ಶುಕ್ರವಾರ, ಜೂನ್ 25, 2021
29 °C

ಇಳಕಲ್ ಸೀರೇಲಿ ಸಂಭ್ರಮಿಸಿದ ಕಾಲೇಜು ಹುಡ್ಗೀರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೂಡಲಗಿ: ಇಳಕಲ್ ಸೀರೆ ಉಟ್ಟು, ಕೊರಳಲ್ಲಿ ಬೋರಮಾಳು, ಕಿವಿಗೆ ಬೆಂಡೋಲೆ, ಜುಮಕಿ ಹಾಕ್ಕೊಂಡು ವೈಯ್ಯಾರದಿಂದ ಬಿಂಕದ ಹೆಜ್ಜೆ ಹಾಕುತ್ತಾ ವೇದಿಕೆಯ ತುಂಬೆಲ್ಲ ಕಾಲೇಜು ಲಲನೆಯರ ಸಂಭ್ರಮ ತುಂಬಿಕೊಂಡಿತ್ತು. ಟಿ.ವಿ. ಶೋಗಳಲ್ಲಿ ರ‌್ಯಾಂಪ್ ಮೇಲೆ ರೂಪದರ್ಶಿಗಳ ಹಂಸ ನಡಿಗೆಯನ್ನು ನೋಡಿದವರಿಗೆ ಈ ಗರತಿಯರ ನಡಿಗೆಯು ಒಂದು ರೀತಿಯ ಮುದ ನೀಡುವಂತಿತ್ತು!ಇಲ್ಲಿಯ ಮೂಡಲಗಿ ಶಿಕ್ಷಣ ಸಂಸ್ಥೆಯ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಗುರುವಾರ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ `ವಿದ್ಯಾರ್ಥಿನಿ ಭೂಷಣ~ ಆಯ್ಕೆಯ ಸಂಪ್ರದಾಯ ಉಡುಗೆ ಸ್ಪರ್ಧೆಯಲ್ಲಿ ಕಾಲೇಜು ಹುಡುಗಿಯರು ಹೀಗೆ ಇಳಕಲ್ ಸೀರೆಗಳಲ್ಲಿ ವಿಶೇಷವಾಗಿ ಗಮನಸೆಳೆದರು.

`ಮಿಸ್ ಇಂಡಿಯಾ~, `ಮಿಸ್ ಯುನಿವರ್ಸ್~, `ಪರಿಪೂರ್ಣ ಮಹಿಳೆ~ ಆಯ್ಕೆಯಂತೆ ಇಲ್ಲಿಯ ಮೂಡಲಗಿ ಶಿಕ್ಷಣ ಸಂಸ್ಥೆಯ ಪದವಿ ಪೂರ್ವ, ಪದವಿ, ಡಿ.ಇಡಿ ಮತ್ತು ಬಿ.ಪಿ.ಇಡಿ ಕಾಲೇಜು ವಿದ್ಯಾರ್ಥಿನಿಯರಿಗಾಗಿ ಮಹಿಳಾ ಸಂಘವು ಆಯೋಜಿಸಿದ `ವಿದ್ಯಾರ್ಥಿನಿ ಭೂಷಣ~ ಆಯ್ಕೆಗಾಗಿ ಹುಡುಗಿಯರು ಹರಸಾಹಸ ಮಾಡಬೇಕಾಯಿತು.ಸಾಮಾನ್ಯ ಜ್ಞಾನ, ಬರವಣಿಗೆ, ಆಶು ಭಾಷಣ, ರಂಗೋಲಿ ಮತ್ತು ಚಿತ್ರ ಬಿಡಿಸುವುದು, ಕಸದಿಂದ ರಸ, ಕ್ರೀಡೆ ಮತ್ತು ದೈಹಿಕ ಸಾಮರ್ಥ್ಯ, ಉಡುಗೆ ಪ್ರದರ್ಶನ ಮತ್ತು ಅಡುಗೆ ಸಿದ್ಧಪಡಿಸುವುದು...  ಹೀಗೆ ಹತ್ತು ಹಂತಗಳಲ್ಲಿ ತಮ್ಮ ಪ್ರತಿಭೆ, ಕ್ರಿಯಾಶೀಲತೆ, ಸಾಮರ್ಥ್ಯವನ್ನು ಪ್ರದರ್ಶಿಸಬೇಕು.ಸ್ಪರ್ಧೆಯ ಪ್ರಾರಂಭದಲ್ಲಿ ಭಾಗವಹಿಸಿದ್ದ 60 ವಿದ್ಯಾರ್ಥಿನಿಯರ ಪೈಕಿ 10ನೇ ಸುತ್ತು ಅಂದರೆ ಅಡುಗೆ ಸಿದ್ಧಪಡಿಸುವ ಸುತ್ತಿಗೆ ಉಳಿದಿದ್ದು ಏಳು ವಿದ್ಯಾರ್ಥಿನಿಯರು. ಘಮ, ಘಮಿಸುವ ಪುಲಾವು ಕಾಲೇಜು ಕ್ಯಾಂಪಸನ್ನು ಆವರಿಸಿತ್ತು. ಒಬ್ಬೊಬ್ಬರ ಅಡುಗೆ ರುಚಿ ಸಹ ಭಿನ್ನವಾಗಿತ್ತು. ಮನೆಯಲ್ಲಿ ಅಡುಗೆ ಮಾಡುತ್ತಾರೋ, ಇಲ್ಲವೋ ಗೊತ್ತಿಲ್ಲ. ಸ್ಪರ್ಧೆಯಲ್ಲಿ ಮಾತ್ರ ಇರುಳ್ಳಿ, ಮೆಣಸಿನಕಾಯಿ ಕತ್ತರಿಸುವುದರಿಂದ ಹಿಡಿದು ಪಾತ್ರೆ ತೊಳೆಯುವುದು ಅವರದೇ ಆಗಿತ್ತು. ಅದಕ್ಕೆಲ್ಲ ಅಂಕಗಳಿದ್ದವು. ಅಂತೂ ಎಲ್ಲ ಸ್ಪರ್ಧೆಯನ್ನು ದಾಟಿ `ಎಂ.ಇ.ಎಸ್  ವಿದ್ಯಾರ್ಥಿನಿ ಭೂಷಣ~ ಪ್ರಶಸ್ತಿಯ ಕಿರೀಟವನ್ನು ಆಶಾ ಪಟೇಲ್ ಮೂಡಿಗೇರಿಸಿಕೊಂಡರು. ಮೊದಲ ರನ್ನರ್ಸ್, ದ್ವಿತೀಯ ರನ್ನರ್ಸ್  ಕ್ರಮವಾಗಿ ಕವಿತಾ ಧರ್ಮಟ್ಟಿ, ಸೌಮ್ಯಾ ಗೋಕಾಕ  ಅವರ ಪಾಲಾಯಿತು.ಜೊತೆಗೆ ಜರುಗಿದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ `ಶಿಶುನಾಳ ಶರೀಫರ `ಏನ್ ಕೊಡ ಏನ್ ಕೊಡವ, ಹುಬ್ಬಳ್ಳಿಮಠ ಎಂಥ ಚೆಂದುಳ್ಳಿ ಕೊಡವ~ ತತ್ವಪದಕ್ಕೆ ಭಾವಪೂರ್ಣ ನೃತ್ಯ ಮಾಡಿದರು. ಅದರೊಂದಿಗೆ `ಎಲ್ಲ ಕ್ಷೇತ್ರದಲ್ಲಿ ಮಹಿಳೆಯ ಪಾತ್ರ~ ಮತ್ತು `ಬಾಲ್ಯವಿವಾಹ ತಡೆಗಟ್ಟುವುದು~, `ಪರಿಸರ ಕಾಳಜಿ~, `ಭ್ರಷ್ಟಾಚಾರ ನಿರ್ಮೂಲನೆ~ ಕುರಿತು ಜಾಗೃತಿ ಮೂಡಿಸುವ ಕಿರು ನಾಟಕಗಳನ್ನು ಪ್ರದರ್ಶಿಸಿದರು.ಅತಿಥಿಗಳನ್ನು ಕರೆದು ಭಾಷಣ ಮಾಡಿಸಿ ಮಹಿಳಾ ದಿನಾಚರಣೆಯನ್ನು ಆಚರಿಸುವುದು ವಾಡಿಕೆ. ಆದರೆ ಮೂಡಲಗಿ ಕಾಲೇಜು ವಿನೂತನವಾದ ಪರಿಕಲ್ಪನೆಯಲ್ಲಿ ಮಹಿಳಾ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಿದ್ದು ವಿಶೇಷವಾಗಿತ್ತು.  ವೇದಿಕೆ ಸಿದ್ದಪಡಿಸುವುದು ಸೇರಿದಂತೆ ಎಲ್ಲದಕ್ಕೂ ಓಡಾಡಿಕೊಂಡು ವಿದ್ಯಾರ್ಥಿಗಳು ಸಾಥ ನೀಡಿದ್ದು ಎದ್ದುಕಾಣುತಿತ್ತು. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.