ಬುಧವಾರ, ಜುಲೈ 28, 2021
29 °C

ಇ-ಮೇಲ್ ಮೇಲೆ ಮೇಲ್‌ಬಾಕ್ಸ್ ಸವಾರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತಂತ್ರಜ್ಞಾನದ ತ್ವರಿತ ಬೆಳವಣಿಗೆ  ‘ಇ-ಮೇಲ್’ಅನ್ನು ಹುಟ್ಟುಹಾಕಿ ಅಂಚೆ ಪೆಟ್ಟಿಗೆಗೆ ತುಕ್ಕು ಹಿಡಿಸಿತು. ಈಗ ಈ ಸ್ಥಿತಿ ಮೇಲ್‌ಬಾಕ್ಸ್‌ಗೆ ಬಂದಿದೆ. ಹಾಗಾಗಿ ಇಮೇಲ್ ಸೇವೆ ಒದಗಿಸುವ ಕಂಪೆನಿಗಳೆಲ್ಲಾ ಮೇಲ್‌ಬಾಕ್ಸ್ ಅನ್ನು ಮ್ಯಾಜಿಕ್ ಬಾಕ್ಸ್ ಮಾಡಲು ಹೊರಟಿವೆ.ಇಂತಹ ಪರಿಸ್ಥಿತಿ ನಿರ್ಮಾಣವಾಗಲು  ಪ್ರಮುಖ ಕಾರಣವೆಂದರೆ ‘ಇನ್‌ಸ್ಟಂಟ್ ಮೆಸೇಜಿಂಗ್ ಸಿಸ್ಟಂ’ (ತ್ವರಿತ ಸಂದೇಶ ರವಾನೆ ವ್ಯವಸ್ಥೆ).ಈಗ ಲಭ್ಯವಿರುವ ಇ-ಮೇಲ್‌ನ ನಿಧಾನಗತಿ ಹದಿವಯಸ್ಸಿನ ಓಡುಗತಿಯ ಪೀಳಿಗೆಗೆ ಬೋರ್ ಹೊಡಿಸುತ್ತಿದೆಯಂತೆ. ಒಂದು ಇ-ಮೇಲ್ ರವಾನಿಸುವ ವಿಧಾನವೇ ತಲೆನೋವು ತರಿಸುತ್ತಿದೆಯಂತೆ. ಕಂಪ್ಯೂಟರ್‌ನ ಇಂಟರ್‌ನೆಟ್‌ನಲ್ಲಿ ಆಯಾ ಕಂಪೆನಿಯ ಮೇಲ್ ಸರ್ವೀಸ್ ಕ್ಲಿಕ್‌ಮಾಡಿ ಅಲ್ಲಿ ಸಂದೇಶವನ್ನು ಬರೆದು (ಟೈಪ್ ಮಾಡಿ),  ಹೆಸರು, ಸಿಸಿ ಕಾಪಿ, ಸಬ್ಜೆಕ್ಟ್.... ಇತ್ಯಾದಿಗಳನ್ನೆಲ್ಲಾ ತುಂಬಿ ರವಾನಿಸಬೇಕಿದ್ದರೆ... ಅಬ್ಬಾ ಎಷ್ಟೊಂದು ಸಮಯ ಹಾಳು ಅನ್ನುತ್ತಿದ್ದಾರೆ ಹೊಸ ಇ-ಜಗತ್ತಿನ ಇನ್ನೂ ಹೈಸ್ಕೂಲು ದಾಟದ ಯಂಗಿಗಳು.

ಇಷ್ಟೇ ಅಲ್ಲ  ಮೇಲ್ ಆಯಾ ವ್ಯಕ್ತಿಗೆ ಲಭಿಸಿತೇ ಎಂಬುದಕ್ಕೆ ಯಾವ ಖಾತರಿಯೂ ಇಲ್ಲ. ಮತ್ತೆ ಆ ವ್ಯಕ್ತಿಯಿಂದ ಉತ್ತರ ಪಡೆಯಬೇಕಿದ್ದರೆ ಮತ್ತೂ ಕಾಯಬೇಕು... ಇಂತಹ ನೂರಾರು  ದೂರುಗಳು ಯುವಜನರು, ವಿದ್ಯಾರ್ಥಿಗಳಿಂದ ಬರುತ್ತಿವೆ. ಇದಕ್ಕಾಗಿಯೇ ಮೇಲ್-ಕಂಪೆನಿಗಳು ತಮ್ಮ ಸೇವೆಗಳಿಗೆ ಹೊಸತನ ನೀಡತೊಡಗಿವೆ.ಇ-ಮೇಲ್‌ಗಳು ಈಗ ಕೇವಲ ಕಡತ, ಚಿತ್ರ ರವಾನೆಯ ಸೇವೆಗಳಾಗಿ ಉಳಿದಿಲ್ಲ. ಸಂಗೀತ ಕೇಳಬಹುದು, ಆನ್‌ಲೈನ್ ಮೋಜು ಮಜಾ ಇಲ್ಲೂ ಲಭಿಸುತ್ತವೆ. ಇದೆಲ್ಲವನ್ನೂ ನಮ್ಮ ಯುವಪೀಳಿಗೆ ಅರಿತು ಎಂಜಾಯ್ ಮಾಡುತ್ತಿದೆ. ಈ ಎಲ್ಲವೂ ಲಭಿಸುತ್ತಿರುವುದೇನೋ ಸರಿಯೇ,  ಆದರೆ ಇವೆಲ್ಲದರ ನಿಧಾನಗತಿ ಸಂಗೀತ, ಗೇಮ್‌ಗಳು,  ವಿಡಿಯೊ ವೀಕ್ಷಣೆಯ ಖುಷಿಯನ್ನು ಕಿತ್ತುಕೊಳ್ಳುತ್ತಿವೆ ಎಂಬುದು ಬಳಕೆದಾರರ ಅಹವಾಲು.ಹೊಸ ಪೀಳಿಗೆಯ ಜನರು ಇ-ಮೇಲ್‌ಗಳಿಗಿಂತ ಹೆಚ್ಚಾಗಿ ಚಾಟಿಂಗ್, ಟೆಕ್ಸ್ ಮೆಸೇಜ್‌ಗಳ ಕಡೆಗೆ ಹೆಚ್ಚು ಆಕರ್ಷಿತರಾಗಿದ್ದಾರೆ.ಇ-ಮೇಲ್ ಬಳಕೆ ಮರೆತೇ ಬಿಡುತ್ತಾರೇನೊ ಎಂಬ ಸ್ಥಿತಿ ನಿರ್ಮಾಣವಾಗಿದೆ. ಇಮೇಲ್ ಸೇವೆಗಳಿಗೆ ಗ್ರಹಣ ಬಡಿದಿದೆ. ಇದರ ಬಿಸಿ ಇಂತಹ ಸೇವೆ ಒದಗಿಸುವ ಕಂಪೆನಿಗಳಿಗೂ ತಟ್ಟಿದೆ. ಹಾಗಾಗಿ ಕಂಪೆನಿಗಳು ಈಗ ಮೇಲ್ ಬಾಕ್ಸ್‌ಗಳಲ್ಲಿ ಹೊಸತನ್ನು ತುಂಬಿ ಮ್ಯಾಜಿಕ್ ಬಾಕ್ಸ್‌ಗಳನ್ನಾಗಿಸುತ್ತಿದ್ದಾರೆ.ಕಪರ್ಟಿನೊ ಕಾಲಿಫ್‌ನ ಹದಿನೇಳರ ಹರೆಯದ ಹೈಸ್ಕೂಲು ವಿದ್ಯಾರ್ಥಿನಿ  ಲೀನಾ ಜೆನ್ನಿ ಹೇಳುವಂತೆ ‘ಟೆಕ್ಸ್ಟ್ ಮೆಸೇಜ್ ತುಂಬಾ ವೇಗವಾಗಿ ನಡೆಯುತ್ತದೆ. ಕೆಲವೊಮ್ಮೆ ನಾನು ಫೋನ್ ಕೆಳಗಿರಿಸುವುದಕ್ಕೂ ಮೊದಲೇ ಉತ್ತರ ಬಂದಿರುತ್ತದೆ. ಆದರೆ, ಇ-ಮೇಲ್ ತುಂಬಾ ತಡ.’ ಈ ವಿದ್ಯಾರ್ಥಿನಿಯ ಅಭಿಪ್ರಾಯವೇ ಸಾಕು ಹೊಸ ಪೀಳಿಗೆಯ ಚಿಂತನೆ ಎಷ್ಟು ವೇಗ ಪಡೆಯುತ್ತಿದೆ ಎಂಬುದಕ್ಕೆ. ಇದು ಇಮೇಲ್ ವ್ಯವಹಾರ ಕ್ಷೇತ್ರವನ್ನು ಮಸುಕಾಗಿಸಿದೆ. ‘ಫೇಸ್‌ಬುಕ್’, ‘ಗೂಗಲ್ ಜಿಮೇಲ್’,  ‘ಯಾಹೂ’ ಮುಂತಾದ ಇಮೇಲ್ ಸೇವೆ ಒದಗಿಸುವ ಕಂಪೆನಿಗಳು ನವೀಕರಣಕ್ಕೆ ಮೈ ಒಡ್ಡಿವೆ.ಫೇಸ್‌ಬುಕ್ ಯವಜನರ ಕೂಗಿಗೆ ತಕ್ಷಣ ಸ್ಪಂದಿಸಿದೆ. ತನ್ನ ಸಂದೇಶ ರವಾನೆ ಸೇವೆಯನ್ನು ಪರಿಷ್ಕರಿಸಿದೆ.  ಇಮೇಲ್‌ನಂತೆ ಇಲ್ಲದ, ಟೆಕ್ಸ್ಟ್ ಸಂದೇಶಕ್ಕೆ ಹತ್ತಿರವಾಗಿರುವ ವಿಧಾನವನ್ನು ಬಳಕೆಗೆ ತಂದಿದೆ.ಇದಕ್ಕಾಗಿ ‘ಸಬ್ಜೆಕ್ಟ್’ ವಿಭಾಗವನ್ನು ಮೊಟಕುಗೊಳಿಸಿದೆ. ಹೆಚ್ಚಿನ ಸಂದರ್ಭಗಳಲ್ಲಿ ಇಮೇಲ್ ಬಳಕೆದಾರರು ‘ಸಬ್ಜೆಕ್ಟ್’ ಎಂಬ ಜಾಗದಲ್ಲಿ ಖಾಲಿ ಬಿಟ್ಟಿರುತ್ತಾರೆ. ಇನ್ನು ಕೇಲವರು ‘ಹಾಯ್’, ‘ಹೇ’... ಇನ್ನೂ ಏನೇನೊ ಅಕ್ಷರ ದಾಖಲಿಸಿ  ಮುಂದುವರಿಯುತ್ತಾರೆ. ಕಂಪೆನಿ ಮೇಲ್‌ನಲ್ಲಿ ಹೆಚ್ಚುವರಿ ಅಡ್ರೆಸ್‌ಗಳಾದ ‘ಸಿಸಿ’ ಮತ್ತು ‘ಬಿಸಿಸಿ’ ಗಳನ್ನು ಕಡಿತಗೊಳಿಸಲಾಗಿದೆ.  ‘ಎಂಟರ್’ ಕೀ ಅದುಮಿದ ತಕ್ಷಣ ಹೊಸ ಪ್ಯಾರಾಗ್ರಾಫ್ ನಿರ್ಮಾಣವಾಗುವುದಿಲ್ಲ, ಅದರ ಬದಲು  ಸಂದೇಶ ಕ್ಷಿಪ್ರಗತಿಯಲ್ಲಿ ರವಾನೆಯಾಗುತ್ತದೆ. ಕಂಪೆನಿ ವ್ಯವಹಾರಸ್ಥರಿಗೆ ವಿನಾಕಾರಣ ಸಮಯ ಹಾನಿಯಾಗುವುದನ್ನು ತಪ್ಪಿಸುವುದೇ ಕಂಪೆನಿಯ ಉದ್ದೇಶ. ಬಳಕೆದಾರರ ಅಭಿಲಾಷೆಯಂತೆ ತ್ವರಿತ ಮಾಹಿತಿ ಸಂವಹನ ಎಂಬುದು ಕಂಪೆನಿಯ ಉದ್ದೇಶ  ಎಂಬುದಾಗಿ ತಿಳಿಸಲಾಗಿದೆ.‘ಮುಂದಿನ ಪೀಳಿಗೆಯ ಸಂದೇಶ ರವಾನೆಯು ಹೆಚ್ಚು ನಿಖರ, ಹೆಚ್ಚು ಸಂವಹನಾತ್ಮಕ ಹಾಗೂ ಹೆಚ್ಚು ಸಾಂದರ್ಭಿಕ, ತ್ವರಿತ ವಾಗಿರುತ್ತದೆ’ ಎಂದು ಫೇಸ್‌ಬುಕ್‌ನ ಸಂವಹನ ಸಾಧನಗಳ ವಿನ್ಯಾಸಕಾರರಾದ  ಎಂಜಿನಿಯರಿಂಗ್  ನಿರ್ದೇಶಕ ಆಂಡ್ರ್ಯು ಬಾಸ್‌ವರ್ತ್ ಹೇಳುತ್ತಾರೆ. ‘ಸಂದೇಶ ಸಂದೇಶದಂತೆ ಇರಬೇಕು. ಸಂದೇಶ ಮಾಧ್ಯಮವಾಗಬಾರದು’ ಎನ್ನುತ್ತಾರೆ.ಅಮೆರಿಕದ ಜನಪ್ರಿಯ ಇಮೇಲ್ ತಾಣಗಳಾದ ’ಯಾಹೂ’ ಹಾಗೂ ’ಹಾಟ್‌ಮೇಲ್’ಗಳ ಬಳಕೆದಾರರ ಸಂಖ್ಯೆ ಕುಸಿಯತೊಡಗಿದೆ ಎಂದು ‘ಕಾಮ್‌ಸ್ಕೋರ್’ ಕಂಪೆನಿ ನಡೆಸಿದ ಅಧ್ಯಯನದ ವರದಿ ತಿಳಿಸಿದೆ. ಹನ್ನೆರಡರಿಂದ ಹದಿನೇಳು ವಯಸ್ಸಿನವರಲ್ಲಿ ಶೇಕಡಾ 18ರಷ್ಟು ಪ್ರಮಾಣದ ಕುಸಿತ ದಾಖಲಾಗಿದೆ. ಎಲ್ಲಾ ವಯಸ್ಸಿನ ಬಳಕೆದಾರರ ಒಟ್ಟು ಕುಸಿತದ ಪ್ರಮಾಣ ಶೇಕಡಾ 6ರಷ್ಟಿದೆ. ಇಂಟರ್‌ನೆಟ್ ಬಳಕೆದಾರರ ಸಂಖ್ಯೆ ಕುಸಿದಿದೆ ಎಂದು ಇದರ ಅರ್ಥವಲ್ಲ.  ‘ಫೇಸ್‌ಬುಕ್’ನಂತಹ ಸಾಮಾಜಿಕ ತಾಣಗಳ ಸಂದೇಶ ಸೌಲಭ್ಯಗಳನ್ನು ಬಳಸುತ್ತಿದ್ದಾರೆ ಎಂದು  ಸಮೀಕ್ಷೆ ತಿಳಿಸಿದೆ.ರುಜರ್ ವಿಶ್ವವಿದ್ಯಾಲಯದ ‘ಮೊಬೈಲ್ ಕಮ್ಯುನಿಕೇಷನ್ ಸ್ಟಡೀಸ್’ ಸಂಸ್ಥೆಯ  ನಿರ್ದೇಶಕ ಜೇಮ್ಸ್ ಇ. ಕಾಟ್ಸ್ ಹೇಳುವಂತೆ, ‘ಇದು ಇ-ಮೇಲ್ ಅಂತ್ಯಗೊಳ್ಳುತ್ತಿದೆ ಎಂದು ಅರ್ಥವಲ್ಲ, ಕುಸಿತ ದಾಖಲಿಸುತ್ತಿರುವುದಂತೂ ಹೌದು. ಬಳಕೆದಾರರಿಗೆ ಇಂದು ಹೆಚ್ಚು ಆಯ್ಕೆಗಳಿವೆ, ಸಂವಹನ ಮಾಧ್ಯಮಗಳೂ ಇವೆ ಎಂಬುದನ್ನು ಸೂಚಿಸುತ್ತದೆ. ಹೊಸ ಪೀಳಿಗೆಯ ಸಮಾಜಮುಖಿ ಹಪಹಪಿಕೆಗೆ ಇ-ಮೇಲ್ ಅವಕಾಶ ಸಾಕಾಗುತ್ತಿಲ್ಲ ಅಷ್ಟೇ’.ಯಾಹೂ ಮೇಲ್‌ನ   ಹಿರಿಯ ನಿರ್ದೇಶಕ ಮೆಕ್‌ಡವೆಲ್ ಇನ್ನೊಂದು ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ. ‘ನಾವು ಹೊಸ ಹೊಸ ಸಂದೇಶ ರವಾನೆ ಸಾಧನಗಳನ್ನು ಹುಡುಕುತ್ತಿದ್ದೇವೆ. ಇದು ಪೀಳಿಗೆ ಆಧರಿತ ವಿಷಯಗಳಲ್ಲ, ಸಂದರ್ಭ ಹಾಗೆ ಮಾಡಿದೆ ’ ಎಂದು ಅವರು ಹೇಳುತ್ತಾರೆ. ಸಮಯಕ್ಕಿಂತ ಜೋರಾಗಿ ಒಡುವ ಮನಸ್ಸು ಹೊಸತನ್ನು, ಅದು ತ್ವರಿತವಾಗಿರಬೆಕೆಂಬುದುದನ್ನು ಬಯಸುತ್ತದೆ. ಆಧುನಿಕ ಯುಗದಲ್ಲಿ ಸಮಯಕ್ಕೆ ಎಲ್ಲಿಲ್ಲದ ಪ್ರಾಮುಖ್ಯತೆ. ಸಾಕಷ್ಟು ವ್ಯವಹಾರಗಳು ಇಂದು ಕೆಲವೇ ಸೆಕೆಂಡುಗಳಲ್ಲಿ ನಡೆಯುತ್ತಿದ್ದು ಅದಕ್ಕೆ ಪೂರಕವಾದ ತಂತ್ರಜ್ಞಾನಕ್ಕೆ  ಎಲ್ಲರೂ ಮೊರೆ ಹೊಗುತ್ತಿರುವುದೇ ಇದಕ್ಕೆ ತಾಜಾ ಉದಾಹರಣೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.