ಮಂಗಳವಾರ, ಜನವರಿ 21, 2020
28 °C

ಇನ್ನೂ ಮುಗಿಯದ ಕಾಮಗಾರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾರವಾರ: ಇಲ್ಲಿಯ ಮಾಲಾದೇವಿ ಮೈದಾನದಲ್ಲಿರುವ ಜಿಲ್ಲಾ ರಂಗ ಮಂದಿರದ ನವೀಕರಣ ಕಾಮಗಾರಿ ಆಮೆ ಗತಿಯಲ್ಲಿ ಸಾಗಿದೆ. ಲೋಕೋಪಯೋಗಿ ಇಲಾಖೆ ಕಾಮಗಾರಿ ಕೈಗೆತ್ತಿಕೊಂಡಿದ್ದು ನವೆಂಬರ್ ಒಳಗಾಗಿ ಕಾಮಗಾರಿ ಪೂರ್ಣಗೊಳಿಸುವುದಾಗಿ ಗಡುವು ನೀಡಿತ್ತು. ಈ ಗಡುವು ಮುಗಿದಿದೆ. ಆದರೆ ಕಾಮಗಾರಿ ಮಾತ್ರ ಪೂರ್ಣಗೊಂಡಿಲ್ಲ.ರೂ. 72 ಲಕ್ಷ ವೆಚ್ಚದಲ್ಲಿ ನವೀಕರಣ ಕಾಮಗಾರಿ ನಡೆಯುತ್ತಿದ್ದು ಕಾಮಗಾರಿ ಆರಂಭವಾಗಿ ಏಳು ತಿಂಗಳು ಕಳೆದಿದೆ. ಇಷ್ಟು ದೀರ್ಘ ಅವಧಿಯಲ್ಲಿ ಗ್ರೀನ್ ರೂಮ್‌ನ ಶೇ 90ರಷ್ಟು ಮತ್ತು ಕಾರಿಡಾರ್‌ನಲ್ಲಿ ಟೈಲ್ಸ್ ಅಳವಡಿಸಿದ್ದು ಹೊರತುಪಡಿಸಿ ಬೇರೇನು ಕಾಮಗಾರಿ ನಡೆಯದಿರುವುದು ಆಮೆಗತಿಯ ಕಾಮಗಾರಿಗೆ ಸಾಕ್ಷಿಯಾಗಿದೆ.ಒಳಾಂಗಣ ವಿನ್ಯಾಸ, ವಯರಿಂಗ್ ಕೆಲಸ, ಹೊಸ ಆಸನಗಳನ್ನು ಜೋಡಿಸುವ ಕಾರ್ಯ ಬಾಕಿಯಿದ್ದರೂ ಸುಣ್ಣಬಣ್ಣ ಮಾಡುವ ಕಾರ್ಯ ನಡೆಯುತ್ತಿದೆ. ಕಾಮಗಾರಿ ಬಾಕಿಯಿರುವಾಗಲೇ ಸುಣ್ಣ ಬಣ್ಣ ಮಾಡುತ್ತಿರುವುದರಿಂದ ಗೋಡೆಗಳ ಅಂದ ಕೆಡುವುದರಲ್ಲಿ ಸಂಶಯವೇ ಇಲ್ಲ. ಸರಿಯಾದ ರೂಪುರೇಶೆಗಳನ್ನು ಹಾಕಿಕೊಳ್ಳದೆ ಕಾಮಗಾರಿ ನಡೆಸುತ್ತಿರುವುದು ವಿಳಂಬಕ್ಕೆ ಪ್ರಮುಖ ಕಾರಣವಾಗಿದೆ.ಮೇಲ್ಛಾವಣಿಗೆ ಅಳವಡಿಸಿದ್ದ ಸೀಟ್‌ಗಳು ಗಾಳಿಗೆ ಹಾರಿಹೋಗಿ `ಪಾಲ್ಸ್ ಸೀಲಿಂಗ್~ ಮೇಲೆ ನೀರು ಬಿದ್ದು ಸಂಪೂರ್ಣ ಹಾಳಾಗಿದೆ. ಹೊಸದಾಗಿ ಪಾಲ್ಸ್ ಸೀಲಿಂಗ್ ಅಳವಡಿಸುವ ಕಾಮಗಾರಿ ಇನ್ನೂ ಕೈಗೆತ್ತಿಕೊಂಡಿಲ್ಲ. ಧ್ವನಿ ವರ್ಧಕ ವ್ಯವಸ್ಥೆ ಹಾಳಾಗಿದೆ. ಅವೈಜ್ಞಾನಿಕ ರೀತಿಯ ವಿನ್ಯಾಸ ಹೊಂದಿರುವ 650 ಆಸನಗಳನ್ನು ಬದಲಿಸುವ ಕೆಲಸ ಆಗಬೇಕಿದೆ. ಕಾಮಗಾರಿಯ ವೇಗ ನೋಡಿದರೆ ಕಾಟಾಚಾರಕ್ಕೆ ಎನ್ನುವಂತೆ ಕಾಮಗಾರಿ ಮಾಡಲಾಗುತ್ತಿದೆ. `ನವೆಂಬರ್ ಅಂತ್ಯದಲ್ಲಿ ಕಾಮಗಾರಿ ಪೂರ್ಣಗೊಳಿಸುವುದಾಗಿ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಹೇಳಿದ್ದರು. ಆ ಗಡುವು ಮುಗಿದಿದೆ. ಈಗ ಫೆಬ್ರುವರಿಯೊಳಗೆ ಪೂರ್ಣಗೊಳಿಸುವುದಾಗಿ ತಿಳಿಸಿದ್ದಾರೆ. ಕಾಮಗಾರಿ ಬೇಗ ಮುಗಿಸಲು ಜಿಲ್ಲಾಧಿಕಾರಿಗಳೂ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ~ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಭಾರ ಸಹಾಯಕ ನಿರ್ದೇಶಕ ಅಶೋಕ ಚಲವಾದಿ `ಪ್ರಜಾವಾಣಿ~ಗೆ ತಿಳಿಸಿದರು.

ಪ್ರತಿಕ್ರಿಯಿಸಿ (+)