ಶುಕ್ರವಾರ, ಮೇ 27, 2022
31 °C

ಈಜಿಪ್ಟ್‌ನಲ್ಲಿ ಪ್ರಜಾಸತ್ತೆ ಜನರ ಬೆಂಬಲಕ್ಕೆ ಜಗತ್ತು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಈಜಿಪ್ಟ್‌ನಲ್ಲಿ ಪ್ರಜಾಸತ್ತೆ ಜನರ ಬೆಂಬಲಕ್ಕೆ ಜಗತ್ತು

ಕೈರೊ (ಪಿಟಿಐ): ಮೂರು ದಶಕಗಳ ಕಾಲ ಹೋಸ್ನಿ ಮುಬಾರಕ್ ಅವರ ನಿರಂಕುಶಾಧಿಕಾರ ಕಂಡ ಈಜಿಪ್ಟ್‌ನಲ್ಲಿ ಜನರ ಶಕ್ತಿಗೆ ಅಭೂತಪೂರ್ವ ವಿಜಯ ದೊರೆತಿದ್ದು, ಇದು ದೇಶದಲ್ಲಿ ಸಾಂಗವಾಗಿ ಪ್ರಜಾಪ್ರಭುತ್ವ ಸ್ಥಾಪನೆಗೆ ಅನುವು ಮಾಡಿಕೊಡಬೇಕು ಎಂದು ವಿಶ್ವ ನಾಯಕರು ಅಭಿಪ್ರಾಯಟ್ಟಿದ್ದಾರೆ. ಮತ್ತೊಂದೆಡೆ ರಾಜರ ಆಡಳಿತ ಇರುವ ಅರಬ್ ರಾಷ್ಟ್ರಗಳಲ್ಲಿ ದಂಗೆಯ ಭೀತಿ ಎದುರಾಗಿದೆ.

ಯೆಮನ್ ಮತ್ತು ಅಲ್ಜೀರಿಯಾ ನಲ್ಲಿ ಶನಿವಾರ ಇದರ ಲಕ್ಷಣ ಕಂಡುಬಂದಿದ್ದು, ಸಾವಿರಾರು ಯುವಕರು ಮತ್ತು ವಿದ್ಯಾರ್ಥಿಗಳು 33 ವರ್ಷಗಳಿಂದ ಆಡಳಿತ ನಡೆಸುತ್ತಿರುವ ಅಧ್ಯಕ್ಷ ಅಲಿ ಅಬ್ದುಲ್ಲಾ ಸಲೆ ಪದಚ್ಯುತಿಗೆ ಆಗ್ರಹಿಸಿ ಸಾನಾದಲ್ಲಿ ಪ್ರತಿಭಟನೆ ನಡೆಸಿದ್ದಾರೆ.

ಕೈರೊದ ತೆಹ್ರೀರ್ ಚೌಕ ಮಾತ್ರವಲ್ಲ, ಇಡೀ ದೇಶ ವಿಜಯೋತ್ಸವದಲ್ಲಿ ಮುಳುಗಿದ್ದರೆ, ಸದ್ಯ ತಾತ್ಕಾಲಿಕ ಅಧಿಕಾರ ವಹಿಸಿಕೊಂಡಿರುವ ಸೇನೆ ಮುಂದಿನ ನಡೆಗಳ ಬಗ್ಗೆ ಗಂಭೀರ ಪರಿಶೀಲನೆ ನಡೆಸತೊಡಗಿದೆ. ದೀರ್ಘ ಅವಧಿಗೆ ತಾನು ಅಧಿಕಾರ ಹೊಂದಿರುವುದಿಲ್ಲ. ಅದಕ್ಕೆ ಕಾನೂನಿನಲ್ಲಿ ಅವಕಾಶವೂ ಇಲ್ಲ. ಜನ ಇದನ್ನು ಬಯಸುವುದೂ ಇಲ್ಲ ಎಂಬುದು ತನಗೆ ಗೊತ್ತಿದೆ ಎಂದು ಈಜಿಪ್ಟ್‌ನ ಉನ್ನತ ಮಿಲಿಟರಿ ಮಂಡಳಿ ಹೇಳುವ ಮೂಲಕ ದೇಶ ಸೇನಾಡಳಿತದ ವಶವಾಗುವ ಭಯ ಬಹುತೇಕ ದೂರವಾಗಿದೆ. ಮುಂದಿನ ಕೆಲವೇ ದಿನಗಳಲ್ಲಿ ದೇಶವನ್ನು ಮುನ್ನಡೆಸುವ ನಿಟ್ಟನಲ್ಲಿ ತಾನು ಹಲವಾರು ಪ್ರಕಟಣೆಗಳನ್ನು ನೀಡುವುದಾಗಿ ಮಂಡಳಿ ತಿಳಿಸಿದೆ.

ಮಂಡಳಿಯ ನೇತೃತ್ವ ವಹಿಸಿರುವ 75 ವರ್ಷದ ಫೀಲ್ಡ್ ಮಾರ್ಷಲ್ ಮಹಮ್ಮದ್ ಹುಸೇನ್ ತಂತಾವಿ ಅವರು ಇದುವರೆಗೆ ಮೂರು ಹೇಳಿಕೆಗಳನ್ನು ನೀಡಿದ್ದು, ಮುಂದಿನ ನಡೆಗಳನ್ನು ತಾವು ಕಾಲ ಕಾಲಕ್ಕೆ ಹೇಳಿಕೆಗಳ ಮೂಲಕ ಬಹಿರಂಗಪಡಿಸುತ್ತಿರುವುದಾಗಿ ತಿಳಿಸಿದ್ದಾರೆ.

ಅಧ್ಯಕ್ಷ ಮುಬಾರಕ್ ಅವರು ಮಿಲಿಟರಿ ಮಂಡಳಿಗೆ ಅಧಿಕಾರ ಹಸ್ತಾಂತರಿಸುವ ಮೂಲಕ ಸಂವಿಧಾನವನ್ನು ಮೊಟಕುಗೊಳಿಸಿದಂತಾಗಿದೆ. ಸಂಸತ್ತಿನ ಮೇಲ್ಮನೆ ಮತ್ತು ಕೆಳಮನೆಗಳೆರಡನ್ನೂ ವಿಸರ್ಜಿಸಿದಂತೆ ಆಗಿದ್ದು, ಅಧಿಕಾರ ಹಸ್ತಾಂತರಕ್ಕೆ ಇದೀಗ ಮಂಡಳಿಯೊಂದನ್ನು ನಿರ್ಮಿಸಬೇಕಾಗಿದೆ. ಜನವರಿ 25ರಿಂದ ಪ್ರತಿಭಟನೆಯಲ್ಲಿ ತೊಡಗಿರುವ ಜನರ ಬೇಡಿಕೆಗಳು ಇವೆಲ್ಲವೂ ಆಗಿದೆ. ಹೀಗಾಗಿ ಜನರ ಬೇಡಿಕೆ ಇದೀಗ ಒಂದೊಂದಾಗಿ ಈಡೇರಿದಂತಾಗಿದ್ದು, ಪ್ರತಿಭಟನಾಕಾರರು ತೆಹ್ರೀರ್ ಚೌಕನಿಂದ ನಿರ್ಗಮಿಸಿದ ಬಳಿಕ ಮೂರು ದಶಕಗಳಿಂದ ಅಸ್ತಿತ್ವದಲ್ಲಿದ್ದ ತುರ್ತು ಪರಿಸ್ಥಿತಿ ಕಾನೂನನ್ನೂ ತೆರವುಗೊಳಿಸುವುದಾಗಿ ಸೇನೆ ಹೇಳಿದೆ.

ಜತೆಗೆ ಮುಬಾರಕ್ ಆಡಳಿತ ಅವಧಿಯ ಅಧಿಕಾರಿಗಳು ದೇಶ ಬಿಟ್ಟು ಹೋಗದಂತೆ ಸೇನೆ ನಿರ್ಬಂಧ ಹೇರಿದೆ. ಮತ್ತೊಂದೆಡೆ ಅಮೆರಿಕ ಸಹಿತ ಜಗತ್ತಿನ ಇತರ ಪ್ರಮುಖ ರಾಷ್ಟ್ರಗಳ ನಾಯಕರು ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಜಾರಿಗೆ ಬರುವುದಕ್ಕೆ ಜನ ತಕ್ಷಣ ಕಾರ್ಯಪ್ರವೃತ್ತರಾಗಬೇಕು ಎಂಬ ಸಂದೇಶ ನೀಡಿದ್ದು, ಮುಸ್ಲಿಂ ಬ್ರದರ್‌ಹುಡ್‌ನಂತಹ ಸಂಘಟನೆಗಳು ಅಧಿಕಾರ ಹಿಡಿಯದಂತೆ ಎಚ್ಚರಿಕೆ ವಹಿಸಬೇಕು ಎಂದು ಸೂಚನೆ ನೀಡಿವೆ.

ಈಜಿಪ್ಟ್‌ನಲ್ಲಿನ ಈ ರಕ್ತರಹಿತ ಕ್ರಾಂತಿ ಇನ್ನೂ ‘ರಾಜ’ ಪರಂಪರೆ ಹೊಂದಿರುವ ಅರಬ್ ರಾಷ್ಟ್ರಗಳಾದ ಸೌದಿ ಅರೇಬಿಯಾ, ಲಿಬಿಯಾ,  ಒಮಾನ್, ಕುವೈತ್, ಬಹರೈನ್‌ಗಳಂತಹ ರಾಷ್ಟ್ರಗಳಲ್ಲಿ ಮಿಂಚಿನ ಸಂಚಲನವನ್ನು ಉಂಟು ಮಾಡಿದೆ. ಜನರು ಎಂದು ಬಂಡೇಳುವರೋ ಎಂಬ ಆತಂಕದಲ್ಲಿ ಅವುಗಳು ಇವೆ.ಟ್ಯುನಿಶಿಯಾದಲ್ಲಿ ಆರಂಭವಾದ ಪ್ರತಿಭಟನೆ ಇದೀಗ 2 ದೇಶಗಳ ನಿರಂಕುಶಾಧಿಕಾರವನ್ನು ಕಿತ್ತೊಗೆದಿದಿದೆ, ಈ ಸರದಿ ತಮ್ಮ ದೇಶಕ್ಕೂ ಬಂದೀತು ಎಂಬ ಭೀತಿ ಈ ರಾಜಾಡಳಿತ ದೇಶಗಳಲ್ಲಿ ಕಾಣಿಸಿಕೊಂಡಿದೆ. ಹೀಗಾಗಿ ಈಜಿಪ್ಟ್‌ನಲ್ಲಿ ನಡೆದ ಈ ಐತಿಹಾಸಿಕ ಘಟನೆ ಬಗ್ಗೆ ಅವುಗಳು ಬಹಳ ಎಚ್ಚರಿಕೆ ಪ್ರತಿಕ್ರಿಯೆ ನೀಡಿವೆ. ಪ್ಯಾಲೆಸ್ಟೀನ್, ಜೋರ್ಡಾನ್, ಟರ್ಕಿ, ಯೆಮನ್, ಬಹರೈನ್, ಅಲ್ಜೀರಿಯಾ, ಲೆಬನಾನ್, ಸಿರಿಯಾ ಮತ್ತು ಇರಾನ್‌ಗಳು ಮುಬಾರಕ್ ರಾಜೀನಾಮೆ ನೀಡಿದ್ದನ್ನು ಸ್ವಾಗತಿಸಿವೆ. ಇಸ್ರೇಲ್ ಬಹಳ ಎಚ್ಚರಿಕೆಯ ಹೇಳಿಕೆ ನೀಡಿದ್ದು, ಈಗಾಗಲೇ ಮಾಡಿಕೊಂಡಿರುವ ಶಾಂತಿ ಒಪ್ಪಂದ ಮುಂದುವರಿಯುವ ಆಶಯ ಇಟ್ಟುಕೊಂಡಿರುವುದಾಗಿ ಹೇಳಿದೆ.

ಒಬಾಮ ಪ್ರಶಂಸೆ: ಮುಬಾರಕ್ ರಾಜೀನಾಮೆ ನೀಡಿದ ಕೆಲವೇ ಗಂಟೆಗಳಲ್ಲಿ ಶ್ವೇತಭವನದಲ್ಲಿ ಆರು ನಿಮಿಷಗಳ ಭಾಷಣ ಮಾಡಿದ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ, ಮಹಾತ್ಮಾ ಗಾಂಧೀಜಿ ಅನುಸರಿಸಿದ ಅಹಿಂಸಾರೂಪದ ಚಳವಳಿಯ ಮೂಲಕ ಈಜಿಪ್ಟ್ ಜನತೆ ಮುಬಾರಕ್ ಆಡಳಿತವನ್ನು ಕೊನೆಗೊಳಿಸಿರುವುದು ದೇಶದ ಇತಿಹಾಸದಲ್ಲಿ ‘ಹೊಸ ಆರಂಭ’ ಎಂದು ಬಣ್ಣಿಸಿದರು.

‘ಈಜಿಪ್ಟ್‌ನ ಜನತೆ ಮಾತನಾಡಿದ್ದಾರೆ, ಅವರ ಧ್ವನಿಗೆ ಮನ್ನಣೆ ಸಿಕ್ಕಿದೆ. ಈಜಿಪ್ಟ್ ಇನ್ನು ಮುಂದೆ ಈ ಹಿಂದಿನಂತೆ ಇರಲು ಸಾಧ್ಯವೇ ಇಲ್ಲ’ ಎಂದ ಅವರು, ದೇಶವು ಶಾಂತಿಯುತವಾಗಿ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮರಳಬೇಕು, ದೇಶಕ್ಕೆ ಮುಂದಿನ ದಿನಗಳಲ್ಲಿ ಬಹಳ ಕಷ್ಟಕರ ಕಾಲ ಎದುರಿಸಬೇಕಾಗಿದೆ ಎಂಬ ಎಚ್ಚರಿಕೆಯನ್ನೂ ಅವರು ನೀಡಿದರು.

ಮುಬಾರಕ್ ಆಸ್ತಿ ಮುಟ್ಟುಗೋಲಿಗೆ ಸ್ವಿಸ್ ಆದೇಶ: ಮುಬಾರಕ್ ರಾಜೀನಾಮೆ ನೀಡಿದ ಗಂಟೆಯೊಳಗೆಯೇ ಸ್ವಿಟ್ಜರ್ಲೆಂಡ್‌ನಲ್ಲಿ ಅವರು ಇಟ್ಟಿರಬಹುದಾದ ಎಲ್ಲಾ ಆಸ್ತಿಗಳನ್ನೂ ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ಸ್ವಿಸ್ ಸರ್ಕಾರ ಆದೇಶ ನೀಡಿದೆ.

ಮುಂದುವರಿದ ವಿಜಯೋತ್ಸವ: ಮುಬಾರಕ್ ಪದಚ್ಯುತಿಯಿಂದ ಖುಷಿಗೊಂಡಿರುವ ಈಜಿಪ್ಟ್‌ನ ಜನತೆ ಶುಕ್ರವಾರ ರಾತ್ರಿಯಿಡೀ ದೇಶದೆಲ್ಲೆಡೆ ವಿಜಯೋತ್ಸವ ಆಚರಿಸಿದ್ದು, ಶನಿವಾರವೂ ಅದು ಮುಂದುವರಿದಿದೆ. ಬೀದಿ ಬೀದಿಗಳಲ್ಲಿ ಕುಣಿದು ಕುಪ್ಪಳಿಸಿದ ಜನರು ಈಜಿಪ್ಟ್‌ನ ಧ್ವಜವನ್ನು ಬೀಸುತ್ತ ಸಂಭ್ರಮ ಆಚರಿಸಿದರು. ತಹ್ರೀರ್ ಸ್ವ್ಕೇರ್‌ಗೆ ಲಕ್ಷಾಂತರ ಸಂಖ್ಯೆಯಲ್ಲಿ ಆಗಮಿಸಿದ ಜನರು ಸಿಡಿಮದ್ದು ಸಿಡಿಸಿ, ಘೋಷಣೆಗಳನ್ನು ಕೂಗುತ್ತ ಸಂತಸ ಹಂಚಿಕೊಂಡರು.

“ಈಜಿಪ್ಟ್ ಈಸ್ ಫ್ರೀ’, ‘ಗಾಡ್ ಈಸ್ ಗ್ರೇಟ್’ ಎಂದೆಲ್ಲಾ ಘೋಷಣೆ ಕೂಗುತ್ತಿದ್ದ ಜನರು ಕೈರೊ ಮಾತ್ರವಲ್ಲದೆ ಇತರ ನಗರಗಳು, ಪಟ್ಟಣಗಳಲ್ಲೂ ಕುಣಿಯುತ್ತಿದ್ದ ದೃಶ್ಯ ಕಂಡುಬಂತು. ಪ್ರತಿಭಟನೆಯ ಕೇಂದ್ರ ಸ್ಥಳವಾಗಿದ್ದ ತಹ್ರೀರ್ ಸ್ವ್ಕೇರ್‌ನಲ್ಲಿ ಸೇನೆ ಇದೀಗ ತಡೆಗೋಡೆಗಳನ್ನು ತೆರವುಗೊಳಿಸುವ ಕಾರ್ಯದಲ್ಲಿ ನಿರತವಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.