ಶುಕ್ರವಾರ, ಮೇ 20, 2022
19 °C

ಈಜುಕೊಳದಲ್ಲಿ ಕರ್ನಾಟಕದ ಶಕ್ತಿ ಕುಂದುತ್ತಿದೆಯೇ ?

ಪ್ರಮೋದ್ ಜಿ.ಕೆ. Updated:

ಅಕ್ಷರ ಗಾತ್ರ : | |

“ಸೀನಿಯರ್ ವಿಭಾಗದಲ್ಲಿ ಸಾಕಷ್ಟು ಪ್ರತಿಭೆಗಳಿದ್ದಾರೆ. ದೇಶಕ್ಕೆ ಪದಕ ಗೆದ್ದುಕೊಡಬಲ್ಲ ಸಾಮರ್ಥ್ಯ ಹೊಂದಿರುವವರ ಸಂಖ್ಯೆಯೂ ಕಡಿಮೆಯೇನಿಲ್ಲ. ಅವರಿಗೆ ಅಗತ್ಯ ಸೌಲಭ್ಯಗಳು ಬೇಕಿವೆ. ನಮ್ಮ ಈಜುಪಟುಗಳು ಬೇರೆ ರಾಷ್ಟ್ರಗಳ ಸ್ಪರ್ಧಿಗಳ ಹಾಗೆ ದೈಹಿಕವಾಗಿ ಬಲಿಷ್ಠಗೊಳ್ಳಬೇಕಿದೆ”

-ಎಸ್. ಪ್ರದೀಪ್ ಕುಮಾರ್, ಭಾರತ ಈಜು ತಂಡದ ಕೋಚ್ಜೂನಿಯರ್ ವಿಭಾಗದಲ್ಲಿ ಕರ್ನಾಟಕದ ಸ್ಪರ್ಧಿಗಳು ತೋರುತ್ತಿರುವ ಪ್ರದರ್ಶನದ ಮುಂದೆ, ಸೀನಿಯರ್ ವಿಭಾಗ ಮಂಕಾಗುತ್ತಿದೆಯೇ? ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತ ಹೊಳಪು ಕಳೆದುಕೊಳ್ಳುತ್ತಿದೆಯೇ? ಎನ್ನುವ ಪ್ರಶ್ನೆಗೆ ಪ್ರದೀಪ್ ನೀಡಿದ ಉತ್ತರವಿದು.ಬೇರೆ ರಾಜ್ಯಗಳ ಕೆಲವು ಈಜುಪಟುಗಳು ಕರ್ನಾಟಕದಲ್ಲಿ ತರಬೇತಿ ಪಡೆದರೂ, ತಮ್ಮ ರಾಜ್ಯವನ್ನೇ ಅವರು ಪ್ರತಿನಿಧಿಸುತ್ತಾರೆ. ಇಲ್ಲಿಯ ತಂತ್ರಗಳನ್ನು ಕಲಿತುಕೊಂಡು ಕರ್ನಾಟಕದ ಸ್ಪರ್ಧಿಗಳಿಗೂ ಪೈಪೋಟಿ ನೀಡುತ್ತಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಮಹಾರಾಷ್ಟ್ರ, ತಮಿಳುನಾಡು, ಆಂಧ್ರಪ್ರದೇಶದ ಈಜುಪಟುಗಳು ಕರ್ನಾಟಕಕ್ಕೆ ಸವಾಲೊಡ್ಡಿ ಎತ್ತರಕ್ಕೆ ಬೆಳೆಯುತ್ತಿದ್ದಾರೆ.ಕರ್ನಾಟಕ ಹಲವಾರು ಈಜುಪಟುಗಳನ್ನು ಅಂತರರಾಷ್ಟ್ರೀಯ ಮಟ್ಟಕ್ಕೆ ಪರಿಚಯಿಸಿದೆ. ಒಲಿಂಪಿಕ್ಸ್‌ನಲ್ಲಿ ಸಾಮರ್ಥ್ಯ ಮೆರೆಯುವ ಕರ್ನಾಟಕದ ಸ್ಪರ್ಧಿಗಳ ಸಂಖ್ಯೆಯೂ ಕಡಿಮೆಯಾಗುತ್ತಿದೆ. ನಿಶಾ ಮಿಲೆಟ್ ಹಾಗೂ ಹಕೀಮುದ್ದೀನ್ (2000, ಸಿಡ್ನಿ ಒಲಿಂಪಿಕ್ಸ್), ಶಿಖಾ ಟಂಡನ್ (ಅಥೆನ್ಸ್ ಒಲಿಂಪಿಕ್ಸ್, 2004), ರೆಹಾನ್ ಪೂಂಚಾ (ಬೀಜಿಂಗ್ ಒಲಿಂಪಿಕ್ಸ್, 2008) ಅವರು ಅಂತರರಾಷ್ಟ್ರೀಯ ಮಟ್ಟದಲ್ಲಿ ತೋರುತ್ತಿದ್ದ ಛಾತಿಯೂ ಈಗಿಲ್ಲವಾಗಿದೆ. 2012ರ ಲಂಡನ್ ಒಲಿಂಪಿಕ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ ಏಕೈಕ ಈಜುಪಟು ಗಗನ್ ಉಳ್ಳಾಲಮಠ ಕೂಡಾ ಇತರ ಸ್ಪರ್ಧಿಗಳಿಗೆ ಸವಾಲೆನಿಸಲಿಲ್ಲ.ಸಬ್ ಜೂನಿಯರ್ ಹಾಗೂ ಜೂನಿಯರ್ ವಿಭಾಗದ ಸ್ಪರ್ಧೆಗಳಲ್ಲಿ ಕರ್ನಾಟಕ ಇಂದಿಗೂ ಮೆರೆದಾಡುತ್ತಿದೆ. ಈ ಚಾಂಪಿಯನ್‌ಷಿಪ್‌ನಲ್ಲಿ 20 ವರ್ಷಗಳಿಂದ ತನ್ನ ಪ್ರಾಬಲ್ಯವನ್ನು ವಿಸ್ತರಿಸುತ್ತಾ ಬಂದಿದೆ. 1993ರಲ್ಲಿ ಸಬ್ ಜೂನಿಯರ್ ವಿಭಾಗದಲ್ಲಿ ಮೊದಲ ಸಲ ಸಮಗ್ರ ಪ್ರಶಸ್ತಿ ಗೆದ್ದ ಕರ್ನಾಟಕ ತಂಡ ಸತತ ಎರಡು ದಶಕಗಳಿಂದಲೂ ತನ್ನ ಪಟ್ಟು ಸಡಿಲಿಸಿಲ್ಲ. ಆದರೆ, ಸೀನಿಯರ್ ವಿಭಾಗದಲ್ಲಿ ಪ್ರಬಲ ಸ್ಪರ್ಧಿಗಳ ಕೊರತೆ ಕಾಡುತ್ತಿದೆ.ಈ ಬೇಸರದ ನಡುವೆಯೂ ಬೆಂಗಳೂರಿನಲ್ಲಿ ತರಬೇತಿಗೆ ಬರುವ ಈಜು ಸ್ಪರ್ಧಿಗಳ ಸಂಖ್ಯೆ ಕಡಿಮೆಯಾಗಿಲ್ಲ. `

ಈಜುಪಟುಗಳ ತವರೂರಿನಲ್ಲಿ' ಮಹಾರಾಷ್ಟ್ರ, ಆಂಧ್ರಪ್ರದೇಶ, ಛತ್ತೀಸ್‌ಗಡ ರಾಜ್ಯಗಳ ಸ್ಪರ್ಧಿಗಳ ಸಂಖ್ಯೆ ಹೆಚ್ಚಿದೆ. ಭಾರತದ ಭರವಸೆ ಎನಿಸಿರುವ ವೀರ್‌ಧವಳ್ ಖಾಡೆ ಕೂಡಾ ಉದ್ಯಾನ ನಗರಿಯಲ್ಲಿಯೇ ತರಬೇತಿ ಪಡೆಯುತ್ತಿದ್ದಾರೆ. ಆದರೆ, ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತದ ಸಾಮರ್ಥ್ಯ ಎತ್ತಿ ಹಿಡಿಯಲು ಸಾಧ್ಯವಾಗುತ್ತಿಲ್ಲ. ಇದರಿಂದ ಕರ್ನಾಟಕದ ಸ್ಪರ್ಧಿಗಳೂ ಹೊರತಾಗಿಲ್ಲ.ಭರವಸೆಯ ಆಶಾಕಿರಣ: ಈ ನಿರಾಸೆಯ ಹೊರತಾಗಿಯೂ ಹೊಸ  ಸ್ಪರ್ಧಿಗಳು ಭರವಸೆಯ ಆಶಾಕಿರಣ ಎನಿಸಿದ್ದಾರೆ. ಜೂನಿಯರ್ ವಿಭಾಗದಲ್ಲಿ ಪ್ರಾಬಲ್ಯ ಮೆರೆಯುತ್ತಿರುವ ಮಿತೇಶ್ ಎಂ. ಕುಂಟೆ, ಯಾಕೂಬ್ ಸಲೀಂ, ಮಾಳವಿಕಾ,  ಆರ್. ಸಂಜೀವ್, ಎಂ. ಅರವಿಂದ್, ಎಸ್.ಪಿ. ಲಿಖಿತ್, ಕೆ. ಸಿಮ್ರಾನ್ ದೀಪಕ್,   ದಾಮಿನಿ ಕೆ. ಗೌಡ, ಎಸ್.ವಿ. ನಿಖಿತಾ ಹೀಗೆ ಹಲವು ಈಜುಪಟುಗಳು ಹೈದರಾಬಾದ್‌ನಲ್ಲಿ ನಡೆದ ಜೂನಿಯರ್ ಈಜು ಚಾಂಪಿಯನ್‌ಷಿಪ್‌ನಲ್ಲಿ ತೋರಿದ ಪ್ರದರ್ಶನ ಭರವಸೆಯ ಹೊಂಗಿರಣ ಮೂಡಿಸಿದೆ. ಈ ಸ್ಪರ್ಧೆಗಳು ಮುಂದೆ ಸೀನಿಯರ್ ವಿಭಾಗದಲ್ಲೂ ತಮ್ಮ ಪ್ರದರ್ಶನ ಮಟ್ಟವನ್ನು ಮುಂದುವರಿಸಿದರೆ, ಭಾರತವನ್ನು ಪ್ರತಿನಿಧಿಸುವ ಎತ್ತರಕ್ಕೆ ಬೆಳೆಯುವ ಸಾಧ್ಯತೆಯನ್ನೂ ತಳ್ಳಿ ಹಾಕುವಂತಿಲ್ಲ.`ಕ್ರೀಡೆಯ ಮೇಲೆ ಅವಲಂಬಿತರಾಗಲು ಯಾರೂ ಮುಂದಾಗುವುದಿಲ್ಲ. ಬೇರೆ ಕ್ರೀಡೆಗಳಲ್ಲಿ ಸಿಗುವ ಸೌಲಭ್ಯಗಳು ಈಜುವಿನಲ್ಲಿ ಸಿಗುವುದಿಲ್ಲ. ಆದ್ದರಿಂದ ಸಾಕಷ್ಟು ಪ್ರತಿಭಾನ್ವಿತರು ಎಸ್‌ಎಸ್‌ಎಲ್‌ಸಿ ಬರುವ ಹೊತ್ತಿಗೆ ಕ್ರೀಡೆಗೆ ವಿದಾಯ ಹೇಳುತ್ತಾರೆ. ಸರ್ಕಾರವೇ ಪ್ರತಿಭೆಗಳನ್ನು ಗುರುತಿಸಿ ಬೆಂಬಲ ನೀಡಬೇಕು' ಎನ್ನುತ್ತಾರೆ ಪ್ರದೀಪ್. ಇವರ ಮಾತಿಗೆ ಧ್ವನಿಗೂಡಿಸಿದ್ದು ಜೂನಿಯರ್ ವಿಭಾಗದ ಕರ್ನಾಟಕ ತಂಡದ ಕೋಚ್ ವೆಂಕಟೇಶ್.`ಜೂನಿಯರ್ ವಿಭಾಗದಲ್ಲಿ ಸ್ಪರ್ಧಿಸುವ ಈಗಿನ ಸ್ಪರ್ಧಿಗಳು ಇನ್ನೂ ಉತ್ತಮ ತರಬೇತಿ ಪಡೆದರೆ, ಒಲಿಂಪಿಕ್ಸ್‌ನಲ್ಲೂ ಸಾಮರ್ಥ್ಯ ತೋರುವ ಮಟ್ಟಿಗೆ ಬೆಳೆಯುತ್ತಾರೆ. ಆದರೆ, ಬಹುತೇಕ ಈಜುಪಟುಗಳು ವಿದ್ಯಾಭ್ಯಾಸದ ಕಾರಣಕ್ಕಾಗಿ ಕ್ರೀಡೆಯನ್ನು ತೊರೆದು ಬಿಡುತ್ತಾರೆ' ಎಂದು ವೆಂಕಟೇಶ್ ಬೇಸರ ವ್ಯಕ್ತಪಡಿಸುತ್ತಾರೆ.`ಕೆಲ ಸಲ ಚಾಂಪಿಯನ್‌ಷಿಪ್‌ಗಳಲ್ಲಿ ಪಾಲ್ಗೊಳ್ಳುವ ಉದ್ದೇಶದಿಂದ ಈಜುಪಟುಗಳು ಶಾಲೆಯನ್ನು ಬಿಟ್ಟುಬರಬೇಕಾಗುತ್ತಿದೆ. ಈ ಸಮಯದಲ್ಲಿ ಶಾಲೆಯಿಂದಲೂ ಬೆಂಬಲ ಬೇಕಾಗುತ್ತದೆ. ಎಲ್ಲರೂ ಕ್ರೀಡೆಯನ್ನೇ ನೆಚ್ಚಿಕೊಳ್ಳುವುದಿಲ್ಲ. ಒಂದು ಹಂತದವರೆಗೆ ಕ್ರೀಡಾಕೂಟಗಳಲ್ಲಿ ಪಾಲ್ಗೊಂಡು ನಂತರ ವೈದ್ಯಕೀಯ, ಎಂಜಿನಿಯರಿಂಗ್ ಶಿಕ್ಷಣದತ್ತ ಮುಖ ಮಾಡುತ್ತಾರೆ. ಆದ್ದರಿಂದ ಸರ್ಕಾರವೂ ಸಾಧಿಸುವ ಛಲವುಳ್ಳ ಈಜುಪಟುಗಳ ಬೆಂಬಲಕ್ಕೆ ನಿಲ್ಲಬೇಕು' ಎನ್ನುತ್ತಾರೆ ವೆಂಕಟೇಶ್.`ಪರೀಕ್ಷೆಯ ಸಮಯದಲ್ಲಿ ಈಜು ಚಾಂಪಿಯನ್‌ಷಿಪ್ ಇದ್ದರೆ, ಅಂತಹ ಈಜುಪಟುಗಳಿಗೆ ಬೇರೆ ರಾಜ್ಯಗಳು ಪ್ರತ್ಯೇಕವಾಗಿ ಪರೀಕ್ಷೆ ನಡೆಸುತ್ತಿವೆ. ಹಾಜರಾತಿಯನ್ನೂ ನೀಡುತ್ತವೆ. ಕರ್ನಾಟಕದಲ್ಲೂ ಈ ರೀತಿಯ ಬೆಂಬಲ ಕೆಲವೇ ಶಿಕ್ಷಣ ಸಂಸ್ಥೆಗಳಿಂದ ಲಭಿಸುತ್ತದೆ. ಎಲ್ಲಾ ಶಾಲಾ-ಕಾಲೇಜುಗಳು ಬೆಂಬಲ ನೀಡಿದರೆ, ನಮ್ಮ ರಾಜ್ಯದ ಸ್ಪರ್ಧಿಗಳಿಂದಲೂ ಉತ್ತಮ ಸಾಧನೆ ನಿರೀಕ್ಷಿಸಬಹುದು' ಎಂದು ರಾಜ್ಯ ಈಜು ಸಂಸ್ಥೆಯ ಜಂಟಿ ಕಾರ್ಯದರ್ಶಿ ಎಸ್.ಆರ್. ಸಿಂಧಿಯಾ ಹೇಳುತ್ತಾರೆ.`ಸೂಕ್ತ ಬೆಂಬಲ ಸಿಗಬೇಕು'

ಸೀನಿಯರ್ ವಿಭಾಗದಲ್ಲಿ ಕರ್ನಾಟಕ ಹಿಂದುಳಿಯಲು ಕಾರಣವೇನು?


ಪ್ರಮುಖವಾಗಿ ಹೇಳುವುದಾದರೆ, ಈಜುಪಟುಗಳು ಶಾಲಾ ಮಟ್ಟದಲ್ಲಿ ಓದುವಾಗ ಕ್ರೀಡೆಯ ಬಗ್ಗೆ ತೋರಿಸುವ ಆಸಕ್ತಿಯನ್ನು ಕಾಲೇಜು ಹಂತದಲ್ಲಿ ತೋರಿಸುವುದಿಲ್ಲ. ಇದಕ್ಕೆ ಅನೇಕ ಕಾರಣಗಳಿವೆ.ಏನು ಆ ಕಾರಣಗಳು?

ಮುಖ್ಯವಾಗಿ ಸರ್ಕಾರ ಹಾಗೂ ಪೋಷಕರ ಬೆಂಬಲ ಲಭಿಸದೇ ಇರುವುದು. ಮಕ್ಕಳ ಬೆಳವಣಿಗೆಗೆ ಪಾಲಕರು ಮುಂದಾದರೂ, ಶಾಲೆಗಳಿಂದ ಪ್ರೋತ್ಸಾಹ ಲಭಿಸದೇ ಇದ್ದರೆ ಈಜುಪಟುಗಳು ತಾನೆ ಏನು ಮಾಡುತ್ತಾರೆ.ಈ ಸಮಸ್ಯೆ ನೀಗಿಸಲು ಸಾಧ್ಯವಿಲ್ಲವೇ?

ಖಂಡಿತಾ ಇದೆ. ಕ್ರೀಡಾಕೂಟಗಳಲ್ಲಿ ಪಾಲ್ಗೊಳ್ಳುವ ಸ್ಪರ್ಧಿಗಳಿಗೆ ಹಾಜರಾತಿ ನೀಡಬೇಕು. ರಾಷ್ಟ್ರೀಯ, ಅಂತರರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಿದ್ದರೆ, ಅವರಿಗೆ ಪ್ರತ್ಯೇಕವಾಗಿ ಪರೀಕ್ಷೆ ನಡೆಸುವಂತಹ ವ್ಯವಸ್ಥೆ ಮಾಡಬೇಕು. ಪಾಲಕರ ಪಾತ್ರ ಏನು?

ಕ್ರೀಡೆಯಲ್ಲಿಯೇ ಮುಂದುವರಿದರೆ ಉದ್ಯೋಗ ಲಭಿಸುವುದಿಲ್ಲ. ಬದುಕಿಗೆ ಭದ್ರತೆ ಸಿಗುವುದಿಲ್ಲ ಎನ್ನುವುದು ಕ್ರೀಡಾಪಟುಗಳ ಪಾಲಕರಿಗೆ ಚೆನ್ನಾಗಿ ಗೊತ್ತಿದೆ. ಆದ್ದರಿಂದ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಪದಕ ಜಯಿಸಿದರೆ ಬಹುಮಾನ ನೀಡಬೇಕು. ಸರ್ಕಾರ ಉದ್ಯೋಗಗಳ ಅವಕಾಶವನ್ನೂ  ಸೃಷ್ಟಿಸಬೇಕು.

ಪ್ರದೀಪ್ ಕುಮಾರ್

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.