ಶುಕ್ರವಾರ, ಮೇ 27, 2022
28 °C

`ಉಡುದಾರದ ಸಿ.ಎಂ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲೆ ಹಿಡಿತ ಸಾಧಿಸಲು ಕಾಂಗ್ರೆಸ್ ಹೈಕಮಾಂಡ್ ಸಮನ್ವಯ ಸಮಿತಿಯ ನೆಪದಲ್ಲಿ ಮೂಗುದಾರ ಹಾಕಲು ಹೊರಟಿದೆ ಎನ್ನುವ ಬಿಜೆಪಿಯ ಜಗದೀಶ ಶೆಟ್ಟರ್ ಅವರ ಆರೋಪ ವಿಧಾನಸಭೆಯಲ್ಲಿ ಮಂಗಳವಾರ ಸ್ವಾರಸ್ಯಕರ ಚರ್ಚೆಗೆ ಗ್ರಾಸ ನೀಡಿತು.`ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಇನ್ನೂ ಎರಡು ತಿಂಗಳಾಗಿದೆ. ಆಗಲೇ ಸಮನ್ವಯ ಸಮಿತಿ ರಚನೆ ಬಗ್ಗೆ ಹೇಳಿಕೆಗಳು ಬರುತ್ತಿವೆ. ಇಲ್ಲೇನು ಎರಡು ಪಕ್ಷಗಳ ಸರ್ಕಾರ ಇದೆಯೇ? ಯಾವ ಕಾರಣಕ್ಕೆ ಈ ನಿಯಂತ್ರಣ' ಎಂದು ಶೆಟ್ಟರ್ ಪ್ರಶ್ನೆ ಮಾಡಿದರು. ಇದರಿಂದ ಸಿಟ್ಟಾದ ಕಾಂಗ್ರೆಸ್ ಸದಸ್ಯರು, `ಸಮನ್ವಯ ಸಮಿತಿ ರಚಿಸಿದರೆ ನಿಮಗೇನು ಕಷ್ಟ' ಎಂದು ಪ್ರಶ್ನಿಸಿದರು.ಇದನ್ನು ಸಚಿವ ಆರ್.ವಿ.ದೇಶಪಾಂಡೆ ಏರುಧ್ವನಿಯಲ್ಲೇ ಕೇಳಿದರು. ಇದಕ್ಕೆ ಜೆಡಿಎಸ್‌ನ ರೇವಣ್ಣ ಮಾತನಾಡಿ, `ನಮಗೇನೂ ಕಷ್ಟ ಇಲ್ಲ. ಆದರೆ, ಸಿದ್ದರಾಮಯ್ಯ ಅವರನ್ನು ಅವಧಿಗೂ ಮುನ್ನವೇ ಅಧಿಕಾರದಿಂದ ಕೆಳಗಿಳಿಸುವ ಮುನ್ಸೂಚನೆ ಇದು. ಅವರು ಐದು ವರ್ಷ ಅಧಿಕಾರದಲ್ಲಿ ಇರಲಿ ಎನ್ನುವ ಆಸೆ ನಮ್ಮದು' ಎಂದು ಚಟಾಕಿ ಹಾರಿಸಿದರು.ದೇಶಪಾಂಡೆ ಮಾತನಾಡಿ, `ಐದು ವರ್ಷ ಏಕೆ? ಹತ್ತು ವರ್ಷ ಅಧಿಕಾರದಲ್ಲಿ ಇರಲಿ ಅಂಥ ಹೇಳಿ' ಎಂದು ರೇವಣ್ಣ ಅವರನ್ನು ಕೆಣಕಿದರು. ಹೀಗೆ ಚರ್ಚೆ ನಡೆಯುತ್ತಿದ್ದಾಗ ಕಾಂಗ್ರೆಸ್‌ನ ಬಸವರಾಜ ರಾಯರೆಡ್ಡಿ ಮಾತನಾಡಿ, `ನಮ್ಮ ಪಕ್ಷ ಮುಖ್ಯಮಂತ್ರಿಗೆ  ಮೂಗುದಾರವೂ ಹಾಕಿಲ್ಲ, ಶಿವದಾರವೂ ಹಾಕಿಲ್ಲ. ನೀವ್ಯಾಕೆ ಕಿರುಚಾಡುತ್ತೀರಿ' ಎಂದು ಬಿಜೆಪಿ ಸದಸ್ಯರನ್ನು ಕೆಣಕಿದರು.ಇದಕ್ಕೆ ಬಿಜೆಪಿಯ ಸಿ.ಟಿ.ರವಿ ಪ್ರತಿಕ್ರಿಯೆ ನೀಡಿ, `ಸಿದ್ದರಾಮಯ್ಯ ಮೂಗುದಾರದ ಮುಖ್ಯಮಂತ್ರಿಯೂ ಅಲ್ಲ, ಶಿವದಾರದ ಮುಖ್ಯಮಂತ್ರಿಯೂ ಅಲ್ಲ. ಅವರು ಉಡುದಾರದ ಮುಖ್ಯಮಂತ್ರಿ. ಹೀಗಾಗಿ ಅವರು ಯಾರ ಕೈಗೂ ಸಿಗುವುದಿಲ್ಲ' ಎಂದು ಹಾಸ್ಯಚಟಾಕಿ ಹಾರಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.