ಶುಕ್ರವಾರ, ಏಪ್ರಿಲ್ 23, 2021
27 °C

ಉಡುಪಿ ಜಿಲ್ಲೆ: ನೂರಕ್ಕೂ ಹೆಚ್ಚು ಮನೆ ಜಲಾವೃತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉಡುಪಿ: ಉಡುಪಿ ಜಿಲ್ಲೆಯಲ್ಲಿ ಐದು ದಿನಗಳಿಂದ ಸತತವಾಗಿ ಭಾರಿ ಪ್ರಮಾಣದಲ್ಲಿ ಮಳೆ ಸುರಿಯುತ್ತಿರುವುದರಿಂದ ಕೆಲವು ಗ್ರಾಮಗಳು ಜಲಾವೃತ್ತವಾಗಿದ್ದು, ಜಿಲ್ಲೆಯ ಹಲವು ಗ್ರಾಮಗಳಿಗೆ ನೆರೆ ಭೀತಿ ಎದುರಾಗಿದೆ.ಬ್ರಹ್ಮಾವರದ ಹಾವಂಜೆ ಗ್ರಾಮದ ಕಾರ್ತಿಬೈಲ್‌ನಲ್ಲಿ ನೆರೆ ಬಂದ ಪರಿಣಾಮ ಅಪಾಯಕ್ಕೆ ಸಿಲುಕಿದ್ದ ಐದು ಮಂದಿ ಮತ್ತು ಆರೂರಿನ ಬೆಳ್ಮಾರ್ ಗ್ರಾಮದಲ್ಲಿ ನೆರೆಗೆ ಸಿಲುಕಿದ್ದ 13 ಮಂದಿಯನ್ನು ಅಗ್ನಿಶಾಮಕ ಸಿಬ್ಬಂದಿ ಶುಕ್ರವಾರ ಬೆಳಿಗ್ಗೆ ರಕ್ಷಣೆ ಮಾಡಿದ್ದಾರೆ. ದೋಣಿ ಸಹಾಯದಿಂದ ನೆರೆಯಲ್ಲಿ ಸಿಲುಕಿದ್ದವರನ್ನು ರಕ್ಷಿಸಲಾಯಿತು ಎಂದು ಅಗ್ನಿಶಾಮಕ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.ಬ್ರಹ್ಮಾವರದ ಆರೂರು, ಬೆಳ್ಮಾರ್, ಕಾಚಿನಬುಡ ಗ್ರಾಮಗಳು ಈಗಾಗಲೇ ಜಲಾವೃತವಾಗಿವೆ. ನೀಲಾವರ ಗ್ರಾಮದ ಬಾಳ್ಕುದ್ರು, ರಾಮನಕುದ್ರು, ಹೇರೂರು ಹೇರಂಜೆ, ಜನ್ಸಾಲೆಬೆಟ್ಟು, ಹಾವಂಜೆ ಮತ್ತು ಪಡು ತೋನ್ಸೆ ಗ್ರಾಮಗಳಿಗೆ ನೆರೆ ಭೀತಿ ಎದುರಾಗಿದ್ದು ಜನರು ಆತಂಕಕ್ಕೆ ಒಳಗಾಗಿದ್ದಾರೆ. ಉಡುಪಿಯ ಮಥುರ ಛತ್ರದ ಬಳಿ ಮನೆಗಳಿಗೆ ರಾತ್ರಿ ನೀರು ನುಗ್ಗಿದ ಪರಿಣಾಮ ಜನರು ಪರದಾಡುವಂತಾಯಿತು. ಉದ್ಯಾವರದ ವಿಬುಧೇಶನಗರದಲ್ಲಿ ಸುಮಾರು 21 ಮನೆಗಳು ಜಲಾವೃತಗೊಂಡಿವೆ. ನಗರದ ಹೊರವಲಯದ ಅಲೆವೂರು, ಕರ್ವಾಲು ಗ್ರಾಮಗಳಲ್ಲಿ ಗದ್ದೆಗೆ ನೀರು ನುಗ್ಗಿ ನಷ್ಟ ಸಂಭವಿಸಿದೆ. ಜಿಲ್ಲೆಯ ನದಿ, ಹೊಳೆ, ತೊರೆಗಳು ಉಕ್ಕಿ ಹರಿಯುತ್ತಿವೆ. ಮಳೆಗಾಲ ಆರಂಭವಾಗಿ ಎರಡು ತಿಂಗಳ ಬಳಿಕ ಪ್ರವಾಹ ಬಂದಿದೆ.ಉಡುಪಿ ಜಿಲ್ಲೆಯಾದ್ಯಂತ ಶುಕ್ರವಾರವೂ ವರುಣವ ಆರ್ಭಟ ಮುಂದುವರಿದಿತ್ತು, ಉಡುಪಿ, ಕುಂದಾಪುರ ಮತ್ತು ಕಾರ್ಕಳ ತಾಲ್ಲೂಕಿನಲ್ಲಿ ಒಟ್ಟು 392.14 ಮಿ.ಮೀ ಮಳೆಯಾಗಿದೆ. ಉಡುಪಿಯಲ್ಲಿ ಅತಿ ಹೆಚ್ಚು ಅಂದರೆ 153.4 ಮಿ.ಮೀ, ಕುಂದಾಪುರದಲ್ಲಿ 117.4 ಮತ್ತು ಕಾರ್ಕಳದಲ್ಲಿ 122.6 ಮಿ.ಮೀ ಮಳೆಯಾಗಿದೆ. ಜಿಲ್ಲೆಯಲ್ಲಿ ಸರಾಸರಿ 132.8 ಮಿ.ಮೀ ಮಳೆಯಾಗಿದೆ.ಉಡುಪಿಯಲ್ಲಿ ನಸುಕಿನಲ್ಲಿಯೇ ಮಿಂಚು, ಗುಡುಗು ಸಹಿತ ಮಳೆ ಸುರಿಯಲಾರಂಭಿಸಿತು. ಮಳೆಯ ಪ್ರಮಾಣ ಹೆಚ್ಚಾಗುತ್ತಿರುವ ಕಾರಣ ಜನ ಜೀವನ ಸ್ವಲ್ಪ ಮಟ್ಟಿಗೆ ಅಸ್ತವ್ಯಸ್ತವಾಗಿದೆ. ಶುಕ್ರವಾರ ಭಾರಿ ಪ್ರಮಾಣದಲ್ಲಿ ಮಳೆಯಾಗುವ ನಿರೀಕ್ಷೆಯಿದ್ದ ಕಾರಣ ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯ ಎಲ್ಲ ಶಾಲೆಗಳಿಗೆ ರಜೆ ಘೋಷಿಸಲಾಗಿತ್ತು.`ಹೆಚ್ಚು ಮಳೆಯಾಗುವ ನಿರೀಕ್ಷೆಯಿದ್ದ ಕಾರಣ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿತ್ತು. ಮಳೆ ಮುಂದುವರಿದಿರುವುದರಿಂದ ಶನಿವಾರವೂ ಶಾಲೆಗಳಿಗೆ ರಜೆ ಘೋಷಿಸಲಾಗಿದೆ~ ಎಂದು ಶಿಕ್ಷಣ ಇಲಾಖೆ ಉಪ ನಿರ್ದೇಶಕ ಎಸ್. ನಾಗೇಂದ್ರ ಮಧ್ಯಸ್ಥ `ಪ್ರಜಾವಾಣಿ~ಗೆ ತಿಳಿಸಿದರು.`ಸ್ಥಳೀಯ ಪರಿಸ್ಥಿತಿಯನ್ನು ಅವಲೋಕಿಸಿ ರಜೆ ನೀಡುವ ಅಧಿಕಾರ ಆಯಾಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರಿಗೆ ಇದೆ. ಆದ್ದರಿಂದ ನಾನು ರಜೆ ಘೋಷಣೆ ಮಾಡುವ ಅಗತ್ಯ ಇಲ್ಲ. ರಜೆ ನೀಡಿದ ನಂತರ ಪ್ರಾಚಾರ್ಯರು ನನಗೆ ವರದಿ ಕಳುಹಿಸುತ್ತಾರೆ~ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಎಸ್.ಎಸ್ ಶಿಂಧಾ ಹೇಳಿದರು.ಮಳೆ- ನೆರೆ ಹಾನಿಗೆ ಸಂಬಂಧಿಸಿದಂತೆ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಅಗ್ನಿಶಾಮಕ ಸಿಬ್ಬಂದಿ, ಗೃಹ ರಕ್ಷಕ ಇಲಾಖೆಗೆ ಈಗಾಗಲೇ ಸೂಚನೆ ನೀಡಲಾಗಿದೆ. ಜೂನ್‌ನಲ್ಲಿ ಈ ಬಗ್ಗೆ ಸಭೆ ನಡೆಸಿ ಸ್ಪಷ್ಟ ನಿರ್ದೇಶನ ಕೊಡಲಾಗಿದೆ ಎಂದು ಜಿಲ್ಲಾಧಿಕಾರಿ ಕಚೇರಿ ಅಧಿಕಾರಿಗಳು ತಿಳಿಸಿದ್ದಾರೆ.ಮೀನುಗಾರಿಕೆಗೆ ಅಡ್ಡಿ ಇಲ್ಲ: ಮಳೆಯಿಂದಾಗಿ ಮೀನುಗಾರಿಕೆ ಮೇಲೂ ವ್ಯತಿರಿಕ್ತ ಪರಿಣಾಮ ಬೀರಿದೆ. ಆಳ ಸಮುದ್ರ ಮೀನುಗಾರಿಕೆ ಮಾಡುವವರ ಕಳೆದ 3ರಂದೇ ತೆರಳಿದ್ದಾರೆ. ಆದರೆ ನಾಡ ದೋಣಿ ಮೀನುಗಾರರು ಮಳೆಯ ಪರಿಣಾಮ ಮೀನುಗಾರಿಕೆಗೆ ತೆರಳಿಲ್ಲ. ಮಳೆ ಇದ್ದರೂ ಬಿರುಗಾಳಿ ಅಥವಾ ಯಾವುದೇ ರೀತಿಯ ಅಪಾಯದ ಬಗ್ಗೆ ಮುನ್ಸೂಚನೆ ಇಲ್ಲ ಎಂದು ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಹರೀಶ್ ಕುಮಾರ್ ಮಾಹಿತಿ ನೀಡಿದರು. ಆಳ ಮೀನುಗಾರಿಕೆಗೆ ತೆರಳಿರುವವರು ಮರಳುವುದು ಇನ್ನೂ ಕೆಲವು ದಿನಗಳಾಗುತ್ತದೆ. ಆ ನಂತರವಷ್ಟೇ ವ್ಯಾಪಾರ ಆರಂಭವಾಗಲಿದೆ ಎಂದು ಅವರು ಹೇಳಿದರು.ಕಾಪು ಪರಿಸರದಲ್ಲಿ ನೆರೆ

ಪಡುಬಿದ್ರಿ: ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಗೆ ತಗ್ಗುಪ್ರದೇಶಗಳು ಜಲಾವೃತಗೊಂಡಿದ್ದು, ಕೆಲವಡೆ ನೆರೆ ಉಂಟಾಗಿದೆ. ಕಾಪು, ಕಟಪಾಡಿ, ಉಚ್ಚಿಲ, ಎರ್ಮಾಳು, ಪಾಂಗಾಳ, ಹೆಜಮಾಡಿ, ಶಿರ್ವ, ಬಂಟಕಲ್ಲು ಪರಿಸರದಲ್ಲಿ ನೆರೆ ಉಂಟಾಗಿದೆ. ಗುರುವಾರ ದಿನಪೂರ್ತಿ ಸುರಿದ ಭಾರಿ ಮಳೆಗೆ ಶಿರ್ವ, ಕುತ್ಯಾರು, ಕಳತ್ತೂರು, ಪಡುಬೆಳ್ಳೆ ನದಿ ತೀರಗಳಲ್ಲಿ ನೆರೆ ಉಂಟಾಗಿದೆ.ಶುಕ್ರವಾರವೂ ಮಳೆ ಮುಂದುವರಿದುದರಿಂದ ನೆರೆಯ ನೀರಿನ ಮಟ್ಟ ಏರುತ್ತಿದೆ. ಶಿರ್ವ ವಿಜಯ ಬ್ಯಾಂಕ್  ಎದುರು ಮಹಾದೇವಿ ಭವನದ ಸಮೀಪ ಅಶ್ವತ್ಥಕಟ್ಟೆಯ ವೃಕ್ಷ ರಾತ್ರಿ ಸುರಿದ ಮಳೆಗಾಳಿಗೆ ಉರುಳಿ ಬಿದ್ದಿದೆ. ಪಡುಬೆಳ್ಳೆ ಮಹಾಲಿಂಗೇಶ್ವರ ದೇವಳದ ಸಮೀಪ ಪಾಪನಾಶಿನಿ ನದಿ ತುಂಬಿ ಹರಿಯುತ್ತಿದ್ದು ಭಟ್ರಮನೆ ಪ್ರದೇಶದ ತಗ್ಗು ಪ್ರದೇಶ ಬೈಲುಗದ್ದೆಗಳು ಮುಳುಗಡೆಯಾಗಿವೆ. ಮೂಡುಬೆಳ್ಳೆ, ಪಡುಬೆಳ್ಳೆ ರಸ್ತೆಯಲ್ಲಿ ನದಿ ನೀರು ತುಂಬಿ ರಸ್ತೆ ಸಂಚಾರ  ಸ್ಥಗಿತಗೊಂಡಿದೆ. ಮಣಿಪುರ, ಶಿರ್ವ, ಉದ್ಯಾವರ, ಕಟಪಾಡಿಯಲ್ಲೂ ನೆರೆ ಉಂಟಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.