ಭಾನುವಾರ, ಜುಲೈ 25, 2021
22 °C

ಇಲ್ಲಿದೆ ಬೇಬಿ ಬ್ಲಾಸಮ್...

ಕೆ.ಎಸ್. ಗಿರೀಶ Updated:

ಅಕ್ಷರ ಗಾತ್ರ : | |

`ಅತ್ತರೆ ಅಳಲವ್ವ ಈ ಕೂಸು ನನಗಿರಲಿ

ಕೆಟ್ಟರೆ ಕೆಡಲಿ ಮನೆಗೆಲಸ/

ಕಂದನಂತ ಮಕ್ಕಳಿರಲವ್ವ ಮನೆತುಂಬ//'

ನಮ್ಮ ಜನಪದರು ಬಯಸುತ್ತಿದ್ದದ್ದು ಹೀಗೇನೆ. ಮಕ್ಕಳೆಂದರೆ ಅವರಿಗೆ ದೇವರಿಗೆ ಸಮಾನ. ಅದಕ್ಕೆ ಅವರು...

`ಅಳುವ ಕಂದನ ತುಟಿಯು ಹವಳದ ಕುಡಿಹಂಗ

ಕುಡಿಹುಬ್ಬು ಬೇವಿನೆಸಳಂಗ/

ಕಣ್ಣೋಟ

ಶಿವನ ಕೈಯಲಗು ಹೊಳೆದಂಗ//'

ಎಂದು ಹೇಳಿದ್ದು.ಮಗುವಿನ ಕಣ್ಣೋಟ ಶಿವನ ಕೈಯಲಗು ಹೊಳೆದಂಗೆ ಎಂದು ಹೇಳುತ್ತಾ ಮಗುವನ್ನು ದೈವತ್ವದ ಮಟ್ಟಕ್ಕೆ ಏರಿಸಿ ಬಿಡುತ್ತಾರೆ.

ಇದು ನಿಜವೂ ಹೌದು. ಮಕ್ಕಳು ದೇವರೆ ಸರಿ. ಆದರೆ ಅದೇ ಮಕ್ಕಳನ್ನು ದೇವರನ್ನಾಗಿ ಆಗದಿದ್ದರೂ ಕನಿಷ್ಠ ಮನುಷ್ಯರನ್ನಾಗಿ ಬೆಳೆಸಬೇಕಾದುದು ಎಲ್ಲಾ ಹೆತ್ತವರ ಜವಾಬ್ದಾರಿ. ಸ್ವಲ್ಪ ನಿರ್ಲಕ್ಷ್ಯ ತೋರಿದರೂ ಭಯಾನಕ ಕಾಯಿಲೆಗಳಿಗೆ ಮಕ್ಕಳು ತುತ್ತಾಗಬಹುದು, ಇಲ್ಲವೇ ಮನುಷ್ಯತ್ವವನ್ನೇ ಕಳೆದುಕೊಂಡು ರಾಕ್ಷಸರಾಗಬಹುದು.ಮಕ್ಕಳನ್ನು ಪಡೆಯುವುದಕ್ಕಿಂತ ಅವರನ್ನು ನಾಜೂಕಾಗಿ ಬೆಳೆಸುವುದು ಅತಿ ಕಷ್ಟ. ಇಂದಿನ ವೇಗದ ಬದುಕಿನಲ್ಲಿ ಕೆಲವು ಸಲ ಮಗುವಿಗೆ ಹಾಕಿಸಬೇಕಾದ ಚುಚ್ಚುಮದ್ದುಗಳೂ ಮರೆತುಹೋಗಬಹುದು. ಇಲ್ಲವೇ ಅವರ ಬೆಳವಣಿಗೆ ಸರಿಯಿದೆಯಾ? ವಯಸ್ಸಿಗೆ ಅನುಗುಣವಾಗಿಮಗುವಿನ ದೇಹ ತೂಕ ಇದೆಯಾ? ಎಂಬುದನ್ನು ಕಂಡುಕೊಳ್ಳುವ ವ್ಯವಧಾನವೂ ಇಲ್ಲದಿರಬಹುದು. ಕೆಲವರಿಗಂತೂ ಮಗುವಿನ ಬಟ್ಟೆ ಬದಲಿಸಲೂ ನೆನಪಾಗದಿರಬಹುದು. ನಾವಿರುವ ಸ್ಥಳದಲ್ಲಿ ಮಗುವಿಗೆ ಸಂಬಂಧಿಸಿದ ವಸ್ತುಗಳು ಸಿಗುವ ಅಂಗಡಿಗಳು, ಮಗುವಿಗೆ ಏನಾದರೂ ಅನಾರೋಗ್ಯ ಉಂಟಾದಾಗ ಚಿಕಿತ್ಸೆ ಕೊಡಿಸಲು ಇರುವ ಕ್ಲಿನಿಕ್‌ಗಳು, ಆಸ್ಪತ್ರೆಗಳನ್ನು ಹುಡುಕಲು ಪರದಾಡಬಹುದು. ಇದೆಲ್ಲಕ್ಕೂ ಪರಿಹಾರವೆಂಬಂತೆ  ಸ್ಮಾರ್ಟ್‌ಫೋನ್ ತಂತ್ರಾಂಶವೊಂದು ಬಂದಿದೆ.`ಬೇಬಿ ಬ್ಲಾಸಮ್'(ಮಗುವಿನ ವಿಕಸನ) ಎಂಬ ತಂತ್ರಾಂಶವನ್ನು ಮೈಂಡ್ ಮೀಡಿಯಾ ಇನ್ನೋವೇಶನ್ ರೂಪಿಸಿದೆ.ಪ್ರಯೋಜನ

1. ನೀವಿರುವ ಸ್ಥಳದಲ್ಲಿ ಮಗುವಿಗೆ ಸಂಬಂಧಿಸಿದ ವಸ್ತುಗಳು ಸಿಗುವ ಅಂಗಡಿ, ಮಕ್ಕಳ ಕ್ಲಿನಿಕ್ ಹಾಗೂ ಆಸ್ಪತ್ರೆ ವಿಳಾಸ ಇಲ್ಲಿ ಲಭ್ಯ.2. ಮಕ್ಕಳ ಹೆಸರು-ಅದರ ಅರ್ಥ ಇಲ್ಲಿ ನೀಡಲಾಗಿದೆ.3. ಮಕ್ಕಳ ಬೆಳವಣಿಗೆಗೆ ಸಂಬಂಧಿಸಿದ ಕೋಷ್ಟಕ ಇಲ್ಲಿದೆ. ಮಗುವಿನ ವಯಸ್ಸಿಗೆ ತಕ್ಕಂತೆ ಇರಬೇಕಾದ ಬೆಳವಣಿಗೆ ಪ್ರಮಾಣವನ್ನು ಸುಲಭದಲ್ಲಿ ಕಂಡುಕೊಳ್ಳಬಹುದಾಗಿದೆ.4. ಮಗುವಿಗೆ ಕಾಲಕಾಲಕ್ಕೆ ಹಾಕಿಸಬೇಕಾದ ಚುಚ್ಚುಮದ್ದುಗಳ ಪಟ್ಟಿ ಇಲ್ಲಿದೆ.5. ಮಗುವಿನ ಬಟ್ಟೆ, ಡಯಾಪರ್‌ಗಳನ್ನು ಬದಲಾಯಿಸಲು ನೆನಪು ಮಾಡಲು ರಿಮೈಂಡರ್ ವ್ಯವಸ್ಥೆಯೂ ಇದರಲ್ಲಿದೆ.6. ಮೊದಲ ಬಾರಿಗೆ ತಾಯಿ-ತಂದೆ ಆದವರಿಗೆ ಮಗುವನ್ನು ನೋಡಿಕೊಳ್ಳುವುದಕ್ಕೆ ಸಂಬಂಧಿಸಿದಂತೆ ಕೆಲವು ಸಲಹೆಗಳನ್ನೂ ಈ ತಂತ್ರಾಂಶ ನೀಡುತ್ತದೆ.7. ಪ್ರತಿ ವಾರ ಇಲ್ಲವೇ ಪ್ರತಿ ತಿಂಗಳು ಮಗುವಿನ ಫೋಟೊ ತೆಗೆದು, ಇದರಲ್ಲಿ ಪ್ರತ್ಯೇಕವಾಗಿ ಸಂಗ್ರಹಿಸಿಟ್ಟುಕೊಳ್ಳಬಹುದು.

ಯಾವುದಕ್ಕೂ ವ್ಯವಧಾನವೇ ಇಲ್ಲದ, ಅವಸರವೇ ಪ್ರಧಾನವಾಗಿರುವ ಇಂದಿನ ಆಧುನಿಕ ಯುಗದಲ್ಲಿ ಮಗುವನ್ನು ಜಾಗರೂಕತೆಯಿಂದ ನೋಡಿಕೊಳ್ಳಲು  ತಂತ್ರಾಂಶ ಸಹಾಯಕವಾಗಬಹುದು. ಸದ್ಯ ಇದು ಆ್ಯಂಡ್ರಾಯ್ಡ ಹಾಗೂ `ಐಒಎಸ್' ಕಾರ್ಯನಿರ್ವಹಣಾ ತಂತ್ರಾಂಶದ ಸ್ಮಾರ್ಟ್‌ಫೋನ್‌ಗಳಲ್ಲಿ ಕಾರ್ಯನಿರ್ವಹಿಸಲು ಶಕ್ತವಾಗಿದೆ.ಆ್ಯಂಡ್ರಾಯ್ಡ ತಂತ್ರಾಂಶಗಳ ಅಂತರ್ಜಾಲದ ಅಂಗಡಿ ಎನಿಸಿದ ಗೂಗಲ್ ಪ್ಲೇನಲ್ಲಿ ಇದು ಪೂರ್ಣ ಉಚಿತವಾಗಿ ಲಭ್ಯ.

 

https://play.google.com/store/apps/details?id=com.mindmedia.babyblossoms&feature=search_result#?t=W251bGwsMSwxLDEsImNvbS5taW5kbWVkaWEuYmFieWJsb3Nzb21zIl0.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.