ಸೋಮವಾರ, ಜೂನ್ 14, 2021
22 °C

ಇಲಾಖೆ ಕೈಪಿಡಿಯಲ್ಲೇ ಉಲ್ಲೇಖ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೊಪ್ಪಳ: ಜಿಲ್ಲೆಯ ಬಹುತೇಕ ಶಿಕ್ಷಕರ ಕಾರ್ಯವೈಖರಿ ಬಗ್ಗೆ ಇತ್ತೀಚೆಗೆ ಅಸಮಾಧಾನದ ಮಾತುಗಳು ಸಾಮಾನ್ಯವಾಗಿವೆ. ಜಿಲ್ಲೆಯ ಶೈಕ್ಷಣಿಕ ಗುಣಮಟ್ಟ ಸುಧಾರಿಸಲು ರೂಪಿಸಿರುವ ವಿಶೇಷ ಕಾರ್ಯಕ್ರಮಗಳ ಅನುಷ್ಠಾನಕ್ಕೆ ವಿರೋಧ ವ್ಯಕ್ತಪಡಿಸುವುದರಿಂದ ಹಿಡಿದು ಸರಿಯಾಗಿ ಶಾಲೆಗೆ ಹಾಜರಾಗದೇ ಇರುವುದು, ಮಕ್ಕಳ ಎದುರಲ್ಲಿಯೇ ಹೊಡೆದಾಡಿದ ಬಗ್ಗೆ ವರದಿಗಳೂ ಬಂದಿವೆ.ಈಗ, ಸಾರ್ವಜನಿಕ ಶಿಕ್ಷಣ ಇಲಾಖೆಯೇ ಪ್ರಕಟಿಸಿರುವ ಕೈಪಿಡಿಯೊಂದರಲ್ಲಿ ಕೆಲವು ಶಿಕ್ಷಕರ ವರ್ತನೆ, ಕಾರ್ಯ ವೈಖರಿ ಬಗ್ಗೆ ಅಧಿಕಾರಿಗಳೇ ಅಸಮಾಧಾನ ಹೊರ ಹಾಕಿರುವುದು ಅಂಗೈ ಹುಣ್ಣಿಗೆ ಕನ್ನಡಿ ಯಾಕೆ ಎನ್ನುವಂತಾಗಿದೆ.

ಸರ್ವ ಶಿಕ್ಷಣ ಅಭಿಯಾನದಡಿ ಸಾರ್ವಜನಿಕ ಶಿಕ್ಷಣ ಇಲಾಖೆಯು ಪ್ರಸಕ್ತ ಸಾಲಿಗಾಗಿ ಪ್ರಕಟಿಸಿರುವ `ಸೇತುಬಂಧ ಕಾರ್ಯಕ್ರಮ ಹಾಗೂ ಕಾಗುಣಿತ , ಮಗ್ಗಿ ಕಲಿಕಾ ಆಂದೋಲನ ಕೈಪಿಡಿ~ಯಲ್ಲಿ ತಾಲ್ಲೂಕಿನ ಶಿಕ್ಷಕರ ಕಾರ್ಯ ವೈಖರಿ ಬಗ್ಗೆ ಬರೆಯಲಾಗಿದ್ದು, ಕೈಪಿಡಿಯ ಪುಟ ಸಂಖ್ಯೆ 5 ಹಾಗೂ 6ರಲ್ಲಿ ಈ ವಿವರಗಳು ಇವೆ.`ಕೆಲವು ಶಿಕ್ಷಕರು ಸಮಯಕ್ಕೆ ಸರಿಯಾಗಿ ಪ್ರಾರ್ಥನೆಗೆ ಹಾಜರು ಇರುವುದಿಲ್ಲ. ಪ್ರಾರ್ಥನೆಯನ್ನು ತಪ್ಪಾಗಿ ಹಾಡುತ್ತಿದ್ದರೂ ತಿದ್ದುವ ಯಾವ ಪ್ರಯತ್ನವನ್ನೂ ಮಾಡುವುದಿಲ್ಲ. ಡ್ರಮ್‌ಸೆಟ್ ಇದ್ದರೂ ಬಾರಿಸಲು ಕಷ್ಟ~ ಎಂದು ಅಸಮಾಧಾನ ಹೊರ ಹಾಕಲಾಗಿದೆ.ಇನ್ನು, ಪಾಠದ ಅವಧಿ, ಕೊಠಡಿಯಲ್ಲಿನ ವರ್ತನೆ ಬಗ್ಗೆ ಸಹ ಬರೆಯಲಾಗಿದೆ. `ಪ್ರಥಮ ಅವಧಿಗೆ ಯಾವ ಸಿದ್ಧತೆ ಇಲ್ಲದೇ ಅಂದಿನ ಹಾಜರಿ ಪಡೆದು 40 ನಿಮಿಷ ಅವಧಿಯ ಬದಲಾಗಿ 25 ನಿಮಿಷದಲ್ಲಿ ಎಲ್ಲ ಪಾಠ ಮುಗಿಸಿ ಹೊರಬರುತ್ತಾರೆ. ಅವಧಿಗೆ ಸರಿಯಾಗಿ ತರಗತಿಗೆ ಹೋಗುವುದಿಲ್ಲ. ಮಕ್ಕಳು ಗಲಾಟೆ ಮಾಡಿ ಜಗಳವಾಡುತ್ತಿದ್ದರೂ ಒಂದು ಕೊಠಡಿಯಲ್ಲಿ ಹರಟೆ ಹೊಡೆಯುವುದು ಅಥವಾ ಮೊಬೈಲ್‌ನಲ್ಲಿ ಮಾತನಾಡುತ್ತಿರುವುದು~ ಕಂಡು ಬರುತ್ತದೆ ಎಂದು ವಿವರಿಸಲಾಗಿದೆ.ಉತ್ತರ ಪತ್ರಿಕೆ ಮೌಲ್ಯಮಾಪನ ಇಲ್ಲ. ಮೌಲ್ಯಮಾಪನ ಮಾಡಿದ್ರೂ ತಪ್ಪಾಗಿ ಅಂಕ ನಮೂದು ಮಾಡುವುದು. ಆ ಮೂಲಕ ಪಾಲಕರಿಗೆ, ಮಕ್ಕಳಿಗೆ ತಪು ಮಾಹಿತಿ ನೀಡುವುದು. ಹೀಗೆ ಒಂದೆಡೆ ಮಕ್ಕಳ ನಿರೀಕ್ಷೆ, ಮತ್ತೊಂದೆಡೆ ಶಿಕ್ಷಕರ ನಿರಾಸಕ್ತಿ, ನಿಷ್ಕಾಳಜಿಯಿಂದ ಸಾರ್ವಜನಿಕ ವಲಯದಲ್ಲಿ ಸರ್ಕಾರಿ ಶಾಲೆಗಳ ಬಗ್ಗೆ ಅಸಡ್ಡೆ ಭಾವನೆ ಮೂಡಿದೆ. ಪಾಲಕರ ಕನಸು ಮಕ್ಕಳು ವಿದ್ಯಾವಂತರಾಗಬೇಕೆನ್ನುವುದು! ಇದಕ್ಕೆ ಪೂರಕವಾಗಿ ಶಿಕ್ಷಣ ಇಲಾಖೆ ದುಡಿಯುವ ಅಗತ್ಯತೆ ತುಂಬಾ ಇದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಉಮೇಶ ಪೂಜಾರ ಬರೆದಿದ್ದಾರೆ.ಇನ್ನು, ಮುಖ್ಯ ಶಿಕ್ಷಕರು ತಮ್ಮ ಕೆಲಸವನ್ನು ಯಾವುದೋ ಶಿಕ್ಷಕರಿಗೆ ಒಪ್ಪಿಸಿ ಬಿಸಿ ಊಟದ ಕಚೇರಿ ನೆಪ ಹೇಳಿ 11.30 ಗಂಟೆ ಹೊತ್ತಿಗೆ ಶಾಲೆಯಿಂದ ಹೊರಟು ಹೋಗುವುದು. ಉಳಿದವರು ಯಜಮಾನನಿಲ್ಲದ ಮನೆಯಲ್ಲಿ ಕಲಿಸಿದ್ದೇ ಪಾಠ. ಮಧ್ಯಾಹ್ನ 3 ಗಂಟೆ ಹೊತ್ತಿಗೆ ಒಬ್ಬೊಬ್ಬರೇ ಬಸ್‌ನಿಲ್ದಾಣದತ್ತ ಮುಖ ಮಾಡಿರುತ್ತಾರೆ ಎಂದೂ ಅಸಮಾಧಾನದಿಂದ ಹೇಳಿದ್ದಾರೆ.ಈ ಕೈಪಿಡಿಯಲ್ಲಿ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಬಿ.ಮಂಜುನಾಥ, ಪ್ರಧಾನ ಕಾರ್ಯದರ್ಶಿ ಸುಭಾಷ್ ರೆಡ್ಡಿ `ನಿವೇದನೆ~ ಬರೆದಿದ್ದು, ತಾಲ್ಲೂಕಿನಲ್ಲಿ ಶಿಕ್ಷಣದ ಗುಣಮಟ್ಟವನ್ನು ಸುಧಾರಿಸಲು ಎಲ್ಲ ಶಿಕ್ಷಕರು ಪ್ರಾಮಾಣಿಕ ಪ್ರಯತ್ನ ಮಾಡೋಣ ಎಂದು ವಿನಂತಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.