ಶನಿವಾರ, ಮೇ 15, 2021
24 °C

ಉದ್ಯೋಗ ಖಾತರಿಯಿಂದ ಸಮಗ್ರ ಅಭಿವೃದ್ಧಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸುಳ್ಯ: `ಮಹಾತ್ಮ ಗಾಂಧಿ ರಾಷ್ಟ್ರಿಯ ಉದ್ಯೋಗ ಖಾತರಿ ಯೋಜನೆಯ ಯಶಸ್ವಿ ಅನುಷ್ಠಾನದಿಂದ ಗ್ರಾಮದ ಸಮಗ್ರ ಅಭಿವೃದ್ಧಿ ಸಾಧ್ಯ~ ಎಂದು ಖಾತರಿಯ ದ.ಕ. ಜಿಲ್ಲಾ ಓಂಬುಡ್ಸ್‌ಮನ್ ಶೀನ ಶೆಟ್ಟಿ ಹೇಳಿದ್ದಾರೆ.

ಮರ್ಕಂಜ ಗ್ರಾಮ ಪಂಚಾಯಿತಿ ಮತ್ತು ಭ್ರಷ್ಟಾಚಾರ ವಿರೋಧಿ ಜನಜಾಗೃತಿ ಸಮಿತಿ ಆಶ್ರಯದಲ್ಲಿ ಗುರುವಾರ ತೇರ್ತಮಜಲಿನಲ್ಲಿ ನಡೆದ ಖಾತರಿ ಮಾಹಿತಿ ಶಿಬಿರದಲ್ಲಿ ಅವರು ಮಾತನಾಡಿದರು.ಸಾರ್ವಜನಿಕ ಕೆಲಸಕ್ಕೆ ಈಗಾಗಲೇ 14 ಗುಂಪುಗಳನ್ನು ರಚಿಸಿಕೊಂಡಿರುವ ಈ ಗ್ರಾಮದ ಜನರ ಉತ್ಸಾಹ ನೋಡಿದಾಗ ಇಲ್ಲಿ ಶೇ.100ರಷ್ಟು ಪ್ರಗತಿ ಖಂಡಿತಾ ಸಾಧ್ಯ. ಇದು ಮಾದರಿ ಗ್ರಾಮವಾಗಲಿದೆ ಎಂದರು.

ಉದ್ಯೋಗ ಕಾರ್ಡ್ ಹೊಂದಿರುವವರು ಕೆಲಸಕ್ಕಾಗಿ ಅರ್ಜಿ ಸಲ್ಲಿಸಿ 15 ದಿನಗಳ ಒಳಗೆ ಪಂಚಾಯಿತಿ ಕೆಲಸ ನೀಡದಿದ್ದಲ್ಲಿ ಓಂಬುಡ್ಸ್‌ಮನ್‌ಗೆ ದೂರು ನೀಡಿದರೆ ಪಿಡಿಓಗೆ ಶಿಕ್ಷೆ, ನಿಮಗೆ ಕೆಲಸ ಗ್ಯಾರಂಟಿ ಎಂದು ಅವರು ಹೇಳಿದರು.ಕಳೆದ ಅಕ್ಟೋಬರ್‌ನಲ್ಲಿ ಗ್ರಾಮ ಸಭೆ ಮಾಡಿ ಇನ್ನೂ ಕ್ರಿಯಾ ಯೋಜನೆ ತಯಾರಿಸಲು ಆಗದಿದ್ದರೆ ಅದಕ್ಕೆ ಗ್ರಾಮ ಪಂಚಾಯಿತಿಯೇ ಹೊಣೆ. ನಿಯಮ ಪ್ರಕಾರ ಹೋದರೆ ಎಲ್ಲರಿಗೂ ಲಾಭವಿದೆ. ಇಲ್ಲದಿದ್ದರೆ ಕೆಲವರಷ್ಟೇ ಅದರ ಲಾಭ ಪಡೆಯುತ್ತಾರೆ ಎಂದರು.ಓಂಬುಡ್ಸ್‌ಮನ್ ತಾಂತ್ರಿಕ ಕೃಷಿ ಅಧಿಕಾರಿ ಸಂಜೀವ ನಾಯ್ಕ ಮಾತನಾಡಿ, ಈ ಬಾರಿ ಶೇ.50ರಷ್ಟು ಅನುದಾನವನ್ನು ಮಣ್ಣು ಮತ್ತು ನೀರು ಸಂರಕ್ಷಣೆಗೆ ಬಳಸಿಕೊಳ್ಳುವಂತೆ ಆದೇಶ ಬಂದಿದೆ. ಇಲ್ಲಿ ಕೂಲಿ 155 ಎಂದು ಹಿಂಜರಿಯುವ ಅಗತ್ಯವಿಲ್ಲ. ಒಂದು ಅಡಿಕೆ ಸಸಿ ನೆಡಲು ಹೊಂಡ ತೆಗೆದರೆ 60 ರೂಪಾಯಿ, ತೆಂಗಿನ ಸಸಿಗೆ ಹೊಂಡ ತೆಗೆದರೆ 250 ರೂಪಾಯಿಯಂತೆ ಕೂಲಿ ಸಿಗುತ್ತದೆ ಎಂದರು.ರಸ್ತೆಗೆ ತಡೆಗೋಡೆ, ಕೆರೆ ಹೂಳೆತ್ತುವ ಕಾರ್ಯ, ಬಾವಿ ರಚನೆ, ರಸ್ತೆ ಚರಂಡಿ ಕಾಮಗಾರಿ, ಫಲ ಬರುವ ಮರಗಳ ನಾಟಿ ಇತ್ಯಾದಿ ಕೆಲಸಗಳನ್ನು ಈ ಯೋಜನೆಯಡಿ ಮಾಡಬಹುದು. ಶಾಲಾ ಆವರಣ ಗೋಡೆ, ಅಂಗನವಾಡಿ ಶೌಚಾಲಯಗಳನ್ನು ಕೂಡ ನಿರ್ಮಿಸಬಹುದು. ಹೀಗೆ ಮಾಡಿದಲ್ಲಿ ಶೇ.60ರಷ್ಟು ಕೂಲಿ ಹಾಗೂ ಶೇ.40ರಷ್ಟು ಸಾಮಾಗ್ರಿ ಖರೀದಿಗೆ ಉಪಯೋಗಿಸಲು ಅವಕಾಶವಿದೆ ಎಂದವರು ಹೇಳಿದರು.ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಮಲ್ಲೇಸ್ವಾಮಿ ಮಾತನಾಡಿ ಜಿಲ್ಲೆಯಲ್ಲಿ ಕೂಲಿಗಾಗಿ ಕೆಲಸ ಮಾಡುವವರು ಯಾರೂ ಇಲ್ಲ. ಅವರವರ ತೋಟದಲ್ಲಿ ಕೆಲಸ ಮಾಡುವವರು ಮಾತ್ರ ಇರುವುದು. ಎನ್‌ಎಸ್‌ಎಸ್‌ನಂತೆ ಗುಂಪುಗಳಾಗಿ ರಚಿಸಿ ಮೊದಲು ಸಾರ್ವಜನಿಕ ಕೆಲಸಗಳನ್ನು ಈ ಯೋಜನೆಯಡಿ ಮಾಡಬೇಕು. ಇಲ್ಲಿ ಮೇಲು-ಕೀಳು, ಬಡವ-ಬಲ್ಲಿದ ಭೇದ-ಭಾವ ಇಲ್ಲ. ಸೇವೆಯಂತೆ ಮಾಡಿದಾಗ ಗ್ರಾಮದ ಅಭಿವೃದ್ಧಿ ಸಾಧ್ಯ ಎಂದರು.ಗ್ರಾಮ ಪಂಚಾಯಿತಿ ಅಧ್ಯಕ್ಷೆ ಹರಿಣಾಕ್ಷಿ ಸಂಕೇಶ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಆನಂದ ಗೌಡ ನಾರ್ಕೋಡು, ತಾ.ಪಂ ಸದಸ್ಯ ದೇವಪ್ಪ ಹೈದಂಗೂರು, ಜಿಲ್ಲಾ ಪಂಚಾಯಿತಿ ಸಹಾಯಕ ಕಾರ್ಯದರ್ಶಿ ಶಿವರಾಮಯ್ಯ, ಓಂಬುಡ್ಸ್‌ಮೆನ್‌ರ ಸಹಾಯಕ ನಿರ್ದೇಶಕ ಕೃಷ್ಣ ಮೂಲ್ಯ, ಭ್ರಷ್ಟಾಚಾರ ವಿರೋಧಿ ಜನಜಾಗೃತಿ ಸಮಿತಿ ಅಧ್ಯಕ್ಷ ವೀರಪ್ಪ ಗೌಡ ಮಿನುಂಗೂರು, ತಾ.ಪಂ. ಅಧಿಕಾರಿ ಸೈಮನ್ ರೋಡ್ರಿಗಸ್, ಎಂಜಿನಿಯರಿಂಗ್ ವಿಭಾಗದ ಜನಾರ್ದನ, ಜಲಾನಯನ ಇಲಾಖೆಯ ದಾಮೋದರ ವೇದಿಕೆಯಲ್ಲಿದ್ದರು.ಜಯರಾಮ ಹೊಸೊಳಿಕೆ, ಶಂಕರನಾರಾಯಣ ಶಾಸ್ತ್ರಿ, ಕೃಷ್ಣ ಶಾಸ್ತ್ರಿ ಮರ್ಕಂಜ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.