ಶುಕ್ರವಾರ, ಮೇ 7, 2021
26 °C

ಈ ಉಮ ಆ ಘಮ

-ಡಿ.ಕೆ. ರಮೇಶ್ Updated:

ಅಕ್ಷರ ಗಾತ್ರ : | |

ಅದು `ಮೊಗ್ಗಿನ ಮನಸ್ಸು' ಚಿತ್ರೀಕರಣದ ಸಂದರ್ಭ. ಸಹಕಲಾವಿದರನ್ನು ನಾಯಕನಟಿ ರಾಧಿಕಾ ಪಂಡಿತ್ ನೋಡುತ್ತಿದ್ದಾರೆ. ಆ ಕಲಾವಿದರದು ಒಂದಿಷ್ಟೇ ಹಣ, ಒಂದಿಷ್ಟೇ ನೆಮ್ಮದಿ ಎಂಬಂಥ ಬದುಕು. ನಟಿಸಿದರಷ್ಟೇ ಜೀವನೋಪಾಯ. ಕ್ಯಾಮೆರಾ ಚಾಲೂ ಆಗುತ್ತಿದ್ದಂತೆ ಜಗವನ್ನೇ ಮರೆಯುವ ಆ ಮಂದಿಯ ಕುರಿತು ಕರುಣೆ ಬೆರೆತ ಕುತೂಹಲ.ಆದರೆ ತಾನೂ ಸಹಕಲಾವಿದೆ ಆಗಬಹುದು ಎಂದು ರಾಧಿಕಾ ಎಣಿಸಿರಲಿಲ್ಲ. ಆ ದಿನ ಬಂದು ಬಿಟ್ಟಿತು. `ಕಡ್ಡಿಪುಡಿ' ನಿರ್ದೇಶಕ ಸೂರಿ ರಾಧಿಕಾರನ್ನು ಸಹಕಲಾವಿದೆಯನ್ನಾಗಿ ಮಾಡಿದರು. ಜೂನಿಯರ್ ಕಲಾವಿದರು ಬಡ್ತಿ ಪಡೆದು ದೊಡ್ಡ ನಟರಾಗುವುದು ಸಹಜ. ಆದರೆ ನಾಯಕಿಗೆ ಇದೆಂಥಾ ಗತಿ ಎನ್ನದಿರಿ. ರಾಧಿಕಾ ಚಿತ್ರದಲ್ಲಿ `ಸಹಕಲಾವಿದೆಯ' ಪಾತ್ರ ಮಾಡುತ್ತಿದ್ದಾರೆ.`ಕಡ್ಡಿಪುಡಿ'ಯ ಕತೆ ಕೇಳುತ್ತಿದ್ದಂತೆ ಅವರಿಗೆ ನೆನಪಾದದ್ದು `ಮೊಗ್ಗಿನ ಮನಸ್ಸು' ಚಿತ್ರೀಕರಣದ ದಿನಗಳು. ಸಹಕಲಾವಿದರ ಹಾಡುಪಾಡು ಮತ್ತೊಮ್ಮೆ ಕಣ್ಣಮುಂದೆ ಬಂದವು. ಚಿತ್ರರಂಗದ ಅಂಗವೇ ಆಗಿರುವ ಆ ಶ್ರಮಜೀವಿಗಳು ಮಾಯೆಯಲ್ಲಿ ತಮ್ಮ ಕತೆ ಹೇಳತೊಡಗಿದರು. `ಕಡ್ಡಿಪುಡಿ'ಯ ಉಮಾ ಕಣ್ತೆರೆಯತೊಡಗಿದಳು. ಅತ್ಯಂತ ಸಹಜವಾಗಿ, ವಾಸ್ತವಕ್ಕೆ ಹತ್ತಿರವಾಗಿ ಉಮಾ ಪಾತ್ರ ಮೂಡಿಬಂದಿದೆಯಂತೆ. ಅಲ್ಲಿ ರಾಧಿಕಾ ಕೇವಲ ಸಹಕಲಾವಿದೆಯೇ? ಖಂಡಿತಾ ಇಲ್ಲ. ಕತೆ ಬೆಳೆಯುತ್ತ ಹೋದಂತೆ ಉಮಾ ರೌಡಿ ಆನಂದನ ಮಡದಿಯಾಗುತ್ತಾಳೆ. ಸಂಸಾರದ ಏಳುಬೀಳುಗಳಲ್ಲಿ ಮುಳುಗೇಳುತ್ತಾಳೆ. ಅಲ್ಲಿಂದ ಪಾತ್ರ ಮತ್ತೊಂದು ಮಜಲಿಗೆ ಜಿಗಿಯುತ್ತದೆ. ಕ್ಲೈಮ್ಯಾಕ್ಸ್ ಹೊತ್ತಿಗೆ ಬೇರೊಬ್ಬ ಉಮಾ ಪ್ರೇಕ್ಷಕರ ಎದುರಿಗೆ ಬರುತ್ತಾಳೆ.ಶಿವರಾಜ್‌ಕುಮಾರ್ ಲಾಂಗು ಹಿಡಿದಿರುವ `ಕಡ್ಡಿಪುಡಿ'ಯಲ್ಲಿ ರಾಧಿಕಾರದು ಪ್ರೀತಿ- ಪ್ರೇಮದ ಪಥ. ಒರಟು ಕತೆಗೆ ಒಲವನ್ನು ಹದವಾಗಿ ಬೆರೆಸಲಾಗಿದೆಯಂತೆ. ಪಾತ್ರ ಎಷ್ಟು ಸಹಜವೆಂದರೆ ಎಲ್ಲಿಯೂ ಮೇಕಪ್ ಸ್ಪರ್ಶವಿಲ್ಲ. ಕಣ್ಣೆದುರೇ ಘಟನೆಗಳು ಹಾದು ಹೋಗುತ್ತಿವೆಯೇನೋ ಎಂಬಂಥ ಅನುಭವ. ರಾಧಿಕಾರ ಸಂಭಾಷಣೆಯೂ ಅಷ್ಟೇ ಸಹಜವಾಗಿವೆಯಂತೆ.`ಕೃಷ್ಣನ್ ಲವ್ ಸ್ಟೋರಿ'ಯಲ್ಲಿ ಇಂಥದ್ದೊಂದು ವಾಸ್ತವಕ್ಕೆ ಹತ್ತಿರವಾದ ಪಾತ್ರ ಮಾಡಿದ್ದರು ರಾಧಿಕಾ. ಅದು ಅವರ ವೃತ್ತಿಬದುಕಿನ ಮೈಲುಗಲ್ಲಾಗಿತ್ತು. ಚಿತ್ರದುದ್ದಕ್ಕೂ ಆವರಿಸಿಕೊಂಡು ಪ್ರೇಕ್ಷಕರ ಮನಗೆದ್ದಿದ್ದರು. ಈಗ ಉಮಾ ಆಗಿ ಏನು ಮಾಡುತ್ತಾರೆ ಎಂಬುದಕ್ಕೆ ಇದೇ ವಾರ ಉತ್ತರ ದೊರೆಯಲಿದೆ. ಜೂನ್ 7ರಂದು `ಕಡ್ಡಿಪುಡಿ' ತೆರೆ ಕಾಣಲಿದೆ.ಚಿತ್ರೀಕರಣದ ನೆನಪುಗಳಿಗೆ ಜಾರುತ್ತ ನಸು ನಕ್ಕರು ರಾಧಿಕಾ. ಒಂದು ಸನ್ನಿವೇಶದಲ್ಲಿ ಶಿವರಾಜ್‌ಕುಮಾರ್ ಬದಲಾಗಿ ರಾಧಿಕಾ ಲಾಂಗು ಹಿಡಿಯುತ್ತಾರೆ. ತುಂಬಾ ಭಾರವಾದ ಆಯುಧವನ್ನು ಹೇಗೆ ಹಿಡಿಯಬೇಕು ಎಂದು ಹೇಳಿಕೊಟ್ಟದ್ದು ಶಿವಣ್ಣನವರಂತೆ. ಆಗ `ಏನಿದು ಶಿವಣ್ಣನವರ ಟ್ರೇಡ್‌ಮಾರ್ಕ್ ನಿಮ್ಮ ಕೈಯಲ್ಲಿ!' ಎಂದು ರೇಗಿಸಿತ್ತು ಚಿತ್ರತಂಡ.ಹಾಡುಗಳ ಬಗ್ಗೆಯೂ ಅವರಿಗೆ ನಿರೀಕ್ಷೆಗಳಿವೆ. ಏಕೆಂದರೆ ಸೂರಿ ನೃತ್ಯನಿರ್ದೇಶಕರನ್ನು ಹೆಚ್ಚಾಗಿ ಬಳಸಿಕೊಂಡಿಲ್ಲ. ಅದೆಲ್ಲಾ ಸಹಜತೆಗೆ ಹತ್ತಿರವಾಗಿರಲಿ ಎಂಬ ತಂತ್ರ. ಶಿವರಾಜ್‌ಕುಮಾರ್ ಅವರೊಂದಿಗೆ ಅಭಿನಯಿಸುತ್ತಿರುವುದು ರಾಧಿಕಾರಿಗೆ ಮರೆಯಲಾಗದ ಅನುಭವ. ಶಿವಣ್ಣನ ಎನರ್ಜಿಯೆಲ್ಲಾ ಚಿತ್ರದಲ್ಲಿ ಧಾರೆಯಾಗಿ ಹರಿದಿದೆಯಂತೆ.ಇನ್ನು ಹೇಳಲೇಬೇಕಾದದ್ದು `ಮುಂಗಾರು ಮಳೆ' ಕೃಷ್ಣರ ಛಾಯಾಗ್ರಹಣ ಎಂದರು ರಾಧಿಕಾ. `ಡ್ರಾಮಾ'ದಲ್ಲಿ ಕೃಷ್ಣರ ಕ್ಯಾಮೆರಾವನ್ನು ಎದುರಿಸಿದ ಅನುಭವ ಅವರಿಗೆ. ಆದರೆ ಅಲ್ಲಿಯಂತೆ ತಮಾಷೆ ತುಂಟತನದ ಕತೆ ಇದಲ್ಲ. ಕಚ್ಚಾ ಕತೆಗೆ ತಕ್ಕಂಥ ಛಾಯಾಗ್ರಹಣದ ಮೋಡಿ ಇದೆಯಂತೆ. ಪ್ರತಿಭಾನ್ವಿತ ನಟಿ ಎಂದೇ ಗಾಂಧಿನಗರದಲ್ಲಿ ಹೆಸರಾದವರು ರಾಧಿಕಾ ಪಂಡಿತ್. ಕಳೆದ ವರ್ಷ ಬಿಡುಗಡೆಯಾದ ಅವರ `ಅಲೆಮಾರಿ', `ಬ್ರೇಕಿಂಗ್ ನ್ಯೂಸ್', `ಅದ್ದೂರಿ', `18ನೇ ಕ್ರಾಸ್', `ಸಾಗರ್', `ಡ್ರಾಮಾ' ಚಿತ್ರಗಳೂ ಇದನ್ನೇ ಹೇಳುತ್ತವೆ. ಆದರೆ ರಾಧಿಕಾ ಅವರಲ್ಲಿ ಹಲವು ಯಶಸ್ವಿ ಚಿತ್ರಗಳ ಹಮ್ಮುಬಿಮ್ಮಿನಲ್ಲೇನೂ ಇಲ್ಲ. ಪ್ರತಿ ಪಾತ್ರವೂ ಹೊಸತನ್ನು ಕಲಿಸುತ್ತದೆ ಎಂದು ವಿಧೇಯ ವಿದ್ಯಾರ್ಥಿಯಂತೆ ನುಡಿಯುವ ಅವರು ಸದ್ಯಕ್ಕೆ `ಬಹದ್ದೂರ್' ಚಿತ್ರೀಕರಣದಲ್ಲಿ ಮುಳುಗಿದ್ದಾರೆ. ಹಾಡುಗಳ ಚಿತ್ರೀಕರಣ ಮುಗಿಸಿರುವ `ದಿಲ್‌ವಾಲಾ' ಅವರ ಮತ್ತೊಂದು ಹೊಸ ಚಿತ್ರ. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.