ಮಂಗಳವಾರ, ಜೂನ್ 22, 2021
28 °C
ನಾಲ್ಕು ಬಾರಿ ಗೆದ್ದು ಐದನೇ ಬಾರಿ ಆಸ್ಕರ್‌ ಸೋಲು

ಉಡುಪಿ: : ಪಕ್ಷ ರಾಜಕಾರಣಕ್ಕಿಂತಲೂ ವ್ಯಕ್ತಿತ್ವಕ್ಕೆ ಮನ್ನಣೆ

ಎಂ. ನವೀನ್‌ ಕುಮಾರ್‌/ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉಡುಪಿ: ಉಡುಪಿ ಕ್ಷೇತ್ರ ಕಾಂಗ್ರೆಸ್‌ನ ಭದ್ರಕೋಟೆ ಎಂದು ಹೇಳಲಾಗುತ್ತದೆ. ಆದರೆ ಜನರು ಕೇವಲ ಪಕ್ಷವನ್ನು ನೋಡಿ ಮಾತ್ರ ಬೆಂಬಲ ನೀಡುತ್ತಿರಲಿಲ್ಲ. ವ್ಯಕ್ತಿ ಮತ್ತು ಆಯಾ ಕಾಲಘಟ್ಟಕ್ಕೆ ಅನುಗುಣವಾಗಿ ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತಿದ್ದರು ಎಂಬುದು ಉಡುಪಿ ಲೋಕಸಭಾ ಕ್ಷೇತ್ರದ ಚುನಾವಣಾ ಇತಿಹಾಸ ನೋಡಿದಾಗ ಮನದಟ್ಟಾಗುತ್ತದೆ.1957 ಮತ್ತು 1962ರ ಚುನಾವಣೆಯಲ್ಲಿ ಸತತ ಎರಡು ಬಾರಿ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಆಶೀರ್ವಾದ ಮಾಡಿದ್ದ ಇಲ್ಲಿನ ಮತದಾರ ಪ್ರಭುಗಳು, ಮೂರನೇ ಚುನಾವಣೆಯಲ್ಲಿ ಅಂದರೆ 1967ರಲ್ಲಿ ಸ್ವರಾಜ್ಯ ಪಕ್ಷದ (ಎಸ್‌ಡಬ್ಲ್ಯುಎ) ಜೆಎಂಎಲ್‌ ಲೋಬೊ ಅವರನ್ನು ಭಾರಿ ಮತಗಳ ಅಂತರದಿಂದ ಆಯ್ಕೆ ಮಾಡಿದ್ದನ್ನು ನೋಡಬಹುದು. ಲೋಬೊ ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್‌ನ ಎಸ್‌.ಎಸ್‌. ಕೊಳ್ಕೆಬೈಲ್‌ ಅವರನ್ನು ಶೇ10ಕ್ಕಿಂತ ಹೆಚ್ಚಿನ ಮತಗಳ ಅಂತರದಲ್ಲಿ (ಬಾಕ್ಸ್‌ ನೋಡಿ) ಸೋಲಿಸಿದ್ದರು.ಈ ಕ್ಷೇತ್ರದ ಮತದಾರರು ಜಾತಿ ಅಥವಾ ಧರ್ಮದ ಆಧಾರದಲ್ಲಿ ಮತ ಹಾಕುವುದಿಲ್ಲ ಎಂಬುದನ್ನು ಅದೇ ಚುನಾವಣೆ ಸಾಬೀತು ಮಾಡಿತ್ತು. ಅಲ್ಪಸಂಖ್ಯಾತ ಅಭ್ಯರ್ಥಿಯೊಬ್ಬರಿಗೆ ಮತ ನೀಡಿ ಗೆಲ್ಲಿಸುವ ಮೂಲಕ ನಿಜವಾದ ಪ್ರಜಾಪ್ರಭುತ್ವ ಎಂದರೆ ಏನು ಎಂಬುದನ್ನು ಉಡುಪಿ ಕ್ಷೇತ್ರದ ಜನರು ತೋರಿಸಿಕೊಟ್ಟಿದ್ದರು ಎಂದರೆ ತಪ್ಪಾಗಲಾರದು.ಕಾಂಗ್ರೆಸ್‌ ನಂತರದ ಆಯ್ಕೆಯಾಗಿದ್ದ ಪ್ರಜಾ ಸೋಷಿಯಲಿಸ್ಟ್‌ ಪಕ್ಷದ ಪ್ರಾಬಲ್ಯ ಕ್ರಮೇಣ ಕಡಿಮೆಯಾಯಿತು. ಮೊದಲ ಚುನಾವಣೆಯಲ್ಲಿ 93,451 ಮತ ಪಡೆದಿದ್ದ ಪಿಎಸ್‌ಪಿ, 1962ರಲ್ಲಿ 1,04,161 ಮತ ಪಡೆದರೆ, 1967ರಲ್ಲಿ 68,153 ಮತ ಮಾತ್ರ ಪಡೆಯಿತು. ಆ ನಂತರ ನಡೆದ ಚುನಾಣೆಗಳಲ್ಲಿ ಪಿಎಸ್‌ಪಿ ಸ್ಪರ್ಧಿಸಿಲ್ಲ.ಮೊದಲ ಚುನಾವಣೆಯಲ್ಲಿ ಕೇವಲ ಇಬ್ಬರು ಅಭ್ಯರ್ಥಿಗಳು ಸ್ಪರ್ಧಿಸಿದ್ದರೆ ಆ ನಂತರದಲ್ಲಿ ಆಕಾಂಕ್ಷಿಗಳ ಸಂಖ್ಯೆಯೂ ಹೆಚ್ಚುತ್ತ ಹೋಗಿದ್ದನ್ನು ನೋಡಬಹುದು. ಸ್ವತಂತ್ರವಾಗಿ ಸ್ಪರ್ಧಿಸುವವರ ಸಂಖ್ಯೆಯೂ ಹೆಚ್ಚಾಗಿದೆ.1971ರಲ್ಲಿ ನಡೆದ ಚುನಾವಣೆಯಲ್ಲಿ ಮತ್ತೆ ಕಾಂಗ್ರೆಸ್‌ ಪಕ್ಷವನ್ನು ಮತದಾರರು ಬೆಂಬಲಿಸಿದ್ದಾರೆ. ಪಿ. ರಂಗನಾಥ ಶೆಣೈ ಅವರಿಗೆ ಭಾರಿ ಅಂತರದ ಗೆಲುವು ಸಿಕ್ಕಿತ್ತು. ಶೆಣೈ ಅವರು 1,82,409 ಮತ ಪಡೆದರೆ ಅವರ ಸಮೀಪದ ಪ್ರತಿಸ್ಪರ್ಧಿ ಎಸ್‌ಡಬ್ಲ್ಯುಎ ಪಕ್ಷದ ಲೋಬೊ ಅವರು 54,644 ಮತ ಗಳಿಸಿದ್ದರು. ಶೇ 65.80ರಷ್ಟು ಮತವನ್ನು ರಂಗನಾಥ್‌ ಶೆಣೈ ಪಡೆದಿದ್ದರು. ಇದು ಉಡುಪಿ ಇತಿಹಾಸದಲ್ಲಿಯೇ ಅತ್ಯಂತ ಅಧಿಕ ಮತ ಗಳಿಕೆಯಾಗಿದೆ.1977ರ ಚುನಾವಣೆ ಬಹಳ ಮಹತ್ವದ್ದಾಗಿದೆ. ಏಕೆಂದರೆ ಈ ಚುನಾವಣೆಯಲ್ಲಿ ದೂರದೃಷ್ಟಿಯ ನಾಯಕ ಟಿ.ಎ. ಪೈ ಅವರು ಕಾಂಗ್ರೆಸ್‌ನಿಂದ ಮತ್ತು ಡಾ.ವಿ.ಎಸ್‌. ಆಚಾರ್ಯ ಅವರು ಭಾರತೀಯ ಲೋಕದಳದಿಂದ (ಬಿಎಲ್‌ಡಿ) ಕಣಕ್ಕಿಳಿದಿದ್ದರು.

2,24,788 ಮತವನ್ನು ಪಡೆದ ಪೈ ವಿಜೇತರಾದರೆ, ಆಚಾರ್ಯ ಅವರೂ 1,21,326  ಮತ ಪಡೆಯುವ ಮೂಲಕ ಮುಂದೊಂದು ದಿನ ರಾಜ್ಯ ಮಟ್ಟದ ನಾಯಕನಾಗಿ ಬೆಳೆಯುವ ಸೂಚನೆಯನ್ನು ಅಂದೇ ನೀಡಿದ್ದರು.ನಗರಸಭೆ ಸದಸ್ಯರಾಗಿದ್ದ ಆಸ್ಕರ್‌ ಫರ್ನಾಂಡಿಸ್‌ 1980ರ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ (ಐ) ಲೋಕಸಭೆಗೆ ಸ್ಪರ್ಧಿಸುವ ಮೂಲಕ ರಾಷ್ಟ್ರ ರಾಜಕಾರಣಕ್ಕೆ ಪದಾರ್ಪಣೆ ಮಾಡಿದರು. ಮೊದಲ ಚುನಾವಣೆಯಲ್ಲಿಯೇ ಭರ್ಜರಿ ಜಯವನ್ನು ಅವರು ದಾಖಲಿಸಿದ್ದರು. ಪರಾಜಿತ ಅಭ್ಯರ್ಥಿ ವಿ.ಎಸ್‌. ಆಚಾರ್ಯ ಅವರು 1,01,769 ಮತ ಪಡೆದರೆ, ಆಸ್ಕರ್‌ 2,19,969 ಮತ ಗಳಿಸಿದ್ದರು. ಸಂಸ್ಥಾ ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದ ಟಿ.ಎ. ಪೈ ಅವರು ಈ ಚುನಾವಣೆಯಲ್ಲಿ ಮೂರನೇ ಸ್ಥಾನಕ್ಕೆ ಸರಿಯಬೇಕಾಯಿತು.ಎಸ್‌ಡಬ್ಲ್ಯುಎ ಪಕ್ಷದಿಂದ ಸ್ಪರ್ಧಿಸಿ ಗೆದ್ದಿದ್ದ ಲೋಬೊ ಪ್ರಭು 77ರ ಚುನಾವಣೆಯಲ್ಲಿ ಸ್ವತಂತ್ರವಾಗಿ ಕಣಕ್ಕಿಳಿದು ಕೇವಲ 1451 ಮತ ಪಡೆದಿದ್ದರು ಎಂದರೆ ನಂಬಲೇಬೇಕು. ಆಸ್ಕರ್‌ ಅವರು ಸತತ ನಾಲ್ಕು ಬಾರಿ ಗೆದ್ದು ಐದನೇ ಬಾರಿ ಸೋಲುತ್ತಾರೆ. ಅಲ್ಲಿಂದಲೇ ಬಿಜೆಪಿಯ ಪ್ರಭಾವ ಆರಂಭವಾಗುತ್ತದೆ.

****ವರ್ಷ  ಮತದಾರರ ಸಂಖ್ಯೆ ಚಲಾವಣೆಯಾದ ಮತ ಶೇಕಡವಾರು

1962 4,23,300  2,41,479   57.05

ಅಭ್ಯರ್ಥಿಗಳು     ಪಕ್ಷ  ಪಡೆದ ಮತ  ಶೇಕಡವಾರು

ಯು. ಶ್ರೀನಿವಾಸ ಮಲ್ಯ   ಐಎನ್‌ಸಿ 1,17,027  50.01

ಡಿ. ಮೋಹನ್‌ ರಾವ್‌   ಪಿಎಸ್‌ಪಿ 1,04,161  44.51

ಟಿ. ವೆಂಕಟರಾವ್‌    ಸ್ವತಂತ್ರ 12,840  5.49

ವರ್ಷ  ಮತದಾರರ ಸಂಖ್ಯೆ ಚಲಾವಣೆಯಾದ ಮತ ಶೇಕಡವಾರು

1967 4,54,974  3.07,257   67.53

ಅಭ್ಯರ್ಥಿಗಳು     ಪಕ್ಷ  ಪಡೆದ ಮತ  ಶೇಕಡವಾರು

ಜೆ.ಎಂ.ಎಲ್‌. ಪ್ರಭು   ಎಸ್‌ಡಬ್ಲ್ಯುಎ 1,22,835  41.76

ಎಸ್‌.ಎಸ್‌. ಕೊಳ್ಕೆಬೈಲ್‌   ಐಎನ್‌ಸಿ  91,526  31.12

ವಿ.ಎಸ್‌. ಶೆಟ್ಟಿ    ಪಿಎಸ್‌ಪಿ 68,153  23.17

ಜಿ. ಉಪಾಧ್ಯ     ಸ್ವತಂತ್ರ 11,626  3.95

ವರ್ಷ  ಮತದಾರರ ಸಂಖ್ಯೆ ಚಲಾವಣೆಯಾದ ಮತ ಶೇಕಡವಾರು

1971 4,73,751  2.85,763   60.32

ಅಭ್ಯರ್ಥಿಗಳು     ಪಕ್ಷ  ಪಡೆದ ಮತ  ಶೇಕಡವಾರು

ಪಿ. ರಂಗನಾಥ ಶೆಣೈ    ಐಎನ್‌ಸಿ  1,82,409  65.80

ಜೆ.ಎಂ. ಲೋಬೊ ಪ್ರಭು   ಎಸ್‌ಡಬ್ಲ್ಯುಎ  54,644 19.71

ಸಂಜೀವಶೆಟ್ಟಿ ಕಿಲ್ಕೆಬೈಲ್‌   ಸ್ವತಂತ್ರ 30,391  10.96

ಪೆರೋಡಿ ವಿಠಲಶೆಟ್ಟಿ   ಸ್ವತಂತ್ರ 9,754  3.52

ವರ್ಷ  ಮತದಾರರ ಸಂಖ್ಯೆ ಚಲಾವಣೆಯಾದ ಮತ ಶೇಕಡವಾರು

1977 5,27,780  3.74,736   71

ಅಭ್ಯರ್ಥಿಗಳು     ಪಕ್ಷ  ಪಡೆದ ಮತ  ಶೇಕಡವಾರು

ಟಿ.ಎ. ಪೈ     ಐಎನ್‌ಸಿ  2,24,788  61.53

ವಿ.ಎಸ್‌. ಆಚಾರ್ಯ   ಬಿಎಲ್‌ಡಿ   1,21,326 33.21

ಯಶೋಧ ಆರ್ಮುಗಂ    ಸ್ವತಂತ್ರ 17,794  4.87

ಜೆ.ಎಂ. ಲೋಬೊ ಪ್ರಭು   ಸ್ವತಂತ್ರ 1451  0.40

ವರ್ಷ  ಮತದಾರರ ಸಂಖ್ಯೆ ಚಲಾವಣೆಯಾದ ಮತ ಶೇಕಡವಾರು

1980 6,05,699  4,30,824   71.13

ಅಭ್ಯರ್ಥಿಗಳು     ಪಕ್ಷ  ಪಡೆದ ಮತ  ಶೇಕಡವಾರು

ಆಸ್ಕರ್‌ ಫರ್ನಾಂಡಿಸ್‌   ಐಎನ್‌ಸಿ(ಐ) 2,19,969  49.20

ವಿ.ಎಸ್‌. ಆಚಾರ್ಯ   ಜೆಎನ್‌ಪಿ   1,01,769 24.03

ಟಿ.ಎ. ಪೈ      ಐಎನ್‌ಸಿ(ಯು) 59,972 14.16

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.