ಸೋಮವಾರ, ಮೇ 17, 2021
27 °C

ಈ ಮಾರ್ಗ ಯಮನೂರಿಗೆ ರಹದಾರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಿರಿಯೂರು: ತಾಲ್ಲೂಕಿನ ಗ್ರಾಮಾಂತರ ಪ್ರದೇಶಗಳಿಗೆ ಹಿರಿಯೂರಿನಿಂದ ಸಂಚರಿಸುವ ಖಾಸಗಿ ಬಸ್‌ಗಳಿಗೆ ಸಾರಿಗೆ ಇಲಾಖೆ ಸೂಚಿಸಿರುವ ಮಾರ್ಗಸೂಚಿ ನೇರವಾಗಿ ಯಮಪುರಿಗೆ ರಹದಾರಿ ತೋರಿಸುವಂತಿದೆ ಎಂದು ಖಾಸಗಿ ಬಸ್ ಮಾಲೀಕರು ಹಾಗೂ ಸಾರ್ವಜನಿಕರು ಆರೋಪಿಸುತ್ತಿದ್ದಾರೆ.ನಗರದ ಖಾಸಗಿ ಬಸ್ ನಿಲ್ದಾಣದಿಂದ ಹೊರಡುವ ಬಸ್‌ಗಳು ತೇರುಮಲ್ಲೇಶ್ವರ ದೇಗುಲ- ವೇದಾವತಿ ನದಿ- ರಾಷ್ಟ್ರೀಯ ಹೆದ್ದಾರಿ 4- ಬಬ್ಬೂರು-ಮಸ್ಕಲ್ ಮಾರ್ಗವಾಗಿ ಧರ್ಮಪುರ ಹಾಗೂ ಆಲೂರು ಮಾರ್ಗವಾಗಿ ಶಿರಾ ಮತ್ತು ವೇದಾವತಿ ನದಿ ಮಾರ್ಗವಾಗಿ ಚಳ್ಳಕೆರೆಗೆ ಹೋಗಲು ಬಸ್ ರಹದಾರಿಗೆ ಅನುಮತಿ ಕೋರಿ ಕೆಲವು ಖಾಸಗಿ ಬಸ್ ಮಾಲೀಕರು ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ಅರ್ಜಿ ಗುಜರಾಯಿಸಿರುವುದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.ಬಸ್ ಮಾಲೀಕರು ರಹದಾರಿ ಕೋರಿರುವ ಮಾರ್ಗ ವಾಹನ ಸಂಚಾರಕ್ಕೆ ಯೋಗ್ಯವಾಗಿದೆಯೇ ಇಲ್ಲವೇ? ಪ್ರಯಾಣಿಕರ ಸುರಕ್ಷಿತತೆ ಸಾಧ್ಯವೆ? ಅಪಘಾತ ವಲಯಗಳನ್ನು ಗುರುತಿಸಲಾಗಿದೆಯೇ? ಎಂಬ ಬಗ್ಗೆ ಸಾರಿಗೆ ಇಲಾಖೆ ಅಧಿಕಾರಿಗಳು ಸಮೀಕ್ಷೆ ನಡೆಸಿ, ಮಾಹಿತಿ ಪಡೆದ ನಂತರ ರಹದಾರಿ ನೀಡಬೇಕು ಎನ್ನುವುದು ಸಾರ್ವಜನಿಕರ ಒತ್ತಾಯವಾಗಿದೆ.ಬ್ರಿಟಿಷರ ಕಾಲದಲ್ಲಿ ಬೀದರ್- ಶ್ರೀರಂಗಪಟ್ಟಣಗಳ ನಡುವೆ ಸಂಪರ್ಕ ಕಲ್ಪಿಸಲು ವೇದಾವತಿ ನದಿಗೆ ಅಡ್ಡಲಾಗಿ ಬೃಹತ್ ಗಾತ್ರದ ಸೇತುವೆ ನಿರ್ಮಿಸಲಾಗಿತ್ತು.ಅದೇ ಸಂದರ್ಭದಲ್ಲಿ ಸದರಿ ಸೇತುವೆಗೆ ಪರ್ಯಾಯವಾಗಿರಲಿ ಎಂದು ನಗರದ ಸಿದ್ಧನಾಯಕ ವೃತ್ತದ ಸಮೀಪ ಪ್ರಧಾನ ಸೇತುವೆಗೆ 1 ಕೀ.ಮೀ. ದೂರದಲ್ಲಿ ಮತ್ತೊಂದು ಸೇತುವೆ ನಿರ್ಮಿಸಲಾಗಿತ್ತು. ಇದರಿಂದ ಬಬ್ಬೂರು, ಬಬ್ಬೂರು ಫಾರಂ, ಆಲೂರು, ಕಸವನಹಳ್ಳಿ ಮೊದಲಾದ ಹಳ್ಳಿಗಳ ಜನರಿಗೆ ನಗರಕ್ಕೆ ಬಂದು ಹೋಗಲು ತುಂಬಾ ಅನುಕೂಲವಾಗಿತ್ತು.ದಿನಕಳೆದಂತೆ ಸೇತುವೆ ನಿರ್ವಹಣೆ ಮಾಡದ ಕಾರಣ ಸದರಿ ಸೇತುವೆ ಶಿಥಿಲವಾಗತೊಡಗಿತ್ತು. ದೊಡ್ಡ ವಾಹನಗಳಿರಲಿ, ದ್ವಿಚಕ್ರ ವಾಹನಗಳ ಓಡಾಟಕ್ಕೂ ತೊಂದರೆಯಾಯಿತು. ನಗರದ ಕಸವನ್ನೆಲ್ಲಾ ತಂದು ಸೇತುವೆಯ ಎರಡೂ ಬದಿಗೆ ಸುರಿಯತೊಡಗಿದ್ದರಿಂದ ಕಸ ಸಂಗ್ರಹಣೆಯ ಸ್ಥಳವಾಯಿತು.ಜತೆಗೆ ಕಟ್ಟಿಗೆಯಿಂದ ಇದ್ದಿಲು ತಯಾರಿಸುವ, ಸುಣ್ಣ ತಯಾರಿಸುವ ಕೆಲಸವೂ ಇಲ್ಲಿಯೇ ನಡೆಯುತ್ತದೆ. ಜೋರು ಮಳೆ ಬಂದು ನದಿ ತುಂಬಿ ಹರಿಯತೊಡಗಿದರೆ ಸಂಚಾರ ತಂತಾನೆ ಬಂದ್ ಆಗುವುದು ಸೇತುವೆಯ ಮತ್ತೊಂದು ವಿಶೇಷ.ಜೈನ, ಬ್ರಾಹ್ಮಣ, ವೈಶ್ಯ ಮೊದಲಾದ ಜನಾಂಗಗಳ ಸ್ಮಶಾನಗಳು ವೇದಾವತಿ ನದಿಯ ಆಚೆಗೆ ಇರುವ ಕಾರಣ ಮಳೆ ಬಂದಾಗ, ನದಿಯ ನೀರು ಕಡಿಮೆಯಾಗುವ ತನಕ ಕಾಯಬೇಕು. ಇಲ್ಲವಾದರೆ ಬೈಪಾಸ್ ರಸ್ತೆಯ ಮೂಲಕ3 ಕಿ.ಮೀ. ಹೆಚ್ಚು ದೂರ ಕ್ರಮಿಸಿ ಬರಬೇಕು.ವಾಸ್ತವ ಸಂಗತಿ ಹೀಗಿರುವಾಗ ಸದರಿ ಸೇತುವೆ ಮೇಲ್ಭಾಗದಲ್ಲಿ ಖಾಸಗಿ ಬಸ್‌ಗಳ ಓಡಾಟಕ್ಕೆ ರಹದಾರಿ ನೀಡುವುದು ಯಾವುದೇ ಕಾರಣಕ್ಕೂ ಯೋಗ್ಯವಲ್ಲ. ಮೊದಲು ನದಿಯ ಮೇಲೆ ಹೋಗುವ ರಸ್ತೆಯನ್ನು ಸರಿಪಡಿಸಬೇಕು.ಸದರಿ ರಸ್ತೆ ಹಿಂದೆ ಲೋಕೋಪಯೋಗಿ ಇಲಾಖೆಗೆ ಸೇರಿತ್ತು. ನಂತರ, ನೀರಾವರಿ ಇಲಾಖೆ ಲೋಕೋಪಯೋಗಿ ಇಲಾಖೆಯಿಂದ ಬೇರ್ಪಟ್ಟ ನಂತರ ನೀರಾವರಿ ಇಲಾಖೆಗೆ ಸೇರಿದೆ ಎಂದು ಮೂಲಗಳು ತಿಳಿಸುತ್ತವೆ. ಎರಡು ದಶಕಗಳ ಹಿಂದೆ ಇದೇ ವೇದಾವತಿ ನದಿಗೆ ಟಿ. ನಾಗೇನಹಳ್ಳಿ ಸಮೀಪ ಖಾಸಗಿ ಬಸ್ ಉರುಳಿ ಬಿದ್ದು, ಹತ್ತಾರು ಜನ ಸಾವನ್ನಪ್ಪಿದ್ದನ್ನು ತಾಲ್ಲೂಕಿನ ಜನತೆ ಮರೆತಿಲ್ಲ.ಸಾರಿಗೆ ಇಲಾಖೆ ಶಿಥಿಲವಾಗಿರುವ ಈ ಸೇತುವೆಯ ಮೇಲೆ ಬಸ್‌ಗಳ ಓಡಾಟಕ್ಕೆ ಅವಕಾಶ ನೀಡಿದರೆ ಅಪಾಯಕ್ಕೆ ಆಹ್ವಾನ ನೀಡಿದಂತೆ ಆಗುತ್ತದೆ. ಜಿಲ್ಲಾಧಿಕಾರಿ ಅವರು ಕೂಡಲೇ ಸಾರಿಗೆ ಪ್ರಾಧಿಕಾರದ ಅಧಿಕಾರಿಗಳಿಗೆ ಅಗತ್ಯ ಮಾರ್ಗದರ್ಶನ ನೀಡಬೇಕು ಎನ್ನುವುದು ಸಾರ್ವಜನಿಕರ ಆಗ್ರಹವಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.