ಸೋಮವಾರ, ಜನವರಿ 20, 2020
20 °C

ಇನ್ಫೋಸಿಸ್ ಹೊಣೆ ಮತ್ತೆ ನಾರಾಯಣಮೂರ್ತಿ ಹೆಗಲಿಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ (ಪಿಟಿಐ): ದೇಶದ ಪ್ರತಿಷ್ಠಿತ ಮಾಹಿತಿ ತಂತ್ರಜ್ಞಾನ ಸಂಸ್ಥೆ ಇನ್ಫೋಸಿಸ್‌ನ ಕಾರ್ಯನಿರ್ವಾಹಕ ಮುಖ್ಯಸ್ಥರಾಗಿ ಮತ್ತೆ ಎನ್.ಆರ್.ನಾರಾಯಣಮೂರ್ತಿ  ಅವರು ಶನಿವಾರ  ಆಯ್ಕೆಯಾಗಿದ್ದಾರೆ.ಇಲ್ಲಿ ಸಭೆ ಸೇರಿದ್ದ ನಿರ್ದೇಶಕ ಮಂಡಳಿಯು ಇನ್ಫೋಸಿಸ್‌ನ ಹೊಣೆಗಾರಿಕೆಯನ್ನು ಮತ್ತೆ ನಾರಾಯಣ ಮೂರ್ತಿ ಅವರ ಹೆಗಲಿಗೆ ಹಾಕುವ ತೀರ್ಮಾನ ಕೈಗೊಂಡಿತು.ಪ್ರಸ್ತುತ ಅಧ್ಯಕ್ಷರಾಗಿರುವ ಬ್ಯಾಂಕಿಂಗ್ ಪರಿಣತ ಕೆ.ವಿ. ಕಾಮತ್ ಅವರನ್ನು ಕೆಳಗಿಳಿಸಿ ಅವರ ಸ್ಥಾನಕ್ಕೆ ಮರಳಿ ನಾರಾಯಣಮೂರ್ತಿ ಅವರನ್ನು ನೇಮಿಸಲು ಮಂಡಳಿ ತೀರ್ಮಾನಿಸಿದೆ.ನಾರಾಯಣಮೂರ್ತಿ ಅವರನ್ನು ಕಾರ್ಯನಿರ್ವಾಹಕ ನಿರ್ದೇಶಕರು ಹಾಗೂ ಹೆಚ್ಚುವರಿ ನಿರ್ದೇಶಕರಾಗಿ ತತ್‌ಕ್ಷಣದಿಂಲೇ ಜಾರಿಗೆ ಬರುವಂತೆ ನೇಮಿಸಲಾಗಿದೆ. ನಿರ್ಗಮಿತ ಅಧ್ಯಕ್ಷ ಕೆ.ವಿ. ಕಾಮತ್ ಅವರನ್ನು ಸ್ವತಂತ್ರ ನಿರ್ದೇಶಕರನ್ನಾಗಿ ನೇಮಿಸಲಾಗಿದೆ.ದೇಶದ ಅತಿದೊಡ್ಡ ಖಾಸಗಿ ಬ್ಯಾಂಕ್ ಐಸಿಐಸಿಐ ಬ್ಯಾಂಕ್‌ನ ಬೆಳವಣಿಗೆಯಲ್ಲಿ ಮಹತ್ತರ ಪಾತ್ರ ವಹಿಸಿದ್ದ ಬ್ಯಾಂಕಿಂಗ್ ಪರಿಣತ ಕೆ.ವಿ. ಕಾಮತ್ ಅವರನ್ನು 2011ರಲ್ಲಿ ಇನ್ಫೋಸಿಸ್‌ನ ಅಧ್ಯಕ್ಷರನ್ನಾಗಿ ನೇಮಿಸಲಾಗಿತ್ತು. ಆ ಸಮಯದಲ್ಲೆ ಕಂಪೆನಿಯ ಸಹ-ಸಂಸ್ಥಾಪಕ ನಾರಾಯಣ ಮೂರ್ತಿ ಅವರು ನಿವೃತ್ತಿ ಹೊಂದಿದ್ದರು. ಆದರೆ ಇದೀಗ ಮತ್ತೆ ನಾರಾಯಣಮೂರ್ತಿ ಅವರ ಹೆಗಲಿಗೆ ಪ್ರತಿಷ್ಥಿತ ಸಂಸ್ಥೆಯ ಹೊಣೆಗಾರಿಕೆಯನ್ನು ನಿರ್ದೇಶಕರ ಮಂಡಳಿ ನೀಡಿದೆ.

ಪ್ರತಿಕ್ರಿಯಿಸಿ (+)