ಭಾನುವಾರ, ಜನವರಿ 19, 2020
20 °C

ಇವರು ಥಾಯ್ ರಾಘವೇಂದ್ರ

ಇ.ಎಸ್. ಸುಧೀಂದ್ರ ಪ್ರಸಾದ್ Updated:

ಅಕ್ಷರ ಗಾತ್ರ : | |

ಇವರು ಥಾಯ್ ರಾಘವೇಂದ್ರ

ಆಫ್ರಿಕಾ ಮನುಕುಲದ ತೊಟ್ಟಿಲಾದರೆ, ಭಾರತ ಸಂಸ್ಕೃತಿ ಹಾಗೂ ಕಲೆಗಳ ತೊಟ್ಟಿಲು. ಸಾವಿರಾರು ವರ್ಷಗಳ ಹಿಂದೆ ಇಲ್ಲಿ ಹುಟ್ಟಿದ ಕಲೆಗಳು ಇಂದಿಗೂ ಜಗತ್ತಿನ ಇತರ ಭಾಗಗಳಲ್ಲಿ ಪ್ರಚಲಿತವಾಗಿವೆ. ಇಂದು ಮತ್ತೆ ಅವೇ ಕಲೆಗಳು ಹೊಸ ರೂಪದೊಂದಿಗೆ ಆ ದೇಶದ ಸರಕುಗಳಾಗಿ ಭಾರತಕ್ಕೆ ಮರಳುತ್ತಿವೆ. ಭಾರತೀಯರೂ ಅವುಗಳನ್ನು ಅಷ್ಟೇ ಆದರದಿಂದ ಬರಮಾಡಿಕೊಳ್ಳುತ್ತಿದ್ದಾರೆ. ಭಾರತದಲ್ಲಿ ಹುಟ್ಟಿ, ಥಾಯ್ಲೆಂಡ್‌ನಲ್ಲಿ ಹೊಸ ರೂಪ ಪಡೆದ `ಥಾಯ್ ಯೋಗ' ಹಾಗೂ `ಟಾಕ್ ಸೆನ್' ನಮ್ಮ ನಾಡಿಗೆ ಮರಳಿರುವುದೇ ಇದಕ್ಕೆ ಸಾಕ್ಷಿ.ವೃತ್ತಿಯಲ್ಲಿ ಸೂಕ್ತ ನೆಲೆ ಕಂಡುಕೊಳ್ಳಲಾಗದ ಒಬ್ಬರು ಥಾಯ್ ಹಾಗೂ ಟಾಕ್‌ಸೆನ್ ಚಿಕಿತ್ಸೆ ಕಲಿಸುವ ಮೂಲಕ ಜನ ಸೇವೆಯ ಜತೆಗೆ ವೃತ್ತಿಯಲ್ಲೂ ನೆಮ್ಮದಿ ಕಂಡುಕೊಂಡಿದ್ದಾರೆ. ರಾಘವೇಂದ್ರ ಎಂಬವರು ಸ್ಥಾಪಿಸಿರುವ `ಇನ್ನರ್ ಮೌಂಟೆನ್ ಸ್ಕೂಲ್ ಆಫ್ ಹೀಲಿಂಗ್ ಆರ್ಟ್ಸ್'ನಲ್ಲಿ ಯೋಗ, ರೇಖಿ ಹಾಗೂ ಟಾಕ್ ಸೆನ್ ಎಂಬ ಕಲೆಯನ್ನು ಕಲಿಸುವುದರ ಜತೆಗೆ ಚಿಕಿತ್ಸೆಯನ್ನೂ ನೀಡಿ ದೇಹ ಹಾಗೂ ಮನಸ್ಸು ಶಾಂತವಾಗಿರುವಂತೆ ಮಾಡುತ್ತಿದೆ.`ಬುದ್ಧ ಸಂಘದಲ್ಲಿ ವೈದ್ಯರಾಗಿದ್ದ ಜಿವಾಕ ಕುಮಾರ್ ಬಚ್ಚಾ ಎಂಬುವವರಿಂದ ಪ್ರಚಲಿತಕ್ಕೆ ಬಂದ ಈ ಆರೋಗ್ಯ ಕಲೆ ದೇಹ, ಮನಸ್ಸಿನ ಒತ್ತಡ, ಖಿನ್ನತೆ ಹಾಗೂ ಜಡತ್ವವನ್ನು ಹೋಗಲಾಡಿಸುವಲ್ಲಿ ಪರಿಣಾಮಕಾರಿ. ಎರಡೂವರೆ ಸಾವಿರ ವರ್ಷಗಳ ಹಿಂದೆ ಬುದ್ಧನಿಂದಲೇ ಈ ಕಲೆ ಏಷ್ಯಾದ ಇತರ ಭಾಗಗಳಿಗೆ ಹೋಗಿದೆ ಎಂಬ ಮಾತೂ ಇದೆ. ಹೀಗಾಗಿ ಬೌದ್ಧ ಭಿಕ್ಕುಗಳು ಇಂದಿಗೂ ಈ ಕಲೆಯನ್ನು ತಮ್ಮ ಶಿಶುವಿಹಾರದಿಂದಲೇ ಕಲಿಯುತ್ತಾರೆ. ಆ ಮೂಲಕ ದೇಹದಲ್ಲಿ ರೋಗನಿರೋಧಕ ಶಕ್ತಿ, ರಕ್ತ ಪರಿಚಲನೆ ವೃದ್ಧಿಸುವುದಲ್ಲದೇ ಮನಸ್ಸಿಗೆ ಶಾಂತಿ, ಮಾಂಸಖಂಡಗಳಿಗೆ ಆರಾಮದ ಜತೆಗೆ ಕ್ರಿಯಾಶೀಲರಾಗಿರಲು ಇದು ಸಹಕಾರಿ. ದೇಹದಲ್ಲಿ ಶಕ್ತಿಯ ಉತ್ಪಾದನೆ ಹೆಚ್ಚಾಗಿ ಒತ್ತಡ ತಡೆಯುವ ಸಾಮರ್ಥ್ಯದೊಂದಿಗೆ ಏಕಾಗ್ರತೆಯನ್ನೂ ಹೆಚ್ಚಿಸಲಿದೆ' ಎನ್ನುವುದು ರಾಘವೇಂದ್ರ ಅವರ ಅಭಿಮತ.ಮನುಷ್ಯನ ದೇಹದಲ್ಲಿ 72 ಸಾವಿರ ನರಗಳಿವೆ ಎಂಬ ಲೆಕ್ಕಾಚಾರವಿದೆ. ಈ ನರಗಳು ಮಾಂಸಖಂಡಗಳ ನಡುವೆ ಹಾದು ದೇಹದ ವಿವಿಧ ಭಾಗಗಳಿಗೆ ರಕ್ತ ಪೂರೈಸುತ್ತವೆ. ದೇಹ ಜಡಗಟ್ಟಿದಾಗ ಅಥವಾ ಇನ್ಯಾವುದೇ ರೀತಿಯಲ್ಲಿ ಘಾಸಿಗೊಂಡಾಗ, ಒತ್ತಡದಿಂದ ದೇಹದಲ್ಲಾಗುವ ಬದಲಾವಣೆಯಿಂದ ಕೆಲವೊಮ್ಮೆ ಮಾಂಸಖಂಡಗಳು ಪಲ್ಲಟವಾಗಿ ಇವುಗಳು ಸಂಕುಚಿತಗೊಳ್ಳುವ ಸಾಧ್ಯತೆ ಇದೆ. ಹೀಗಾಗಿ ಅಂಥ ಭಾಗಗಳನ್ನು ನಾಡಿ ಮೂಲಕವೇ ಅರಿತು ಅಲ್ಲಿಗೆ ಮುಷ್ಟಿ ಹಾಗೂ ಬೆರಳುಗಳ ಮೂಲಕ ಚಿಕಿತ್ಸೆ ನೀಡಲಾಗುತ್ತದೆ. ಇದಕ್ಕೆ ಸರಳ ಉಡುಪಿನಲ್ಲಿರಬೇಕಾದದ್ದು ಅನಿವಾರ್ಯ. ದೇಹವನ್ನು ಬೆನ್ನಿನ ಮೇಲೆ ಹಾಗೂ ಹೊಟ್ಟೆಯ ಮೇಲೆ ಮಲಗಿಸಿ ದೇಹದ ವಿವಿಧ ಭಾಗಗಳಿಗೆ ಚಿಕಿತ್ಸೆ ನೀಡಲಾಗುತ್ತದೆ.ಕೇವಲ ಚಿಕಿತ್ಸೆ ನೀಡುವುದಲ್ಲದೆ ಇದನ್ನು ಕಲಿಯಲಿಚ್ಛಿಸುವವರಿಗೆ ಕಲಿಕಾ ಕೇಂದ್ರವನ್ನೂ ರಾಘವೇಂದ್ರ ಸ್ಥಾಪಿಸಿದ್ದಾರೆ. ಪ್ರತಿಯೊಂದು ಮನೆಯಲ್ಲೂ ಈ ವಿದ್ಯೆ ಕಲಿತವರು ಒಬ್ಬರು ಇದ್ದಲ್ಲಿ ಆ ಮನೆಯಲ್ಲಿ ಪರಸ್ಪರ ಪ್ರೀತಿ ಹೆಚ್ಚುತ್ತದೆ, ಸದಸ್ಯರ ಶಕ್ತಿಯ ಪ್ರಮಾಣ ವೃದ್ಧಿಸಲಿದೆ ಹಾಗೂ ರೋಗದಿಂದ ಮುಕ್ತರಾಗಿ ಆರಾಮ ಜೀವನ ನಡೆಸಲು ಸಾಧ್ಯ ಎನ್ನುವುದು ಅವರ ಮಾತು.ಹೀಗಾಗಿಯೇ ನಾರಾಯಣ ಗುರುಕುಲ, ಶ್ರೀಧರ ಗುಡ್ಡ ಹಾಗೂ ಫೈರ್‌ಫ್ಲೈಸ್ ಎಂಬ ಬೆಂಗಳೂರಿನ ಮೂರು ಅಧ್ಯಾತ್ಮ ಕೇಂದ್ರಗಳಲ್ಲಿ ಇವರು ಹತ್ತು ದಿನಗಳ ಕಾರ್ಯಾಗಾರವನ್ನು ನಡೆಸುತ್ತಿದ್ದಾರೆ. ಎರಡು ಹಂತಗಳಲ್ಲಿ ಕಲಿಸಲಾಗುವ ಈ ಚಿಕಿತ್ಸೆಯ ಮೊದಲ ಹಂತದಲ್ಲಿ ಬೆನ್ನಿನ ಮೇಲೆ ಮಲಗಿಸಿ ಚಿಕಿತ್ಸೆ ನೀಡುವ ರೀತಿಯನ್ನು ಕಲಿಸಿದರೆ, ಎರಡನೇ ಹಂತದಲ್ಲಿ ಪಾರ್ಶ್ವ ಹಾಗೂ ಹೊಟ್ಟೆಯ ಮೇಲೆ ಮಲಗಿಸಿ ನೀಡುವ ಚಿಕಿತ್ಸೆಯನ್ನು ಹೇಳಿಕೊಡಲಾಗುತ್ತದೆ.ಬೆರಳು ಹಾಗೂ ಮುಷ್ಟಿಯೇ ಈ ಚಿಕಿತ್ಸೆಯ ಮುಖ್ಯ ಸಾಧನ. ಹೀಗಾಗಿ ಇದನ್ನು ಅಂಧರಿಗೆ ಕಲಿಸಬೇಕೆನ್ನುವುದು ರಾಘವೇಂದ್ರ ಅವರ ಮಹದಾಸೆ. ಅಂಧರಿಗೆ ಏಕಾಗ್ರತೆ ಹೆಚ್ಚಿರುತ್ತದೆ. ಹಾಗೂ ನಾಡಿ ಮಿಡಿತ ಚೆನ್ನಾಗಿ ಬಲ್ಲರು. ಅಂಧರು ಈ ಕಲೆಯನ್ನು ಕಲಿಯುವ ಉತ್ಸಾಹ ತೋರಿದಲ್ಲಿ ಉಚಿತವಾಗಿ ಕಲಿಸುವ ಇಂಗಿತವನ್ನು ರಾಘವೇಂದ್ರ ವ್ಯಕ್ತಪಡಿಸಿದರು.

ಹೆಚ್ಚಿನ ಮಾಹಿತಿಗೆ: 99860 84437ಅಧ್ಯಾತ್ಮ ಪ್ರವಾಸ

ದೇಹದ ಮೇಲಿನ ಅಪಾರ ಕಾಳಜಿಯಿಂದಾಗಿ ಕೆಲವು ವರ್ಷಗಳ ಹಿಂದೆ ಜಿಮ್ ಸೇರಿದ್ದ ರಾಘವೇಂದ್ರ ಅತಿಯಾಗಿ ದೇಹ ದಂಡಿಸಿದ್ದರಿಂದ ಸ್ನಾಯುಗಳಲ್ಲಿ ನೋವು, ಆರಾಮವೆನಿಸದ ದೈನಂದಿನ ಚಟುವಟಿಕೆ ಇತ್ಯಾದಿ ಸಮಸ್ಯೆಗಳನ್ನು ಎದುರಿಸಿದರಂತೆ.ಕಂಪ್ಯೂಟರ್‌ನಲ್ಲಿ ಪದವಿ ಪಡೆದು ಕೆಲವು ಕಂಪೆನಿಗಳಲ್ಲಿ ನೌಕರಿ ಗಿಟ್ಟಿಸಿಕೊಂಡ ಅವರು 2004ರಲ್ಲಿ ಅಧಾತ್ಮ ಪ್ರವಾಸವನ್ನು ಆರಂಭಿಸಿದರು. ದೇಹ, ಮನಸ್ಸು ಎರಡಕ್ಕೂ ಆರಾಮ ನೀಡುವ ವಿದ್ಯೆಯ ಹುಡುಕಾಟದಲ್ಲಿ ನಾಲ್ಕು ವರ್ಷ ಕಳೆದರು. ಅಂತಿಮವಾಗಿ ಬೆಂಗಳೂರಿನಲ್ಲೇ ಇದ್ದ ಸಿರಿಯಾಕ್ ಜೋಸೆಫ್ ಎಂಬ ಗುರುವಿನ ಬಳಿ ಎರಡು ವರ್ಷಗಳ ಕಾಲ ನಿರಂತರ ಅಭ್ಯಾಸ ಹಾಗೂ ಪ್ರಯೋಗಗಳನ್ನು ನಡೆಸಿದ ನಂತರ ಇವರು ಹೆಚ್ಚಿನ ಶಿಕ್ಷಣಕ್ಕಾಗಿ ಥಾಯ್ಲೆಂಡ್‌ಗೆ ಪಯಣ ಬೆಳೆಸಿದರು.ಟಾಕ್ ಸೆನ್ ಎಂದರೆ...

ಥಾಯ್ ಯೋಗದಲ್ಲಿರುವ ಚಿಕಿತ್ಸೆಗಳಲ್ಲಿ `ಟಾಕ್ ಸೆನ್' ಒಂದು ಪರಿಣಾಮಕಾರಿ ಚಿಕಿತ್ಸೆ. `ಟಾಕ್' ಎಂದರೆ ಮರದ ಸಾಧನವನ್ನು ಬಡಿದಾಗ ಹೊಮ್ಮುವ ಸದ್ದು. `ಸೆನ್' ಎಂದರೆ ದೇಹದಲ್ಲಿ ಶಕ್ತಿ ಸಂಚರಿಸುವ ಮಾರ್ಗ ಎಂದರ್ಥ. ತೇಗ ಅಥವಾ ಹುಣಸೇ ಮರದಿಂದ ತಯಾರಿಸಲಾಗುವ ಈ ಸಾಧನವನ್ನು ಕೆಲಕಾಲ ಬುದ್ಧ ದೇವಾಲಯದಲ್ಲಿಟ್ಟು, ನಂತರ ಬಳಸುವುದರಿಂದ ಶಕ್ತಿ ಹೆಚ್ಚುತ್ತದೆ ಎಂಬುದು ನಂಬಿಕೆ.ಉತ್ತರ ಥಾಯ್ಲೆಂಡ್ ಮೂಲದ ಈ ವಿದ್ಯೆಯನ್ನು ಬಳಸಿ ದೇಹದಲ್ಲಿ ನಕಾರಾತ್ಮಕ ಶಕ್ತಿಯನ್ನು ಹೊರಹಾಕಬಹದು. ಈ ಎರಡೂ ಕಲೆಯನ್ನು ರಾಘವೇಂದ್ರ ಅವರು ಬಳಸಿ ದೇಹಕ್ಕಾದ ನೋವು, ಶಕ್ತಿ ಪರಿಚಲನೆಯ ತಡೆ, ನರಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ನಿವಾರಿಸುವ ಪ್ರಯತ್ನ ನಡೆಸಿದ್ದಾರೆ.

 

ಪ್ರತಿಕ್ರಿಯಿಸಿ (+)