ್ಲಿ ಸೊನ್ನೆ). ಅದೇ ರೀತಿ ಭವಿಷ್ಯ ನಿಧಿಯನ್ನು ಸ್ಥಾಪಿಸಿ ಅದರ ಮೊತ್ತವನ್ನು ಮಾರುಕಟ್ಟೆಯಲ್ಲಿ ವಿನಿಯೋಜಿಸಲು ಒಂದು ಟ್ರಸ್ಟ್ ಸ್ಥಾಪಿಸಬೇಕು. ಅದರ ಮೂಲಕ ಬಂಡವಾಳಿಗರಿಗೆ ಈ ನಿಧಿಯನ್ನು ಕೊಟ್ಟು ಅದರಲ್ಲಿ ಬರುವ ಲಾಭಾಂಶದ ಹಣವನ್ನು ಕಾರ್ಮಿಕರಿಗೆ ಕೊಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT