ಭಾನುವಾರ, ಏಪ್ರಿಲ್ 11, 2021
32 °C

ಇಲ್ಲಿಂದ ಮುಂದೆಲ್ಲ ನೀರು...

ಲಕ್ಷ್ಮಣ ಟಿ. ನಾಯ್ಕ Updated:

ಅಕ್ಷರ ಗಾತ್ರ : | |

ನಾನು ನಾಡಿನೊಳಗಿನ ದ್ವೀಪ. ಹೆಸರು ಖಾರ್ಗೆಜೂಗ್. ಈ ಹೆಸರು ಹೇಗೆ ಬಂತೋ ತಿಳಿಯದು. ಕನ್ನಡದ ಜತೆ ಕೊಂಕಣಿ ಮಾತನಾಡುವವರೂ ಹೆಚ್ಚಾಗಿ ಇರುವುದರಿಂದ, ಸಮೀಪದಲ್ಲೇ (ಕೇವಲ 26 ಕಿಮೀ) ಗೋವಾ ಇರುವುದರಿಂದ ಈ ಕೊಂಕಣಿ ಹೆಸರು ಬಂದಿದೆ ಎಂಬುದು ನನ್ನೂರಿನ ಹಿರಿಯ ಜೀವಗಳ ನೆನಪು. ಕೊಂಕಣಿಯಲ್ಲಿ ಜೂಗ್ ಎಂದರೆ ದ್ವೀಪ ಎಂದರ್ಥ.ಕಾರವಾರದಿಂದ 17 ಕಿಮೀ ಕೊರಕಲು ರಸ್ತೆಯಲ್ಲಿ ಸಾಗಿ ಬಂದರೆ ಹಳಗಾ ಎಂಬ ಊರು ಸಿಗುತ್ತದೆ. ಅದಕ್ಕಿಂತ ಮೊದಲು ಸಿಗುವುದು ಕೆಳದಿ ಸಂಸ್ಥಾನದ ರಾಜ ಸದಾಶಿವರಾಯರು ಆಡಳಿತ ನಡೆಸಿದ ಸದಾಶಿವಗಡದ ಕೋಟೆ-ಕೊತ್ತಲ. ಪಕ್ಕದಲ್ಲಿಯೇ ಪ್ರಖ್ಯಾತ ಕಾಳಿ ಸೇತುವೆ ಇದೆ. ಹಳಿಯಾಳಕ್ಕೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿಯಲ್ಲಿಯೇ ಇರುವ ಹಳಗಾದಲ್ಲಿ, ಮುಖ್ಯರಸ್ತೆಯಿಂದ ಬಲಕ್ಕೆ ತಿರುಗಿ ಮೂರು ಕಿಮೀ ಮಣ್ಣಿನ ರಸ್ತೆಯಲ್ಲಿ ಆಗಮಿಸಿದರೆ ಉಳಗಾ ಸಿಗುತ್ತದೆ. ಅಲ್ಲಿಂದ ಎರಡು ಕಿಮೀ ಮಣ್ಣಿನ ರಸ್ತೆಯಲ್ಲಿ ಬಂದರೆ ಕಾಳಿ ನದಿ! ನದಿ ದಾಟಿ ಬಂದರೆ ನನ್ನೂರು. ನನ್ನೂರಿಗೆ ಬರಬೇಕಾದರೆ ನೀವು ಅಂಬಿಗನ ಕಾಯಬೇಕು!ನನಗೆ ಅಂಬಿಗನೇ ಸೇತುವೆ. ಪಾತಿ ದೋಣಿಯೇ ಐರಾವತ! ನಾನು ಬಡ ದ್ವೀಪ ತಾನೆ!

ತೆಂಗಿನ ಮರದ ಬುಡಕ್ಕೆ ಕಟ್ಟಿರುವ ಪಾತಿ ದೋಣಿಯ ಹಗ್ಗ ಬಿಚ್ಚಿ ಕುಳಿತರೆ ನದಿಯಲ್ಲಿ 1.5 ಕಿಮೀ ಸುಂದರ ದೋಣಿ ವಿಹಾರ. ಪ್ರವಾಸಿಗರ ಪಾಲಿಗಿದು ಸುಂದರ ವಿಹಾರ. ಒಂದೂವರೆ ಕಿಮೀ ಪಾತಿ ದೋಣಿ (ನಾಡ ದೋಣಿ) ವಿಹಾರದ ನಂತರ ಅರ್ಧ ಮುಗಿದಿರುವ ಹಾಗೂ ನೀರಲ್ಲಿ ಮುಳುಗಿರುವ ನಿಲ್ದಾಣ ಎದುರುಗೊಳ್ಳುತ್ತದೆ. ಆರು ದೊಡ್ಡ ಮರದ ತುಂಡು ಕಟ್ಟಿ ನಿಮ್ಮನ್ನು ಅದರ ಮೇಲೆ ನಡೆಸಿಕೊಂಡು ಬಂದರೆ ನನ್ನೂರಿನ ನೆಲ, ಮಣ್ಣು, ಹೊಲ ಎದುರುಗೊಳ್ಳುತ್ತದೆ. ಸೀಬೆಕಾಯಿ ಮರ, ಪಕ್ಕದಲ್ಲಿಯೇ ಇರುವ ತೆಂಗಿನ ತೋಟ, ದಾಳಿಂಬೆ ವನ ದಾಟಿ, ಭತ್ತದ ಗದ್ದೆಯ ಬದುವಿನಲ್ಲಿ ನಾಜೂಕಿನ ಹೆಜ್ಜೆಯಿಟ್ಟು ಬಂದರೆ ಪ್ರಾಥಮಿಕ ಶಾಲೆ, ಹೆಂಚಿನ ಮನೆ, ಅಲ್ಲಲ್ಲಿರುವ ಹುಲ್ಲಿನ ಮನೆಗಳ ದರ್ಶನ. ಇನ್ನೊಂದಿಷ್ಟು ಹೆಜ್ಜೆ ಹಾಕಿದರೆ ಮತ್ತೆ ನೀರು!ಇಷ್ಟೇನಾ ಊರು ಎಂದು ರಾಗ ಎಳೆಯಬೇಡಿ. ಒಂದು ದ್ವೀಪವಾಗಿ ನನ್ನೂರಿನ ಅಗಲ ಇಷ್ಟೇ. ಉದ್ದ ಇನ್ನೂ ಇದೆ. ನನ್ನೊಳಗೆ ಇನ್ನೂ ಏನೇನೋ ಇದೆ.ನಿಮಗೆ ಸ್ಪಷ್ಟವಾಗಿರಬೇಕು- ನಾನೊಂದು ದ್ವೀಪ. ಹಿರಿಯ ಕಾದಂಬರಿಕಾರ ನಾ. ಡಿಸೋಜಾ ಅವರ ಕಥೆಯಲ್ಲಿ ಬರುವ ಸಾಗರದ ತುಮರಿ ಗ್ರಾಮ ದ್ವೀಪವಾದ ಕಥೆ ನೀವು ಕೇಳಿಯೇ ಇರುತ್ತೀರಿ. ಆ ಕಥೆಯನ್ನು ನಿರ್ದೇಶಕ ಗಿರೀಶ ಕಾಸರವಳ್ಳಿ ಅವರು `ದ್ವೀಪ~ ಹೆಸರಿನಲ್ಲಿ ಸಿನಿಮಾ ಮಾಡಿದ್ದರು. `ದ್ವೀಪ~ದಲ್ಲಿನ ನಾಗಿಯ ಪಾತ್ರಕ್ಕಾಗಿ ನಟಿ ಸೌಂದರ್ಯ ಅವರಿಗೆ ರಾಷ್ಟ್ರಪ್ರಶಸ್ತಿಯೂ ದೊರೆತಿತ್ತು. ನನ್ನ ಕಥೆಯೂ ಭಿನ್ನವೇನಲ್ಲ.ಆದರೆ, ನಾನು ಮುಳುಗಡೆಯಾದ ದ್ವೀಪ ಅಲ್ಲ. ನನ್ನದು ವಿಚಿತ್ರ ಕಥೆ. ಡಿಸೋಜಾ ಅವರ ಕಥೆಯಲ್ಲಿ ಶರಾವತಿ ಜನರ ಬದುಕನ್ನು ಬರ್ಬರ ಮಾಡಿದಳು. ಇಲ್ಲಿ ಕಾಳಿನದಿ ನನ್ನನ್ನು ದ್ವೀಪವಾಗಿಸಿದ್ದಾಳೆ. ಇಬ್ಬರೂ ಹೆಣ್ಣು. ನಾನು ಗಂಡು.ಕರ್ನಾಟಕದ ಪ್ರಮುಖ ನದಿಗಳಲ್ಲಿ ಕಾಳಿಯೂ ಒಬ್ಬಳು. ಹೆಸರೇ ಹೇಳುವಂತೆ ಅವಳದು ಕಾಳಿ ಅವತಾರ. ದಾಂಡೇಲಿಯ ಅಣಶಿ ಕಾಡಿನಲ್ಲಿ ಉಗಮವಾಗುವ ಈಕೆ ದಾಂಡೇಲಿ, ಜೋಯಿಡಾ, ಕೈಗಾ, ಮಲ್ಲಾಪುರ, ಕದ್ರಾ ಹಾಗೂ ಸುಪಾ ಗ್ರಾಮ ಸಂದಿಸಿ ಕಾಡುಮೇಡುಗಳಲ್ಲಿ ಹರಿಯುತ್ತಾಳೆ.ಕದ್ರಾ ಹಾಗೂ ಸುಪಾ ಜಲಾಶಯದಲ್ಲಿ ವಿದ್ಯುತ್ ಉತ್ಪಾದನೆ ಮಾಡುವುದೇ ಈಕೆ ಒಡಲಲ್ಲಿರುವ ಹರಿಯುವ ನೀರಿನ ರಭಸದಿಂದ. ನಂತರ ಮಲ್ಲಾಪುರ ಪ್ರದೇಶದಲ್ಲಿ ಕೈಗಾ ಅಣುವಿದ್ಯುತ್ ಘಟಕದ ಬಾಯ್ಲರ್ ತಣ್ಣಗಾಗಿಸಲು ಲಕ್ಷಾಂತರ ಕ್ಯುಸೆಕ್ಸ್ ನೀರು ಒದಗಿಸುತ್ತಾಳೆ. ಅಲ್ಲಿಂದ ಬರುವ ಒಂದಿಷ್ಟು ಕಲ್ಮಶ ತುಂಬಿಕೊಂಡು ಹೊರಟಳೆಂದರೆ ಮಲ್ಲಾಪುರ ದಾಟುವಾಗಲೇ ಕಾಳಿಯ ಅವತಾರ! ಮಲ್ಲಾಪುರದ ದಟ್ಟಕಾಡಿನಲ್ಲಿ ಹರಿದು ಮುಂದೆ ಸಾಗುವಾಗಲೇ ಈಕೆ ಟಿಸಿಲೊಡೆದುಬಿಡುತ್ತಾಳೆ. ಹೀಗೆ ಟಿಸಿಲೊಡೆದಾಗ ಹುಟ್ಟಿದ್ದೇ ಖಾರ್ಗೇಜೂಗ್ ಎಂಬ ನಾನು.ಹೌದು. ನಾನೇ ಖಾರ್ಗೆಜೂಗ್ ಎಂಬ ದ್ವೀಪ. ನೀರು ನನ್ನ ಸುತ್ತಲೂ ಹರಿಯುತ್ತದೆ. ನೀರು ಎಲ್ಲರಿಗೂ ಜೀವಜಲ. ಆದರೆ, ಈ ನೀರೇ ನನ್ನ ಬದುಕಿನ ಕಂಟಕ.ನಿಮಗೊಂದು ವಿಷಯ ಗೊತ್ತಾ? ಇಡೀ ನಾಡಿಗೇ ಮಳೆ ಬೇಕು. ಹೇಳಿಕೇಳಿ ಈಗ ಮಳೆಗಾಲ. ವರ್ಷವೃಷ್ಟಿ ಧಾರಾಕಾರ. ನನಗೋ ಮಳೆ ಎಂದರೆ ಅಲರ್ಜಿ.ಮಳೆ ಬರಲೇಬಾರದು ಎಂಬ ಹಂಬಲ ನನ್ನದು. ಆದರೂ ಹನಿ ಬೀಳುತ್ತದೆ. ಆಗ ನನ್ನೊಡಲಲ್ಲಿರುವ ಮಕ್ಕಳು, ಮರಿ, ಜನ-ಜಾನುವಾರಗಳ ಆತಂಕ ಹೇಳತೀರದು.

ಮೊದಲೇ ಹೇಳಿದ್ದೇನೆ- ನಾನು ಹುಟ್ಟಿದ ವರ್ಷ ಗೊತ್ತಿಲ್ಲ. ನದಿ ಮೂಲ ಹಾಗೂ ಋಷಿ ಮೂಲ ಕೇಳಬಾರದು ಎಂದರು ದೊಡ್ಡವರು. ಆ ಸಾಲಿಗೆ ದ್ವೀಪದ ಮೂಲ ಕೇಳಬೇಡಿ ಎಂದು ಸೇರಿಸಿಕೊಳ್ಳಿ.ನನ್ನ ವಿಸ್ತೀರ್ಣ- 3.5 ಕಿಮೀ ಉದ್ದ ಹಾಗೂ 2 ಕಿಮೀ ಅಗಲ ಮಾತ್ರ. ನನ್ನೊಡಲಲ್ಲಿರುವ ಒಟ್ಟು ಪ್ರದೇಶ 75 ಹೆಕ್ಟೇರ್. ಇದರಲ್ಲಿ 22 ಹೆಕ್ಟೇರ್ ಪ್ರದೇಶ ಗ್ರಾಮವಾಗಿದ್ದರೆ, 10-15 ಹೆಕ್ಟೇರ್ ಪ್ರದೇಶದಲ್ಲಿ ಹಣ್ಣು ಹಾಗೂ ತೆಂಗಿನ ತೋಟವಿದೆ. ಉಳಿದುದೆಲ್ಲ ಕೃಷಿ ಭೂಮಿ.ನನ್ನೂರಲ್ಲಿ ಹೆಚ್ಚಾಗಿ ಬೆಳೆಯುವುದು ಭತ್ತ. ಅದು ಬಿಟ್ಟರೆ ಜೋಳ ಹಾಗೂ ಕಬ್ಬು. ಬೇಸಿಗೆಯಲ್ಲಿ ಹೆಸರು, ಉದ್ದು, ಶೇಂಗಾ, ಹೆಸರುಕಾಳು ಸಂಭ್ರಮ. ಮೀನುಗಾರಿಕೆ ಊರವರ ಪರ್ಯಾಯ ಕೃಷಿ. ಇರುವ ಎಂಟು ದೋಣಿಗಳು ಕಾಳಿ ನದಿಯೊಳಗೆ ಮೀನುಗಾರಿಕೆ ಜತೆಗೆ ಉಸುಕು (ಮರಳು) ತೆಗೆಯುವಲ್ಲಿ ನಿರತ.75 ಹೆಕ್ಟೇರ್ ಪ್ರದೇಶದಲ್ಲಿ 35 ಹೆಕ್ಟೇರ್ ವ್ಯಾಪ್ತಿಯಲ್ಲಿ ಭತ್ತ ಬೆಳೆಯಲಾಗುತ್ತದೆ. ಕಾಳಿ ನದಿಯ ಸುತ್ತಲೂ ತೆಂಗು ಇದೆ. ನದಿಯ ಅಲೆ, ಹೊಸ-ಹಳೆ ನೀರು ಹರಿದು ಹೋಗುವುದೇ ನಮ್ಮೂರಿನ ತೆಂಗಿನ ತೋಟದ ಅಂಚಿಗೆ. ನದಿ ನೀರು ಯಥೇಚ್ಚವಾಗಿದ್ದರಿಂದ ಹಾಗೂ ಮರಳು ಮಿಶ್ರಿತ ಮಣ್ಣು ಇರುವುದರಿಂದ ತೆಂಗಿನ ಫಸಲು ಅಸಾಮಾನ್ಯ. ಭತ್ತವೇ ಇಲ್ಲಿ ಜೀವನೋಪಾಯ ಬೆಳೆ. ಸಾವಿರಕ್ಕೂ ಹೆಚ್ಚು ಕ್ವಿಂಟಾಲ್ ಭತ್ತ ಬೆಳೆಯುತ್ತೇವೆ. ಒಂದಿಷ್ಟು ಬಳಕೆಗೆ ಇಟ್ಟುಕೊಂಡರೆ, ಇನ್ನೊಂದಿಷ್ಟು ವ್ಯಾಪಾರ.ಮಾರುವುದು ಎಂದ ತಕ್ಷಣ ನೆನಪಾಯಿತು ನೋಡಿ. ಇಲ್ಲಿ ಬೆಳೆಯುವ ಪ್ರತಿಯೊಂದು ವಸ್ತುವೂ ಪಾತಿ ದೋಣಿಯ್ಲ್ಲಲೇ ಸಾಗಬೇಕು.  ಪಟ್ಟಣಕ್ಕೆ ಕೆಲಸಕ್ಕೆ ಹೋಗುವವರೂ ಸರ್ಕಾರಿ ನೌಕರರೂ ನಮ್ಮ ಮಕ್ಕಳಿಗೆ ಅಕ್ಷರ ಕಲಿಸುವ ಶಿಕ್ಷಕರು ಸಹ ಇದೇ ದೋಣಿಯಲ್ಲಿಯೇ ಸಾಗಬೇಕು. ಬೇರೆ ದಾರಿ ಇಲ್ಲ ನಮ್ಮೂರಿಗೆ.ಈ ದೋಣಿಯಲ್ಲಿಯೇ ಹೋಗಿ ಬಂದವರು ಪದವಿ, ಎಂಎ, ಡಿಪ್ಲೋಮಾ ಮಾಡಿ ಉನ್ನತ ಹುದ್ದೆಯಲ್ಲಿದ್ದಾರೆ. ಗೋವಾ ನಮ್ಮೂರಿಗೆ ಹತ್ತಿರ ಇರುವುದರಿಂದ ಅಲ್ಲಿಯೇ ಬಹುತೇಕರು ನೌಕರಿ ಹಿಡಿದಿರುವುದು ಸಾಧನೆ. ನನ್ನೂರಿನ ಜನಸಂಖ್ಯೆ ಹೆಚ್ಚೇನೂ ಇಲ್ಲ. 550 ಮಂದಿ ಅಷ್ಟೇ. ಇಲ್ಲಿರುವ ಕುಟುಂಬಗಳ ಸಂಖ್ಯೆ ಎಪ್ಪತ್ತು. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇಪ್ಪತ್ತೈದಕ್ಕೂ ಹೆಚ್ಚು ಮಕ್ಕಳಿದ್ದಾರೆ. ಮುಂದಿನ ವಿದ್ಯಾಭ್ಯಾಸ ಮಾಡಲು ಪಾತಿ ದೋಣಿಯೇ ಇವರ ಸಂಪರ್ಕ ಸೇತುವೆ.ನನ್ನೂರು ಒಂದು ನೋಟಕ್ಕೆ ಕರ್ನಾಟಕ ನಕ್ಷೆಯ ರೂಪದಲ್ಲಿದೆ. ಮಧ್ಯದಲ್ಲಿ ಅಗಲ ಪ್ರದೇಶ ಇದ್ದರೆ ಎರಡೂ ಅಂಚಿನಲ್ಲಿ ಕಡಿಮೆ ಭೂಪ್ರದೇಶ. ಶಾಲೆಯ ಪ್ರದೇಶದ ಬಳಿ ಸಮತಟ್ಟಾಗಿದ್ದರೆ ದೋಣಿ ಸಾಗುವ ಮಾರ್ಗದ ಬಳಿ ತಗ್ಗುಪ್ರದೇಶ ಇದೆ. ಊರಿಗೆ ವಿದ್ಯುತ್ ಸಂಪರ್ಕ ಇದೆ. ಕದ್ರಾದಿಂದಲೇ ಲೈನ್ ಇಲ್ಲಿ ಸಾಗಿದೆ. ಏತ ನೀರಾವರಿ ಯೋಜನೆ ವಿಫಲವಾಗಿದೆ. ಮೋಟಾರ್ ಬಳಸಿ ಎರಡು ಬೆಳೆ ತೆಗೆಯುವಲ್ಲಿ ನಿಸ್ಸೀಮರು ನನ್ನೂರಿನ ಮಣ್ಣಿನ ಮಕ್ಕಳು. ಇನ್ನೊಂದು ವಿಷಯ ಗೊತ್ತಾ? ಈ ದ್ವೀಪದ ಮಕ್ಕಳಿಗೆ ಯಾರೂ ಹೆಣ್ಣು ಕೊಡುವುದಿಲ್ಲ! ನೀರಿಲ್ಲದ ಊರಿಗೆ ಹೆಣ್ಣು ಕೊಡಲು ಹಿಂಜರಿಯುವುದು ಸಹಜ. ನೀರಿನ ಕಾರಣಕ್ಕೇ ನಮ್ಮ ಹೈಕಳಿಗೆ ಹೆಣ್ಣು ಸಿಗುವುದು ಕಷ್ಟ. ಗಂಡು ಮಕ್ಕಳಿಗೂ ಹೆಣ್ಣು ಸಿಗುವುದು ಇಲ್ಲವೇ ಕೊಡುವುದೂ ಕಷ್ಟವಾಗಿಬಿಟ್ಟಿದೆ. ಒಟ್ಟಿನಲ್ಲಿ, ಮದುವೆ ಎನ್ನುವುದೊಂದು ಅಸಹಜ ಪ್ರಸಂಗ ಇಲ್ಲಿ.ನನ್ನ ಸುತ್ತಲೂ ಕಾಳಿ ನದಿಯ ಸಿಹಿ ನೀರು. ಮಳೆ ಬಂದರೆ ಕದ್ರಾ ಹಾಗೂ ಕೊಡಸಳ್ಳಿ ಡ್ಯಾಂ ನೀರನ್ನು ಬಿಡುವುದರಿಂದ ಪ್ರತಿ ವರ್ಷವೂ ತೊಂದರೆ ತಪ್ಪಿದ್ದಲ್ಲ. ಇಲ್ಲಿ ಒಂದು ಸೇತುವೆ ಮಾಡಿಬಿಟ್ಟರೆ ಸಮಸ್ಯೆಯೇ ಇಲ್ಲ. ಆದರೆ, ಸಮಸ್ಯೆಗಳು ಇಲ್ಲದೆ ಹೋದರೆ ಸಮಾಜದ ಆರೋಗ್ಯ ಏನಾಗಬೇಕು. ಹಾಗಾಗಿ, ನೀರು ಉಬ್ಬರಿಸಿದಾಗಲೆಲ್ಲ ನಮ್ಮೂರಿನವರಿಗೆ ಗಂಜಿಕೇಂದ್ರವೇ ಗತಿ.ಈಗಿನ ಮೀನುಗಾರಿಕಾ ಸಚಿವ ಆನಂದ ಅಸ್ನೋಟಿಕರ್ ಇದ್ದಾರಲ್ಲ, ಅವರ ಅಸ್ನೋಟಿ ಗ್ರಾಮಕ್ಕೂ ನಮ್ಮೂರಿಗೂ 2 ಕಿ.ಮೀ ದೂರವಷ್ಟೇ. ನನ್ನ ಎಡಮಗ್ಗುಲ ದಂಡೆಯಲ್ಲಿ ಮಾಜಿ ಸಚಿವ ಪ್ರಭಾಕರ ರಾಣೆ ಅವರ ಊರಿದೆ. ಶಿಕ್ಷಣ ಸಂಸ್ಥೆಗಳಿಂದ ಕಿಕ್ಕಿರಿದ ಸಿದ್ದರ ಗ್ರಾಮವೂ ಎಡಮಗ್ಗುಲಿಗಿದೆ. ಮಾಜಿ ಉಸ್ತುವಾರಿ ಸಚಿವ ಆರ್.ವಿ. ದೇಶಪಾಂಡೆ ಅವರ ಹಳಿಯಾಳಕ್ಕೆ ಹೋಗಲು ನನ್ನೂರಿನ ಪಕ್ಕದ ಮುಖ್ಯ (ಕಾರವಾರ - ಹಳಿಯಾಳ) ರಸ್ತೆಯಲ್ಲಿಯೇ ಸಾಗಬೇಕು. ಈ ಗ್ರಾಮಗಳ ಜತೆ ಹೋಟೆಗಾಳಿ, ಹಣಕೋಣ, ಗೋಪಶಿಟ್ಟಾ, ಕಿನ್ನರ, ಶಿರವಾಡ ಗ್ರಾಮಗಳೂ ನನ್ನ ಸುತ್ತುವರಿದಿವೆ. ನನ್ನಿಂದ 16 ಕಿಮೀ ಮುಂದೆ ಸಾಗಿದರೆ ಅರಬ್ಬೀ ಸಮುದ್ರ ಎಡತಾಕುತ್ತದೆ. ಕಾಳಿ ನದಿ ಸಮ್ಮಿಲನವೂ ಅಲ್ಲಿಯೇ. ಈ ಸಿರಿವಂತ ಶಕ್ತಿವಂತರ ಮಧ್ಯೆ ನಾನು ಬಡಪಾಯಿ ದ್ವೀಪ!ಬಡಪಾಯಿಗಳಿಗೆ ಬಾಯಿ ಇರಬಾರದಲ್ಲವೇ... ಆದರೂ ಮಾತನಾಡಿದ್ದೇನೆ! ಕ್ಷಮೆ ಇರಲಿ...

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.