ಶುಕ್ರವಾರ, ಫೆಬ್ರವರಿ 26, 2021
22 °C

ಉದ್ಯೋಗ ಖಾತರಿ; ಚಿತ್ರದುರ್ಗಕ್ಕೆ ‘ಉತ್ತಮ ಜಿಲ್ಲಾ ಪ್ರಶಸ್ತಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉದ್ಯೋಗ ಖಾತರಿ; ಚಿತ್ರದುರ್ಗಕ್ಕೆ ‘ಉತ್ತಮ ಜಿಲ್ಲಾ ಪ್ರಶಸ್ತಿ’

ಚಿತ್ರದುರ್ಗ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಅನುಷ್ಠಾನದಲ್ಲಿ ಉತ್ತಮ ಸಾಧನೆ ಮಾಡಿದ ಕಾರಣಕ್ಕೆ ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯ ಚಿತ್ರದುರ್ಗ ಜಿಲ್ಲೆಯನ್ನು ‘ಉತ್ತಮ ಜಿಲ್ಲಾ ಪ್ರಶಸ್ತಿ’ಗೆ ಆಯ್ಕೆ ಮಾಡಿದೆ’ ಎಂದು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನಿತೇಶ್ ಪಾಟೀಲ್ ತಿಳಿಸಿದರು.ನಗರದ ಜಿಲ್ಲಾ ಪಂಚಾಯ್ತಿ ಮಿನಿ ಸಭಾಂಗಣದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ‘ನರೇಗಾ ಯೋಜನೆಯಡಿ ಕೈಗೊಂಡಿರುವ ‘ಕೊಳವೆಬಾವಿ ಜಲಮರುಪೂರಣ’ ಸೇರಿದಂತೆ ಹಲವು ಯಶಸ್ವಿ ಕಾಮಗಾರಿಗಳಿಗಾಗಿ ಕೇಂದ್ರ ಸರ್ಕಾರ ಈ ಪ್ರಶಸ್ತಿ ನೀಡಿ ಗೌರವಿಸುತ್ತಿದೆ. ಫೆ.2ರಂದು ದೆಹಲಿಯ ವಿಜ್ಞಾನ ಭವನದಲ್ಲಿ ನಡೆಯಲಿರುವ ‘ನರೇಗಾ ಸಮ್ಮೇಳನ’ದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ ಎಂದು ತಿಳಿಸಿದರು.‘ದೇಶದಲ್ಲಿರುವ 640 ಜಿಲ್ಲೆಗಳಲ್ಲಿ ನರೇಗಾ ಅನುಷ್ಠಾನಗೊಳ್ಳುತ್ತಿದೆ. ಇದರಲ್ಲಿ ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ತ್ರಿಪುರ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳ ಏಳು ಜಿಲ್ಲೆಗಳನ್ನು ನರೇಗಾ ಅನುಷ್ಠಾನದಲ್ಲಿ ರಾಷ್ಟ್ರದಲ್ಲೇ ಅತ್ಯುತ್ತಮ ಜಿಲ್ಲೆಗಳೆಂದು ಗುರುತಿಸಿ ಪ್ರಶಸ್ತಿ ನೀಡಲಾಗುತ್ತಿದೆ. ಈ ಪಟ್ಟಿಯಲ್ಲಿ ಕರ್ನಾಟಕದಿಂದ ಚಿತ್ರದುರ್ಗ ಜಿಲ್ಲೆ ಆಯ್ಕೆಯಾಗಿದೆ’ ಎಂದರು.‘ಜಿಲ್ಲಾ ಪಂಚಾಯ್ತಿಯ ಹಿಂದಿನ ಸಿಇಒ ಎನ್‌.ಮಂಜುಶ್ರೀ ಅವರ ಅವಧಿಯಲ್ಲಿ ಚಿತ್ರದುರ್ಗದಲ್ಲಿ ಆರಂಭವಾದ ನಿಷ್ಕ್ರಿಯ ಕೊಳವೆಬಾವಿಗೆ ಮಳೆನೀರು ಮರುಪೂರಣ’ ಕಾಮಗಾರಿ, ನಂತರದ ದಿನಗಳಲ್ಲಿ ರಾಜ್ಯಕ್ಕೆ ಮಾದರಿಯಾಗಿದೆ ಎಂಬ ಪ್ರಶಂಸೆಗೆ ಪಾತ್ರವಾಯಿತು. ಪ್ರಶಸ್ತಿ ಆಯ್ಕೆಗೆ ಇದೂ ಪ್ರಮುಖ ಅಂಶವಾಗಿದೆ’ ಎಂದರು.ಜಿಲ್ಲೆಯಲ್ಲಿ 3783 ಕೊಳವೆಬಾವಿಗಳಿಗೆ ಜಲಮರುಪೂರಣ ವಿಧಾನ ಅಳವಡಿಸುವ ಗುರಿಯಿತ್ತು. ಈವರೆಗೆ 1,506 ಕೊಳವೆಬಾವಿಗಳಿಗೆ ಜಲಮರುಪೂರಣ ವಿಧಾನ ಅಳವಡಿಸಲಾಗಿದೆ. ಉಳಿದ ಕಾಮಗಾರಿಗಳು ಪ್ರಗತಿಯಲ್ಲಿವೆ. ನರೇಗಾ  ಯೋಜನೆಯಡಿ ಸಮುದಾಯ ಹಾಗೂ ವೈಯಕ್ತಿಕವಾಗಿ 13,773 ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಇದರಲ್ಲಿ 3,658 ಪೂರ್ಣಗೊಂಡಿದ್ದು ಇನ್ನೂ ಅನೇಕ ಕಾಮಗಾರಿಗಳು ಮುಕ್ತಾಯದ ಹಂತದಲ್ಲಿವೆ’ ಎಂದು ತಿಳಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.