ಶುಕ್ರವಾರ, ಮೇ 14, 2021
31 °C

ಇನ್ಫೊಸಿಸ್: ವೇತನ ಶೇ8 ಹೆಚ್ಚಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ(ಪಿಟಿಐ): ಸಂಸ್ಥಾಪಕ ಎನ್.ಆರ್.ನಾರಾಯಣ ಮೂರ್ತಿ ಅವರು ಕಂಪೆನಿಯನ್ನು ಮತ್ತೊಮ್ಮೆ ಮುನ್ನಡೆಸುವ ಜವಾಬ್ದಾರಿ ಹೊತ್ತು ಕಾರ್ಯನಿರ್ವಾಹಕ ಅಧ್ಯಕ್ಷರಾಗಿ ಮರಳಿದ ವಾರದಲ್ಲೇ `ಇನ್ಫೊಸಿಸ್'ನ ಲಕ್ಷಾಂತರ ಸಿಬ್ಬಂದಿಗೆ ವೇತನದಲ್ಲಿ ಗರಿಷ್ಠ ಶೇ 8ರಷ್ಟು ಹೆಚ್ಚಳದ ಉಡುಗೊರೆ ಲಭಿಸಿದೆ.ಭಾರತದಲ್ಲಿನ ಕಚೇರಿಗಳಲ್ಲಿ ಇರುವ ಸಿಬ್ಬಂದಿಯ 2013-14ನೇ ಹಣಕಾಸು ವರ್ಷದ ವೇತನದಲ್ಲಿ ಸರಾಸರಿ ಶೇ 8ರಷ್ಟು ಹೆಚ್ಚಳ ಮಾಡಲಾಗಿದೆ. 2013 ಫೆಬ್ರುವರಿಯಲ್ಲಿ ವೇತನ ಹೆಚ್ಚಳದ ಕೊಡುಗೆ ಲಭಿಸದೇ ಇದ್ದ ವಿವಿಧ ದೇಶಗಳಲ್ಲಿನ ಕಚೇರಿಗಳ ಸಿಬ್ಬಂದಿ ಸಂಬಳದಲ್ಲಿಯೂ ಈಗ ಶೇ 3ರಷ್ಟು ಏರಿಕೆ ಮಾಡಲಾಗಿದೆ. ವೇತನ ಹೆಚ್ಚಳದ ಕ್ರಮ ಜು. 1ರಿಂದ ಜಾರಿಗೆ ಬರಲಿದೆ ಎಂದು `ಇನ್ಫೊಸಿಸ್' ಗುರುವಾರ ಪ್ರಕಟಿಸಿದೆ.ಅಲ್ಲದೆ, ಕಂಪೆನಿಯ ಜಾಗತಿಕ ಮಾರಾಟ ವಿಭಾಗದ ಸಿಬ್ಬಂದಿಗೂ ಸರಾಸರಿ ಶೇ 8ರಷ್ಟು ವೇತನ ಹೆಚ್ಚಿಸಿದ್ದು, ಇದು ಮೇ 1ರಿಂದ ಪೂರ್ವಾನ್ವಯವಾಗಿ ಜಾರಿಗೆ ಬರಲಿದೆ ಎಂದಿದೆ.ತೀವ್ರ ಸ್ಪರ್ಧೆ-ಸ್ಥಾನ ಪಲ್ಲಟ

ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್(ಟಿಸಿಎಸ್) ನಂತರ ಭಾರತದಲ್ಲಿನ ಎರಡನೇ ಅತಿದೊಡ್ಡ `ಐಟಿ' ಕಂಪೆನಿ ಎನಿಸಿಕೊಂಡಿದ್ದ `ಇನ್ಫೊಸಿಸ್', 2012-13ನೇ ಹಣಕಾಸು ವರ್ಷದಲ್ಲಿ ವರಮಾನ ತಗ್ಗಿದ ಕಾರಣ ದ್ವಿತೀಯ ಸ್ಥಾನವನ್ನು `ಕಾಂಗ್ನಿಝೆಂಟ್' ಕಂಪೆನಿಗೆ ಬಿಟ್ಟುಕೊಟ್ಟು ಮೂರನೇ ಸ್ಥಾನಕ್ಕೆ ಇಳಿದಿತ್ತು. ಸ್ಪರ್ಧೆ ಹೆಚ್ಚಿದ ಕಾರಣ 2013-14ನೇ ಹಣಕಾಸು ವರ್ಷದ ವರಮಾನದ ಮುನ್ನೂಟವನ್ನೂ ದೇಶದ `ಐ.ಟಿ ಉದ್ಯಮದ ಸರಾಸರಿ ಮಟ್ಟ'ಕ್ಕಿಂತಲೂ ಕಡಿಮೆ ತೋರಿಸಿತ್ತು. ಹಾಗಾಗಿ ಪ್ರಸಕ್ತ ಹಣಕಾಸು ವರ್ಷದಲ್ಲಿ ವೇತನ ಹೆಚ್ಚಳ ಕ್ರಮ ಅಸಂಭವ ಎಂಬ ಮಾತುಗಳೂ ಕೇಳಿಬಂದಿದ್ದವು. ಒಂದು ಲೆಕ್ಕದಲ್ಲಿ ಈಗಿನದು `ಇನ್ಫೊಸಿಸ್'ನ 1.5 ಲಕ್ಷಕ್ಕೂ ಅಧಿಕ ಸಿಬ್ಬಂದಿಗೆ ಅನಿರೀಕ್ಷಿತ ಉಡುಗೊರೆ ಎಂದೆನಿಸಿದೆ.ವಿಪ್ರೊ ಮೊದಲು

ದಶಕಗಳಿಂದ ಇನ್ಫೊಸಿಸ್‌ಗೆ ಸ್ಪರ್ಧೆ ಒಡ್ಡುತ್ತಿರುವ ಬೆಂಗಳೂರು ನೆಲೆಯ ಮತ್ತೊಂದು ಪ್ರಮುಖ ಮಾಹಿತಿ ತಂತ್ರಜ್ಞಾನ ಕಂಪೆನಿ `ವಿಪ್ರೊ' ಇದಕ್ಕೂ ಮುನ್ನವೇ (ಜೂ.1ರಿಂದ) ಸಿಬ್ಬಂದಿ ವೇತನದಲ್ಲಿ ಶೇ 6ರಿಂದ 8ರಷ್ಟು ಹೆಚ್ಚಳ ಮಾಡಿದೆ.ಉತ್ತಮ ಸಾಧನೆ ತೋರಿದ ಕೆಲವು ಸಿಬ್ಬಂದಿಗೆ ಎರಡಂಕಿ ಲೆಕ್ಕದಲ್ಲಿ ಸಂಬಳ ಹೆಚ್ಚಳ ಮಾಡಲಾಗಿದೆ ಎಂದು ಈ ಹಿಂದೆ ವಿಪ್ರೊ ಪ್ರಕಟಿಸಿತ್ತು.ಭಾರತದ ಸಾಫ್ಟ್‌ವೇರ್ ಕಂಪೆನಿಗಳು ಸಾಮಾನ್ಯವಾಗಿ ಪ್ರತಿ ಹಣಕಾಸು ವರ್ಷದ ಆರಂಭದಲ್ಲಿ, ಅಂದರೆ ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ಸಿಬ್ಬಂದಿ ವೇತನ ಹೆಚ್ಚಳ ಮಾಡುವ ಕ್ರಮ ಅನುಸರಿಸುತ್ತಿವೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.