ಶನಿವಾರ, ಜುಲೈ 24, 2021
27 °C

ಇನ್ನೂ 10 ವರ್ಷ ಬಿಜೆಪಿಗೆ ಅಧಿಕಾರ ದಕ್ಕಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಇನ್ನೂ ಹತ್ತು ವರ್ಷ ಕಳೆದರೂ ನೀವು ಅಧಿಕಾರದ ಗದ್ದುಗೆ ಸಮೀಪ ಸುಳಿಯಲು ಸಾಧ್ಯವಿಲ್ಲ ಎಂದು ಕೇಂದ್ರ ಗೃಹ ಸಚಿವ ಪಿ.ಚಿದಂಬರಂ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡರು.ಕಾಂಗ್ರೆಸ್ ಮಹಾಧಿವೇಶನದಲ್ಲಿ ಪಾಲ್ಗೊಂಡು ನಿರ್ಣಯ ಸ್ವೀಕಾರದ ನಂತರ ಮಾತನಾಡಿದ ಅವರು, ಮುಂದಿನ 10 ವರ್ಷಗಳ ಕಾಲ ಕಾಂಗ್ರೆಸ್ ಪಕ್ಷವೇ ದೇಶವನ್ನಾಳುತ್ತದೆ ಎಂದು ಅವರು ದೃಢವಾಗಿ ನುಡಿದರು.‘ಆಪ್ಕಾ ನಂಬರ್ ನಹೀ ಆಯೇಗಾ’ (ನಿಮ್ಮ ಸಂಖ್ಯೆ ಬರುವುದಿಲ್ಲ) ಎಂದು ಗೇಲಿ ಮಾಡಿದ ಅವರು, ಕಾಂಗ್ರೆಸ್ ದೇಶದಲ್ಲಿ ದಿನೇ ದಿನೇ ತನ್ನ ವೃದ್ಧಿ ಕಾಣುತ್ತಿದೆ. ಪುನಃ ಪುನಃ ಗೆದ್ದು ಬರುತ್ತದೆ ಎಂದು ವಿಶ್ವಾಸದಿಂದ ನುಡಿದರು.ಬಿಜೆಪಿ ನೇತೃತ್ವದ ಎನ್‌ಡಿಎ ಹಾಗೂ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರಕ್ಕೂ ಹೋಲಿಕೆ ಮಾಡಿ ನೋಡಿದರೆ ಕಾಂಗ್ರೆಸ್‌ನ ಏರುಮುಖ ಬೆಳವಣಿಗೆ ಎಷ್ಟೆಂಬುದು ಅರ್ಥವಾಗುತ್ತದೆ. ಯುಪಿಎ ಸರ್ಕಾರದಲ್ಲಿ ಒಟ್ಟು ಆಂತರಿಕ ಉತ್ಪನ್ನವು ಗಣನೀಯ ಏರಿಕೆ ಕಂಡಿದೆ ಎಂದು ಅಂಕಿ ಅಂಶಗಳ ಸಮೇತ ವಿವರಿಸಿದ ಅವರು, ಬಿಜೆಪಿಯು ಆಧುನಿಕತೆಯ ಮಾತನಾಡಿದಾಗಲೆಲ್ಲಾ ಕಾಂಗ್ರೆಸ್ ಪಕ್ಷವು ಅತ್ಯುತ್ತಮ ಬೆಳವಣಿಗೆ ಕಂಡಿದೆ ಎಂದರು.ಪ್ರಮುಖ ಅಭಿವೃದ್ಧಿ ಕೆಲಸಗಳಿಗಾಗಿ ಕೇಂದ್ರ ಸರ್ಕಾರ ನೀಡಿದ ಹಣವನ್ನು ಕಾಂಗ್ರೆಸ್ಸೇತರ ಸರ್ಕಾರಗಳು ಆಡಳಿತ ನಡೆಸುತ್ತಿರುವ ರಾಜ್ಯಗಳಲ್ಲಿ ಸರಿಯಾಗಿ ವಿನಿಯೋಗಿಸಲಾಗುತ್ತಿಲ್ಲ ಎಂದು ಚಿದಂಬರಂ ಅವರು ಇದೇ ವೇಳೆ ಆಕ್ಷೇಪ ವ್ಯಕ್ತಪಡಿಸಿದರು.‘ಯಾವುದೇ ರಾಜ್ಯ ಸರ್ಕಾರ ನನ್ನ ಬಳಿ ಹಣವಿಲ್ಲ ಎಂದರೆ ನೀವು ಯಾರೂ ಅದನ್ನು ಖಂಡಿತಾ ನಂಬಬೇಡಿ’ ಎಂದ ಅವರು, ‘ಪ್ರಸ್ತುತ ಆರ್ಥಿಕ ವರ್ಷದ ಅನುಸಾರ ಕೇಂದ್ರ ಸರ್ಕಾರವು ರಾಜ್ಯಗಳಿಗೆ ವರ್ಗಾಯಿಸಿದ ಹಣದ ಮೊತ್ತ ಮೂರು ಲಕ್ಷ ಕೋಟಿ ರೂಪಾಯಿಗಳಷ್ಟಿದೆ ಎಂದರು.ಮಹಿಳಾ ಮೀಸಲು ಮಸೂದೆಯನ್ನು 2011ರಲ್ಲಿ ಸಂಸತ್ ಸ್ವೀಕರಿಸವಂತಾಗಬೇಕು ಎಂದು ಆಶಿಸಿದ ಅವರು, ದೇಶದ ಪ್ರತಿಯೊಂದು ಮೂಲೆಯಲ್ಲಿರುವ ಜನರು ಉತ್ತಮ ಆರೋಗ್ಯ ಹಾಗೂ ಶಿಕ್ಷಣ ಹೊಂದುವಂತಾಗಬೇಕು ಎಂದರು.ದಿಟ್ಟ ನಿರ್ಧಾರ: 2ಜಿ ಸ್ಪೆಕ್ಟ್ರಂ ಹಗರಣದ ತನಿಖೆ ಸಂಬಂಧ ತಾನು ಪಿಎಸಿ ಮುಂದೆ ಹಾಜರಾಗಲು ಸಿದ್ಧ ಎಂದು ಹೇಳುವ ಮೂಲಕ ಪ್ರಧಾನಿ ಮನಮೋಹನ ಸಿಂಗ್ ಪ್ರತಿಪಕ್ಷಗಳಿಗೆ ಸರಿಯಾದ ಪೆಟ್ಟುಕೊಟ್ಟಿದ್ದಾರೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್ ಬಣ್ಣಿಸಿದ್ದಾರೆ.ಇದಕ್ಕಾಗಿ ನಾನು ಅವರನ್ನು ಮುಕ್ತವಾಗಿ ಅಭಿನಂದಿಸುತ್ತೇನೆ. ಇದು ಪ್ರಧಾನಿಯವರ ದಿಟ್ಟತನಕ್ಕೆ ಸಾಕ್ಷಿ ಎಂದರು. ಪಿಎಸಿಗೆ ತಮ್ಮದೇ ಪಕ್ಷದ ನಾಯಕ ಮುರಳಿ ಮನೋಹರ ಜೋಶಿ ಅವರೇ ಅಧ್ಯಕ್ಷರಾಗಿದ್ದರೂ ಅದಕ್ಕೇಕೆ ಈ ವಿಚಾರಣೆಯ ಮೇಲೆ ವಿಶ್ವಾಸವಿಲ್ಲ ಎಂದು ದಿಗ್ವಿಜಯ್ ಖಾರವಾಗಿ ಪ್ರಶ್ನಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.