ಭಾನುವಾರ, ಏಪ್ರಿಲ್ 11, 2021
22 °C

ಈಶಾನ್ಯ ರಾಜ್ಯದವರ ಮೇಲೆ ಹಲ್ಲೆ ಆರೋಪ: ಮೂವರ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಈಶಾನ್ಯ ರಾಜ್ಯದವರ ಮೇಲೆ ಹಲ್ಲೆ ಆರೋಪ: ಮೂವರ ಬಂಧನ

ಬೆಂಗಳೂರು: ಈಶಾನ್ಯ ರಾಜ್ಯಗಳ ಜನರ ಮೇಲೆ ಹಲ್ಲೆ ನಡೆಸಿರುವ ಆರೋಪದ ಮೇಲೆ ವಿಲ್ಸನ್‌ಗಾರ್ಡನ್ ಪೊಲೀಸರು ಶುಕ್ರವಾರ ಮೂವರು ಆರೋಪಿಗಳನ್ನು ಬಂಧಿಸಿದ್ದು, ವಿಚಾರಣೆ ಸಂಬಂಧ ಇಬ್ಬರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಅಲ್ಲದೇ, ಜೆ.ಪಿ.ನಗರ, ಅಶೋಕನಗರ, ಮೈಕೊಲೇಔಟ್ ಠಾಣೆಗಳಲ್ಲೂ ಪ್ರಕರಣಗಳು ದಾಖಲಾಗಿವೆ.ಅಬ್ರಾರ್ ಅಹಮ್ಮದ್, ವಿನಯ್, ಸಲ್ಮಾನ್ ಬಂಧಿತರು. ಅಂಥೋಣಿ ಮತ್ತು ಮುಬಾರಕ್ ಎಂಬುವರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಈ ಸಂಬಂಧ ಜಯನಗರದ ನಿವಾಸಿ ಲಿಯಾ ಲಿಯಾ ವೈಫೈ ಎಂಬುವರು ದೂರು ನೀಡಿದ್ದಾರೆ ಎಂದು ವಿಲ್ಸನ್‌ಗಾರ್ಡನ್ ಪೊಲೀಸರು ತಿಳಿಸಿದರು.`ಲಿಯಾ ಲಿಯಾ ವೈಫೈ ಅವರು ಮಲ್ಲೇಶ್ವರದ ಮಾಲ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರು ಮಧ್ಯಾಹ್ನ ತಮ್ಮ ಸ್ನೇಹಿತರಾದ ರಾಬರ್ಟ್ ಮತ್ತು ಲಿಯಾಂಗ್ ಔಫಾಂಗ್ ವಾಲ್ಟಿ ಅವರ ಜತೆ ಶಾಂತಿನಗರದಲ್ಲಿರುವ ಮಾಲ್‌ಗೆ ಶಾಪಿಂಗ್ ಮಾಡಲು ಹೋಗಿದ್ದರು. ಅದೇ ಮಾಲ್‌ನಲ್ಲಿ ಮಾರಾಟ ಪ್ರತಿನಿಧಿಯಾಗಿರುವ ಅಬ್ರಾರ್ ಅಹಮ್ಮದ್ ಸೇರಿದಂತೆ ಏಳೆಂಟು ಮಂದಿ ವೈಫೈ ಅವರ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬುದು ವಿಚಾರಣೆಯಿಂದ ಗೊತ್ತಾಗಿದೆ~ ಎಂದು ಪೊಲೀಸರು ಹೇಳಿದರು.`ವೈಫೈ ಮತ್ತು ಅವರ ಸ್ನೇಹಿತರು ಮಣಿಪುರ ಮೂಲದವರೆಂದು ತಿಳಿದ ಅಬ್ರಾರ್ ತನ್ನ ಸಹಚರರಿಗೆ ಕರೆ ಮಾಡಿ ಸ್ಥಳಕ್ಕೆ ಕರೆಸಿದ್ದಾನೆ. ನಂತರ ಅಬ್ರಾರ್, ವೈಫೈ ಅವರ ಬೆನ್ನಿಗೆ ಕಾಲಿನಿಂದ ಒದ್ದಿದ್ದಾನೆ.  ಅವರು ನೀಡಿದ ದೂರಿನನ್ವಯ ಆರೋಪಿಗಳನ್ನು ಬಂಧಿಸಲಾಯಿತು. ಹಲ್ಲೆ ನಡೆದಿರುವ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿದೆ. ಆ ಮಾಹಿತಿಯಿಂದ ಉಳಿದ ಆರೋಪಿಗಳ ಪತ್ತೆ ಕಾರ್ಯ ನಡೆಸಲಾಗುತ್ತಿದೆ~ ಎಂದು ಪೊಲೀಸರು ಹೇಳಿದ್ದಾರೆ.ಅಶೋಕನಗರ:
ಮುಸ್ಲಿಂ ಯುವಕರು ತಮ್ಮ ಮೇಲೆ ಹಲ್ಲೆ ನಡೆಸಿದರು ಎಂದು ಆರೋಪಿಸಿ ಡಾರ್ಜಿಲಿಂಗ್ ಮೂಲದ ವ್ಯಕ್ತಿಗಳು ಅಶೋಕನಗರ ಠಾಣೆಯಲ್ಲಿ ಶುಕ್ರವಾರ ದೂರು ನೀಡಿದ್ದಾರೆ.ನೀಲಸಂದ್ರದ ನಿವಾಸಿಗಳಾದ ಪ್ರಕಾಶ್ ರಾಯ್ (28), ಅಜಯ್ ಚಟ್ರಿ (29), ರಿಜೆನ್ ಗುರುಂಗ್ (27) ಮತ್ತು ಕುಮಾರ್ ಚೆಟ್ರಿ ಎಂಬುವರು ದೂರು ನೀಡಿದ್ದಾರೆ. ಅಂಗಡಿಗೆ ಹೋಗಿ ಮನೆಗೆ ಹಿಂದಿರುಗುತ್ತಿದ್ದ ನಮ್ಮನ್ನು ಇಬ್ಬರು ಮುಸ್ಲಿಂ ಯುವಕರು ಅಡ್ಡಗಟ್ಟಿದರು. ನಮ್ಮ ವಿವರಗಳನ್ನು ಪಡೆದ ಅವರು ರಾಜ್ಯಗಳಿಗೆ ವಾಪಸ್ ಹೋಗುವಂತೆ ಬೆದರಿಕೆ ಹಾಕಿದರು.

 

ಈ ವೇಳೆ ಅವರಿಂದ ತಪ್ಪಿಸಿಕೊಂಡು ಓಡಿದೆವು. ಆದರೆ, ನಮ್ಮನ್ನು ಬೆನ್ನಟ್ಟಿದ ಕಿಡಿಗೇಡಿಗಳು ಕಬ್ಬಿಣದ ಸಲಾಕೆಯಿಂದ ಹಲ್ಲೆ ನಡೆಸಿದರು ಎಂದು ದೂರಿದ್ದಾರೆ. ಕುಮಾರ್ ಚೆಟ್ರಿ ಅವರ ಮೊಣಕಾಲಿಗೆ ಗಾಯಗಳಾಗಿವೆ ಎಂದು ಅಶೋಕನಗರ ಪೊಲೀಸರು ತಿಳಿಸಿದ್ದಾರೆ.ಜೆ.ಪಿ.ನಗರ: ನಗರ ಬಿಟ್ಟು ಹೋಗಬೇಕೆಂದು ಬೆದರಿಕೆ ಕರೆಗಳು ಬರುತ್ತಿವೆ ಎಂದು ಆರೋಪಿಸಿ ಅಸ್ಸಾಂನ ರಾಜೀವ್ ನೇವಾರ್ ಎಂಬುವರು ಗುರುವಾರ ರಾತ್ರಿ ಜೆ.ಪಿ.ನಗರ ಠಾಣೆಯಲ್ಲಿ ದೂರು ನೀಡಿದ್ದಾರೆ.ರಾಜೀವ್ ಅವರು ಪುಟ್ಟೇನಹಳ್ಳಿಯಲ್ಲಿರುವ ರೆಸ್ಟೋರೆಂಟ್ ಒಂದರಲ್ಲಿ ಅಡುಗೆ ಕೆಲಸ ಮಾಡುತ್ತಿದ್ದಾರೆ. `ರಾತ್ರಿ ಹನ್ನೊಂದು ಗಂಟೆ ಸುಮಾರಿಗೆ ಐದಾರು ಬಾರಿ ಕರೆಗಳು ಬಂದಿವೆ. ನೀನು ಅಸ್ಸಾಂನವನು ಎಂದು ನಮಗೆ ಗೊತ್ತಿದೆ. 24 ಗಂಟೆಯೊಳಗೆ ನಗರ ತೊರೆಯದಿದ್ದರೆ ಪ್ರಾಣ ಕಳೆದುಕೊಳ್ಳಬೇಕಾಗುತ್ತದೆ ಎಂದು ಬೆದರಿಸಿರುವುದಾಗಿ ದೂರಿದ್ದಾರೆ~ ಎಂದು ಪೊಲೀಸರು ತಿಳಿಸಿದರು. ಪೊಲೀಸರು ಮೊಬೈಲ್ ಸಂಖ್ಯೆ ಪಡೆದು ತನಿಖೆ ನಡೆಸುತ್ತಿದ್ದಾರೆ.ಮೈಕೊಲೇಔಟ್: 
ಮತ್ತೊಂದು ಪ್ರಕರಣದಲ್ಲಿ ಡಾರ್ಜಿಲಿಂಗ್ ಮೂಲದ ರಾಜು ಎಂಬುವರು ಶುಕ್ರವಾರ ಮೈಕೊಲೇಔಟ್ ಠಾಣೆಯಲ್ಲಿ ದೂರು ನೀಡಿದ್ದಾರೆ.ರಾಜು ಅವರು ನಗರದ ಖಾಸಗಿ ಕಂಪೆನಿಯಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿದ್ದಾರೆ. `ಬಿಟಿಎಂ ಎರಡನೇ ಹಂತದಲ್ಲಿ ಆಗಸ್ಟ್ 15ರಂದು ಮೂವರು ಅಪರಿಚಿತರು ನನ್ನನ್ನು ಅಡ್ಡಗಟ್ಟಿದರು. ಆಗಸ್ಟ್ 20ರೊಳಗೆ ನಗರ ತೊರೆಯುವಂತೆ ಬೆದರಿಕೆ ಹಾಕಿದರು~ ಎಂದು ಅವರು ದೂರಿರುವುದಾಗಿ ಪೊಲೀಸರು ತಿಳಿಸಿದ್ದಾರೆ.`ಒಟ್ಟಿಗೆ ರಂಜಾನ್ ಆಚರಿಸೋಣ~

`ನಗರದಲ್ಲಿ ವಾಸವಿರುವ ಈಶಾನ್ಯ ರಾಜ್ಯಗಳ ಜನರ ಜತೆ ಮುಸ್ಲಿಂ ಸಮುದಾಯವಿದೆ. ಅವರು ಆತಂಕ ಪಡಬೇಕಾಗಿಲ್ಲ~ ಎಂದು ಸಮುದಾಯದ ಮುಖಂಡ ಸೈಫುಲ್ ಹಕ್ ಹೇಳಿದ್ದಾರೆ.ದಕ್ಷಿಣ ವಿಭಾಗದ ಪೊಲೀಸರು ಗುರುವಾರ ರಾತ್ರಿ ಜೆ.ಪಿ.ನಗರ ಠಾಣೆಯಲ್ಲಿ ಕರೆದಿದ್ದ ಸಭೆಯಲ್ಲಿ ಅವರು ಮಾತನಾಡಿದರು. `ಯಾವುದೋ ಒಂದು ವದಂತಿಯಿಂದ ಈಶಾನ್ಯ ರಾಜ್ಯದವರು ಆತಂಕ ಪಡುವುದರಲ್ಲಿ ಅರ್ಥವಿಲ್ಲ. ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ಕೊಡದೆ, ರಂಜಾನ್ ಒಟ್ಟಾಗಿ ಆಚರಿಸೋಣ~ ಎಂದು ಈಶಾನ್ಯ ರಾಜ್ಯಗಳ ಜನರಲ್ಲಿ ಮನವಿ ಮಾಡಿದರು.`ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವ ವಿಷಯಗಳ ಬಗ್ಗೆ ಆತಂಕಪಡಬೇಡಿ. ನಗರದಲ್ಲಿ ಎಲ್ಲಾ ಜಾತಿ, ಧರ್ಮದ ಜನ ವಾಸವಾಗಿದ್ದಾರೆ. ಇಲ್ಲಿನ ನಿವಾಸಿಗಳೆಲ್ಲಾ ಶಾಂತಿಯನ್ನೇ ಬಯಸುತ್ತಾರೆ. ನಿಮಗೆ ಯಾವುದೇ ರೀತಿಯ ತೊಂದರೆಯಾದರೆ ಪೊಲೀಸರಿಗೆ ತಿಳಿಸಿ. ನಾವು ನಿಮಗೆ ರಕ್ಷಣೆ ಕೊಡುತ್ತೇವೆ. ಇಂತಹ ಪರಿಸ್ಥಿತಿಗೆ ಕಾರಣರಾದವರನ್ನು ಪತ್ತೆ ಮಾಡಿ ಕಠಿಣ ಕ್ರಮ ಕೈಗೊಳ್ಳುತ್ತೇವೆ~ ಎಂದು ದಕ್ಷಿಣ ವಿಭಾಗದ ಡಿಸಿಪಿ ಸೋನಿಯಾ ನಾರಂಗ್ ಭರವಸೆ ನೀಡಿದರು.ಈಶಾನ್ಯ ರಾಜ್ಯಗಳ ಜನರಿಗೆ ಧೈರ್ಯ ತುಂಬುವ ಸಲುವಾಗಿ ನಗರದ ಬಹುತೇಕ ಠಾಣೆಗಳಲ್ಲಿ ಶುಕ್ರವಾರ ಈ ರೀತಿ ಶಾಂತಿ ಸಭೆಗಳು ನಡೆದವು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.