ಭಾನುವಾರ, ಮೇ 9, 2021
18 °C
ಪಾಕ್ ರಾಜತಾಂತ್ರಿಕ ಅಧಿಕಾರಿ ವಾಹನ ಅಪಘಾತ

ಇಬ್ಬರ ಬಂಧನ: ಪ್ರಕರಣ ದಾಖಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಪಾಕಿಸ್ತಾನದ ಹಿರಿಯ ರಾಜತಾಂತ್ರಿಕ ಅಧಿಕಾರಿ ವಾಹನ ಅಪಘಾತಕ್ಕೀಡಾದ ಘಟನೆಗೆ ಸಂಬಂಧಿಸಿದಂತೆ, ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.ನಿರ್ಲಕ್ಷ್ಯದಿಂದ ಬೈಕ್ ಚಲಾಯಿಸಿದ ಆರೋಪದ ಮೇಲೆ ರೋಶಿನಿ ಹಾಗೂ ಆಕೆಯ ಸಂಬಂಧಿಯನ್ನು ಮಂಗಳವಾರ ಬಂಧಿಸಲಾಗಿದೆ. ಈ ಕುರಿತು ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಪಾಕ್ ಹೈಕಮಿಷನ್‌ನ ಮೊದಲ ಕಾರ್ಯದರ್ಶಿ (ವ್ಯಾಪಾರ) ಜಿರ್ಗಮ್ ರಾಜಾ ಅವರು ವಸಂತ ಕುಂಜ್ ಪ್ರದೇಶದಲ್ಲಿನ ತಮ್ಮ ನಿವಾಸಕ್ಕೆ ತೆರಳುತ್ತಿದ್ದಾಗ ಸೋಮವಾರ ಸಂಜೆ ಈ ಅಪಘಾತ ಸಂಭವಿಸಿತ್ತು.ಈ ಘಟನೆಯಲ್ಲಿ ಬೈಕ್ ಚಾಲಕ ಹಾಗೂ ಹಿಂಬದಿ ಕುಳಿತಿದ್ದ ರೋಶನಿ ಅವರಿಗೆ ಗಾಯಗಳಾಗಿವೆ. ಆ ಸಂದರ್ಭದಲ್ಲಿ ನಡೆದ ವಾಗ್ವಾದದಲ್ಲಿ ರಾಜಾ ಅವರಿಗೆ ಕೂಡ ಪೆಟ್ಟಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಭಾರತೀಯ ದಂಡ ಸಂಹಿತೆಯ 279 (ನಿರ್ಲಕ್ಷ್ಯದಿಂದ ವಾಹನ ಚಾಲನೆ), 323 (ಗಾಯಗೊಳಿಸುವುದು), 336 (ಸುರಕ್ಷತೆಗೆ ಧಕ್ಕೆ), 341 (ಇನ್ನೊಬ್ಬ ವ್ಯಕ್ತಿಯನ್ನು ಅಕ್ರಮವಾಗಿ ಹಿಡಿದಿಟ್ಟುಕೊಳ್ಳುವುದು), 143 (ಕಾನೂನುರಹಿತವಾಗಿ ಗುಂಪಿನಲ್ಲಿ ಇರುವುದು) ಹಾಗೂ 149ನೇ (ಜನರನ್ನು ಪ್ರಚೋದಿಸುವುದು) ಕಲಂಗಳಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಸರ್ಕಾರ ಸಮರ್ಥನೆ: ಸೋಮವಾರ ಸಂಜೆ ಇಲ್ಲಿ ಸಂಭವಿಸಿದ ಪಾಕಿಸ್ತಾನದ ರಾಜತಾಂತ್ರಿಕ ಅಧಿಕಾರಿ ಕಾರು ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಸಕಾಲಕ್ಕೆ ಸ್ಪಂದಿಸಿದ್ದಾರೆ ಎಂದು ಕೇಂದ್ರ ಸರ್ಕಾರ ಸಮರ್ಥಿಸಿಕೊಂಡಿದೆ.`ಘಟನೆಯ ಮಾಹಿತಿ ಪಡೆದ ತಕ್ಷಣವೇ ಪೊಲೀಸರು ಎಲ್ಲ ಬಗೆಯ ನೆರವು ನೀಡಿದ್ದಾರೆ. ಅಪಘಾತ ಸ್ಥಳದಲ್ಲಿದ್ದ ಜನರ ಗುಂಪಿನಿಂದ ಜಿರ್ಗಮ್ ರಾಜಾ ಅವರನ್ನು ಸುರಕ್ಷಿತವಾಗಿ ಎಐಐಎಂಸ್ ವೈದ್ಯಕೀಯ ಕೇಂದ್ರಕ್ಕೆ ಕರೆದುಕೊಂಡು ಹೋಗಲಾಗಿದೆ. ಅವರಿಗೆ ಸೂಕ್ತ ವೈದ್ಯಕೀಯ ಚಿಕಿತ್ಸೆ ನೀಡಲು ಸಹ ಪೊಲೀಸರು ಸಹಕರಿಸಿದ್ದಾರೆ' ಎಂದು ವಿದೇಶಾಂಗ ಸಚಿವಾಲಯದ ವಕ್ತಾರರು ತಿಳಿಸಿದ್ದಾರೆ.ಡೆಪ್ಯುಟಿ ಹೈಕಮಿಷನರ್‌ಗೆ ಬುಲಾವ್ (ಇಸ್ಲಾಮಾಬಾದ್ ವರದಿ): ದೆಹಲಿಯಲ್ಲಿ ನಡೆದ ಪಾಕ್ ರಾಜತಾಂತ್ರಿಕರ ಅಪಘಾತ ಪ್ರಕರಣಕ್ಕೆ ಸಂಬಂಧಿಸಿ ಅಧಿಕೃತ ಪ್ರತಿಭಟನೆ ದಾಖಲಿಸುವ ಸಲುವಾಗಿ ಪಾಕಿಸ್ತಾನ ಸರ್ಕಾರ ಮಂಗಳವಾರ ಭಾರತದ ಡೆಪ್ಯುಟಿ ಹೈಕಮಿಷನರ್ ಗೋಪಾಲ್ ಬಗ್ಲೆ ಅವರಿಗೆ ಕರೆ ಕಳುಹಿಸಿತ್ತು.`ಘಟನೆ ಸಂಬಂಧ ವಿಸ್ತೃತ ತನಿಖೆ ನಡೆಸಬೇಕು. ತಪ್ಪಿತಸ್ಥರಿಗೆ ಶಿಕ್ಷೆ ನೀಡಬೇಕು. ಭಾರತದಲ್ಲಿರುವ ಪಾಕ್ ರಾಯಭಾರಿಗಳಿಗೆ ರಕ್ಷಣೆ ನೀಡಬೇಕು' ಎಂದು  ಬಗ್ಲೆ ಅವರಿಗೆ ಪಾಕ್ ವಿದೇಶಾಂಗ ಇಲಾಖೆ ದಕ್ಷಿಣ ಏಷ್ಯಾ ಮಹಾನಿರ್ದೇಶಕಿ ಒತ್ತಾಯಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.