ಭಾನುವಾರ, ಜನವರಿ 19, 2020
23 °C

ಈಗಲೂ ಬಿಎಸ್‌ವೈ ಉಸ್ತುವಾರಿ ಮಂತ್ರಿ!

ಪ್ರಕಾಶ ಕುಗ್ವೆ / ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿವಮೊಗ್ಗ: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಕ್ಷೇತ್ರವಿರುವ ಶಿವಮೊಗ್ಗ ಜಿಲ್ಲೆಯ ಉಸ್ತುವಾರಿ ಸಚಿವರು ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ. ಆದರೆ, ಇಲ್ಲಿಯ ಆಡಳಿತ ವ್ಯವಸ್ಥೆಗೆ ಯಡಿಯೂರಪ್ಪ ಅವರೇ ಇನ್ನೂ `ಉಸ್ತುವಾರಿ ಮಂತ್ರಿ~!ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿದು ಆರು ತಿಂಗಳಾದರೂ ಅವರ ಕಾಲಾವಧಿಯಲ್ಲಿದ್ದ ಮುಖ್ಯಮಂತ್ರಿ ಅವರ ಜಿಲ್ಲಾ ಉಸ್ತುವಾರಿ ಕಚೇರಿ ಸಿಬ್ಬಂದಿ ಸಂಖ್ಯೆ ಕಡಿಮೆಯಾಗಿಲ್ಲ. ಅವರ ಸ್ವಕ್ಷೇತ್ರ ಶಿಕಾರಿಪುರದಲ್ಲೂ ಅದೇ ಸ್ಥಿತಿ ಇದೆ.ಮುಖ್ಯಮಂತ್ರಿ ಅವರ ಜಿಲ್ಲಾ ಉಸ್ತುವಾರಿ ಕಚೇರಿಯಲ್ಲಿ ಈಗಲೂ ಒಟ್ಟು ಆರು ಜನ ಸಿಬ್ಬಂದಿ ಇದ್ದಾರೆ. ಯಡಿಯೂರಪ್ಪ ಇದ್ದಾಗ ಮೂವರು ವಿಶೇಷ ಕರ್ತವ್ಯ ಅಧಿಕಾರಿಗಳಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಈಗಲೂ ಅವರೇ; ಅಷ್ಟೇ ಸಂಖ್ಯೆಯಲ್ಲಿದ್ದಾರೆ. ಇವರಲ್ಲಿ ಇಬ್ಬರು ಸರ್ಕಾರ ನೇಮಿಸಿದ ಅಧಿಕಾರಿಗಳಾದರೆ, ಒಬ್ಬರು ಪಕ್ಷದ ಪರವಾಗಿ ನೇಮಕಗೊಂಡವರು. ಇನ್ನೊಂದು ಹುದ್ದೆ ಸಹಾಯಕ ಅಧಿಕಾರಿಯದ್ದು. ಒಬ್ಬರು ಬೆರಳಚ್ಚುಗಾರರು, ಇನ್ನೊಬ್ಬರು ದ್ವಿತೀಯ ದರ್ಜೆ ಸಹಾಯಕರು.ಹಾಗೆಯೇ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಶಿಕಾರಿಪುರದಲ್ಲಿ `ಮುಖ್ಯಮಂತ್ರಿ ಅವರ ತಾಲ್ಲೂಕು ವಿಶೇಷ ಕರ್ತವ್ಯ ಅಧಿಕಾರಿ~ ಹುದ್ದೆ ಹೊಸದಾಗಿ ಸೃಷ್ಟಿಯಾಗಿತ್ತು. ಈ ಹುದ್ದೆ ಈಗಲೂ ಮುಂದುವರಿದಿದೆ.ಯಡಿಯೂರಪ್ಪ ಅಧಿಕಾರದಿಂದ ಕೆಳಗಿಳಿದರೂ ಈ ಸರ್ಕಾರಿ ಅಧಿಕಾರಿ ಮಾತ್ರ ಮಾತೃ ಇಲಾಖೆಗೆ ಮರಳಿಲ್ಲ. ಇಷ್ಟೇಕೆ ಜಿಲ್ಲಾ ಮೀಸಲು ಪೊಲೀಸ್ ಪಡೆಯಿಂದ ಎರವಲು ಬಂದಿದ್ದ ಬೆಂಗಾವಲು ಪಡೆಯ ಸಿಬ್ಬಂದಿ ಕೂಡ ಮಾತೃ ಇಲಾಖೆಗೆ ಹೋಗಲು ಮನಸ್ಸಾಗದೆ ಯಡಿಯೂರಪ್ಪ ಮನೆಯ ಕಾವಲು ಕಾಯುತ್ತಿದ್ದಾರೆ.ಜಿಲ್ಲಾ ಕೇಂದ್ರದಲ್ಲಿರುವ ಉಸ್ತುವಾರಿ ಕಚೇರಿಯಲ್ಲಿ ಡಿ.ವಿ. ಸದಾನಂದಗೌಡ ಅವರ ಭಾವಚಿತ್ರವನ್ನು ಅವರು ಜಿಲ್ಲೆಗೆ ಬರುವವರೆಗೂ ಸಿಬ್ಬಂದಿ ಹಾಕಿರಲಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿಗೆ ಇಬ್ಬರು ಅಥವಾ ಮೂವರು ಸಿಬ್ಬಂದಿ ಸಾಕು. ಆದರೆ, ಇಲ್ಲಿ ಅಗತ್ಯಕ್ಕಿಂತ ಜಾಸ್ತಿ ಇದ್ದಾರೆ ಎನ್ನುವುದು ವಿರೋಧ ಪಕ್ಷಗಳ ಮಾತು.`ಸಾಹೇಬ್ರು ಸಿಎಂ ಆಗಿದ್ದಾಗ ಜನ ವಿವಿಧ ರೀತಿಯ ಸಹಾಯಕ್ಕಾಗಿ ಕಚೇರಿಗೆ ಬರುತ್ತಿದ್ದರು. ಈಗ ಅದರ ಶೇಕಡಾ ಕಾಲು ಭಾಗವೂ ಇಲ್ಲ. ಮುಖ್ಯಮಂತ್ರಿ ಅವರ ಪರಿಹಾರ ನಿಧಿಯಿಂದ ಯಡಿಯೂರಪ್ಪ ಅವರಿದ್ದಾಗ ಜನರಿಗೆ ಕೋಟ್ಯಂತರ ರೂ ಹಣಕಾಸಿನ ನೆರವು ನೀಡಲಾಗಿತ್ತು. ಕಷ್ಟ ಎಂದು ಹೇಳಿಕೊಂಡವರಿಗೆಲ್ಲ ಸಾಹೇಬರು ಗರಿಷ್ಠ ಮಟ್ಟದ ನೆರವನ್ನೇ ನೀಡಿದ್ದಾರೆ. ಕೇವಲ ಶಿವಮೊಗ್ಗ ಜಿಲ್ಲೆಯಿಂದಷ್ಟೇ ಅಲ್ಲ, ಅಕ್ಕಪಕ್ಕದ ಜಿಲ್ಲೆಗಳಿಂದಲೂ ಜನ ಸಹಾಯ ಕೋರಿ ಅರ್ಜಿಗಳನ್ನು ತರುತ್ತಿದ್ದರು. ಈಗ ಅವೆಲ್ಲ ಕಡಿಮೆಯಾಗಿವೆ~ ಎನ್ನುತ್ತಾರೆ ಹೆಸರು ಹೇಳಲು ಇಚ್ಛಿಸದ ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿ ಅಧಿಕಾರಿಯೊಬ್ಬರು.`ಆರು ತಿಂಗಳ ನಂತರ ಮತ್ತೆ ತಾವೇ ಮುಖ್ಯಮಂತ್ರಿ ಎಂದು ಯಡಿಯೂರಪ್ಪ ಅವರೇ ಹೇಳಿದ್ದರು. ಇದು ಆರನೇ ತಿಂಗಳು. ಹಾಗಾಗಿ, ಅವರು ಮತ್ತೆ ಮುಖ್ಯಮಂತ್ರಿಯಾಗುತ್ತಾರೆಂಬ ನಿರೀಕ್ಷೆ ನಮ್ಮದು~ ಎನ್ನುತ್ತಾರೆ ಈ ಅಧಿಕಾರಿ.ಇದಕ್ಕೆ ತಕ್ಕಂತೆ ಯಡಿಯೂರಪ್ಪ ಶಿವಮೊಗ್ಗಕ್ಕೆ ಬಂದಾಗಲೆಲ್ಲ ಶಿವಮೊಗ್ಗ ನಗರ ಮತ್ತು ಶಿಕಾರಿಪುರದ ಅವರ ಮನೆಯಲ್ಲಿ ಜಿಲ್ಲಾಮಟ್ಟದ ಉನ್ನತ ಅಧಿಕಾರಿಗಳ ಸಭೆ ನಡೆಸುವುದು ರೂಢಿ ಆಗಿದೆ. ಸಾಲದ್ದಕ್ಕೆ ಸ್ವತಃ ಅವರೇ ಅಧಿಕಾರಿಗಳೊಂದಿಗೆ ತೆರಳಿ, ಶಿವಮೊಗ್ಗ ನಗರದ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ ನಡೆಸುವುದೂ ಅಭ್ಯಾಸವಾಗಿದೆ. ಸಾರ್ವಜನಿಕ ಸಭೆ-ಸಮಾರಂಭಗಳಲ್ಲಿಯೂ ಅವರದ್ದು ಅದೇ ಮಾತು, ಅದೇ ಧಾಟಿ.ಡಿ.ವಿ. ಸದಾನಂದಗೌಡ ಅವರು ಜಿಲ್ಲೆಯ ಉಸ್ತುವಾರಿ ಸಚಿವರಾದರೂ ಈ ಆರು ತಿಂಗಳಲ್ಲಿ ಅವರು ಜಿಲ್ಲೆಗೆ ಭೇಟಿ ನೀಡಿದ್ದು ಕೇವಲ ಒಂದು ಸಲ. ಅದರಲ್ಲೂ ಅಧಿಕಾರಿಗಳ ಸಭೆ ನಡೆಸಿದ್ದು ಕೇವಲ ಒಂದೂವರೆ ಗಂಟೆ.ಮುಖ್ಯಮಂತ್ರಿ ಅವರಿಗೆ ತಮ್ಮ ಉಸ್ತುವಾರಿ ಜಿಲ್ಲೆಗೆ ಬರಲು ಸಮಯ ಇಲ್ಲದಿರುವಾಗ, ಅವರನ್ನು ನೇಮಕ ಮಾಡಿದ ಯಡಿಯೂರಪ್ಪ ಅವರು ಅಧಿಕಾರಿಗಳ ಸಭೆ ನಡೆಸಿದರೆ ತಪ್ಪೇನು? ಎಂಬ ಪ್ರಶ್ನೆ ಯಡಿಯೂರಪ್ಪ ಅವರ ಅಭಿಮಾನಿಗಳದ್ದು.

ಪ್ರತಿಕ್ರಿಯಿಸಿ (+)