ಮಂಗಳವಾರ, ಜೂನ್ 15, 2021
26 °C

ಉತ್ಸಾಹ ತುಂಬಿದ ಅಜ್ಜನ ಮಾತುಗಳು

ಎಂ. ಮಹೇಶ Updated:

ಅಕ್ಷರ ಗಾತ್ರ : | |

ದಾವಣಗೆರೆ: ಜಿಲ್ಲಾ ಕ್ರೀಡಾಂಗಣದಲ್ಲಿ ಶನಿವಾರ ಸಂಜೆ ಅಕ್ಷರಶಃ ಮಿಂಚಿನ ಸಂಚಾರವಾಯಿತು! ಕಿಕ್ಕಿರಿದು ತುಂಬಿದ್ದ ಯುವಜನರಲ್ಲಿ ಉತ್ಸಾಹ ಅಲೆ ಅಲೆಯಾಗಿ ತೇಲಿತು. ಇದಕ್ಕೆ ಕಾರಣವಾಗಿದ್ದು, ಯಾವುದೋ ಚಿತ್ರ ತಾರೆಯರ ತಂಡವಲ್ಲ. ರಸಸಂಜೆ ಕಾರ್ಯಕ್ರಮವೂ ಅಲ್ಲ. ಈ ವಾತಾವರಣ ಸೃಷ್ಟಿಸಿದ್ದು ಹಾಗೂ ಸಂಭ್ರಮದ ವಾತಾವರಣದ `ಕಮಾಲ್~ ಮಾಡಿದ್ದು ಮಾಜಿ ರಾಷ್ಟ್ರಪತಿ ಮಕ್ಕಳ, ಯುವಕರಿಂದ ಪ್ರೀತಿಯಿಂದ `ಅಜ್ಜ~ ಎಂದೇ ಕರೆಯಿಸಿಕೊಳ್ಳುವ ಡಾ.ಎ.ಪಿ.ಜೆ. ಅಬ್ದುಲ್ ಕಲಾಂ.   ಸಂಜೆ 6ಕ್ಕೆ ಕಾರ್ಯಕ್ರಮ ನಿಗದಿಯಾಗಿತ್ತು. ಕಲಾಂ ಅವರು ವೇದಿಕೆಗೆ ಆಗಮಿಸುವುದು ಗಂಟೆ ತಡವಾಗಿತ್ತು. ಇದಕ್ಕೂ 2-3 ಗಂಟೆಗೂ ಮುಂಚಿತವಾಗಿ ನಗರದ ವಿವಿಧ ಕಡೆಯಿಂದ ಸಾಗರದಂತೆ ಹರಿದು ಬಂದು ಕುತೂಹಲದಿಂದ ಕಾಯುತ್ತಾ ಕುಳಿತಿದ್ದ ಸಾವಿರಾರು ವಿದ್ಯಾರ್ಥಿಗಳು ಹಾಗೂ ಪೋಷಕರು, ಕಲಾಂ ಅವರನ್ನು ಕಂಡ ಕೂಡಲೇ ಹರ್ಷೋದ್ಗಾರ ಮೊಳಗಿಸಿದರು. ಸಿಳ್ಳೆ, ಚಪ್ಪಾಳೆ ಹಾಗೂ ಕೇಕೆಗಳು ಮುಗಿಲು ಮುಟ್ಟಿದವು. ಅಲ್ಲಿ ಉಲ್ಲಾಸದ ಹೂಮಳೆಯಾಯಿತು!ಇತರ ಗಣ್ಯರ ಭಾಷಣ ಮುಗಿದ ನಂತರ ಮಾತಿಗಳಿದ ಕಲಾಂ, ಕನ್ನಡದಲ್ಲಿ ದಾವಣಗೆರೆ ಜನತೆಗೆ ಹಾರ್ದಿಕ  ಶುಭಾಶಯಗಳು  ಎಂದು ಹೇಳಿ ಕನ್ನಡ  ಪ್ರೀತಿ ತೋರಿ  ನೆರೆದಿದ್ದವರಿಂದ  ಚಪ್ಪಾಳೆ ಗಿಟ್ಟಿಸಿದರು. ಬಾಪೂಜಿ ಸಂಸ್ಥೆ 50  ಸಂವತ್ಸರಗಳನ್ನು  ಕಂಡಿರುವುದು  ಸಂತಸದ ಸಂಗತಿ ಎಂದರು.ನೆರೆದಿದ್ದ ಎಲ್ಲರನ್ನೂ ಸಂವಾದಕ್ಕೆ ತೊಡಗಿಸಿಕೊಂಡ ಅವರು, ವಿವಿಧ ವಿಷಯಗಳ ಬಗ್ಗೆ ಪ್ರತಿಜ್ಞಾವಿಧಿ ಬೋಧಿಸಿದರು. `ಸಾಮರ್ಥ್ಯದೊಂದಿಗೆ, ಒಳ್ಳೆಯತನ ಹಾಗೂ ನಂಬಿಕೆಯೊಂದಿಗೆ, ಉಪಾಯಗಳು ಹಾಗೂ ಕನಸುಗಳೊಂದಿಗೆ, ವಿಶ್ವಾಸದೊಂದಿಗೆ ಜನಿಸಿದ್ದೇನೆ. ಹಾಗೆಂದು ನಾನು ಸುಮ್ಮನೆ ಕೂರುವುದಿಲ್ಲ. ಗರಿ ಬಿಚ್ಚಿ ಹಾರುತ್ತೇನೆ... ಹಾರುತ್ತಿರುತ್ತೇನೆ...~ ಎಂದು ಪ್ರಮಾಣವಚನ ಬೋಧಿಸಿದರು.ಕೇರಳದಲ್ಲಿ ಕಾರ್ಯಕ್ರಮ ಒಂದರಲ್ಲಿ ಭಾಗವಹಿಸಿದ್ದ ತಮಗೆ ಇಬ್ಬರು ವಿದ್ಯಾರ್ಥಿಗಳ ಪ್ರಶ್ನೆ ವಿಭಿನ್ನ ಅನುಭವ ನೀಡಿದವು. ಒಬ್ಬ ವಿದ್ಯಾರ್ಥಿ ಏನು ಪ್ರಶ್ನೆ ಮಾಡಬೇಕು ಎಂಬುದು ತಿಳಿಯುತ್ತಿಲ್ಲ ಎಂದ. ಇಂತಹ ಮಕ್ಕಳಿಗೆ ವಿಶ್ವಾಸ ತುಂಬುವ ಶಿಕ್ಷಣ ಇಂದು ಬೇಕಿದೆ ಎಂದರು.ಬುದ್ಧಿವಂತರಾದ ನೀವು ಎಲ್ಲರಿಗೂ ನಗು ನೀಡಬಹುದು ಎಂದ ಕಲಾಂ, `ಇಂದಿನಿಂದ ನಾನು ತಾಯಿ ಸಂತೋಷವಾಗಿ ಇರುವಂತೆ ಮಾಡುತ್ತೇನೆ. ತಾಯಿ ಸಂತೋಷದಿಂದ ಇದ್ದರೆ ಮನೆ ಸಂತೋಷವಾಗಿರುತ್ತದೆ. ಮನೆ ಸಂತೋಷದಿಂದಿದ್ದರೆ ಸಮಾಜ, ಸಮಾಜ ಸಂತೋಷದಿಂದಿದ್ದರೆ ಕರ್ನಾಟಕ ರಾಜ್ಯ, ಕರ್ನಾಟಕ ಸಂತಸದಿಂದಿದ್ದರೆ ಭಾರತ ದೇಶ ಸಂತಸದಿಂದ ಇರುತ್ತದೆ~ ಎಂದು ಮತ್ತೊಂದು ಪ್ರಮಾಣವಚನ ಬೋಧಿಸಿದರು. `ಇಂದಿನಿಂದಲೇ  ನಿಮ್ಮ ತಾಯಿ ನಗುವಂತೆ ಮಾಡಬೇಕು. ಇಲ್ಲವಾದಲ್ಲಿ ನಿಮ್ಮನ್ನು ಹಿಡಿದುಕೊಳ್ಳುತ್ತೇನೆ~ ಎಂದು ನಯವಾಗಿಯೇ ಎಚ್ಚರಿಸಿದರು.ನನಗೆ ಗುರಿ ಇದೆ ಎಂದುಕೊಳ್ಳಿ. ಇದನ್ನು ತಲುಪುವುದಕ್ಕೆ ಕಠಿಣ ಪರಿಶ್ರಮ ಬೇಕು. ಚಿಕ್ಕ ಗುರಿ ದೊಡ್ಡ ಅಪರಾಧ ಎಂಬುದನ್ನು ನಾನು ಅರಿತಿದ್ದೇನೆ. ಇದಕ್ಕಾಗಿ ನಾನು ಸಹೋದರತ್ವದಿಂದ ಕೆಲಸ ಮಾಡುತ್ತೇನೆ. ಸಮಯದ ಮಹತ್ವವನ್ನು ಸದಾ ನೆನಪಿಡುತ್ತೇನೆ. ಯಾವುದೇ ಸಾಧನೆ ಮಾಡುವುದಕ್ಕೂ ಸಹ ಧೈರ್ಯದಿಂದ ಮುನ್ನುಗ್ಗುತ್ತೇನೆ. ಇತರರ ಯಶಸ್ಸನ್ನು ಕಂಡು ನಾನು ಖುಷಿಪಡುತ್ತೇನೆ ಎಂಬ ಮನೋಭಾವ ಬೆಳೆಸಿಕೊಳ್ಳುವಂತೆ ತಿಳಿಸಿದರು.ಭಾಷಣದ ನಂತರ ಅವರು, ಕೆಲ ಪುಸ್ತಕಗಳನ್ನು ಬಾಪೂಜಿ ವಿದ್ಯಾಸಂಸ್ಥೆಗೆ ಕೊಡುಗೆಯಾಗಿ ನೀಡಿದರು.

ಕಲಾಂ ಅವರ ಮಾತುಗಳನ್ನು ನೂರಾರು ಮಂದಿ ತಮ್ಮ ಮೊಬೈಲ್ ದೂರವಾಣಿಗಳಲ್ಲಿ ರೆಕಾರ್ಡ್ ಮಾಡಿಕೊಂಡರು. ಮೊಬೈಲ್‌ಗಳಲ್ಲಿ ಚಿತ್ರ ಸೆರೆ ಹಿಡಿಯುವುದಕ್ಕೆ ಮುಗಿಬೀಳುತ್ತಿದ್ದರು. ಸಂಜೆಯಿಂದಲೂ ಗೌರವವಂದನೆ ಸಲ್ಲಿಸಲು ಸಿದ್ಧವಾಗಿ ಕಾಯುತ್ತಿದ್ದ ಎನ್‌ಸಿಸಿ ಕೆಡೆಟ್‌ಗಳು ನಿರಾಸೆ ಅನುಭವಿಸಬೇಕಾಯಿತು. ಕತ್ತಲಾಗಿದ್ದರಿಂದ ಗೌರವ ವಂದನೆ ನೀಡಲಿಲ್ಲ. ಕೊನೆಗೆ, ಕಲಾಂ ಅಜ್ಜನ ಕೈ ಕುಲುಕಬೇಕೆಂಬ ಅವರ ಆಸೆಯೂ ಈಡೇರಲಿಲ್ಲ.ಕಾರ್ಯಕ್ರಮದಲ್ಲಿ ಬಾಪೂಜಿ ವಿದ್ಯಾಸಂಸ್ಥೆ ಆಡಳಿತ ಮಂಡಳಿ ಸದಸ್ಯರನ್ನು ಸನ್ಮಾನಿಸಲಾಯಿತು. ಸಂಸ್ಥೆ ಉಪಾಧ್ಯಕ್ಷ ಎಂ. ರೇವಣಸಿದ್ದಪ್ಪ, ಸದಸ್ಯರಾದ ರಾಜನಹಳ್ಳಿ ರಮಾನಂದ, ಎಸ್.ಎಸ್. ಜಯಣ್ಣ, ಅಥಣಿ ವೀರಣ್ಣ, ಮಾಕನೂರು ಮಲ್ಲಿಕಾರ್ಜುನಪ್ಪ, ಕೆ.ಎ. ಗಿರಿಜಮ್ಮ, ಖಜಾಂಚಿ ಎ.ಸಿ. ಜಯಣ್ಣ, ಜಿಲ್ಲಾಧಿಕಾರಿ ಎಸ್.ಎಸ್. ಪಟ್ಟಣಶೆಟ್ಟಿ, ಪೂರ್ವ ವಲಯ ಐಜಿಪಿ ಸಂಜಯ್ ಸಹಾಯ್, ಹೆಚ್ಚುವರಿ ಎಸ್‌ಪಿ ಚವಾಣ್ ಮತ್ತಿತರರು ಹಾಜರ್ದ್ದಿದರು.ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಸ್ವಾಗತಿಸಿದರು. ಸುಬ್ರಹ್ಮಣ್ಯಸ್ವಾಮಿ, ಅನುರಾಧಾ ಬಕ್ಕಪ್ಪ, ಚಿತ್ರನಟಿ ಕಾವ್ಯಾ ಕಾರ್ಯಕ್ರಮ ನಿರೂಪಿಸಿದರು. ಇದಕ್ಕೂ ಮುನ್ನ, ಕ್ರೀಡಾಂಗಣದ ತುಂಬೆಲ್ಲಾ ಸೊಳ್ಳೆಗಳನ್ನು ನಿಯಂತ್ರಿಸಲು ಧೂಮೀಕರಣ ಮಾಡಲಾಯಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.