ಗುರುವಾರ , ಏಪ್ರಿಲ್ 22, 2021
31 °C

ಉಕ್ಕು ಹಿಂದೆ ಸರಿದ ರೆಡ್ಡಿ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು:  ಗಣಿ ಧಣಿ, ಸಚಿವ ಜಿ. ಜನಾರ್ದನ ರೆಡ್ಡಿ ಅವರು ಗಣಿ ವ್ಯವಹಾರ ಹಾಗೂ ತಮ್ಮ ಹೊಸ ಉದ್ಯಮ ಯೋಜನೆಗೆ ಮಂಗಳ    ಹಾಡಲಿದ್ದಾರೆಯೇ?ವಿಧಾನ ಪರಿಷತ್ತಿನಲ್ಲಿ ಮಂಗಳವಾರ ಮಧ್ಯಾಹ್ನ ನಡೆದ ಕಲಾಪದಲ್ಲಿ ಸ್ವತಃ ರೆಡ್ಡಿ ಅವರೇ ಈ ವಿಷಯವನ್ನು ಹೊರಗೆಡವಿದರು. ಕಾಂಗ್ರೆಸ್ಸಿನ ಕೆ.ಸಿ. ಕೊಂಡಯ್ಯ ಅವರು ಸರ್ಕಾರದ ಗಣಿ ನೀತಿ ಬಗ್ಗೆ ಮಾತನಾಡುತ್ತಿದ್ದ ಸಂದರ್ಭದಲ್ಲಿ ಮಧ್ಯೆಪ್ರವೇಶಿಸಿದ ರೆಡ್ಡಿ ಅವರು, ‘ಇನ್ನು ಮುಂದೆ ಗಣಿ ಉದ್ಯಮ ಬಿಟ್ಟು, ಪೂರ್ಣ ಪ್ರಮಾಣದಲ್ಲಿ ರಾಜಕೀಯಕ್ಕೆ ಇಳಿಯುತ್ತೇನೆ. ಜನರ ಸೇವೆ ಮಾಡುತ್ತೇನೆ’ ಎಂದು ಪ್ರಕಟಿಸಿದರು.‘ಜೆಡಿಎಸ್‌ನ ಎಂ.ಸಿ. ನಾಣಯ್ಯ ಅವರ ಸರಳ ಜೀವನದಿಂದ ಪ್ರೇರಣೆಯಾಗಿ ಇಂತಹದೊಂದು ನಿರ್ಧಾರ ಕೈಗೊಂಡಿದ್ದೇನೆ’ ಎಂದು ಹೇಳಿ ಅವರು ಸದನವನ್ನು ಕ್ಷಣಕಾಲ ಚಕಿತ ಗೊಳಿಸಿದರು.ಇದಕ್ಕೂ ಮೊದಲು ಮಾತನಾಡಿದ ನಾಣಯ್ಯ ಅವರು, ‘ನಾನು ಇಲ್ಲಿಗೆ ಕೇವಲ ಮೂರು ಸೂಟ್   ಕೇಸ್‌ಗಳೊಂದಿಗೆ ಬಂದಿದ್ದೆ.ಈಗ ಮರಳಿ ಹೋಗಬೇಕಾದರೂ ಈ ಮೂರು ಸೂಟ್‌ಕೇಸ್‌ಗಳೇ ಸಾಕು’ ಎಂದು ತಮ್ಮ ಸರಳ ಜೀವನ ಕುರಿತು ಮಾತನಾಡಿದ್ದರು. ಇದನ್ನೇ ಉಲ್ಲೇಖಿಸಿದ ರೆಡ್ಡಿ ಅವರು, ‘ನಾನು ಕೂಡ ನಾಣಯ್ಯ ಅವರಂತೆ ಮೂರು ಸೂಟ್‌ಕೇಸ್‌ಗಳಲ್ಲಿ ಹೋಗುತ್ತೇನೆ’ ಎಂದರು.ಕಳೆದ ವರ್ಷ ಬೆಂಗಳೂರಿನಲ್ಲಿ ನಡೆದ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ವಿಶ್ವದ ಉಕ್ಕಿನ ದೊರೆ ಅನಿವಾಸಿ ಭಾರತೀಯ ಲಕ್ಷ್ಮಿ ಮಿತ್ತಲ್ ಅವರಿಗಿಂತಲೂ (ರೂ 30 ಸಾವಿರ ಕೋಟಿ) ಹೆಚ್ಚಿನ ಮೊತ್ತದ (ರೂ 36 ಸಾವಿರ ಕೋಟಿ) ಹೂಡಿಕೆಯನ್ನು ಮಾಡುವ ಬ್ರಹ್ಮಿಣಿ ಸ್ಟೀಲ್ಸ್ ಯೋಜನೆ ಕುರಿತ ಒಪ್ಪಂದದ ಮೂಲಕ ಜನಾರ್ದನ ರೆಡ್ಡಿ ಅವರು ಗಮನ ಸೆಳೆದಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.