ಗುರುವಾರ , ಮಾರ್ಚ್ 4, 2021
19 °C
ಸ್ವಸ್ಥ ಬದುಕು

ಇದು ಅರಳುವ ಸಮಯ

ಭರತ್ ಮತ್ತು ಶಾಲನ್ ಸವೂರ್ Updated:

ಅಕ್ಷರ ಗಾತ್ರ : | |

ಇದು ಅರಳುವ ಸಮಯ

ನಮ್ಮ ಮನೆಯಲ್ಲಿ ಕುಂಡವೊಂದಿತ್ತು. ಹಸಿರು ಎಲೆಗಳನ್ನು ಅರಳಿಸಿ ನಿಂತ ಗಿಡ ಚೆನ್ನಾಗಿ ಬೆಳೆಯುತ್ತಿತ್ತು. ಕೆಲ ದಿನಗಳ ನಂತರ ಕೆಂಪಾದ ಮೊಗ್ಗೊಂದು ಅಲ್ಲಿ ಅರಳಿತು. ಆದರೆ, ಆ ಮೊಗ್ಗು ಹೂವಾಗಲೇ ಇಲ್ಲ. ಅದು ಅಲ್ಲಿಯೇ ಒಣಗಿ ಬಿದ್ದುಹೋಯಿತು. ಕಾರಣ, ಆ ಗಿಡಕ್ಕೆ ಕುಂಡದ ಸೀಮಿತ ಅವಕಾಶ ಮೀರಿ ಬೆಳೆಯಬೇಕಿತ್ತು. ತನ್ನ ಬೇರುಗಳನ್ನು ಭೂಮಿಯಲ್ಲಿ ಆಳವಾಗಿ ಇಳಿಸಿ, ಪೌಷ್ಟಿಕಾಂಶಗಳನ್ನು ಹೀರಿಕೊಳ್ಳಬೇಕಿತ್ತು.ಅದೇ ರೀತಿ ನಾವೆಲ್ಲ ನಮ್ಮನ್ನು ಅಹಂಕಾರವೆಂಬ ಸಣ್ಣ ಕುಂಡದೊಳಗೆ ಬಂಧಿಸಿಟ್ಟುಕೊಂಡು ಬಿಟ್ಟಿದ್ದೇವೆ. ಆ ರೀತಿ ನಮ್ಮನ್ನು ಸೀಮಿತಗೊಳಿಸಿಕೊಂಡಿದ್ದಕ್ಕಾಗಿಯೇ ನಾವು ಆಕ್ರಮಣಶಾಲಿಯಾಗಿರುತ್ತೇವೆ ಅಥವಾ ಪಂಜರದೊಳಗೆ ಬಂಧಿಸಿಟ್ಟ ಪ್ರಾಣಿಯ ರೀತಿಯಲ್ಲಿ ಖಿನ್ನತೆಗೆ ಒಳಗಾಗುತ್ತೇವೆ. ಸಿಟ್ಟಿನಿಂದ ಎಲ್ಲವನ್ನೂ ಸಾಧಿಸಬೇಕು ಎಂದು ಹೊರಡುತ್ತೇವೆ ಇಲ್ಲವೇ  ಒಳಗೊಳಗೆ ಕೊರಗುತ್ತ ಎಲ್ಲದರಿಂದ ವಿಮುಖರಾಗುತ್ತೇವೆ. ಈ ಎರಡೂ ಮಾರ್ಗಗಳು ನಮ್ಮ ದೈಹಿಕ, ಮಾನಸಿಕ ಆರೋಗ್ಯಕ್ಕೆ ಹಾನಿಯುಂಟು ಮಾಡುತ್ತವೆ ಎಂಬುದನ್ನು ಮೊದಲು ಅರಿತುಕೊಳ್ಳಬೇಕು. ಆಗಲಷ್ಟೇ ಅಹಂಕಾರವೆಂಬ ಕುಂಡದಿಂದ ಹೊರಬರಲು ಯತ್ನಿಸುತ್ತೇವೆ.ನಮಗೆಲ್ಲ ಮಾನಸಿಕ ಮರುಹೊಂದಾಣಿಕೆಯ ಅಗತ್ಯವಿದೆ. ನಾವು ನಮ್ಮ ಜತೆ ಹೇಗಿರುತ್ತೇವೆ, ಇತರರ ಜತೆ ಹೇಗಿರುತ್ತೇವೆ ಹಾಗೂ ನಮ್ಮ ಜೀವನದಲ್ಲಿ ಜರುಗುವ ಘಟನೆಗಳಿಗೆ ಹೇಗೆ ಸ್ಪಂದಿಸುತ್ತೇವೆ ಎಂಬುದು ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಬೇರೆಯವರಿಗೆ ನೋವು ನೀಡಬೇಕು ಎಂಬ ತುಡಿತವನ್ನು ಮೊದಲು ಬಿಡಿ. ಸಂಗಾತಿ, ಮಕ್ಕಳು, ಸ್ನೇಹಿತರು, ಸಹೋದ್ಯೋಗಿಗಳು, ಕೆಲಸದವರು ಹೀಗೆ ಎಲ್ಲರ ಜತೆ  ಪ್ರೀತಿಯಿಂದ ವ್ಯವಹರಿಸಿ.ಯಾವುದಾದರೂ ವ್ಯಕ್ತಿ ಒರಟಾಗಿ ನಡೆದುಕೊಂಡಲ್ಲಿ ನಿಮ್ಮ ಜತೆ ಮಾತನಾಡುವುದಕ್ಕಿಂತ ಮೊದಲು ಮತ್ಯಾರ ಜತೆಗೋ ಅವರಿಗೆ ಜಗಳವಾಗಿದೆ ಎಂಬುದನ್ನು ಅರಿತುಕೊಳ್ಳಿ. ಅವರ ಒರಟುತನದ ಬಗ್ಗೆ ಸಿಟ್ಟಾಗುವ ಬದಲು, ಅವರ ನೋವನ್ನು ಅರ್ಥ ಮಾಡಿಕೊಳ್ಳಿ. ಕಿರಿಕಿರಿಗೊಳಗಾಗಿ ಪ್ರತಿಕ್ರಿಯಿಸಬೇಡಿ. ಆ ಕ್ಷಣದಲ್ಲಿ ಮೃದುವಾಗಿ ವರ್ತಿಸಲು ಸಾಧ್ಯವಾಗದಿದ್ದರೂ ಪೂರ್ವಗ್ರಹಪೀಡಿತರಾಗಿ ವರ್ತಿಸಬೇಡಿ. ಋಣಾತ್ಮಕ ಆಲೋಚನೆ  ಮನದಲ್ಲಿ ಸುಳಿಯದಂತೆ ನೋಡಿಕೊಳ್ಳಿ. ಅಂತಹ ಯೋಚನೆಗಳನ್ನು ಹತ್ತಿಕ್ಕಿ. ಆ ರೀತಿ ನಿಮ್ಮ ಮನಸ್ಸಿಗೆ ತರಬೇತಿ ನೀಡಿ. ಅಂತಹ ಶಾಂತ ಮನಸ್ಥಿತಿಯಲ್ಲಿ ನಾವು ಅರಳಲು ಆರಂಭಿಸುತ್ತೇವೆ.ಈ ಅರಳುವಿಕೆ ಮುಂದುವರಿಯಬೇಕಾದರೆ ‘ನಾನು’, ‘ನನ್ನದು‘  ಎಂಬ ಶಬ್ದವನ್ನು ನಾವು ಮರೆಯಬೇಕು.  ಇಂತಹ ಶಬ್ದಗಳು ಕೇವಲ ಸಂಘರ್ಷ, ದ್ವೇಷ, ಒಡಕು, ಅಪರಾಧ, ಒತ್ತಡ, ಸ್ವಾರ್ಥ ಮತ್ತು ಅನಾರೋಗ್ಯಕ್ಕೆ ದಾರಿ ಮಾಡಿಕೊಡುತ್ತವೆ. ಈ ಶಬ್ದಗಳನ್ನು ಆದಷ್ಟೂ ಕಡಿಮೆ ಬಳಸಿ. ನಾನು, ನನ್ನದು ಎಂಬ ಶಬ್ದ ಮನಸ್ಸಿನಿಂದ ಮರೆಯಾದಾಗ ಬದುಕು ದೊಡ್ಡದಾಗುತ್ತದೆ. ಉಜ್ವಲವಾಗುತ್ತದೆ. ಸಂತಸ ಬದುಕನ್ನು ಆವರಿಸುತ್ತದೆ.ಈ ಕೆಳಗೆ ಹೇಳಿದಂತೆ ಮಾಡಿ. ನಿಮ್ಮ ಸಂಗಾತಿ ಅಥವಾ ಹತ್ತಿರದವರನ್ನು ನೋಡಿ. ಹಾಗೆ ನೋಡುವಾಗ ಬುದ್ಧ, ಖಲೀಲ್‌ ಗಿಬ್ರಾನ್‌ ಅವರ ಮಾತುಗಳನ್ನು ನೆನಪಿಸಿಕೊಳ್ಳಿ. ‘ಈ ಮಕ್ಕಳು ನನ್ನವರು, ಈ ವಸ್ತುಗಳೆಲ್ಲ ನನ್ನವು ಎಂದು ಮೂರ್ಖ ಅಂದುಕೊಳ್ಳುತ್ತಾನೆ. ಅವನೇ ಅವನವನಲ್ಲದಾಗ ಯಾವುದಾದರೂ ಅವನಿಗೆ ಹೇಗೆ ಸೇರುತ್ತದೆ’ ಎಂದು ಬುದ್ಧ ಕೇಳಿದ್ದ. ‘ನಿಮ್ಮ ಮಕ್ಕಳು ನಿಮ್ಮವಲ್ಲ. ಅವು ಜೀವಚೈತನ್ಯದ ತುಡಿತಗಳು. ಅವರು ನಿಮ್ಮ ಜತೆಗೆ ಇರುತ್ತಾರೆ. ಹಾಗೆಂದು ಅವರು ನಿಮಗೆ ಸೇರಿದವರಲ್ಲ’ ಎಂದು ಗಿಬ್ರಾನ್‌ ಬರೆದಿದ್ದ.ನನ್ನದು, ನಾನು ಎಂಬ ಕೊಳೆ ಮೆತ್ತಿಕೊಂಡಿರುವ ನಿಮ್ಮ ಅಹಂಕಾರವನ್ನು ಈ ದಾರ್ಶನಿಕರ ಮಾತುಗಳು ತೊಡೆದು ಹಾಕಲಿ. ನಿಮ್ಮ ಸಂಗಾತಿಯನ್ನು ನೋಡುತ್ತಿರಬೇಕಾದರೆ ಗಮನವನ್ನು ಬದಲಿಸಿ. ಆಕೆಯ, ಅವನ ಕಣ್ಣಿನಲ್ಲಿ ನೋಡಿ. ಅದನ್ನು ಆಳವಾಗಿ ನೋಡುತ್ತ, ಅವರ ದೇಹದೊಳಗೆ ಇರುವ ಆತ್ಮವನ್ನು ದಿಟ್ಟಿಸಿ. ಈ ಆತ್ಮದಂತೆಯೇ (ನಿಮ್ಮ ಬಗ್ಗೆ ಹೇಳಿಕೊಳ್ಳಿ) ಅದು ಸಹ ತನ್ನ ಪಯಣದ ಹಾದಿಯಲ್ಲಿರುವ ಆತ್ಮ ಅಂದುಕೊಳ್ಳಿ. ನಿಮ್ಮೊಳಗಿನಿಂದ ಆಳವಾದ, ಪರಿಶುದ್ಧವಾದ ಪ್ರೀತಿ ಚಿಮ್ಮುವುದನ್ನು ಅನುಭವಿಸುವಿರಿ.ಮುಕ್ತವಾದ ಒಂದು ಆತ್ಮದೆಡೆ ಮತ್ತೊಂದು ಮುಕ್ತ ಆತ್ಮದಿಂದ ಹೊರಡುವ ಪ್ರೀತಿ ಆತ್ಮಕ್ಕೆ ಬಿಡುಗಡೆ ನೀಡುತ್ತದೆ. ಅದನ್ನು ಕಟ್ಟಿಹಾಕಿ ಗುಲಾಮಗಿರಿಗೆ ದೂಡುವುದಿಲ್ಲ. ಆ ಸ್ವಾತಂತ್ರ್ಯ, ಬಿಡುಗಡೆಯೇ ಅರಳುವಿಕೆ. ಇನ್ನು ಮುಂದೆ ಎಲ್ಲರನ್ನೂ ಮತ್ತೊಂದು ಆತ್ಮ ಎಂಬ ರೀತಿಯಲ್ಲಿ ನೋಡಿ.ಇತ್ತೀಚೆಗೆ ವ್ಯಕ್ತಿಯೊಬ್ಬರು ಕ್ಯಾನ್ಸರ್‌ನಿಂದ ಸತ್ತರು.  ಕಳೆದ 25 ವರ್ಷಗಳಿಂದ ಅವರು ಹಳಹಳಿ­ಕೆಯಲ್ಲಿ ಕೊರಗು­ತ್ತಿದ್ದರು. ತಮ್ಮ  ನಾಲ್ಕು ಜನ ಸಹೋದರರಿಗೆ ಮನೆ, ಬಿಸಿನೆಸ್‌ ಎಲ್ಲ ಮಾಡಿಕೊಟ್ಟಾಗಲೂ ಅವರು ಧನ್ಯವಾದ ಹೇಳಿಲ್ಲ ಎಂದು ಅವರು ದೂರುತ್ತಿದ್ದರು.

ಈ ಕೊರಗನ್ನು ಒಳಗೆ ಇಟ್ಟುಕೊಂಡೇ ಆ ವ್ಯಕ್ತಿ ಸತ್ತುಹೋದರು. ಅವರ ಮಗಳು ಸಹ ಅದೇ ದ್ವೇಷ, ಕೊರಗು ಹೊತ್ತುಕೊಂಡಿದ್ದಳು. ಮೇಲೆ ಹೇಳಿದ ಕ್ರಮ ಅನುಸರಿಸಿದ  ಮೇಲೆ ಆಕೆಯ ಮನಸ್ಸು ಹಗುರವಾಯಿತು.ತನ್ನ ಅಪ್ಪನ ಆತ್ಮ ಎಲ್ಲವನ್ನೂ ಕೊಡಲು ಈ ಭೂಮಿಗೆ ಬಂದಿತ್ತು. ಆ ನಾಲ್ಕು ಆತ್ಮಗಳು ಎಲ್ಲವನ್ನೂ ಪಡೆಯಲು ಇಲ್ಲಿಗೆ ಬಂದಿವೆ ಎಂಬುದು ಅವಳಿಗೆ ಮನದಟ್ಟಾಯಿತು. ಆಗ ತನ್ನ ಚಿಕ್ಕಪ್ಪಂದಿರ ಕಡೆಗೆ ಅವಳಿಗಿದ್ದ ಅಸಮಾಧಾನ ದೂರವಾಯಿತು. ತಾನು ಹಗುರವಾದಂತೆ, ಮನಸ್ಸು ಸ್ವಚ್ಛವಾದಂತೆ ಅವಳಿಗೆ ಅನ್ನಿಸಿತು. ಇದಕ್ಕೂ ಮುನ್ನ ಆಕೆಯ ದೇಹದ ಬಲಭಾಗವೆಲ್ಲ ನೋಯುತ್ತಿತ್ತು. ಈಗ ಆ ನೋವು ಜಾದೂ ಮಾಡಿದಂತೆ ಮಾಯವಾಗಿತ್ತು.ಮತ್ತೊಬ್ಬ ವ್ಯಕ್ತಿಯನ್ನು ಆಕೆಯ/ ಅವನ ಪಯಣದ ಹಾದಿಯಲ್ಲಿರುವ ಆತ್ಮ ಎಂದು ಪರಿಭಾವಿಸಿ, ಆ ಮೂಲಕ ನೀವು ಸೀಮಿತ ಪರಿಧಿಯಿಂದ ಅನಂತದೆಡೆ ಮತ್ತೆ, ಮತ್ತೆ ಹುಟ್ಟುವಿರಿ. ಈ ಲೇಖನವನ್ನು ಪದೇಪದೇ ಓದಿ. ಸಮಾನಮನಸ್ಕರ ಜತೆ ಚರ್ಚಿಸಿ. ನಿಮ್ಮ ಸುತ್ತಲಿನ ಎಲ್ಲರೂ  ಆತ್ಮವೇ ಆಗಿದ್ದಾರೆ ಎಂಬ ಸತ್ಯ ನಿಮ್ಮ ಮನಸ್ಸಿಗೆ ಅರಿವಾದಾಗ ನೀವು ಅಹಂಕಾರ ತುಂಬಿದ ಸೀಮಿತ ಆಲೋಚನೆಗಳಿಂದ ಹೊರಬರುತ್ತೀರಿ. ಪ್ರಶಾಂತವಾದ, ಸಂತಸಮಯ ಸ್ಥತಿ ತಲುಪುತ್ತೀರಿ. ಅದೇ ನಿಮ್ಮ ನೈಜ ಸ್ಥಿತಿ.ಕ್ರಮೇಣ ನಿಮ್ಮ ಮನಸ್ಸು ಈ ಸತ್ಯವನ್ನು ಅಪ್ಪಿಕೊಂಡಾಗ ನೀವು ಸುಂದರ ಮೌನಕ್ಕೆ ಜಾರುತ್ತೀರಿ. ಏಕೆಂದರೆ  ಮತ್ತೊಬ್ಬರ ಬಗ್ಗೆ ಋಣಾತ್ಮಕ ಭಾವ ನಿಮ್ಮಲ್ಲಿ ಇರುವುದಿಲ್ಲ. ಹಳೆಯ ಒತ್ತಡದಿಂದ ಬಿಡುಗಡೆ ಹೊಂದಿ ಸಂತೃಪ್ತಿಯನ್ನು ಅನುಭವಿಸುತ್ತೀರಿ. ಅದೇ ಅರಳುವಿಕೆ. ಅದು ಸುಂದರವಾದ, ಹೊಳೆಯುವ ಕೊನೆಯಿಲ್ಲದ ವೈಶಾಲ್ಯ. ಅದೇ ನೀವು. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.