ಗುರುವಾರ , ಮೇ 19, 2022
24 °C

ಇದೂ ಒಂದು ಪ್ರೀತಿಯ ಪ್ರಸಂಗ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |ಈಗ ನಾನು ಹೇಳಹೊರಟಿರುವುದು ಕೇರಳದಾದ್ಯಂತ ಎಂಟಿ ಎಂಬ ಹೆಸರಿನಿಂದಲೆ ಮನೆಮಾತಾಗಿರುವ ಸುಪ್ರಸಿದ್ಧ ಮಲಯಾಳಂ ಸಾಹಿತಿ ಶ್ರೀ ಎಂ.ಟಿ. ವಾಸುದೇವನ್ ನಾಯರ್ ಅವರ ಬದುಕಿನ ಒಂದು ಮನಮಿಡಿಯುವ ಪ್ರಸಂಗ. ಒಮ್ಮೆ ಎಂಟಿ ತನ್ನ ಮನೆಯ ಪೋರ್ಟಿಕೋ (ಮುಖಮಂಟಪ)ದಲ್ಲಿ ಗೆಳೆಯರೊಡನೆ ಕೂತು ಹರಟುತ್ತಿರಲು ಯಾಕೋ ಇದ್ದಕ್ಕಿದ್ದಂತೆ ತಡೆಯಲಾರದಷ್ಟು ಹೊಟ್ಟೆ ತೊಳಸಿಬಂದು ಕೂತಲ್ಲೆ ಕಾರಿಕೊಂಡರು. ಅವರು ಕಾರಿಕೊಂಡದ್ದು ಪಿತ್ತರಸವಲ್ಲ. ಹೆಚ್ಚುಕಮ್ಮಿ ಕಪ್ಪುಬಣ್ಣಕ್ಕೆ ತಿರುಗಿದ ರಕ್ತದ ಧಾರೆ! ಅದನ್ನು ಕಂಡದ್ದೇ ಎಂಟಿ ಬೆಚ್ಚಿಬಿದ್ದರು.ಖಂಡಿತವಾಗಿಯೂ ಇದು ನನ್ನ ಅಂತ್ಯದ ಸೂಚನೆ ಎನಿಸಿ ಎದೆ ಒಂದು ಕ್ಷಣ ನಡುಗಿತು. ಬಹುಶಃ ಎಲ್ಲವೂ ಥಟ್ಟನೆ ಮುಗಿದುಹೋಗುತ್ತೇನೋ.ಮುಗಿದುಹೋಗಲಿ. ನನಗೇನೂ ಭಯವಿಲ್ಲ, ವ್ಯಥೆಯಿಲ್ಲ ಅಂದುಕೊಂಡು ಆ ಕ್ಷಣವನ್ನು ಎದುರಿಸಲು ಸಿದ್ಧರಾದರು.ಭಾವೋದ್ವೇಗ ತಹಬಂದಿಗೆ ಬಂದು ಮನಸ್ಸು ಶಾಂತವಾಯಿತು. ಇಷ್ಟರಲ್ಲೆ ಅವರ ಗೆಳೆಯರು ಒಂದು ಒಳ್ಳೆಯ ಆಸ್ಪತ್ರೆಗೆ ಫೋನ್ ಮೂಲಕ ವಿಷಯ ತಿಳಿಸಿ ತಮ್ಮ ಕಾರಿನಲ್ಲೆ ಎಂಟಿಯವರನ್ನು ಅಲ್ಲಿಗೆ ಕರೆದೊಯ್ದರು. ಆಸ್ಪತ್ರೆ ತಲುಪಿ ಕಾರಿನಿಂದ ಹೊರಗಿಳಿಯಲು ಪ್ರಯತ್ನಿಸುತ್ತಿದ್ದಂತೆಯೇ ಗೆಳೆಯರು ಅವರ ಕೈ ಹಿಡಿದು ನಡೆಸಲು ಮುಂದಾದರು. ಆದರೆ ಎಂಟಿ ಈ ಸಂದರ್ಭದಲ್ಲಿ ನಾನು ಧೃತಿಗೆಡಬಾರದು, ಅಸಹಾಯಕನಾಗಬಾರದು ಎಂಬ ಸಂಕಲ್ಪ ಮಾಡಿ ಗೆಳೆಯರ ಸಹಾಯವನ್ನು ನಯವಾಗಿ ನಿರಾಕರಿಸಿ ತಂತಾನೆ ನಡೆಯಲು ಮುಂದಾದರು.

 

ಆದರೆ ಎರಡು ಹೆಜ್ಜೆ ಮುಂದೆ ಇಟ್ಟರೋ ಇಲ್ಲವೋ ಎರಡೂ ಕಾಲು ಸೋತು ಬಂದಂತಾಗಿ ಅಲ್ಲಿಯೇ ಕುಸಿದು ಬಿದ್ದರು.ಒಂದು ಗಾಲಿಯ ಕುರ್ಚಿ ತರಿಸಿ ಅವರನ್ನು ಒಳಗೆ ಕೊಂಡೊಯ್ಯಲಾಯಿತು. ಆಸ್ಪತ್ರೆಯಲ್ಲಿನ ಒಂದು ಕೋಣೆಯ ಹಾಸಿಗೆಯಲ್ಲಿ ಬಿದ್ದಿದ್ದೇ ನೆನಪು. ಆ ನಂತರ ಒಂದು ಗಾಢ ಕತ್ತಲೆ ಸುರಂಗವನ್ನು ಹೊಕ್ಕಂತಹ ಅನುಭವ. ಅಲ್ಲಿ ಎಲ್ಲಾ ಶೂನ್ಯ, ಬರೇ ಶೂನ್ಯ.ಮಾರನೆಯ ದಿನವೋ ಅಥವಾ ಆ ನಂತರದ ದಿನವೋ ಪ್ರಜ್ಞೆ ಮರಳಿದಾಗ ತನ್ನ ಸುತ್ತಲೂ ನರ್ಸುಗಳೂ, ವೈದ್ಯರೂ, ಹಿತೈಷಿಗಳೂ ನೆರೆದಿರುವುದು ಗೋಚರಿಸಿತು. ಪಿಸುಪಿಸು ಗುಸುಗುಸು ಮಾತು. ವೈದ್ಯರು ‘ಚಿಂತಿಸಬೇಡಿ. ನಿಮ್ಮ ಜೀವಕ್ಕೇನೂ ಅಪಾಯವಿಲ್ಲ.ಹುಷಾರಾಗುತ್ತೀರ’ ಎಂಬ ಅರ್ಥ ಬರುವ ಸಾಂತ್ವನದ ಮಾತುಗಳನ್ನಾಡಿ- ‘ಅವರು ನಿದ್ದೆ ಮಾಡಲಿ, ತುಂಬ ಹೊತ್ತು ನಿದ್ದೆ ಮಾಡಲಿ’ ಎಂದು ಅಲ್ಲಿದ್ದವರಿಗೆಲ್ಲ ಎಂಬಂತೆ ಹೇಳಿ ಹೊರಗೆ ನಡೆದರು. ಉಳಿದವರು ಅವರನ್ನು ಹಿಂಬಾಲಿಸಿದರು.ಆಗಲೇ ಎಂಟಿ ಆ ಮನುಷ್ಯನನ್ನು ಕಂಡದ್ದು. ಅವನೊಬ್ಬ ಹಳ್ಳಿಯವ. ಕೋಣೆಯ ಒಂದು ಮೂಲೆಯಲ್ಲಿ ಕೈಯಲ್ಲೊಂದು ಚೀಲ ಹಿಡಿದು ಸಂಕೋಚದಿಂದ ಮುದುಡಿ ನಿಂತಿದ್ದ. ಎಲ್ಲರೂ ಹೊರಗೆ ಹೋಗಿದ್ದರಿಂದ ಮೆಲ್ಲನೆ ಹೆಜ್ಜೆ ಹಾಕುತ್ತಾ ಎಂಟಿಯವರ ಸನಿಹಕ್ಕೆ ಬಂದ.

‘ಯಾರಿವನು?’ ಎಂಟಿ ಅವನತ್ತ ಒಂದು ಕ್ಷೀಣ ಮುಗುಳ್ನಗೆ ಬೀರಿದರು.‘ನಾನು... ನಾನು ಬಾಲಕೃಷ್ಣನ್’. ಯಾವ ಬಾಲಕೃಷ್ಣನೋ? ಕೆಲವು ಕ್ಷಣ ಖಚಿತವಾಗಲಿಲ್ಲ. ಆನಂತರ ಥಟ್ಟನೆ ನೆನಪಾಯಿತು. ಓಹೋ, ಇವನು ಬಾಲಕೃಷ್ಣನ್ ಎಳುತಚ್ಚನ್. ವಡಕಾಂಚೇರಿಯವ.‘ಪೇಪರ್‌ನಲ್ಲಿ ಸುದ್ದಿ ಓದಿ ತಡೆಯಲಾಗಲಿಲ್ಲ, ಒಡನೆ ಹೊರಟು ಬಂದುಬಿಟ್ಟೆ’.ಈ ಬಾಲಕೃಷ್ಣನನ್ನು ಮೊದಲ ಸಲ ನೋಡಿದ ಸಂದರ್ಭವನ್ನು ಅವರಿಗೆ ಹೇಗೆ ತಾನೆ ಮರೆಯಲು ಸಾಧ್ಯ? ಒಂದು ದಿನ ಮಧ್ಯಾಹ್ನ ಅವನು ಅವರ ಮನೆಯಲ್ಲಿ ಹೇಳದೆ ಕೇಳದೆ ಕಾಲಿಟ್ಟಿದ್ದ. ಇಂಚು ಇಂಚೂ ಅಪ್ಪಟ ಹಳ್ಳಿಯವ. ತಗ್ಗಿಬಗ್ಗಿ ನಡೆಯುವ ವಿನಮ್ರ ಆದರಪೂರ್ಣ ಮುಖಭಾವ.ಒಂದು ಚೂರೂ ಕೃತ್ರಿಮತೆಯಿಲ್ಲ. ಆದರೂ ಯಾಕೋ ಎಂಟಿಯವರ ಮನಸ್ಸಿನಲ್ಲಿ ಒಂದು ಸಂಶಯ. ಇವನು ತನ್ನ ಗೋಳಿನ ಕತೆ ಹೇಳಿಕೊಂಡು ಕಾಸು ಕೀಳಲು ಬಂದಿರುವ ಆಸಾಮಿಯೋ? ಅಥವಾ ಇವನೋ ಇಲ್ಲ ಇವನ ಮನೆಯವರೋ ರೋಗಪೀಡಿತರಾಗಿದ್ದು ಚಿಕಿತ್ಸೆಗಾಗಿ ನೆರವು ಬೇಡಲು ಬಂದಿರುವವನೋ?‘ನಾನು ಬಾಲಕೃಷ್ಣನ್. ವಡಕಾಂಚೇರಿಯವ. ನಿಮ್ಮನ್ನು ಸುಮ್ಮನೆ ನೋಡೋಕೆ ಬಂದೆ ಅಷ್ಟೆ’.

ಎಂಟಿ ಅವನಿಗೆ  ಕೂರುವಂತೆ ಹೇಳಿದರು. ಹೊರಗಿನ ವರೆಂಡಾದಲ್ಲಿ ಕೂತ.‘ತುಂಬ ದಿವಸದಿಂದ ನಿಮ್ಮನ್ನು ಒಮ್ಮೆ ನೋಡ್ಬೇಕು ಅನ್ನಿಸ್ತಾಯಿತ್ತು. ನಾನೊಬ್ಬ ಕೃಷಿಕ. ದಿನಾಗಲೂ ಏನಾದರೂ ಒಂದು ಕೆಲಸ ಇರುತ್ತೆ. ಇದುವರೆಗೂ ಬರೋಕೆ ಆಗಲಿಲ್ಲ’.ಅವರಿಂದ ಅವನಿಗೆ ಏನೂ ಬೇಕಾಗಿರಲಿಲ್ಲ. ಅವರಿಗೆ ಕೊಡಲು ಯಾವ ಸಲಹೆಯೂ ಅವನಲಿಲ್ಲ. ಅವರ ಅಭಿಮಾನಿಗಳು, ಜಾಣ ಓದುಗರು ಎಂಬ ಪೋಸು ಕೊಟ್ಟುಕೊಂಡು ಬರುವವರಲ್ಲಿ ಸಾಮಾನ್ಯವಾಗಿ ಕಂಡುಬರುವ ಲಕ್ಷಣಗಳೂ ಅವನಲ್ಲಿಲ್ಲ.ನಿಜ ಹೇಳಬೇಕೆಂದರೆ ಬಾಲಕೃಷ್ಣನಲ್ಲಿ ಹೇಳಿಕೊಳ್ಳೋಕೆ ಹೆಚ್ಚಿಗೆ ಏನೂ ಇರಲಿಲ್ಲ. ಅವನು ಮಾತಾಡಿದ್ದೆ ಕಡಿಮೆ. ಅವನೊಬ್ಬ ಸಣ್ಣ ಪ್ರಮಾಣದ ಕೃಷಿಕ. ಬದುಕಲು ಸಾಕಷ್ಟು ಆದಾಯವಿತ್ತು. ಮನೆಯಲ್ಲಿ ಹೆಂಡತಿ ಮತ್ತು ಇಬ್ಬರು ಸಣ್ಣ ಪ್ರಾಯದ ಹೆಣ್ಣುಮಕ್ಕಳು. ಕೆಲಸವಿಲ್ಲದ ಹೊತ್ತಿನಲ್ಲಿ ಗುಂಪುಗುಂಪಾಗಿ ಕಲೆತು ಕಾಡುಹರಟೆ ಹೊಡೆಯುವುದು, ಪರದೂಷಣೆಯಲ್ಲೆ ಕಾಲಹರಣ ಮಾಡುವುದು ಮುಂತಾದ ಹವ್ಯಾಸಗಳಲ್ಲಿ ಅವನಿಗೆ ಒಂದು ಚೂರೂ ಆಸಕ್ತಿಯಿಲ್ಲ. ಅವನಿಗೆ ಓದುವುದೆಂದರೆ ತುಂಬ ಇಷ್ಟ. ಪುಸ್ತಕಗಳನ್ನು ಕೊಂಡು ಓದುತ್ತಿದ್ದ.ಅವನು ಚೂರು ಚೂರಾಗಿ ಆಡಿದ ಮಾತಿನ ಒಟ್ಟು ಸಾರಾಂಶ ಇಷ್ಟೆ.ಕೊಂಚ ಹೊತ್ತು ಕಳೆದು ಬಾಲಕೃಷ್ಣನ್ ಎದ್ದು ಹೊರಡಲನುವಾದ. ಪಾಪ, ನನ್ನನ್ನು ಕಾಣಲೆಂದೇ ದೂರದಿಂದ ಬಂದಿರುವ ಈ ನಿರ್ಮಲ ಮನಸ್ಸಿನ ಓದುಗನಿಗೆ ನಾನು ಬಸ್ ಚಾರ್ಜ್‌ಗಾದರೂ ಏನಾದರೂ ಕೊಡಬೇಕಲ್ಲವೇ ಎಂದು ಎಂಟಿಯವರಿಗೆ ಅನ್ನಿಸಿತು. ಅಷ್ಟರಲ್ಲಿ ಅವನೇ ತನ್ನ ಜೇಬಿನಿಂದ ಒಂದಿಷ್ಟು ಕೊಳಕು ಮತ್ತು ಸುಕ್ಕುಸುಕ್ಕಾದ ನೋಟುಗಳನ್ನು ತೆಗೆದು ಮುಷ್ಟಿಯಲ್ಲಿ ಹಿಡಿದು ತನ್ನ ಎರಡೂ ಕೈಗಳನ್ನು ಮುಂದೆ ತಂದು ಅವರಿಗೆ ನೀಡಿದ.ಎಂಟಿ ಅವಕ್ಕಾದರು.

‘ಏ ಇದೇನಿದು?’.

‘ಇದನ್ನು ತಾವು ಸ್ವೀಕರಿಸಬೇಕು. ದಯವಿಟ್ಟು ಬೇಡ ಅನ್ನಬಾರದು’.

ಎಂಟಿಯವರಿಗೆ ಇರಿಸುಮುರಿಸು.

‘ನೋಡು ಬಾಲಕೃಷ್ಣನ್, ನನಗೆ ಕಷ್ಟಗಳೇನಿಲ್ಲ. ಸಾಕಷ್ಟು ಸಂಬಳ ಬರುವ ಕೆಲಸವೂ ಇದೆ. ಹಣಕಾಸಿಗೆ ಒಂದು ಚೂರೂ ತಾಪತ್ರಯವಿಲ್ಲ’.

‘ಅದು ನನಗೆ ಗೊತ್ತಿಲ್ವಾ ಸಾರ್? ನಾವು ದೇವರ ದರ್ಶನಕ್ಕಾಗಿ ಗುಡಿಗೆ ಹೋದಾಗ ಪೂಜಾರಿಯ ತಟ್ಟೆಗೆ ದಕ್ಷಿಣೆ ಹಾಕೊಲ್ವೆ ಅಥವಾ ಹುಂಡಿಯಲ್ಲಿ ಒಂದಿಷ್ಟು ಕಾಣಿಕೆ ಹಾಕೊಲ್ವೆ? ಇದನ್ನೂ ಹಾಗೇ ಅಂತ ಭಾವಿಸಿ ಸ್ವೀಕರಿಸಬೇಕು’. ಎಂಟಿ ಅವನ ಮುಗ್ಧ ಪ್ರೀತಿಯ ಮುಂದೆ ನಿಸ್ಸಹಾಯಕರಾದರು.ಅವನು ನೀಡಿದ್ದನ್ನು ಅವರು ಸ್ವೀಕರಿಸಿದ ನಂತರ ಬಾಲಕೃಷ್ಣನ್ ಮತ್ತೆ ಹೊರಡಲನುವಾದ.‘ಒಂದು ನಿಮಿಷ ತಾಳು. ನನ್ನ ಯಾವುದಾದರೂ ಒಂದು ಪುಸ್ತಕದ ಪ್ರತಿ ಇದ್ದರೆ ಕೊಡ್ತೀನಿ’ ಎಂಟಿ ಹೇಳಿದರು.‘ಬೇಡ ಸಾರ್, ನಿಮ್ಮ ಎಲ್ಲ ಪುಸ್ತಕಗಳೂ ನನ್ನ ಹತ್ರ ಇವೆ. ನಾನು ಕೊಂಡುಕೊಳ್ಳದ ಪುಸ್ತಕವೇ ಇಲ್ಲ’ ಎಂದು ಹೇಳಿ ಅವರತ್ತ ಒಂದು ಮಂದಹಾಸ ಬೀರಿ ಹೊರಟುಹೋದ.ಈಗ ಅದೇ ಬಾಲಕೃಷ್ಣನ್ ಎಳುತಚ್ಚನ್ ಅವರ ಮುಂದೆ ನಿಂತಿದ್ದ.

‘ನಾನು ತ್ರಿಚ್ಚೂರ್ ಎಕ್ಸ್‌ಪ್ರೆಸ್ ಪೇಪರ್‌ನಲ್ಲಿ ಸುದ್ದಿ ಓದಿದಾಗ...’

ಎಂಟಿ ಮತ್ತೆ ಮುಗುಳ್ನಗಲು ಪ್ರಯತ್ನಿಸಿದರು.

‘ಈಗ ಸ್ವಲ್ಪ ವಾಸೀನಾ?’.

ಅವರ ಗೆಳೆಯರು ಆಗಾಗ್ಗೆ ಒಳಗೆ ಬಂದು ‘ಆಯಾಸ ಮಾಡ್ಕೊಬೇಡಿ. ನಿದ್ದೆ ಮಾಡಲು ಪ್ರಯತ್ನಿಸಿ’ ಎಂದು ಕಾಳಜಿ ತೋರಿಸಿ ಹೋಗುತ್ತಿದ್ದರು.

ಆ ದಿನವೆಲ್ಲಾ ಹೀಗೇ ಅರೆ ನಿದ್ದೆ ಅರೆ ಎಚ್ಚರದಲ್ಲೆ ಕಳೆಯಿತು. ಯಾವಾಗಲೋ ಒಮ್ಮೆ ಪೂರ್ತಿಯಾಗಿ ಕಣ್ಣುಬಿಟ್ಟಾಗ ಬಾಲಕೃಷ್ಣನ್ ಇನ್ನೂ ತನ್ನ ಹಾಸಿಗೆ ಬದಿಯಲ್ಲೆ ನಿಂತಿರುವುದು ಗೋಚರಿಸಿತು.

‘ಏ ನೀನು ಇನ್ನೂ ಹೋಗಿಲ್ವೇ?’‘ನಾನು ಇಲ್ಲೇ ತಂಗಲು ಸಿದ್ಧವಾಗಿ ಬಂದಿದೀನಿ ಸಾರ್. ನನ್ನ ಕೃಷಿ ಕೆಲಸ ನೋಡಿಕೊಳ್ಳೋಕೆ ಇನ್ನೊಬ್ಬರಿಗೆ ಹೇಳ್ಬಿಟ್ಟು ಬಂದಿದೀನಿ’.

‘ನೋಡು ಬಾಲಕೃಷ್ಣನ್, ಈಗ ನನ್ನ ಆರೋಗ್ಯ ಸುಧಾರಿಸಿದೆ. ನೀನಿನ್ನು ಹೋಗಬಹುದು’.

ಬಾಲಕೃಷ್ಣನ್ ತಲೆ ಬಗ್ಗಿಸಿ ನಿಂತಲ್ಲಿಯೇ ನಿಂತ.‘ಇದು ಒಂದು ಒಳ್ಳೆ ಆಸ್ಪತ್ರೆ. ಇಲ್ಲಿ ನನ್ನನ್ನು ನೋಡಿಕೊಳ್ಳೋಕೆ ಸಾಕಷ್ಟು ಜನ ಇದಾರೆ’.

‘ಗೊತ್ತು. ಆದರೂ ಇಲ್ಲಿ ಇರೋವರೆಲ್ಲಾ ಬರೇ ಹೆಣ್ಣು ನರ್ಸ್‌ಗಳು. ನಿಮಗೆ ಮೂತ್ರಕ್ಕೋ ಕಕ್ಕಸ್ಸಿಗೊ ಹೋಗಬೇಕಾಗಿ ಬಂದರೆ ಸಂಕೋಚ ಆಗಲ್ವಾ? ಅದಕ್ಕೇ ನಾನು ಇಲ್ಲೇ ಇರ್ತೀನಿ. ನನಗೇನೂ ತೊಂದರೆ ಇಲ್ಲ. ಇಲ್ಲಿ ಇದ್ದು ನಿಮ್ಮನ್ನು ನೋಡಿಕೊಳ್ಳಬೇಕೂಂತಲೇ ನಾನು ಬಂದಿರೋದು’. ಅವನ ಕೈ ಚೀಲದಲ್ಲಿ ತಂಗಲು ಬೇಕಾದ ಬಟ್ಟೆಬರೆ ಸಾಮಾನು ಸರಂಜಾಮು ಎಲ್ಲ ಇತ್ತು.

ಆದರೆ ಎಂಟಿ ಈ ಸರ್ತಿ ದೃಢವಾಗಿರಲು ನಿಶ್ಚಯಿಸಿದರು. ‘ನೋಡು, ನಿನ್ನ ಸಹಾಯ ನನಗೆ ಬೇಕಾದರೆ ಖಂಡಿತ ಯಾರ ಕೈಲಾದರೂ ಬರೆಸಿ ತಿಳಿಸ್ತೀನಿ. ಯೋಚನೆ ಮಾಡಬೇಡ. ಹೆಂಡತಿ ಮಕ್ಕಳನ್ನು ಬೇರೆ ಬಿಟ್ಟು ಬಂದಿದೀಯ. ಈಗ ನೀನಿನ್ನು ಹೊರಡು. ಕತ್ತಲಾಗೋಕೆ ಮುಂಚೆ ಮನೆ ಸೇರ್ಕೊ’ ಎಂದು ಖಡಾಖಂಡಿತ ಧ್ವನಿಯಲ್ಲಿ ಹೇಳಿದರು.ಬಾಲಕೃಷ್ಣನ್ ಮನಸ್ಸಿಲ್ಲದ ಮನಸ್ಸಿನಿಂದ ನಿರ್ಗಮಿಸಿದ.

‘ಯಾರು ಈ ಆಸಾಮಿ?’ ಯಾರೋ ಕೇಳಿದರು.

‘ನಮ್ಮೂರಿನ ಒಬ್ಬ ಮನುಷ್ಯ’ ಎಂದಷ್ಟೆ ಎಂಟಿ ಹೇಳಿದರು.

ಕೋಣೆಯ ಹೊರಗೆ ಎಲ್ಲೋ ಸಾವು ಇನ್ನೂ ಹೊಂಚು ಹಾಕುತ್ತಲೇ ಇತ್ತು. ಬಾಲಕೃಷ್ಣನ ಹೆಜ್ಜೆಯ ಸಪ್ಪಳ ಕ್ಷೀಣಿಸುತ್ತಾ ಹೋಯಿತು. ತನ್ನ ಯೌವನದಲ್ಲಿ ಅವರು ಪ್ರೀತಿಯ ಸಂಕಟ  (sorrow of love) ಎಂಬ ಪದವನ್ನು ಎಷ್ಟೋ ಬಾರಿ ಅದರ ನಿಜವಾದ ಅರ್ಥ ತಿಳಿಯದೆ ಬಳಸಿದ್ದರು.ಈಗ ಬಾಲಕೃಷ್ಣನ್ ಅದರ ಅರ್ಥವನ್ನು ಮನದಟ್ಟು ಮಾಡಿಸಿ ಹೋಗಿದ್ದ.ಈ ಮನುಷ್ಯ ತಾನು ಬರೆದ ಶಬ್ದಗಳಿಗಾಗಿಯೇ ತನ್ನನ್ನು ಪ್ರೀತಿಸಿದ್ದ. ತನ್ನ ಬರಹಗಳಿಂದ ತನಗೆ ಹಣ ಸಿಕ್ಕಿತ್ತು. ಕೀರ್ತಿ ಸಿಕ್ಕಿತ್ತು. ಪ್ರಶಸ್ತಿಗಳು ಸಿಕ್ಕಿದ್ದವು. ಬೈಗುಳ ಸಿಕ್ಕಿದ್ದವು, ಶಾಪಗಳೂ ಸಿಕ್ಕಿದ್ದವು. ಆದರೆ ಇಂಥ ಮುಗ್ಧ ಭಾವನಾತ್ಮಕ ಪ್ರೀತಿ ಇದುವರೆಗೆ ತನಗೆ ಯಾರಿಂದಲೂ ಸಿಕ್ಕಿದ್ದಿಲ್ಲ. ಅದು ಅವರನ್ನು ವಿಸ್ಮಯಗೊಳಿಸಿತು. ಇದುವರೆಗೆ ತಾನು ಬರೆದಿದ್ದೆಲ್ಲ ವ್ಯರ್ಥವಲ್ಲ ಎಂಬ ಭಾವದಿಂದ ಮನಸ್ಸಿಗೆ ನೆಮ್ಮದಿಯೆನಿಸಿತು. ಆ ದಿನ ಎಂಟಿ ಮೊದಲಬಾರಿಗೆ ಯಾರಿಗೂ ಗೊತ್ತಾಗದಂತೆ ಮೌನವಾಗಿ ಅತ್ತರು.

(ಆಧಾರ: ಎಂಟಿಯವರ  ನೆನಪುಗಳ ಒಂದು ಸಂಗ್ರಹ)

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.