ಭಾನುವಾರ, ಏಪ್ರಿಲ್ 11, 2021
23 °C

ಉದ್ಯೋಗಾಂಕ್ಷಿಗಳ ಧರಣಿ 4ನೇ ದಿನಕ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ಮಂಗಳೂರು ವಿಶೇಷ ಆರ್ಥಿಕ ವಲಯ ಯೋಜನೆಯಲ್ಲಿ ಉದ್ಯೋಗ ನೀಡುವಂತೆ ಒತ್ತಾಯಿಸಿ ಯೋಜನೆಗೆ ಭೂಮಿ ನೀಡಿದ ಕುಟುಂಬಗಳ ವಿದ್ಯಾರ್ಥಿಗಳು ಇಲ್ಲಿಯ ಜಿಲ್ಲಾಧಿಕಾರಿ ಕಚೇರಿ ಮುಂದೆ ನಡೆಸುತ್ತಿರುವ ಧರಣಿ ಶುಕ್ರವಾರ ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. ಇದೇ ವೇಳೆ, ವಿವಿಧ ಸಂಘಟನೆಗಳು ಪ್ರತಿಭಟನಾಕಾರರಿಗೆ ಬೆಂಬಲ ಸೂಚಿಸಿವೆ.ಮೊದಲ ಹಂತದಲ್ಲಿ ತರಬೇತಿ ಮುಗಿಸಿದ ವಿದ್ಯಾರ್ಥಿಗಳು ಸರದಿಯಂತೆ ಸತ್ಯಾಗ್ರಹದಲ್ಲಿ ಪಾಲ್ಗೊಳ್ಳುತ್ತಿದ್ದು, ಉದ್ಯೋಗ ನೀಡುವ ಕುರಿತು ಎಂಎಸ್‌ಇಜೆಡ್ ಅಧಿಕಾರಿಗಳು ಲಿಖಿತ ಭರವಸೆ ನೀಡುವವರೆಗೆ ಪ್ರತಿಭಟನೆಯನ್ನು ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ ಎಂದು ಪ್ರತಿಭಟನಾನಿರತರು ಎಚ್ಚರಿಸಿದ್ದಾರೆ.ಟ್ರಸ್ಟ್ ಮೂಲಕ ಉದ್ಯೋಗ ನೀಡುವ ಪ್ರಸ್ತಾಪವನ್ನಾಗಲೀ, ನಗದು ಪರಿಹಾರವನ್ನಾಗಲೀ ಒಪ್ಪುವ ಮಾತೇ ಇಲ್ಲ. ಬದಲಿಗೆ ನಮಗೆ ಯೋಜನಾ ಪ್ರದೇಶದಲ್ಲಿಯೇ ಉದ್ಯೋಗ ನೀಡಬೇಕು ಎಂದು ಹೋರಾಟದ ನೇತೃತ್ವ ವಹಿಸಿರುವ ಆರ್.ಎನ್.ಶೆಟ್ಟಿ ಕಳವಾರು ‘ಪ್ರಜಾವಾಣಿ’ಗೆ ಶುಕ್ರವಾರ ಸ್ಪಷ್ಟಪಡಿಸಿದರು.ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಪಾಲೆಮಾರ್ ಅವರು ಶನಿವಾರ ಧರಣಿ ಸ್ಥಳಕ್ಕೆ ಭೇಟಿ ನೀಡುವುದಾಗಿ ತಿಳಿಸಿದ್ದಾರೆ. ಪೇಜಾವರ ಸ್ವಾಮೀಜಿ ಸಹ ಶನಿವಾರ ಇಲ್ಲವೇ ಭಾನುವಾರ ಧರಣಿ ಸ್ಥಳಕ್ಕೆ ಆಗಮಿಸುವ ನಿರೀಕ್ಷೆ ಇದೆ. ಆದರೆ ಎಂಎಸ್‌ಇಜೆಡ್ ಅಧಿಕಾರಿಗಳ್ಯಾರೂ ಈವರೆಗೆ ಇಲ್ಲಿಗೆ ಬಂದೇ ಇಲ್ಲ. ನಮ್ಮನ್ನು ಸಂಪರ್ಕಿಸಿಯೂ ಇಲ್ಲ ಎಂದು ಶೆಟ್ಟಿ ವಿವರಿಸಿದರು.

ಈ ನಡುವೆ ಹೋರಾಟವನ್ನು ತೀವ್ರಗೊಳಿಸುವ ದಿಸೆಯಲ್ಲಿ ಎಂಎಸ್‌ಇಜೆಡ್ ಕಾರಿಡಾರ್ ರಸ್ತೆ ನಿರ್ಮಿಸಿರುವ ಜೋಕಟ್ಟೆ, ಕಳವಾರು ಭಾಗಕ್ಕೇ ಪ್ರತಿಭಟನೆಯನ್ನು ಸ್ಥಳಾಂತರಿಸುವ ಕುರಿತು ಚಿಂತನೆ ನಡೆದಿದ್ದು, ಈ ಬಗ್ಗೆ ಶನಿವಾರ ಒಮ್ಮತದ ತೀರ್ಮಾನಕ್ಕೆ ಬರಲಾಗುವುದು ಎಂದರು.ಬಿಜೆಪಿ ಯುವ ಮೋರ್ಚಾದ ಕಿಶೋರ್ ರೈ, ರಘುನಾಥ್, ಸತ್ಯಜಿತ್ ಸುರತ್ಕಲ್, ವಕೀಲರ ಸಂಘದ ಅಧ್ಯಕ್ಷ ಎಸ್.ಬಿ.ಚೆಂಗಪ್ಪ, ಜಿ.ಪಂ. ಸದಸ್ಯ ರಿತೇಶ್ ಶೆಟ್ಟಿ, ಕಾಂಗ್ರೆಸ್‌ನ ವಿಜಯ ಕುಮಾರ ಶೆಟ್ಟಿ, ಮೊಯಿದ್ದೀನ್ ಬಾವಾ ಮತ್ತಿತರರು ಧರಣಿಯಲ್ಲಿ ಪಾಲ್ಗೊಂಡು ಬೆಂಬಲ ಸೂಚಿಸಿದ್ದಾರೆ ಎಂದು ಉದ್ಯೋಗಾಕಾಂಕ್ಷಿಗಳಾದ ನಾರಾಯಣ ಮರ್ದನ, ಕಿರಣ್, ದಾಮೊದರ ಶೆಟ್ಟಿ ತಿಳಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.