ಸೋಮವಾರ, ಮೇ 23, 2022
20 °C

ಉದಯೋನ್ಮುಖರಿಗೊಂದು ಗ್ಯಾಲರಿ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉದಯೋನ್ಮುಖರಿಗೊಂದು ಗ್ಯಾಲರಿ!

ಬೆಂಗಳೂರಿನ ಒಂದಲ್ಲಾ ಒಂದು ಕಡೆ ಪ್ರತಿದಿನವೂ ಕಲಾಕೃತಿಗಳ ಪ್ರದರ್ಶನ ನಡೆಯುತ್ತಲೇ ಇರುತ್ತದೆ. ಇಲ್ಲಿನ ಕಲಾವಿದರು ಮಾತ್ರವಲ್ಲದೆ, ದೇಶದ ವಿವಿಧ ಭಾಗಗಳ ಕಲಾವಿದರು ಕೂಡ ತಮ್ಮ ಕಲಾಕೃತಿಗಳನ್ನು ಬೆಂಗಳೂರಿನ ಗ್ಯಾಲರಿಗಳಲ್ಲಿ ಪ್ರದರ್ಶಿಸುವುದುಂಟು.ಈ ಮಟ್ಟಿಗೆ ಕಲಾವಿದರ ಕಲಾಭಿವ್ಯಕ್ತಿಗೆ ಬೆಂಗಳೂರಿನಲ್ಲಿ ಸಾಕಷ್ಟು ಅವಕಾಶವಿದ್ದರೂ, ಆ ಅವಕಾಶ ಎಲ್ಲ ವರ್ಗದ ಕಲಾವಿದರಿಗೂ ಎಟಕುವಂತಹದ್ದಲ್ಲ. ಗ್ಯಾಲರಿಗಳೊಂದಿಗೆ ಹಣಕಾಸಿನ ಲೆಕ್ಕಾಚಾರವೂ ತಳುಕು ಹಾಕಿಕೊಂಡಿದೆ.ಈ ಕಾರಣದಿಂದಲೇ, ತಮ್ಮ ಕಲಾಕೃತಿಗಳನ್ನು ಎಲ್ಲಿಯೂ ಪ್ರದರ್ಶಿಸಲಾಗದ ಅಸಹಾಯಕ ಗ್ರಾಮೀಣ ಕಲಾವಿದರು ಸಾಕಷ್ಟು ಮಂದಿಯಿದ್ದಾರೆ. ಇಂಥವರ ನೆರವಿಗೆಂದೇ ಬೆಂಗಳೂರಿನಲ್ಲಿ ಗ್ಯಾಲರಿಯೊಂದಿದೆ, ಅದುವೇ- `ವಿನ್‌ಸೆಂಟ್ ಆರ್ಟ್ ಗ್ಯಾಲರಿ~.ಹತ್ತರಲ್ಲಿ ಇನ್ನೊಂದು ಎನ್ನುವ ಮಾದರಿಯದಲ್ಲದ `ವಿನ್‌ಸೆಂಟ್ ಆರ್ಟ್ ಗ್ಯಾಲರಿ~ಯ ರೂವಾರಿ ಜಗದೀಶ್ ಕಡೂರು. ಇವರ ಗ್ಯಾಲರಿಯಲ್ಲಿ ಗ್ರಾಮೀಣ ಪ್ರದೇಶಗಳ ಹಾಗೂ ಸಣ್ಣಪುಟ್ಟ ಪಟ್ಟಣಗಳ ಕಲಾವಿದರ ಕಲಾಕೃತಿಗಳಿಗೆ ಮೊದಲ ಆದ್ಯತೆ. ಇಲ್ಲಿ ಹಣಕಾಸಿನ ಲೆಕ್ಕಾಚಾರಕ್ಕೆ ಎರಡನೇ ಸ್ಥಾನ. ಅಂದಹಾಗೆ, ಜಗದೀಶ್ ಸ್ವತಃ ಕಲಾವಿದರು ಕೂಡ.

 

ಆ ಕಾರಣದಿಂದಲೇ ಇತರ ಕಲಾವಿದರ ತವಕತಲ್ಲಣಗಳನ್ನು ಅರ್ಥ ಮಾಡಿಕೊಳ್ಳುವುದು ಅವರಿಗೆ ಸಾಧ್ಯವಾಗಿದೆ. ಅಲ್ಲದೇ ಅವರಿಗೆ ಗ್ಯಾಲರಿ ಸ್ಥಳವನ್ನು ಉಚಿತವಾಗಿ ನೀಡಿರುವುದು ರೂಟ್ ಮಾಂಟೆಸರಿ ಶಾಲೆ. ಅದರಿಂದ ಜಗದೀಶ್ ಕಡಿಮೆ ಖರ್ಚಿನಲ್ಲಿ ಕಲಾಕೃತಿ ಪ್ರದರ್ಶನಕ್ಕೆ ಅವಕಾಶ ನೀಡಲು ಸಾಧ್ಯವಾಗಿದೆ.ಜಗದೀಶ್ ಅವರದ್ದೊಂದು ವಿಶಿಷ್ಟ ಕಲಾಜಗತ್ತು. ಕುಂಚ ಹಿಡಿಯುವುದರ ಜೊತೆಗೆ ಶಿಲ್ಪಿಯೂ ಆಗಿರುವ ಅವರದ್ದು ಕಲಾ ವಿಮರ್ಶೆಯಲ್ಲೂ ಭರವಸೆಯ ವ್ಯವಸಾಯ. ಮೂಲತಃ ಚಿಕ್ಕಮಗಳೂರು ಪರಿಸರದ ಅವರು ತಮ್ಮನ್ನು ತಾವು ಬಣ್ಣಿಸಿಕೊಳ್ಳುವುದು- `ದೊಡ್ಡ ಕನಸುಗಳನ್ನು ಹೊತ್ತ ಸ್ಲಂ ನಿವಾಸಿ~.ಗ್ರಾಮೀಣ ಪ್ರದೇಶ ಹಾಗೂ ಸಣ್ಣಪಟ್ಟಣಗಳಲ್ಲಿ ನೆಲೆಸಿರುವ ಉದಯೋನ್ಮುಖ ಕಲಾವಿದರಿಗೆ ತಮ್ಮ ಕೈಲಾದ ಸಹಾಯ ನೀಡುವುದು ಅವರ ಹಂಬಲ. ಹೊಟ್ಟೆಪಾಡಿಗಾಗಿ ಬೆಂಗಳೂರಿನಲ್ಲಿ ಇರುವುದಾಗಿ ಹೇಳುವ ಅವರು, `ಹೊಟ್ಟೆಪಾಡು ನಮಗೆ ಇಷ್ಟವಿಲ್ಲದ ಹಲವು ಕೆಲಸಗಳನ್ನು ಮಾಡಲು ಪ್ರೇರೇಪಿಸುತ್ತದೆ~ ಎನ್ನುತ್ತಾರೆ.ಚಿಕ್ಕಮಗಳೂರಿನ ಶಾಂತಿನಿಕೇತನ ಶಾಲೆಯಲ್ಲಿ ಪದವಿ ಪಡೆದಿರುವ ಜಗದೀಶ್, `ಮೈಸೂರು ದಸರಾ ಪ್ರಶಸ್ತಿ~ಯನ್ನು ಮೂರು ಬಾರಿ ಪಡೆದಿರುವ ಪ್ರತಿಭಾವಂತ. `ಮೊದಲ ಏಕವ್ಯಕ್ತಿ ಪ್ರದರ್ಶನ ನಡೆದಾಗ ಮಾಧ್ಯಮದವರು ನನ್ನ ಕಲೆ ಗುರುತಿಸಿ ಹುಡುಕಿಕೊಂಡು ಬಂದಾಗ ಸಿಕ್ಕಾಪಟ್ಟೆ ಖುಷಿಯಾಗಿತ್ತು. ಕುಣಿದು ಕುಪ್ಪಳಿಸಿದ್ದೆ.ಆದರೆ ಇಂದಿನ ಮಾತೇ ಬೇರೆ~ ಎನ್ನುವ ಅವರು ಬೆಂಗಳೂರಿನ ಜಯನಗರದಲ್ಲಿ ಇರುವ ತಮ್ಮ ಸ್ಟುಡಿಯೋದಲ್ಲಿ ಚಿತ್ರಕಲೆ ಬಗ್ಗೆ ಆಸಕ್ತಿ ಇರುವವರಿಗೆ ಕಲಿಸುತ್ತಿದ್ದಾರೆ. ಸ್ಟುಡಿಯೋವನ್ನು ಶಾಲೆಯಾಗಿ ವಿಸ್ತರಿಸುವ ಕನಸು ಅವರದು.ಜಗದೀಶ್‌ರ ಇತ್ತೀಚಿನ ಕಲಾಭಿವ್ಯಕ್ತಿಯ ಆಸಕ್ತಿಯ ವಿಷಯ `ಮಹಿಳೆ~. ಸ್ತ್ರೀಲೋಕಕ್ಕೆ ಸಂಬಂಧಿಸಿದ ಕಲಾಕೃತಿಗಳನ್ನು ರೂಪಿಸುತ್ತಿರುವ ಅವರು ಮಹಿಳೆಯರ ದೈಹಿಕ ಲಕ್ಷಣ, ಅವರ ಸ್ವಾತಂತ್ರ್ಯದ ಹುಡುಕಾಟ ಮತ್ತು ವಿಶ್ವದಲ್ಲಿ ಅವರ ಗುರುತಿಸುವಿಕೆ ಬಗ್ಗೆ ಕೆಲಸ ಮಾಡುತ್ತಿದ್ದಾರೆ. ಈ ಸ್ತ್ರೀಲೋಕದ ಮಜಲುಗಳ ಹುಡುಕಾಟಕ್ಕೆ ಅವರ ಮಡದಿಯೇ ಸ್ಫೂರ್ತಿಯಂತೆ.ಪ್ರಸ್ತುತ ನಗರದ ಮಹಿಳೆಯರನ್ನು ಚಿತ್ರಿಸುವುದರಲ್ಲಿ ಜಗದೀಶ್ ನಿರತರಾಗಿದ್ದಾರೆ. ನಗರದ ಮಹಿಳೆಯರು ಅನುಭವಿಸುತ್ತಿರುವ ಸ್ಥೂಲಶರೀರದ ಸಮಸ್ಯೆಯನ್ನು ಕಲೆಯ ಮೂಲಕ ಬಿಂಬಿಸುವ ಪ್ರಯತ್ನ ಅವರದ್ದು.`ನಾನು ಮಂಗಳೂರಿನ ಹುಡುಗಿಯರನ್ನು ನೋಡಿ ಬೆಳೆದವನು. ಅವರಲ್ಲಿ ಪ್ರಾದೇಶಿಕವಾಗಿ ವಿಶಿಷ್ಟ ದೈಹಿಕ ಲಕ್ಷಣ ಇರುತ್ತದೆ. ಅದಷ್ಟೇ ನನ್ನ ಕಲೆಗೆ ಸಾಕಾಗುವುದಿಲ್ಲ. ನಗರದ ಮಹಿಳೆಯರು ತುಂಬಾ ಭಿನ್ನವಾಗಿರುತ್ತಾರೆ. ಅವರ ದಪ್ಪ ದೇಹದಲ್ಲಿಯೂ ಒಂದು ಸೌಂದರ್ಯ ಇರುತ್ತದೆ~ ಎಂದು ತಮ್ಮದೇ ಸೌಂದರ್ಯಮೀಮಾಂಸೆ ಮಂಡಿಸುತ್ತಾರೆ.

ಜಗದೀಶ್‌ರ ಸಂಪರ್ಕ ಸಂಖ್ಯೆ: 98863 25655.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.