ಗುರುವಾರ , ಫೆಬ್ರವರಿ 25, 2021
31 °C
ಮೇಲ್ಮನೆ ಪ್ರಸ್ತುತತೆ

ಇವರು ಹೀಗೆನ್ನುತ್ತಾರೆ...

ಅಭಿಪ್ರಾಯ ಸಂಗ್ರಹ: ಸೂರ್ಯನಾರಾಯಣ ವಿ. Updated:

ಅಕ್ಷರ ಗಾತ್ರ : | |

ಇವರು ಹೀಗೆನ್ನುತ್ತಾರೆ...

ಆಯ್ಕೆ ಬದಲಾಗಲಿ

ವಿಧಾನ ಸಭೆಯಲ್ಲಿ ಮಸೂದೆಗಳ ಬಗ್ಗೆ ತರಾತುರಿಯಲ್ಲಿ ಚರ್ಚೆಗಳು ನಡೆಯುತ್ತವೆ. ಆದರೆ, ವಿಧಾನ ಪರಿಷತ್ತಿನಲ್ಲಿ ಪ್ರತಿ ವಿಚಾರವನ್ನೂ ಕೂಲಂಕಷ ಪರಿಶೀಲನೆಗೆ ಒಳಪಡಿಸಿ, ತಪ್ಪಿದ್ದರೆ ತಿದ್ದಿ, ಸರ್ಕಾರಕ್ಕೆ ಸಲಹೆ ನೀಡಲು ಅವಕಾಶ ಇದೆ.ಸಾಮಾಜಿಕ ಮೌಲ್ಯಗಳ ಬಗ್ಗೆ ಕಾಳಜಿ ಹೊಂದಿರುವವರು, ಸಮಾಜ, ಸರ್ಕಾರಕ್ಕೆ  ಮಾರ್ಗದರ್ಶನ ನೀಡಬಲ್ಲ ಅನುಭವಿಗಳು  ಇದರ ಸದಸ್ಯರಾಗಬೇಕು. ಇತ್ತೀಚೆಗೆ  ಹಣ, ಜಾತಿ, ತೋಳ್ಬಲ ಹೊಂದಿರುವವರೇ ಹೆಚ್ಚಾಗಿ ಮೇಲ್ಮನೆ  ಸದಸ್ಯರಾಗುತ್ತಿದ್ದಾರೆ ಎಂಬುದು ನಿಜ. ಸದಸ್ಯರ ಆಯ್ಕೆಯಲ್ಲಿ ಬದಲಾವಣೆಯಾದರೆ, ಮೇಲ್ಮನೆ ಅಗತ್ಯವಿದೆಯೇ ಎಂಬ ಬಗ್ಗೆ ಚರ್ಚೆಯೇ ಉದ್ಭವಿಸುವುದಿಲ್ಲ

-ಎಂ.ಸಿ.ನಾಣಯ್ಯ,

ವಿಧಾನ ಪರಿಷತ್‌ ಮಾಜಿ ಸದಸ್ಯ
ರಾಜಕೀಯ ಪಕ್ಷಗಳ ಹೊಣೆ

ಸಂವಿಧಾನದ ಮಾನ್ಯತೆ ಪಡೆದಿರುವ ವಿಧಾನ ಪರಿಷತ್‌ ಅಸ್ತಿತ್ವದಲ್ಲಿರಬೇಕು. ವಿಧಾನ ಸಭೆಯಲ್ಲಿ ಗಾಂಭೀರ್ಯ ಇರುವುದಿಲ್ಲ. ಅಲ್ಲಿನ ಸದಸ್ಯರಿಗೆ ವಿಷಯಗಳ ಮಹತ್ವ ಗೊತ್ತಿರುವುದಿಲ್ಲ. ವಿಧಾನ ಪರಿಷತ್ತಿನಲ್ಲಿ ಈ ರೀತಿ ಇಲ್ಲ. ಗಂಭೀರ ವಿಚಾರಗಳ ಬಗ್ಗೆ ದಿನಗಟ್ಟಲೆ ಚರ್ಚೆ ನಡೆದ ಉದಾಹರಣೆಗಳಿವೆ.

ವಿಚಾರವಂತರು ಸಕ್ರಿಯರಾಗಿದ್ದ ಈ ಸದನದಲ್ಲಿ ಇತ್ತೀಚೆಗೆ ಪರಿಣಾಮಕಾರಿಯಾದ ಚರ್ಚೆಗಳಾಗುತ್ತಿಲ್ಲ ನಿಜ. ಲೋಪಗಳು ಇಲ್ಲ ಎಂದು ಹೇಳುತ್ತಿಲ್ಲ. ಇದನ್ನು ಸರಿದಾರಿಗೆ ತರುವುದರಲ್ಲಿ ರಾಜಕೀಯ ಪಕ್ಷಗಳ ಜವಾಬ್ದಾರಿ ಹೆಚ್ಚಿದೆ.  ಮೇಲ್ಮನೆಗೆ ನಡೆಯುವ ಚುನಾವಣೆಯಲ್ಲಿ ಎಂತಹ ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತೇವೆ ಎನ್ನುವುದೂ ಮುಖ್ಯವಾಗುತ್ತದೆ.

-ಮೋಟಮ್ಮ,

ವಿಧಾನ ಪರಿಷತ್‌ ಕಾಂಗ್ರೆಸ್ ಸದಸ್ಯೆ
ಪ್ರಜಾಸತ್ತೆಯ ಕಳಶಪ್ರಾಯ

ಇತ್ತೀಚೆಗಿನ ಬೆಳವಣಿಗೆಗಳನ್ನು ಗಮನಿಸಿದರೆ, ಯಾವ ಉದ್ದೇಶಕ್ಕೆ ಮೇಲ್ಮನೆ ಸ್ಥಾಪಿಸಲಾಗಿತ್ತೋ ಅದು ಈಡೇರುತ್ತಿಲ್ಲ ಎಂಬುದು ಬೇಸರದ ಸಂಗತಿ. ಅಲ್ಲಿ ಪರಿಣಾಮಕಾರಿ ಚರ್ಚೆಗಳು ಆಗುತ್ತಿಲ್ಲ. ಸಾಮಾಜಿಕ ಕಳಕಳಿ ಹೊಂದಿರುವ ಹಿರಿಯರು ಆಯ್ಕೆಯಾಗುತ್ತಿಲ್ಲ.  ಇನ್ನೂ ಕಾಲ ಮಿಂಚಿಲ್ಲ. ಆಗಿರುವ ತಪ್ಪು ಸರಿಪಡಿಸಬಹುದು. ಮುಂದಿನ ದಿನಗಳಲ್ಲಾದರೂ, ಈ ಸದನದ ಉದ್ದೇಶ ಈಡೇರುವಂತಿದ್ದರೆ, ಅದು ಅಸ್ತಿತ್ವದಲ್ಲಿರಲಿ. ಇಲ್ಲದಿದ್ದರೆ ಅದರ ಅಗತ್ಯವಿಲ್ಲ.

-ರಾಣಿ ಸತೀಶ್‌,

ಕಾಂಗ್ರೆಸ್‌ ನಾಯಕಿ

ಒಳ್ಳೆಯವರೂ ಆಯ್ಕೆಯಾಗಿದ್ದಾರೆ

ಚುನಾವಣೆಯಲ್ಲಿ ಹಣ, ಜಾತಿ ಪ್ರಭಾವ ಮಾತ್ರ ಕೆಲಸ ಮಾಡುತ್ತವೆ ಎಂಬುದನ್ನು ನಾನು ಒಪ್ಪುವುದಿಲ್ಲ. ಎಲ್ಲ ಕಡೆ ಹಣವೇ ಕೆಲಸ ಮಾಡುವುದಿಲ್ಲ. ಒಳ್ಳೆಯವರೂ ಆಯ್ಕೆಯಾಗಿದ್ದಾರೆ. ಗೆಲ್ಲುವ ಕುದುರೆಯ ಹಿಂದೆ ಓಡುವುದನ್ನು ಪಕ್ಷಗಳು ಮೊದಲು ಬಿಡಬೇಕು. ಗಾಜಿನ ಲೋಟದಲ್ಲಿ ನೀರು ಹಾಕಿ ಕುಡಿದರೆ ಆಯಾಸ ನೀಗುತ್ತದೆ. ವಿಷ ಹಾಕಿ ಕುಡಿದರೆ ಪ್ರಾಣವೇ ಹೋಗುತ್ತದೆ. ಅಂದ ಮಾತ್ರಕ್ಕೆ  ಲೋಟವನ್ನು ಒಡೆಯವುದಕ್ಕಾಗುತ್ತದೆಯೇ?

-ಕೆ.ಬಿ.ಶಾಣಪ್ಪ, 

ವಿಧಾನ ಪರಿಷತ್‌ ಬಿಜೆಪಿ ಸದಸ್ಯ

ರದ್ದತಿ ಪರಿಹಾರವಲ್ಲ

ವಿಧಾನಸಭೆಯಲ್ಲಿ ಬಹುತೇಕ ಸಂದರ್ಭಗಳಲ್ಲಿ ಎಲ್ಲ ವಿಷಯಕ್ಕೂ ರಾಜಕೀಯ ವಾತಾವರಣ ನಿರ್ಮಾಣ ಆಗುತ್ತದೆ. ವಿಧಾನ ಪರಿಷತ್ತಿನಲ್ಲಿ ಆ ರೀತಿ  ಆಗಬಾರದು. ರಾಜಕೀಯ ಹೊರತಾಗಿ  ಚರ್ಚೆ ಆಗಬೇಕು ಎಂಬ ಸದುದ್ದೇಶ ಈ ಸದನದ ಸ್ಥಾಪನೆ ಹಿಂದಿದೆ. ಆದರೆ, ನಾವು ಹೇಗೆ ನಡೆದುಕೊಂಡು ಬಂದಿದ್ದೇವೆ? 

ಇದಕ್ಕೆ ಎಲ್ಲ ರಾಜಕೀಯ ಪಕ್ಷಗಳೂ ಹೊಣೆ. ಇತ್ತೀಚೆಗಿನ ಕೆಲವು ವಿದ್ಯಮಾನಗಳು ಮೇಲ್ಮನೆಯ ಅಗತ್ಯದ ಬಗ್ಗೆ ಚರ್ಚೆಗಳನ್ನು ಹುಟ್ಟುಹಾಕಿವೆ.  ಮೇಲ್ಮನೆಯನ್ನು ಮತ್ತೆ ಹಳಿಗೆ ತರುವ ಹೊಣೆ ಎಲ್ಲರ ಮೇಲಿದೆ. ಆಡಳಿತ ಪಕ್ಷ, ವಿರೋಧ ಪಕ್ಷಗಳು, ಸದನದ ಸದಸ್ಯರು ಈ ನಿಟ್ಟಿನಲ್ಲಿ ಯೋಚಿಸಬೇಕು. ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯಲ್ಲೂ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು. ಚುನಾವಣಾ ಪದ್ಧತಿಯನ್ನು ಇನ್ನಷ್ಟು ಸರಳೀಕರಣಗೊಳಿಸಬೇಕು. ಲೋಪ ದೋಷಗಳಿವೆ ಎಂದು ಸಂಸ್ಥೆಯನ್ನೇ ರದ್ದು ಮಾಡುವುದು ಪರಿಹಾರವಲ್ಲ. ಸರಿದಾರಿಗೆ ತರುವ ಮಾರ್ಗದ ಬಗ್ಗೆ ಯೋಚಿಸಬೇಕು.

-ವಿ.ಆರ್‌.ಸುದರ್ಶನ್,

ವಿಧಾನ ಪರಿಷತ್‌ ಮಾಜಿ ಸಭಾಪತಿಹೊಸ ನಿಯಮ ತನ್ನಿ


ಎರಡೂ ಸದನಗಳ ನಡುವೆ ಭಿನ್ನತೆ ಇದೆ. ಕೆಳಮನೆ ಸದಸ್ಯರು ಹೊಂದಿರುವ ವಿಶೇಷ ಹಕ್ಕು ಮೇಲ್ಮನೆ ಸದಸ್ಯರಿಗೆ ಇಲ್ಲ. ಉದಾಹರಣೆಗೆ, ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸುವ ಹಕ್ಕು ವಿಧಾನ ಪರಿಷತ್‌ ಸದಸ್ಯರಿಗಿಲ್ಲ.

ಮೇಲ್ಮನೆಯು ರಾಜಕೀಯ ಶಕ್ತಿ ಪ್ರದರ್ಶಿಸುವ ವೇದಿಕೆ ಅಲ್ಲ. ಇಲ್ಲಿ ರಾಜಕೀಯ ಅಧಿಕಾರ ದಾಹ ಪ್ರಧಾನ ಅಲ್ಲ. ಅದು ರಿಯಲ್‌ ಎಸ್ಟೇಟ್‌ ವ್ಯವಹಾರ ನಡೆಸುವವರ ಕೇಂದ್ರವಾಗಬಾರದು. ಇಲ್ಲಿಗೆ ಆಯ್ಕೆಯಾಗಬೇಕಾದರೆ, ಮತದಾರರೆಂದುಕೊಂಡ ಚುನಾಯಿತ ಪ್ರತಿನಿಧಿಗಳಿಗೆ ದುಡ್ಡು ಕೊಡಬೇಕು ಎಂದರೆ ಅದಕ್ಕಿಂತ ದೊಡ್ಡ ಪ್ರಹಸನ ಬೇರೆ ಇಲ್ಲ. ಮೇಲ್ಮನೆ ಉಳಿಸುವುದಕ್ಕೆ ಎಲ್ಲ ರಾಜಕೀಯ ಪಕ್ಷಗಳು ಚರ್ಚಿಸಿ ಒಮ್ಮತದ ತೀರ್ಮಾನಕ್ಕೆ ಬರಬೇಕು. ಸ್ಥಳೀಯ ಸಂಸ್ಥೆಗಳಿಂದ ಚುನಾವಣೆಗೆ ಸ್ಪರ್ಧಿಸಬೇಕಾದರೆ, ಅಭ್ಯರ್ಥಿಗಳು ಕನಿಷ್ಠ 5ರಿಂದ 10 ವರ್ಷ ಸ್ಥಳೀಯ ಸಂಸ್ಥೆಗಳಲ್ಲಿ ಜನಪ್ರತಿನಿಧಿಯಾಗಿ ಕಾರ್ಯ ನಿರ್ವಹಿಸಬೇಕು ಎಂಬ ನಿಯಮ ಜಾರಿಗೆ ತರಬೇಕು.

-ಪ್ರೊ.ಬಿ.ಕೆ.ಚಂದ್ರಶೇಖರ್‌,

ವಿಧಾನ ಪರಿಷತ್‌ ಮಾಜಿ ಸಭಾಪತಿ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.