ಭಾನುವಾರ, ಏಪ್ರಿಲ್ 11, 2021
25 °C

ಈದ್ ಸಂಭ್ರಮಕ್ಕೆ ಮಳೆ ಸಾಥ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಈದ್ ಸಂಭ್ರಮಕ್ಕೆ ಮಳೆ ಸಾಥ್

ಹುಬ್ಬಳ್ಳಿ: ಭಾನುವಾರವಷ್ಟೇ ಚಂದ್ರದರ್ಶನವನ್ನು ಮಾಡಿದ ಮುಸ್ಲಿಮರು ತಿಂಗಳಪರ್ಯಂತ ಆಚರಿಸಿಕೊಂಡು ಬಂದಿದ್ದ ರೋಜಾ (ಉಪವಾಸ) ಕೊನೆಗೊಳಿಸಿ, ಸೋಮವಾರ ಈದ್-ಉಲ್-ಪಿತ್ರ್ (ರಮ್ಜಾನ್ ಹಬ್ಬ)ವನ್ನು ಸಡಗರ ಹಾಗೂ ಶ್ರದ್ಧಾ-ಭಕ್ತಿಯಿಂದ ಆಚರಿಸಿದರು. ಆಗಾಗ ಸುರಿದ ತುಂತುರು ಮಳೆ ಈ ಸಂಭ್ರಮಕ್ಕೆ ಸಾಥ್ ಕೊಟ್ಟಿತು.ಶುಭ್ರ ಬಿಳಿಬಣ್ಣದ ಕುರ್ತಾ-ಪೈಜಾಮು ಮತ್ತು ತಲೆ ಮೇಲೊಂದು ಪ್ರಾರ್ಥನಾ ಟೋಪಿ ಧರಿಸಿಕೊಂಡು ಸಾವಿರ, ಸಾವಿರ ಸಂಖ್ಯೆಯಲ್ಲಿ ಅವಳಿನಗರದ ವಿವಿಧ ಈದ್ಗಾ ಮೈದಾನಗಳಲ್ಲಿ ಜಮಾಯಿಸಿದ್ದ ಅವರು, ಸಾಮೂಹಿಕ (ಈದ್ ನಮಾಜ್) ಪ್ರಾರ್ಥನೆ ಸಲ್ಲಿಸಿದರು. ಧರ್ಮಗುರುಗಳು ಹಬ್ಬದ ಸಂದೇಶ ನೀಡಿದರು. ಪ್ರಾರ್ಥನೆ ಮುಗಿದ ಬಳಿಕ ಪರಸ್ಪರ ಅಪ್ಪಿಕೊಂಡು ಎಲ್ಲರೂ ಈದ್ ಮುಬಾರಕ್ (ಶುಭಾಶಯ) ಹೇಳಿದರು.ಹಳೇ ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಪ್ರಾರ್ಥನೆ ಮುಗಿದ ಬಳಿಕ ಚನ್ನಮ್ಮ ಸರ್ಕಲ್ ಹತ್ತಿರದ ಈದ್ಗಾ ಮೈದಾನಕ್ಕೆ ಜನ ಪ್ರವಾಹವೇ ಹರಿದುಬಂತು. ಗದಗ ರಸ್ತೆಯಲ್ಲಿ ರೈಲ್ವೆ ಮೇಲ್ಸೇತುವೆವರೆಗೆ ಜನ ಕಿಕ್ಕಿರಿದು ತುಂಬಿದ್ದರು. ಕಣ್ಣು ಹಾಯಿಸಿದಷ್ಟು ದೂರ ಪ್ರಾರ್ಥನೆಗೆ ಸಿದ್ಧವಾಗಿ ಕುಳಿತ ಜನರೇ ಕಾಣುತ್ತಿದ್ದರು. 80ರ ಹರೆಯದ ವೃದ್ಧರಿಂದ 3-4 ವರ್ಷದ ಪುಟಾಣಿಗಳವರೆಗೆ ಎಲ್ಲ ವಯೋಮಾನದವರೂ ಅಲ್ಲಿ ನೆರೆದಿದ್ದರು.ಧರ್ಮ ಗುರುಗಳಿಂದ ಸಂದೇಶ ಬರುತ್ತಿದ್ದಂತೆಯೇ ಶಿಸ್ತಿನ ಸಿಪಾಯಿಗಳಂತೆ ಸೇರಿದ್ದ 30 ಸಾವಿರಕ್ಕೂ ಅಧಿಕ ಮಂದಿ ಏಕಕಾಲಕ್ಕೆ ಪ್ರಾರ್ಥನೆ ವಿಧಿ-ವಿಧಾನದಲ್ಲಿ ಪಾಲ್ಗೊಂಡರು. ಮುತುವಲ್ಲಿಗಳು ಪವಿತ್ರ ಕುರಾನ್ ಗ್ರಂಥದ ಸಾಲುಗಳನ್ನು ಪಠಿಸಿದರು. ಧರ್ಮಗುರುಗಳಾದ ಜಹಿರುದ್ದೀನ್ ಖಾಜಿ ಪ್ರಾರ್ಥನಾ ಕೈಂಕರ್ಯದ ನೇತೃತ್ವ ವಹಿಸಿದ್ದರು. ಪ್ರಾರ್ಥನೆ ಮುಗಿಯುತ್ತಿದ್ದಂತೆಯೇ ಅವರಿಗೆ ಶುಭಾಶಯ ಕೋರಲು ಜನ ಮುಗಿಬಿದ್ದರು.ಪವಿತ್ರ ಹಬ್ಬದ ದಿನವೇ ಅಸುನೀಗಿದ ಇಬ್ಬರು ವ್ಯಕ್ತಿಗಳಿಗೆ ಸದ್ಗತಿ ಸಿಗಲೆಂದು ಅವರ ಮೃತದೇಹ ಮುಂದಿಟ್ಟುಕೊಂಡು ಸಾಮೂಹಿಕವಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಪ್ರಾರ್ಥನೆ ಮುಗಿಯುವ ಸಲುವಾಗಿಯೇ ಕಾದಂತಿದ್ದ ಮಳೆ, ಜನ ನಮಾಜ್ ಮುಗಿಸಿ ಏಳುತ್ತಿದ್ದಂತೆಯೇ ಸಣ್ಣಗೆ ಸುರಿಯತೊಡಗಿತು. ಅಂತಹ ಹೂ ಮಳೆಯಲ್ಲೇ ಶುಭಾಶಯ ವಿನಿಮಯ ನಡೆಯಿತು.ಈದ್ಗಾ ಮೈದಾನದಲ್ಲಿ ಪ್ರಾರ್ಥನೆ ಮುಗಿಸಿದ ಬಳಿಕ ಮುಸ್ಲಿಂ ಸಮಾಜದ ಮುಖಂಡರೆಲ್ಲ  ಮೂರುಸಾವಿರ ಮಠಕ್ಕೆ ತೆರಳಿ ಫಲ-ಪುಷ್ಪ ಸಮರ್ಪಿಸಿ, ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಅವರ ಆಶೀರ್ವಾದ ಪಡೆದರು. ಸ್ವಾಮೀಜಿ ಎಲ್ಲ ಮುಸ್ಲಿಂ ಬಾಂಧವರಿಗೆ ಹಬ್ಬದ ಶುಭಾಶಯ ಕೋರಿದರು. ಭಾವೈಕ್ಯದಿಂದ ಬಾಳುವಂತೆಯೂ ಅವರು ಹರಸಿದರು. ಮನೆ-ಮನೆಗಳಲ್ಲಿ ಶೀರ್‌ಕುರ್ಮಾ (ಸುರ್‌ಕುರ್ಮಾ) ಪಾಯಸದ ಔತಣ ಕೂಟಗಳು ನಡೆದವು.ಈದ್ಗಾ ಮೈದಾನದಲ್ಲಿ ನಡೆದ ಪ್ರಾರ್ಥನೆಯಲ್ಲಿ ಅಂಜುಮನ್ ಏ ಇಸ್ಲಾಂನ ಅಧ್ಯಕ್ಷ ಜಬ್ಬಾರ್‌ಖಾನ್ ಹೊನ್ನಳ್ಳಿ, ಮುಖಂಡರಾದ ಎ.ಎಂ. ಹಿಂಡಸಗೇರಿ, ಯುಸೂಫ್ ಸವಣೂರ, ಇಸ್ಮಾಯಿಲ್ ಕಾಲೇಬುಡ್ಡೆ, ಅಲ್ತಾಫ್ ಹಳ್ಳೂರ, ಆರ್.ಜೆ. ಸಿಖಂದರ್, ಅಷ್ಪಾಕ್ ಕುಮಟಾಕರ್, ಅಲ್ಲಾವುದ್ದೀನ್ ವಿಜಾಪುರ, ಗೌಸ್ ಕಟ್ಟಿಮನಿ ಮತ್ತಿತರರು ಪಾಲ್ಗೊಂಡಿದ್ದರು.ಮೂರುಸಾವಿರ ಮಠದಲ್ಲಿ ನಡೆದ ಭಾವೈಕ್ಯ ಮಿಲನದಲ್ಲಿ ಮುಸ್ಲಿಂ ಸಮಾಜದ ಮುಖಂಡರಲ್ಲದೆ ವಿಧಾನ ಪರಿಷತ್ ಸದಸ್ಯ ಶ್ರೀನಿವಾಸ ಮಾನೆ, ಎಫ್.ಎಚ್. ಜಕ್ಕಪ್ಪನವರ, ವಿದ್ಯಾವರ್ಧಕ ಸಂಘದ ಗೌರವಾಧ್ಯಕ್ಷ ಅರವಿಂದ ಕುಬಸದ, ಕಾರ್ಯದರ್ಶಿ ಹನುಮಂತ ಶಿಗ್ಗಾಂವ, ಸದಾನಂದ ಡಂಗನವರ, ಅಮರೇಶ ಹಿಪ್ಪರಗಿ, ಪ್ರಸಾದ ಅಬ್ಬಯ್ಯ, ಅಂದಾನಪ್ಪ ಸಜ್ಜನರ ಮತ್ತಿತರರು ಭಾಗವಹಿಸಿದ್ದರು.ಈದ್ಗಾ ಮೈದಾನದಲ್ಲಿ ನಡೆದ ಪ್ರಾರ್ಥನೆ ಹಿನ್ನೆಲೆಯಲ್ಲಿ ಚನ್ನಮ್ಮ ಸರ್ಕಲ್‌ನಲ್ಲಿ ಸಂಚಾರ ನಿರ್ಬಂಧಿಸಿ, ವಾಹನಗಳ ಓಡಾಟದ ಮಾರ್ಗವನ್ನು ಬದಲಾಯಿಸಲಾಗಿತ್ತು. ಪೊಲೀಸ್ ಆಯುಕ್ತ ಡಾ. ಕೆ.ರಾಮಚಂದ್ರರಾವ್ ಅವರ ನೇತೃತ್ವದಲ್ಲಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.