ಶನಿವಾರ, ಜನವರಿ 18, 2020
20 °C

ಉದ್ಯೋಗ ಖಾತ್ರಿ ಯಶಸ್ಸಿಗೆ ಶ್ರಮಿಸಿ: ಕಾಗೋಡು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಾಗರ: ದೇವರ ಪೂಜೆಯನ್ನು ಯಾವ ರೀತಿ ಶ್ರದ್ದಾ ಭಕ್ತಿಯಿಂದ ಮಾಡುತ್ತೀರೋ ಅದೇ ರೀತಿ ಉದ್ಯೋಗ ಖಾತ್ರಿ ಯೋಜನೆಯ ಯಶಸ್ಸಿಗೆ ಕೆಲಸ ಮಾಡಿ. ಇಲ್ಲದಿದ್ದಲ್ಲಿ ನಿಮ್ಮ ಚಳಿ ಬಿಡಿಸುತ್ತೇನೆ ಎಂದು ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಅವರು ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ, ಕಾರ್ಯದರ್ಶಿ ಹಾಗೂ ಅಧ್ಯಕ್ಷರಿಗೆ ಎಚ್ಚರಿಕೆ ನೀಡಿದರು.ತಾಲ್ಲೂಕಿನ ತಾಲ್ಲೂಕು ಪಂಚಾಯ್ತಿ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಿದ್ದ ಉದ್ಯೋಗ ಖಾತ್ರಿ ಯೋಜನೆ ಕುರಿತು ಅರಿವು ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಜನರಿಗೆ ಮೂಲಭೂತ ಹಕ್ಕು ನೀಡುವ ಜತೆಗೆ ಉದ್ಯೋಗದ ಹಕ್ಕನ್ನು ನೀಡಬೇಕು ಎಂಬ ಲೋಹಿಯಾ ಅವರ ಚಿಂತನೆಯೇ ಖಾತ್ರಿ ಯೋಜನೆಗೆ ಆಧಾರವಾಗಿದೆ ಎಂದರು.ಗ್ರಾಮೀಣ ಭಾಗದಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಕಾಮಗಾರಿಗಳು ಆರಂಭವಾದರೆ ನಮ್ಮ ಜಮೀನು, ತೋಟಗಳಿಗೆ ಕೆಲಸಕ್ಕೆ ಜನ ಸಿಗುವುದಿಲ್ಲ ಎಂದು ಕೆಲವರು ಅಪ್ರಚಾರ ಮಾಡುತ್ತಿದ್ದಾರೆ. ಆದರೆ ಯಾವ ಕೃಷಿಕನೂ ಕೃಷಿ ಕಾರ್ಮಿಕರಿಗೆ ವರ್ಷದ 365 ದಿನವೂ ಕೆಲಸ ನೀಡಲು ಸಾಧ್ಯವಿಲ್ಲ. ಇಷ್ಟಕ್ಕೂ ಉದ್ಯೋಗ ಖಾತ್ರಿ ಯೋಜನೆಯಡಿ ವರ್ಷದ 100 ದಿನ ಮಾತ್ರ ಕೆಲಸ ನೀಡಲಾಗುತ್ತಿದೆ ಎಂಬುದನ್ನು ಪ್ರತಿಯೊಬ್ಬರು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು.ಉದ್ಯೋಗ ಖಾತ್ರಿ ಯೋಜನೆಯಡಿ ಕಾಮಗಾರಿಯನ್ನು ಯಾವ ಸಂದರ್ಭದಲ್ಲಿ ಕೈಗೊಳ್ಳಬೇಕು, ಯಾವಾಗ ಅನುಷ್ಠಾನಗೊಳಿಸಬೇಕು ಎಂಬ ಜ್ಞಾನ ಸಿಬ್ಬಂದಿಗೆ ಇರಬೇಕು. ಹಳ್ಳಿಯಲ್ಲಿ ‘ಸುಗ್ಗಿ’ ನಡೆಯುವ ಸಂದರ್ಭದಲ್ಲಿ ಕಾಮಗಾರಿ ಕೈಗೊಂಡರೆ ಸ್ಥಳೀಯರಿಗೆ ತೊಂದರೆಯಾಗುತ್ತದೆ. ಈ ರೀತಿ ಆಗದಂತೆ ಸೂಕ್ತ ನಿರ್ವಹಣೆ ಮಾಡಬೇಕು ಎಂದು ಸಲಹೆ ನೀಡಿದರು.ಸಮಯಕ್ಕೆ ಸರಿಯಾಗಿ ವೇತನ ಪಾವತಿ ಆಗುವುದಿಲ್ಲ ಎನ್ನುವ ಕಾರಣಕ್ಕೆ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ಮಾಡಲು ಗ್ರಾಮೀಣ ಭಾಗದ ಕೃಷಿ ಕಾರ್ಮಿಕರು ಮುಂದೆ ಬರುತ್ತಿಲ್ಲ. ಯಾವುದೇ ತೊಂದರೆ ಇದ್ದರೂ ಕನಿಷ್ಠ ವಾರಕ್ಕೊಮ್ಮೆ ಕೆಲಸ ಮಾಡಿದವರಿಗೆ ವೇತನ ದೊರಕುವಂತೆ ಮಾಡಿ ಎಂದು ಹೇಳಿದರು.ಕಾರ್ಯಾಗಾರಕ್ಕೆ ಕೆಲವು ಪಂಚಾಯ್ತಿ ಅಧ್ಯಕ್ಷರು, ಕಾರ್ಯದರ್ಶಿಗಳು, ಅಭಿವೃದ್ಧಿ ಅಧಿಕಾರಿಗಳು ಗೈರಾಗಿದ್ದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ವಿಧಾನಸಭಾಧ್ಯಕ್ಷರು, ವಿಧಾನಸಭೆಯ ಅಧ್ಯಕ್ಷರ ಕ್ಷೇತ್ರದಲ್ಲೇ ಹೀಗಾದರೆ ಉಳಿದ ಕ್ಷೇತ್ರಗಳ ಗತಿಯೇನು ಎಂದು ಪ್ರಶ್ನಿಸಿದರು.ಈ ವರ್ಷ ಖಾತ್ರಿ ಯೋಜನೆ ತಾಲ್ಲೂಕಿನಲ್ಲಿ ನಿರೀಕ್ಷಿತ ಪ್ರಗತಿ ಆಗಿಲ್ಲ. ಗ್ರಾಮ ಪಂಚಾಯ್ತಿ ಮಹಿಳಾ ಅಧ್ಯಕ್ಷರ ನಿರಾಸಕ್ತಿಯೂ ಇದಕ್ಕೆ ಕಾರಣವಾಗಿದೆ. ಉಳಿದಿರುವ ಮೂರು ತಿಂಗಳಲ್ಲಿ ಯೋಜನೆ ಯಶಸ್ಸಿಗೆ ಶ್ರಮಿಸಿ ಎಂದು ಮನವಿ ಮಾಡಿದರು.ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಹರೀಶ್‌ ಗಂಟೆ, ಉಪಾಧ್ಯಕ್ಷೆ ಗೌರಮ್ಮ ರಾಮಪ್ಪ, ಜಿಲ್ಲಾ ಪಂಚಾಯ್ತಿ ಸದಸ್ಯೆ ಲಲಿತಾ ನಾರಾಯಣ್‌, ಕಾರ್ಯ ನಿರ್ವಹಣಾಧಿಕಾರಿ ಸಿದ್ದಪ್ಪ ಹಾಜರಿದ್ದರು.ಹನುಮ ಜಯಂತಿ: ರಥೋತ್ಸವ

ಸಾಗರ: ನಗರದ ಅಶೋಕ ರಸ್ತೆಯಲ್ಲಿರುವ ವೀರಾಂಜನೇಯ ಸ್ವಾಮಿ ದೇವಸ್ಥಾನ ಸೇವಾ ಪ್ರತಿಷ್ಠಾನ ವತಿಯಿಂದ ಹನುಮ ಜಯಂತಿ ಅಂಗವಾಗಿ ಡಿ.13ರಿಂದ 15ರವರೆಗೆ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.ಡಿ.13ರ ಬೆಳಿಗ್ಗೆ 6ಕ್ಕೆ ಗಣಪತಿ ಪೂಜೆ, ಹನುಮ ದಷಾಕ್ಷರ ಮಂತ್ರ ಹವನ, ಸಾರ್ವತ್ರಿಕ ಹವಾಮಾನ ಹವನ, ಸಂಜೆ 6ಕ್ಕೆ ಅಡ್ಡಪಲ್ಲಕ್ಕಿ ಉತ್ಸವ ನಡೆಯಲಿದೆ. ಡಿ.14ರಂದು ಬೆಳಿಗ್ಗೆ 10.45ರಿಂದ ವೀರಾಂಜನೇಯ ಸ್ವಾಮಿಯ ರಥಾರೋಹಣ ಕಾರ್ಯಕ್ರಮ ಆಯೋಜಿಸಲಾಗಿದೆ. ನಂತರ ವಿವಿಧ ಕ್ಷೇತ್ರಗಳ ಸಾಧಕರಿಗೆ ವೀರ ಹನುಮಾನ್‌ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಮಧ್ಯಾಹ್ನ 1.30ಕ್ಕೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿದ್ದು, ಸಂಜೆ 6.30ಕ್ಕೆ ರಥಾರೂಢ ಸ್ವಾಮಿಯ ರಾಜಬೀದಿ ಉತ್ಸವ ನಡೆಯಲಿದೆ.ಡಿ.15ರ ಬೆಳಿಗ್ಗೆ ಅವಭೃತ ಸ್ನಾನ ಪೂಜಾ ಕಾರ್ಯಕ್ರಮ ನಡೆಯಲಿದ್ದು ಸಂಜೆ 6.30ಕ್ಕೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ಪ್ರತಿಕ್ರಿಯಿಸಿ (+)