ಬುಧವಾರ, ಮೇ 12, 2021
17 °C

ಇಬ್ಬರು ಮಹಿಳೆಯರ ಕೊಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊಸಕೋಟೆ: ಪಟ್ಟಣದ ಬಳಿ ಭಾನುವಾರ ರಾತ್ರಿ ನಡೆದ ಎರಡು ಪ್ರತ್ಯೇಕ ಘಟನೆಗಳಲ್ಲಿ ದುಷ್ಕರ್ಮಿಗಳು ಇಬ್ಬರು ಮಹಿಳೆಯರನ್ನು ಕೊಲೆ ಮಾಡಿದ್ದಾರೆ.ಇಲ್ಲಿಗೆ ಸಮೀಪದ ಬೂದಿಗೆರೆ ರಸ್ತೆಯ ತಿರುಮೇನಹಳ್ಳಿ ಗೇಟ್ ಬಳಿ ದುಷ್ಕರ್ಮಿಗಳು ಅಪರಿಚಿತ ಮಹಿಳೆಯೊಬ್ಬರ ಕತ್ತನ್ನು ಹಗ್ಗದಿಂದ ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ. ಸುಮಾರು 35 ವರ್ಷ ವಯಸ್ಸಿನ ಮಹಿಳೆ ಹಳದಿ ಬಣ್ಣದ ಜಾಕೇಟ್, ಹಸಿರು ಲಂಗ ತೊಟ್ಟಿದ್ದು, ಬಲಗೈ ಮೇಲೆ ಹಚ್ಚೆಯ ಗುರುತು, ಮಣಿಕಟ್ಟು ಹಾಗೂ ಚಿನ್ನದ ಬಣ್ಣದ ಬಳೆ ತೊಟ್ಟಿದ್ದಾಳೆ. ಆವಲಹಳ್ಳಿ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.ಮತ್ತೊಂದು ಪ್ರಕರಣದಲ್ಲಿ ಪಟ್ಟಣದ ವಿಶ್ವೇಶ್ವರಯ್ಯ ಬಡಾವಣೆ ಪಾಪಣ್ಣ ಲೇಔಟ್‌ನಲ್ಲಿ ವಾಸವಾಗಿದ್ದ ಭರತಲಕ್ಷ್ಮಿ (55) ಎಂಬುವರ ಕತ್ತನ್ನು ದುಷ್ಕರ್ಮಿಗಳು ಹರಿತವಾದ ಆಯುಧದಿಂದ ಕೊಯ್ದು ಕೊಲೆ ಮಾಡಿದ್ದಾರೆ. ಅಲ್ಲದೆ ಕತ್ತಿನಲ್ಲಿದ್ದ ಮಾಂಗಲ್ಯ ಸರ ಹಾಗೂ ಬೀರುವಿನಲ್ಲಿದ್ದ 30 ಸಾವಿರ ರೂಪಾಯಿ ನಗದು ಮತ್ತು ಕೆಲವು ಚಿನ್ನದ ಒಡವೆಗಳನ್ನು ದೋಚಿ ಪರಾರಿಯಾಗಿದ್ದಾರೆ. ಬೀರುವಿನಲ್ಲಿ ಇನ್ನೂ ಕೆಲವು ಬೆಳ್ಳಿ ಮತ್ತು ಚಿನ್ನದ ಒಡವೆಗಳಿದ್ದು ಅದನ್ನು ಅಲ್ಲೇ ಬಿಟ್ಟಿರುವುದು ಅನುಮಾನಕ್ಕೆ ಎಡೆಮಾಡಿದೆ.ಭರತಲಕ್ಷ್ಮಿ ತನ್ನ ಮಗ ಮೋಹನ್‌ಪ್ರಸಾದ್ ಹಾಗೂ ಸೊಸೆ ಅಶ್ವಿನಿ ಜೊತೆ ವಾಸವಾಗಿದ್ದರು. ಭಾನುವಾರ ರಾತ್ರಿ 8 ಗಂಟೆ ಸಮಯದಲ್ಲಿ ಮೋಹನ್‌ಪ್ರಸಾದ್ ತನ್ನ ಒಂದೂವರೆ ವರ್ಷದ ಮಗನನ್ನು ಮನೆಯಲ್ಲೇ ಬಿಟ್ಟು ಪತ್ನಿಯೊಂದಿಗೆ ಪಟ್ಟಣದಲ್ಲಿ ಪ್ರತಿಷ್ಠಾಪಿಸಿರುವ ಗಣೇಶನನ್ನು ನೋಡಲು ಹೋಗಿದ್ದರು. ಹೊರಡುವಾಗ ಮನೆಯ ಗ್ರಿಲ್ ಬಾಗಿಲಿಗೆ ಬೀಗ ಹಾಕಿ ಬೀಗದ ಕೈಯನ್ನು ಭರತಲಕ್ಷ್ಮಿ ಅವರಿಗೆ ಕೊಟ್ಟು ಹೋಗಿದ್ದರು. ರಾತ್ರಿ 10 ಗಂಟೆ ಸಮಯದಲ್ಲಿ ಮನೆಗೆ ಹಿಂತಿರುಗಿದಾಗ ಬೀಗ ತೆಗೆದಿದ್ದು ಕಂಡು ಗಾಬರಿಗೊಂಡರು. ಒಳಹೊಕ್ಕು ನೋಡಿದಾಗ ಬಚ್ಚಲ ಮನೆಯಲ್ಲಿ ಭರತಲಕ್ಷ್ಮಿ ಅವರ ಕತ್ತನ್ನು ಕೊಯ್ದು ಕೊಲೆ ಮಾಡಿರುವುದು ಕಂಡು ಬಂತು. ಯಾರೋ ಪರಿಚಯದವರೇ ಈ ಕೊಲೆ ಮಾಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಎಸ್.ಪಿ. ಪ್ರಕಾಶ್ ಸ್ಥಳಕ್ಕೆ ಭೇಟಿ ನೀಡಿದ್ದರು. ಸಿಪಿಐ ಎಂ.ಮಲ್ಲೇಶ್ ಎರಡೂ ಪ್ರಕರಣಗಳ ತನಿಖೆ ನಡೆಸುತ್ತಿದ್ದಾರೆ.ಬಸ್ ಡಿಕ್ಕಿ- ವೃದ್ಧ ಸಾವು:  ಇಲ್ಲಿನ ಹೆದ್ದಾರಿಯಲ್ಲಿ ಭಾನುವಾರ ನಡೆದ ರಸ್ತೆ ಅಪಘಾತದಲ್ಲಿ ವೃದ್ಧರೊಬ್ಬರು ಸಾವನ್ನಪ್ಪಿದ್ದಾರೆ. ಕೆ.ಆರ್.ಬಡಾವಣೆಯ ವಾಸಿ ರಾಮಸ್ವಾಮಿ (65) ಮೃತಪಟ್ಟವರು. ಹೆದ್ದಾರಿ ದಾಟುತ್ತಿದ್ದಾಗ ಕೋಲಾರದ ಕಡೆಯಿಂದ ಬಂದ ಎಪಿಎಸ್‌ಆರ್‌ಟಿಸಿ ಬಸ್ ಡಿಕ್ಕಿ ಹೊಡೆಯಿತು.

ಅಪಘಾತ: ಚಾಲಕ ಸಾವು

ಸೂಲಿಬೆಲೆ: ಸೂಲಿಬೆಲೆ- ಹೊಸಕೋಟೆ ರಸ್ತೆಯ ಯನಗುಂಟೆ ಗ್ರಾಮದ ಬಳಿ ನಡೆದ ಎರಡು ವಾಹನಗಳ ಮುಖಾಮುಖಿ ಡಿಕ್ಕಿಯಲ್ಲಿ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದು, ನಾಲ್ವರು ಗಾಯಗೊಂಡಿದ್ದಾರೆ.ಸೋಮವಾರ ಸೂಲಿಬೆಲೆ ಕಡೆಯಿಂದ ದೇವನಗೊಂದಿಗೆ ಡೀಸೆಲ್ ತುಂಬಿಸಿಕೊಂಡು ಬರಲು ಹೊರಟಿದ್ದ ಟ್ಯಾಂಕರ್ ಮತ್ತು ಹೊಸಕೋಟೆ ಕಡೆಯಿಂದ ಸೂಲಿಬೆಲೆ ಕಡೆಗೆ ಬರುತ್ತಿದ್ದ ಕ್ಯಾಂಟರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಚಾಲಕ ವೇಣುಗೋಪಾಲ್ (36) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಸೂಲಿಬೆಲೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಜೆಸಿಬಿ. ಸಹಾಯದಿಂದ ಲಾರಿಗಳನ್ನು ಬೇರ್ಪಡಿಸಿದರು. ಗಾಯಾಳುಗಳನ್ನು ಅಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಸಾಗಿಸಲಾಯಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.