ಶನಿವಾರ, ಏಪ್ರಿಲ್ 10, 2021
30 °C

ಈದ್ ಉಲ್ ಫಿತರ್: ವಿಶೇಷ ಪ್ರಾರ್ಥನೆ, ಮೆರವಣಿಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಈದ್ ಉಲ್ ಫಿತರ್: ವಿಶೇಷ ಪ್ರಾರ್ಥನೆ, ಮೆರವಣಿಗೆ

ಚಿಂತಾಮಣಿ: ಈದ್ ಉಲ್ ಫಿತರ್ ಹಬ್ಬವನ್ನು ಮುಸ್ಲಿಮರು ಸೋಮವಾರ ತಾಲ್ಲೂಕಿನಾದ್ಯಂತ ಸಂಭ್ರಮದಿಂದ ಆಚರಿಸಿದರು. ಹೊಸ ಬಟ್ಟೆ ತೊಟ್ಟು ಪರಸ್ಪರ ಈದ್ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಳ್ಳುತ್ತಿದ್ದ ದೃಶ್ಯ ಎಲ್ಲೆಡೆ ಸಾಮಾನ್ಯವಾಗಿತ್ತು.ನಗರದ ವಿವಿಧ ಮಸೀದಿಗಳಲ್ಲಿ ವಿಶೇಷ ಪ್ರಾರ್ಥನೆ ಹಾಗೂ ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಯಿತು. ನಂತರ ಬಾಗೇಪಲ್ಲಿ ರಸ್ತೆಯಲ್ಲಿ ಈದ್ಗಾ ಮೈದಾನಕ್ಕೆ ತೆರಳಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಹಜರತ್ ಮೌಲಾನ, ಶಫಿ ಉರ್ ರೆಹಮಾನ್ ರಜ್ವೀ ಕುರಾನ್ ಸಂದೇಶ ಕುರಿತು ಮಾತನಾಡಿದರು.ಪ್ರಾರ್ಥನೆಯಲ್ಲಿ ಎಲ್ಲರು ಒಟ್ಟಾಗಿ ಭುಜಕ್ಕೆ ಭುಜ ತಾಗಿಸಿ ವಿನಮ್ರ ಭಾವದಿಂದ ನಮಾಜ್ ಮಾಡುವ ದೃಶ್ಯ ವಿಹಂಗಮವಾಗಿತ್ತು. ಶಾಂತಿ, ಸೌಹಾರ್ದತೆಯ ಸಂಕೇತದಂತೆ ಒಬ್ಬರಿಗೊಬ್ಬರು ಅಪ್ಪಿಕೊಳ್ಳುವುದರ ಮೂಲಕ ಸೌಹಾರ್ದತೆ ಸಂದೇಶ ಸಾರಿದರು.ತಾಲ್ಲೂಕಿನ ಹಲವೆಡೆ ಶ್ರೀಮಂತರು ಬಡವರಿಗೆ ಬಟ್ಟೆ, ದಾನ್ಯಗಳನ್ನು ದಾನ ನೀಡಿದರು. ನಂತರ ಅನೇಕ ಕಡೆ ಇಫ್ತಿಯಾರ್ ಕೂಟಗಳಿಗೆ ಸಾಮೂಹಿಕ ಆಮಂತ್ರಣಗಳು ಸಾಮಾನ್ಯವಾಗಿದ್ದವು.  ತಾಲ್ಲೂಕಿನಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.ಬಡವರಿಗೆ ಆರ್ಥಿಕ ನೆರವು

ಗೌರಿಬಿದನೂರು:
ತಾಲ್ಲೂಕಿನಾದ್ಯಂತ ಸೋಮವಾರ ಈದ್-ಉಲ್-ಫಿತರ್ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು. ಮುಸ್ಲಿಮ್ ಸಮುದಾಯದ ಮುಖಂಡರು, ಹಿರಿಯರು ಮತ್ತು ಕಿರಿಯರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ವಿಶಾಲವಾದ ಈದ್ಗಾ ಮೈದಾನದಲ್ಲಿ ಎಲ್ಲರೂ ಜೊತೆಗೂಡಿ ಪ್ರಾರ್ಥಿಸಿದರು.ತಾಲ್ಲೂಕಿನ ಅಲೀಪುರ, ಪೊತೇನಹಳ್ಳಿ ಪಟ್ಟಣದ ಉಡಮಲೋಡು ಈದ್ಗಾ ಮೈದಾನ ಮತ್ತು ಹಿರೇಬಿದನೂರು ದರ್ಗಾ ಮತ್ತಿತರ ಕಡೆ ಶ್ರದ್ಧಾಭಕ್ತಿಯಿಂದ ಹಬ್ಬ ಆಚರಿಸಿದರು. ರಂಜಾನ್ ತಿಂಗಳು ಪೂರ್ಣಗೊಳಿಸಿದ ಸಂಭ್ರಮದಲ್ಲಿ ಪರಸ್ಪರ ಶುಭ ಹಾರೈಸಿದರು.ಹೊಸ ಉಡುಪುಗಳನ್ನು ಧರಿಸಿದ್ದ ಮುಸ್ಲಿಮರು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು. ಬಳಿಕ ಮಧುಗಿರಿ ರಸ್ತೆ ಮೂಲಕ ಪಟ್ಟಣ ಹೊರವಲಯದ ಉಡುಮಲೋಡು ಈದ್ಗಾ ಮೈದಾನಕ್ಕೆ ತೆರಳಿದರು. ವಿಶಾಲವಾದ ಮೈದಾನದಲ್ಲಿ ನೆರೆದ ಅವರು ಪ್ರಾರ್ಥನೆ ಸಲ್ಲಿಸಿದರು. ಮಕ್ಕಳು ಸಹ ಪಾಲ್ಗೊಂಡು ನಮಾಜು ಮಾಡಿದ್ದು ವಿಶೇಷವಾಗಿತ್ತು. ಬಳಿಕ ಬಡವರಿಗೆ, ನಿರ್ಗತಿಕರಿಗೆ  ಆರ್ಥಿಕ ನೆರವು ನೀಡಲಾಯಿತು. ಆಹಾರ ಪದಾರ್ಥ ವಿತರಿಸಲಾಯಿತು.`ಇಡೀ ತಿಂಗಳು ರೋಜಾ ಉಪವಾಸ ಆಚರಿಸುವ ನಾವು ಚಂದ್ರನನ್ನು ನೋಡಿದ ಬಳಿಕ ಈದ್-ಉಲ್-ಫಿತರ್ ಹಬ್ಬ ಆಚರಿಸುತ್ತೇವೆ. ನಮ್ಮ ಸಮುದಾಯದವರಿಗೆ ಇದು ಪವಿತ್ರ ಹಬ್ಬ. ಈ ದಿನ ನಾವೆಲ್ಲರೂ ಹೊಸ ಬಟ್ಟೆ ತೊಟ್ಟು ಈದ್ಗಾ ಮೈದಾನಕ್ಕೆ ತೆರಳಿ ವಿಶೇಷ ಪ್ರಾರ್ಥನೆ ಸಲ್ಲಿಸುತ್ತೇವೆ. ಮಕ್ಕಳನ್ನು ಮೈದಾನಕ್ಕೆ ಕರೆದೊಯ್ಯುತ್ತೇವೆ. ಸಮೀಪದ ಸ್ಮಶಾನಕ್ಕೆ ತೆರಳಿ ಅಗಲಿದ ಸಂಬಂಧಿಕರಿಗೆ ಗೌರವ ಸಲ್ಲಿಸುತ್ತೇವೆ~ ಎಂದು ಮುಖಂಡ ಸಲೀಮ್ ಅಹಮದ್ ತಿಳಿಸಿದರು.ಹಿಂದೂ- ಮುಸ್ಲಿಂ ಏಕತೆ

ಬಾಗೇಪಲ್ಲಿ:
ಈದ್ ಉಲ್ ಫಿತರ್ ಹಬ್ಬದ ಪ್ರಯುಕ್ತ ಸೋಮವಾರ ಮುಸ್ಲಿಮರು ಪಟ್ಟಣದ ಕೊಡಿಕೊಂಡ ರಸ್ತೆಯಲ್ಲಿರುವ ಈದ್ಗಾ ಮೈದಾನದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.ಪಟ್ಟಣದಲ್ಲಿರುವ ವಿವಿಧ ಮಸೀದಿಗಳಲ್ಲಿ ಮುಸ್ಲಿಮರು ಪ್ರಾರ್ಥನೆ ಸಲ್ಲಿಸಿದರು. ನಂತರ ಮುಖ್ಯರಸ್ತೆಗಳಲ್ಲಿ ಸಂಚರಿಸಿ, ಕೊಡಿಕೊಂಡ ರಸ್ತೆಯಲ್ಲಿರುವ ಈದ್ಗಾ ಮೈದಾನದಲ್ಲಿ ಸೇರಿದರು. ತೀರಿಹೋದ ಕುಟುಂಬ ಸದಸ್ಯರ ಸಮಾಧಿ ಎದುರು ಪ್ರಾರ್ಥನೆ ಸಲ್ಲಿಸಿದರು.ವಿಶೇಷ ಪ್ರಾರ್ಥನೆ ಬಳಿಕ ಜಾಮೀಯಾ ಮಸೀದಿ ಧರ್ಮಗುರು ಹಜರತ್ ಜಾಫರ್ ಹುಸೇನ್ ಮಾತನಾಡಿ, ಈದ್ ಉಲ್ ಫಿತರ್ ಹಬ್ಬ ಶಾಂತಿ, ಸೌಹಾರ್ದತೆಯ ಪ್ರತೀಕ. ಹಿಂದೂ-ಮುಸ್ಲಿಮರು ಏಕತೆಯಿಂದ ಇರಬೇಕು. ಶ್ರೀಮಂತರು ಬಡವರಿಗೆ ಸಹಾಯ ಮಾಡಬೇಕು. ಶಾಂತಿ ಕದಡುವ ವದಂತಿಗಳಿಗೆ ಕಿವಿಗೊಡಬಾರದು ಎಂದರು.ಮುಖ್ಯಾಧಿಕಾರಿ ಶ್ರೀಕಾಂತ್ ಮಾತನಾಡಿ, ಪುರಸಭೆ ಎಸ್‌ಎಫ್‌ಸಿ ಅನುದಾನದ ಅಲ್ಪಸಂಖ್ಯಾತ ಸದಸ್ಯರ ನಿಧಿಯಲ್ಲಿ 9 ಲಕ್ಷ  ರೂಪಾಯಿ ವೆಚ್ಚ ಮಾಡಿ ಈದ್ಗಾ ಮೈದಾನಕ್ಕೆ ತಡೆಗೋಡೆ ಹಾಗೂ ಸಿಮೆಂಟ್ ರಸ್ತೆ ನಿರ್ಮಿಸಲಾಗಿದೆ ಎಂದರು.   ಕೊಡಿಕೊಂಡ ರಸ್ತೆಯಲ್ಲಿ ಅಪಾರ ಸಂಖ್ಯೆಯಲ್ಲಿ ಜನ ಸೇರಿದ್ದರಿಂದ ಕೆಲ ಕಾಲ ರಸ್ತೆ ಸಂಚಾರ ಅಸ್ತವ್ಯಸ್ತವಾಗಿತ್ತು. ಈದ್ಗಾ ಮೈದಾನದಲ್ಲಿ ಎರಡು ಸಾವಿರಕ್ಕೂ ಹೆಚ್ಚು ಮುಸ್ಲಿಮರು ಪ್ರಾರ್ಥನೆ ಸಲ್ಲಿಸಿದರು. ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.ರುಹುಲ್ ಇಸ್ಲಾಂ ಮದರಾಸ ಮುಖ್ಯಸ್ಥ ಹಜರತ್ ನಜೀರ್, ಪುರಸಭೆ ಉಪಾಧ್ಯಕ್ಷ  ಮಹ್ಮದ್ ಜಾಕೀರ್, ಸದಸ್ಯರಾದ ಅಬ್ದುಲ್ ಮಜೀದ್, ಮಹಮದ್ ಎಸ್.ನೂರುಲ್ಲಾ, ಕಲೀಮುಲ್ಲಾ, ಸೇರಿದಂತೆ ವಿವಿಧ ಮಸೀದಿಗಳ ಮುಖ್ಯಸ್ಥರು, ಅಲ್ಪಸಂಖ್ಯಾತರ ಸಂಘ-ಸಂಸ್ಥೆ ಪದಾಧಿಕಾರಿಗಳು  ಪ್ರಾರ್ಥನೆಯಲ್ಲಿ ಪಾಲ್ಗೊಂಡಿದ್ದರು.

ವಿಶಿಷ್ಟ ಖಾದ್ಯ, ತಿನಿಸು

ಶಿಡ್ಲಘಟ್ಟ:
ಅತ್ತರ್‌ನ ಘಮಲು, ಬಣ್ಣಬಣ್ಣದ ಹೊಸ ಉಡುಪುಗಳು, ಕೈಗಳಿಗೆ ಬಳೆ, ಮುಡಿದ ಮಲ್ಲಿಗೆ ಹೂ, ಮನೆಯಲ್ಲಿ ತಯಾರಾದ ಖಾದ್ಯಗಳು, ತಂದೆ ಕೈ ಹಿಡಿದು ಪ್ರಾರ್ಥನೆಗೆ ತೆರಳುತ್ತಿದ್ದ ಪುಟ್ಟ ಮಕ್ಕಳು...ಈದ್-ಉಲ್-ಫಿತರ್ ಹಬ್ಬದ ಸಂಭ್ರಮದ ಪ್ರತೀಕವಾಗಿ ಪಟ್ಟಣದಲ್ಲಿ ಸೋಮವಾರ ಕಂಡುಬಂದವು.ಗಂಡಸರು ಮತ್ತು ಮಕ್ಕಳು ಎಲ್ಲರೂ ಕೋಟೆ ವೃತ್ತದಲ್ಲಿ ಕಲೆತು `ನಾರೆ ತಕ್ಬೀರ್, ಅಲ್ಲಾ ಹು ಅಕ್ಬರ್~ ಎಂದು ಘೋಷಣೆ ಕೂಗುತ್ತಾ ಬೈಪಾಸ್ ರಸ್ತೆಯಲ್ಲಿರುವ ಈದ್ಗಾ ಮೈದಾನಕ್ಕೆ ತೆರಳಿದರು. ಈದ್ಗಾ ಮೈದಾನದಲ್ಲಿ ಧಾರ್ಮಿಕ ಗುರುಗಳ ಮಾರ್ಗದರ್ಶನದಲ್ಲಿ ಸಾಮೂಹಿಕ ಪ್ರಾರ್ಥನೆ ನಡೆಸಲಾಯಿತು.ಈದ್ ನಮಾಜು ಮುಗಿದ ಕೂಡಲೇ ಇಮಾಮ್ ಅಥವಾ ಖತೀಬ್ ಕುತ್ಬಾ ಪ್ರವಚನವನ್ನು ಮುಖ್ಯ ಭಾಷಣಕಾರ ಮೈಲಾನಾ ತಬಾರಕ್ ಮಾಡಿದ್ದನ್ನು ಎಲ್ಲರೂ ಕೇಳಿದರು. ಪ್ರಾರ್ಥನೆ ನಂತರ ಗುಲಾಬಿ ಹೂಗಳ ಪಕಳೆ ಮತ್ತು ಮಲ್ಲಿಗೆ ಹೂಗಳನ್ನು ಕೊಂಡು ಕುಟುಂಬದಲ್ಲಿ ನಿಧನರಾಗಿದ್ದವರ ಸಮಾಧಿಗಳಿಗೆ ಹರಡಿ, ಊದುಕಡ್ಡಿ ಹಚ್ಚಿ ಪೂಜೆ ಸಲ್ಲಿಸಿದರು. ಬಡವರಿಗೆ ಈ ಸಂದರ್ಭದಲ್ಲಿ ದಾನ ಮಾಡಿದರು. ಪರಸ್ಪರ ಆಲಂಗಿಸಿ `ಈದ್ ಮುಬಾರಕ್~ ಎಂದು ಶುಭ ಹಾರೈಸಿದರು.ತಮ್ಮ ಹಿತೈಷಿಗಳು, ಸ್ನೇಹಿತರು, ಬಂಧು ಬಳಗದವರ ಮನೆಗಳಿಗೆ ಪರಸ್ಪರ ಭೇಟಿ ಮಾಡುವುದು, ಸಿಹಿತಿಂಡಿ, ಒಣ ಖರ್ಜೂರ, ಒಣ ದ್ರಾಕ್ಷಿ, ಗೋಡಂಬಿ ಮುಂತಾದವನ್ನು ಪರಸ್ಪರ ಹಂಚಿಕೊಳ್ಳುವುದೂ ನಡೆಯಿತು. ಮನೆಯಲ್ಲಿ ಬಿರಿಯಾನಿ, ಕಚುಂಬರ್, ಸೇವಿಯಾಂ, ಜಾಮೂನು, ದಾಲ್‌ಕಾ ಮೀಠಾ, ಫಾಲೂದಾ ಮುಂತಾದ ವಿಶೇಷ ಆಹಾರವನ್ನು ತಯಾರಿಸಿ ಸ್ನೇಹಿತರನ್ನು ಸಂಬಂಧಿಗಳನ್ನು ಕರೆದು ಉಣಬಡಿಸಿ, ಸಂತೋಷಪಡುವುದರ ಜೊತೆಗೆ ಮಕ್ಕಳಿಗೆ ಹಿರಿಯರು `ಈದಿ~ ಅಥವಾ ಹಣದ ಕೊಡುಗೆ ನೀಡುವ ಕ್ರಮವಿದೆ. ಈದಿ ಕೊಡದಿದ್ದಲ್ಲಿ ಹಿರಿಯರನ್ನು ಮಕ್ಕಳು ಪೀಡಿಸಿ, ಹಟ ಹಿಡಿದು ಪಡೆಯುವ ದೃಶ್ಯ ಸಾಮಾನ್ಯವಾಗಿತ್ತು.ಈ ಸಂದರ್ಭದಲ್ಲಿ ಹಾಜರಿದ್ದ ಶಾಸಕ ವಿ.ಮುನಿಯಪ್ಪ, ಹಬ್ಬಗಳು ಸಂಭ್ರಮಾಚರಣೆಯೊಂದಿಗೆ ಸೌಹಾರ್ದದ ಸಂಕೇತವಾದಾಗ ಮಾತ್ರ ಅರ್ಥಪೂರ್ಣವಾಗಿರುತ್ತದೆ. ಒಂದು ತಿಂಗಳ ಕಾಲ ಉಪವಾಸವಿದ್ದು, ದೇವರ ಪ್ರಾರ್ಥನೆ ಮಾಡುತ್ತಾ ಅಂತರಂಗ ಮತ್ತು ಬಹಿರಂಗ ಶುದ್ಧಿಗೆ ಪ್ರಯತ್ನಿಸುವ ಎಲ್ಲ ಬಂಧುಗಳಿಗೂ ದೇವರು ಒಳ್ಳೆಯದನ್ನು ಮಾಡಲಿ. ಸಮಾಜದ ಅಭಿವೃದ್ಧಿಗಾಗಿ ಶ್ರಮಿಸಲು ಧಾರ್ಮಿಕ ಮುಖಂಡರು ಕಿರಿಯರಿಗೆ ಮಾರ್ಗದರ್ಶನ ಮಾಡಬೇಕು. ಈದ್-ಉಲ್-ಫಿತರ್ ಹಬ್ಬದ ಮೂಲ ಆಶಯ ಈಡೇರಿಸಿ ಎಂದು ಹೇಳಿದರು. ಮೂವತ್ತು ದಿನಗಳ ಉಪವಾಸದ ಬಳಿಕ ರಂಜಾನ್ ತಿಂಗಳಿಗೆ `ಅಲ್ವಿದಾ~ ಅಥವಾ ವಿದಾಯ ಹೇಳಿ, ಶವ್ವಾಲ್ ತಿಂಗಳ ಮೊದಲ ಚಂದ್ರದರ್ಶನ ಈದ್-ಉಲ್-ಫಿತರ್ ಹಬ್ಬದ ಸಂಭ್ರಮವನ್ನು ತರುತ್ತದೆ.  ಈ ಹಬ್ಬವು ತಿಂದುಂಡು ಖುಷಿ ಪಡಲು ದೇವರು ಅನುಗ್ರಹಿಸಿದ ದಿನವೆಂದು ಪರಿಗಣಿಸಲಾಗುತ್ತದೆ. ಉಳ್ಳವರು ಖುಷಿ ಪಟ್ಟು ಆಚರಿಸುವುದರಿಂದ ಮಾತ್ರ ಹಬ್ಬ ಪರಿಪೂರ್ಣವಾಗುವುದಿಲ್ಲ. ಬಡವರಿಗೂ ಕೂಡ ಈ ಅವಕಾಶವನ್ನು ಕಲ್ಪಿಸಿಕೊಡುವುದು ಉಳ್ಳವರ ಕರ್ತವ್ಯ. ಆದುದರಿಂದ ನಿಯಮ ಪ್ರಕಾರ ತಾವು ತಿನ್ನುವ ಉತ್ತಮ ದರ್ಜೆಯ ಧಾನ್ಯ ಮತ್ತು ಅನುಕೂಲವಿರುವವನು, ಹಣವಿರುವವನು ನಿಗದಿಪಡಿಸಲಾದ ಮೊತ್ತವನ್ನು ಬಡವರಿಗೆ ಹಬ್ಬದ ಈದ್ ಪ್ರಾರ್ಥನೆಯ ಮೊದಲು `ಸದಕಾ~, `ಝಕಾತ್~, `ದಾನ ಮಾಡಬೇಕು~ ಎಂದು ಧಾರ್ಮಿಕ ಗುರು ಸಲ್ಮಾನ್ ರಜಾ ತಿಳಿಸಿದರು.ತಾ.ಪಂ. ಅಧ್ಯಕ್ಷ ವೇಣುಗೋಪಾಲ್, ಜಿಲ್ಲಾ ಪಂಚಾಯಿತಿ ಸದಸ್ಯ ಎಸ್.ಎಂ.ನಾರಾಯಣಸ್ವಾಮಿ, ಪುರಸಭೆ ಮಾಜಿ ಅಧ್ಯಕ್ಷ ಮುನಿಕೃಷ್ಣಪ್ಪ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಸುಬ್ರಮಣಿ, ಪುರಸಭೆ ಸದಸ್ಯರಾದ ಚಿಕ್ಕಮುನಿಯಪ್ಪ, ಸಮೀವುಲ್ಲಾ, ಮುಖಂಡರಾದ ಖಲೀಮುಲ್ಲಾ, ನಾಗರಾಜು, ಜಾಮಿಯಾ ಮಸೀದಿ ಅಧ್ಯಕ್ಷ ರಫೀಕ್ ಅಹ್ಮದ್, ಉಪಾಧ್ಯಕ್ಷ ತಾಜ್‌ಪಾಷ, ಅಬ್ದುಲ್ ಗಫೂರ್, ಸುಮೀರ್‌ಖಾನ್, ಮುಬಾರಕ್‌ಖಾನ್, ಅಮೀರ್‌ಜಾನ್, ಖದೀರ್, ಅನ್ವರ್, ಎಚ್.ಆರ್.ತಾಜ್, ನವಾಜ್, ರಷೀದ್  ಹಾಜರಿದ್ದರು.ಪರಸ್ಪರ ಶುಭಾಶಯ ವಿನಿಮಯ

ಗುಡಿಬಂಡೆ:
ಒಂದು ತಿಂಗಳ ರಂಜಾನ್ ಮಾಸದ ರೋಜಾ ಉಪವಾಸ ಪೂರ್ಣಗೊಳಿಸಿದ ಮುಸ್ಲಿಮರು, ಸೋಮವಾರ ಗುಡಿಬಂಡೆ ಪಟ್ಟಣದ ಈದ್ಗಾ ಮೈದಾನದಲ್ಲಿ ಈದ್ ಉಲ್ ಫಿತರ್‌ನ ವಿಶೇಷ ಪ್ರಾರ್ಥನೆ ಸಲ್ಲಿಸಿದರು.ಗುಡಿಬಂಡೆ ತಾಲ್ಲೂಕು ಕೋಮು ಸೌಹಾರ್ದತೆಗೆ ತನ್ನದೇ ಇತಿಹಾಸ ಹೊಂದಿದೆ. ಹಿಂದೂ- ಮುಸ್ಲಿಮರ ಹಬ್ಬ ಆಚರಣೆ ಸಂದರ್ಭದಲ್ಲಿ ಪರಸ್ಪರರು ಸಿಹಿ ವಿನಿಮಯ ಮಾಡಿಕೊಳ್ಳುತ್ತಾರೆ. ಈ ಸಂಪ್ರದಾಯದ ಮುಂದುವರಿಕೆಯಂತೆ ಪಟ್ಟಣದ ಮುಖ್ಯ ಬೀದಿಗಳಲ್ಲಿ ಮುಸ್ಲಿಮರಿಗೆ ಹಿಂದೂಗಳು ಈದ್ ಉಲ್ ಫಿತರ್‌ನ ಶುಭಾಶಯ ಕೋರಿದರು.ಹಬ್ಬದ ಪ್ರಯುಕ್ತ ಪುಟಾಣಿ ಮಕ್ಕಳು ಬಣ್ಣ ಬಣ್ಣದ ಬಟ್ಟೆಗಳನ್ನು ಧರಿಸಿ, ಹೆಣ್ಣು ಮಕ್ಕಳು ಮೆಹಂದಿ ಹಚ್ಚಿಕೊಂಡು, ವಿವಿಧ ಬಣ್ಣದ ಬಳೆಗಳನ್ನು ಧರಿಸಿದ್ದರು. ಬಂದು-ಮಿತ್ರರಿಗೆ ಸಿಹಿ ಹಂಚಿ ಹಬ್ಬ ಆಚರಿಸಿದರು.ಮೊದಲಿಗೆ ಪಟ್ಟಣದ ಈದ್ಗಾ ಮೈದಾನದಲ್ಲಿ ಮುಸ್ಲಿಮರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ನಂತರ ಮುಖ್ಯ ರಸ್ತೆಯಲ್ಲಿ ಮೆರವಣಿಗೆ ಹೊರಟು ಹಿರಿಯರ ಸಮಾಧಿಗಳ ಬಳಿ ಪ್ರಾರ್ಥನೆ ಸಲ್ಲಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.