ಮಂಗಳವಾರ, ಮೇ 24, 2022
25 °C

ಈಜು ಕಲಿಕೆಯ ಮೋಜು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಈಜು ಪರಿಪೂರ್ಣ ವ್ಯಾಯಾಮ ಎಂದು ತಜ್ಞರು ಬಣ್ಣಿಸಿದ್ದಾರೆ. ಬಿಸಿಲು ಏರುತ್ತಿರುವ ಈ ದಿನಗಳಲ್ಲಿ ಈಜು ಕೊಡುವ ಖುಷಿ ಅಷ್ಟಿಷ್ಟಲ್ಲ. ಜತೆಗೆ ಇಡೀ ದೇಹಕ್ಕೆ ವ್ಯಾಯಾಮದ ಹಿತಾನುಭವವನ್ನೂ ನೀಡುತ್ತದೆ. ಅದಕ್ಕಾಗಿಯೇ ಎಲ್ಲ ವಯೋಮಾನದವರಿಗೆ ಈಜು ಕಲಿಸಲು ಹಂಪಿನಗರದಲ್ಲಿರುವ (ಆರ್‌ಪಿಸಿ ಬಡಾವಣೆ) ಮಹಾನಗರ ಪಾಲಿಕೆಯ ವಿಜಯನಗರ ಈಜುಕೊಳ ಸಜ್ಜಾಗಿದೆ.ಸಾಮಾನ್ಯ ಈಜು ಕಲಿಸುವುದರ ಜತೆಗೆ ರಾಜ್ಯ ಮತ್ತು ರಾಷ್ಟ್ರಮಟ್ಟದ ಈಜು ಸ್ಪರ್ಧೆಗಳಲ್ಲಿ ಸ್ಪರ್ಧಿಸಲು ಮಕ್ಕಳಿಗೆ ವೃತ್ತಿಪರ ತರಬೇತಿಯನ್ನೂ ನೀಡಲು ‘ವಿಜಯನಗರ ಸ್ವಿಮ್ ಸೆಂಟರ್’ ಏಪ್ರಿಲ್‌ನಿಂದ ಜೂನ್‌ವರೆಗೆ ಸತತವಾಗಿ ಬೇಸಿಗೆ ವಿಶೇಷ ಈಜು ಶಿಬಿರಗಳನ್ನು ಹಮ್ಮಿಕೊಂಡಿದೆ.ಸೂಕ್ತ ನಿರ್ವಹಣೆ ಇಲ್ಲದೇ ಹಾಳು ಸುರಿಯುತ್ತಿದ್ದ ಈ ಈಜುಕೊಳ, ಕಳೆದ ಹತ್ತು ತಿಂಗಳಿಂದ ಈಜುಪ್ರೇಮಿಗಳ ನೆಚ್ಚಿನ ತಾಣವಾಗಿ ಬದಲಾಗಿದೆ.

ಈಜುಕೊಳದ ನಿರ್ವಹಣೆಯ ಗುತ್ತಿಗೆ ಪಡೆದಿರುವ ಸೆಂಟರ್‌ನ ಮುಖ್ಯಸ್ಥ ಎ.ಕುಮಾರ್, ‘ನೀರು ಸದಾ ಸ್ಪಟಿಕ ಸ್ಪಷ್ಟವಾಗಿರುವಂತೆ ನಿರ್ವಹಣೆ ಮಾಡುತ್ತಿದ್ದೇವೆ. ಜತೆಗೆ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಿದ್ದೇವೆ. ಎಲ್ಲಕ್ಕಿಂತ ಮುಖ್ಯವಾಗಿ ಈಜು ಅಭ್ಯಾಸಿಗಳ ಸುರಕ್ಷತೆಗೆ ಕ್ರಮ ತೆಗೆದುಕೊಂಡಿದ್ದೇವೆ’ ಎಂದು ಹೇಳುತ್ತಾರೆ.‘ಎರಡು ತಿಂಗಳ ಹಿಂದೆ ಈ ಕೊಳದಲ್ಲಿ ರಾಜ್ಯ ಮಟ್ಟದ ಈಜು ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಕರ್ನಾಟಕ ಸ್ವಿಮ್ಮಿಂಗ್ ಅಸೋಸಿಯೇಷನ್‌ನ ಮಾನ್ಯತೆಯನ್ನೂ ಪಡೆದುಕೊಳ್ಳಲಾಗಿದೆ. ಸ್ಪರ್ಧಾತ್ಮಕ ಈಜಿಗೆ ಪೂರಕವಾಗಿ ಅಭ್ಯಾಸ ಮಾಡಲು ಜಿಮ್ ಸೌಕರ್ಯವನ್ನು ವ್ಯವಸ್ಥೆ ಮಾಡಲಾಗಿದೆ. ಅನುಭವಿ ಮತ್ತು ನುರಿತ ಕೋಚ್‌ಗಳು ಮಾರ್ಗದರ್ಶನ ಮತ್ತು ತರಬೇತಿ ನೀಡಲಿದ್ದಾರೆ’ ಎಂದು ಅವರು ತಿಳಿಸುತ್ತಾರೆ.‘ಏಪ್ರಿಲ್ 1ರಿಂದ 24ರವರೆಗೆ ಒಂದನೇ ಶಿಬಿರ, 26ರಿಂದ ಮೇ 19ರವರೆಗೆ ಎರಡನೇ ಹಾಗೂ ಮೇ 20ರಿಂದ ಜೂನ್ 12ರವರೆಗೆ ಮೂರನೇ ಶಿಬಿರ ಏರ್ಪಡಿಸಲಾಗಿದೆ. ಶಿಬಿರದ ಅವಧಿಯಲ್ಲಿ ಮಕ್ಕಳಿಗಾಗಿ ಐದು ತಂಡಗಳಲ್ಲಿ, ಪುರುಷರಿಗೆ ಎರಡು ತಂಡಗಳಲ್ಲಿ ಹಾಗೂ ಮಹಿಳೆಯರಿಗೆ ಎರಡು ತಂಡಗಳಲ್ಲಿ ಪ್ರತ್ಯೇಕ ಈಜು ತರಬೇತಿ ತರಗತಿಗಳನ್ನು ನಡೆಸಲಾಗುವುದು’ ಎಂದು ಅವರು ವಿವರಿಸುತ್ತಾರೆ.ರಾಜಧಾನಿಯ ದಕ್ಷಿಣ ಮತ್ತು ಪಶ್ಚಿಮ ಭಾಗದ ಬಡಾವಣೆಗಳ ಜನರು ಈ ಅವಕಾಶವನ್ನು ಬಳಸಿಕೊಳ್ಳಬಹುದು.ವಿವರಗಳಿಗೆ: 99169 59701, 94492 85419, 2340 7604.    

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.