ಶನಿವಾರ, ಮೇ 15, 2021
22 °C

ಉತ್ತರ ಇರಾಕ್‌ನ ಯುವಕನಿಗೆ ಚಿಕಿತ್ಸೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮಿದುಳಿನ ಭಾಗದಲ್ಲಿ ಗುಂಡು ತೂರಿ ಹೊರಬಂದ ಪರಿಣಾಮ ಚಲನೆ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದ ಉತ್ತರ ಇರಾಕಿನ ಯುವಕನಿಗೆ ನಗರದ ಬಿಜಿಎಸ್ ಗ್ಲೋಬಲ್ ಆಸ್ಪತ್ರೆಯ ವೈದ್ಯರ ತಂಡ ಡೀಪ್ ಬ್ರೈನ್ ಸ್ಟಿಮ್ಯುಲೇಷನ್ ಚಿಕಿತ್ಸೆ ನೀಡಿದ್ದು, ಯುವಕನ ಆರೋಗ್ಯ ಸ್ಥಿತಿ ಸುಧಾರಿಸಿದೆ.ನಗರದಲ್ಲಿ ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಆಸ್ಪತ್ರೆಯ ಉಪಾಧ್ಯಕ್ಷ ಡಾ.ಎನ್.ಕೆ. ವೆಂಕಟರಮಣ, `ಉತ್ತರ ಇರಾಕ್‌ನ ಅಸುಲೇಮಾನಿಯಾ ಪ್ರದೇಶದ ಬಾವೆಲ್ ಫಾತಿ ಮಹಮ್ಮದ್ ಅವರು ಕೈ, ಕಾಲುಗಳ ಅಸಮರ್ಪಕ ಚಲನೆಯಿಂದ (ಡಿಸ್ಟೋನಿಯಾ) ಬಳಲುತ್ತಿದ್ದರು. ಬಲಗೈ ಮುಂದಕ್ಕೆ ಬಾಗಿತ್ತು. ಕಾಲುಗಳು ಹಿಂದಕ್ಕೆ ವಾಲಿದ್ದವು. ಬಲಗಾಲಿನ ಬೆರಳುಗಳು ಮಾತ್ರ ನೆಲಗೆ ತಗುಲುತ್ತಿತ್ತು~ ಎಂದು ಹೇಳಿದರು.`ಬಾವೆಲ್ ಅವರು ಎರಡು ವರ್ಷದ ಮಗುವಾಗಿದ್ದಾಗ ಅವರ ತಲೆಯ ಎಡ ಮೇಲ್ಭಾಗದಿಂದ ಒಳಗೆ ನುಗ್ಗಿದ ಗುಂಡು ಮಿದುಳಿನ ಒಳಗೆ ತೂರಿ ಕುತ್ತಿಗೆಯ ಹಿಂಭಾಗದಿಂದ ಹೊರಗೆ ಹೋಗಿತ್ತು. ಆ ಬಳಿಕ ಎರಡು ವರ್ಷ ಕಾಲ ಮಗುವಿಗೆ ಸ್ಥಳೀಯ ಆಸ್ಪತ್ರೆಗೆ ಚಿಕಿತ್ಸೆ ಕೊಡಿಸಲಾಯಿತು.ಏಳು ತಿಂಗಳ ಕಾಲ ಮಗು ಕೋಮಾ ಸ್ಥಿತಿಯಲ್ಲಿತ್ತು. ಅಲ್ಲಿಂದ ಮಗುವಿನ ದೇಹದಲ್ಲಿ ಅಂಗವೈಕಲ್ಯ ಕಾಣಿಸಿಕೊಳ್ಳಲಾರಂಭಿಸಿತು~ ಎಂದು ವಿವರಿಸಿದರು.`ಆ ಬಾಲಕನಿಗೆ ಈಗ 19 ವರ್ಷ. ಆತ ಆಸ್ಪತ್ರೆಗೆ ಬಂದಾಗ ಕೈಗಳನ್ನು ಬಳಸಲು ಕಷ್ಟಪಡುತ್ತಿದ್ದ. ಸರಿಯಾಗಿ ನಡೆಯಲು ಆಗುತ್ತಿರಲಿಲ್ಲ. ಕಣ್ಣುಗಳನ್ನು ತೆರೆಯಲು ಸಾಧ್ಯವಾಗುತ್ತಿರಲಿಲ್ಲ. ನಂತರ ಸಿ.ಟಿ ಮತ್ತು ಎಂಆರ್‌ಐ ಸ್ಕ್ಯಾನ್ ನಡೆಸಲಾಯಿತು.ತಲೆಯ ಎಡಭಾಗದಲ್ಲಿ ಒಂದು ಇಂಚು ಸುತ್ತಳತೆಯ ರಂಧ್ರ ಮಾಡಿ ಅದರ ಮೂಲಕ ಡಿಬಿಎಸ್ ಎಲೆಕ್ಟ್ರೋಡ್ ಅಳವಡಿಸಲಾಯಿತು. ಬಳಿಕ ಡಿಬಿಎಸ್ ಬ್ಯಾಟರಿಯನ್ನು ಭುಜದ ಮೂಳೆಯಡಿ ಸೃಷ್ಟಿಸಲಾದ ವಿಶೇಷ ಸ್ಥಾನದಲ್ಲಿ ಅಳವಡಿಸಲಾಗಿದ್ದು, ಎರಡನ್ನೂ ಸಂಪರ್ಕಿಸಲಾಗಿದೆ~ ಎಂದು ಮಾಹಿತಿ ನೀಡಿದರು.`ಮಿದುಳಿನ ಆಸಕ್ತಿಯನ್ನು ವೃದ್ಧಿಸುವ ಭಾಗವನ್ನು ಉತ್ತೇಜಿಸುವ ಸಲುವಾಗಿ ಬ್ಯಾಟರಿಯಿಂದ ವಿವಿಧ ವೋಲ್ಟೇಜ್‌ನ ವಿದ್ಯುತ್ ಪ್ರವಹಿಸಿ ಪರೀಕ್ಷಿಸಲಾಗುತ್ತಿದೆ. ಕೈಯಲ್ಲಿ ಹಿಡಿಯಬಹುದಾದ ಸಾಧನದ ಮೂಲಕ ಈ ಪ್ರಕ್ರಿಯೆಯನ್ನು ನಿಯಂತ್ರಿಸಲಾಗುವುದು~ ಎಂದರು.`ಬಾವೆಲ್‌ನ ದೇಹಸ್ಥಿತಿಯಲ್ಲಿ ಈಗ ಶೇ 40ರಷ್ಟು ಸುಧಾರಣೆ ಕಂಡುಬಂದಿದೆ. ಅವರ ನಡಿಗೆ ಶೈಲಿ ಬದಲಾಗಿದೆ. ಕೆಲ ತಿಂಗಳಲ್ಲೇ ಶೇ 90ರಷ್ಟು ಸುಧಾರಣೆ ಕಾಣುವ ನಿರೀಕ್ಷೆಯಿದೆ~ ಎಂದು ಹೇಳಿದರು.ಬಾವೆಲ್‌ಗೆ ಚಿಕಿತ್ಸೆ ನೀಡಿದ ನರರೋಗತಜ್ಞ ಡಾ.ಎಲ್.ಕೆ. ಪ್ರಶಾಂತ್, `ಮುಂದಿನ ಆರು ವಾರಗಳಲ್ಲಿ ಯುವಕನಲ್ಲಿ ಉಂಟಾಗುವ ಸುಧಾರಣೆಯನ್ನು ಗಮನಿಸಿ ಬಳಿಕ ಪ್ರೋಗ್ರಾಮಿಂಗ್ ಪ್ರಕ್ರಿಯೆಯನ್ನು ಅಂತಿಮಗೊಳಿಸಲಾಗುವುದು~ ಎಂದರು.ಬಾವೆಲ್‌ನ ತಾಯಿ ರೋಷ್ನಾ, `ಮಗನ ಚಿಕಿತ್ಸೆಗಾಗಿ ಹಲವು ರಾಷ್ಟ್ರಗಳ ತಜ್ಞರನ್ನು ಸಂಪರ್ಕಿಸಿದರೂ ಪ್ರಯೋಜನವಾಗಲಿಲ್ಲ. ಆದರೆ ಬಿಜಿಎಸ್ ಆಸ್ಪತ್ರೆಯ ವೈದ್ಯರು ಗುಣಮಟ್ಟದ ಚಿಕಿತ್ಸೆ ನೀಡಿದ್ದು, ಆತನಲ್ಲಿ ಸಾಕಷ್ಟು ಸುಧಾರಣೆ ಕಂಡುಬಂದಿದೆ. ಇದಕ್ಕಾಗಿ ವೈದ್ಯರಿಗೆ ಅಭಿನಂದನೆ ಸಲ್ಲಿಸುತ್ತೇನೆ~ ಎಂದು ಭಾವುಕರಾಗಿ ನುಡಿದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.