ಭಾನುವಾರ, ಜೂನ್ 20, 2021
28 °C

ಉದ್ಯೋಗ ಮೇಳದಿಂದ 7.50 ಲಕ್ಷ ಜನರಿಗೆ ನೌಕರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ಸರ್ಕಾರ ನಡೆಸುವ ಉದ್ಯೋಗ ಮೇಳಗಳಿಂದ ಬಹಳಷ್ಟು ನಿರುದ್ಯೋಗಿಗಳ ಸಮಸ್ಯೆಗೆ ಪರಿಹಾರವನ್ನು ಒದಗಿಸಿವೆ. ಸರ್ಕಾರವು ಇದುವರೆಗೂ ಅನೇಕ ಉದ್ಯೋಗ ಮೇಳಗಳನ್ನು ನಡೆಸಿ, ಅಲ್ಲಿ ಏಳೂವರೆ ಲಕ್ಷ ಜನಕ್ಕೆ ಉದ್ಯೋಗ ಕಲ್ಪಿಸಿಕೊಟ್ಟಿದೆ~ ಎಂದು ಉದ್ಯೋಗ ಮತ್ತು ತರಬೇತಿ ಇಲಾಖೆ ಜಂಟಿ ನಿರ್ದೇಶಕ ಈಶ್ವರ ನಾಯಕ ಹೇಳಿದರು.ಗ್ರಾಮೀಣ ಮಾನವ ಸಂಪನ್ಮೂಲ ಮತ್ತು ತಾಂತ್ರಿಕ ಪ್ರತಿಷ್ಠಾನ ಹಾಗೂ ಕರ್ನಾಟಕ ರಾಜ್ಯ ವೀರಶೈವ ಪಂಚಮಸಾಲಿ ಸಂಘದ ವತಿಯಿಂದ ಗುರುವಾರ ಅರಮನೆ ಮೈದಾನದಲ್ಲಿ ಏರ್ಪಡಿಸಿದ್ದ `ಎಜುಟೆಕ್ ಮೇಳ-ಜಪಾನ್~  ಮೇಳವನ್ನು ಉದ್ಘಾಟಿಸಿ ಅವರು ಮಾತನಾಡಿದರು.`ಗ್ರಾಮಾಂತರ ಮತ್ತು ನಗರ ಪ್ರದೇಶಗಳಿಂದ ಐಟಿಐ ವಿದ್ಯಾರ್ಥಿಗಳು ಸಾವಿರಾರು ಸಂಖ್ಯೆಯಲ್ಲಿ ಹೊರಬರುತ್ತಾರೆ. ಆದರೆ ಅವರಿಗೆ ಮುಂದಿನ ಮಾಹಿತಿ ತಿಳಿಯದೆ, ಉದ್ಯೋಗವನ್ನು ಅರಸುತ್ತ ನಿರುದ್ಯೋಗಿಗಳಾಗುತ್ತಾರೆ. ಈ ನಿಟ್ಟಿನಲ್ಲಿ ಉದ್ಯೋಗ ಮತ್ತು ತರಬೇತಿ ಸಂಸ್ಥೆಯು ಅನೇಕ ಕ್ರಮಗಳನ್ನು ಕೈಗೊಂಡಿದೆ~ ಎಂದರು.ಕರ್ನಾಟಕ ರಾಜ್ಯ ವೀರಶೈವ, ಪಂಚಮಸಾಲಿ ಸಂಘದ ಅಧ್ಯಕ್ಷ ಬಸವರಾಜ ದಿಂಡೂರು ಮಾತನಾಡಿ, `ಉದ್ಯೋಗ ಮೇಳಗಳು ಬದುಕಿನ ವೃತ್ತಿ ಜೀವನಕ್ಕೆ ತಿರುವು ನೀಡುವಂತಹವುಗಳಾಗಿವೆ. ವಿದ್ಯಾರ್ಥಿಗಳು ಇಂತಹ ಅವಕಾಶಗಳನ್ನು ಉತ್ತಮವಾಗಿ ಬಳಸಿಕೊಳ್ಳಬೇಕು~ ಎಂದರು.`ಯುವಕರು ತಮ್ಮ ಆತ್ಮವಿಶ್ವಾಸವನ್ನು ಬೆಳೆಸಿಕೊಳ್ಳಬೇಕು. ಏನನ್ನಾದರೂ ಸಾಧಿಸುವ ಛಲ ಹೊಂದಿರಬೇಕು. ಆಗಲೇ ಬದುಕಿನಲ್ಲಿ ಏನಾದರೂ ಸಾಧಿಸಲು ಸಾಧ್ಯ~ ಎಂದು ವಿದ್ಯಾರ್ಥಿಗಳಿಗೆ ಸ್ಫೂರ್ತಿ ತುಂಬಿದರು.

ಕಾರ್ಯಕ್ರಮದಲ್ಲಿ ಕರ್ನಾಟಕ ಜರ್ಮನ್ ತಾಂತ್ರಿಕ ತರಬೇತಿ ಸಂಸ್ಥೆಯ ನಿರ್ದೇಶಕ ಪ್ರತೀಕ ಪದಕಣ್ಣಾಯ, ಗ್ರಾಮೀಣ ಮಾನವ ಸಂಪನ್ಮೂಲ ತಾಂತ್ರಿಕ ಪ್ರತಿಷ್ಠಾನದ ಅಧ್ಯಕ್ಷ ಬಿ.ಪಿ.ನಟರಾಜ್ ಉಪಸ್ಥಿತರಿದ್ದರು.ಉದ್ಯೋಗ ಮೇಳವು ರಾಜ್ಯದ ನಗರ, ಗ್ರಾಮೀಣ ಪ್ರದೇಶದ ಐಟಿಐ ಡಿಪ್ಲೊಮಾ ಮತ್ತು ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಶಾಲೆಯನ್ನು ಅರ್ಧಕ್ಕೆ ಬಿಟ್ಟು ತಾಂತ್ರಿಕ ತರಬೇತಿ ಇಲ್ಲದೆ ಸಣ್ಣ ಕೈಗಾರಿಕೆಗಳಲ್ಲಿ ಸಹಾಯಕರಾಗಿ ಕೆಲಸ ಮಾಡುತ್ತಿರುವ ಉದ್ಯೋಗಿಗಳಿಗೆ, ಎಸ್ಸೆಸ್ಸೆಲ್ಸಿ ನಂತರ ಮುಂದೇನು? ಎನ್ನುವ ಪ್ರಶ್ನೆ ಇಟ್ಟುಕೊಂಡು ಕಾಯುತ್ತಿರುವ ವಿದ್ಯಾರ್ಥಿಗಳಿಗೆ ಉದ್ಯೋಗದ ಮಾರ್ಗದರ್ಶನಕ್ಕಾಗಿ ಈ ಮೇಳವು ಉಪಯೋಗವಾಗಲಿದೆ.ಮೇಳಕ್ಕೆ ರಾಜ್ಯದ ಎಲ್ಲ ಜಿಲ್ಲೆಗಳಿಂದ ಗ್ರಾಮೀಣ ಮಕ್ಕಳು ಭಾಗವಹಿಸಲಿದ್ದಾರೆ. ಇಂದಿನ ಜಗತ್ತಿನ ಆವಿಷ್ಕಾರಗಳು- ಯಂತ್ರೋಪಕರಣಗಳ ಬಗ್ಗೆ, ರಾಜ್ಯ ಸರ್ಕಾರದ ತರಬೇತಿ ಸಂಸ್ಥೆಗಳು, ಖಾಸಗಿ ಕಂಪೆನಿಗಳ ಉದ್ಯೋಗದ ಮಾಹಿತಿ ಮತ್ತು ಅತಿ ಕಡಿಮೆ ಬೆಲೆಯಲ್ಲಿ ಸಿಗುವಂತಹ ಹಲವಾರು ಉಪಕರಣಗಳು, ಪುಸ್ತಕಗಳು, ಗ್ರಾಮೀಣ ಮಕ್ಕಳಿಗೆ ಮುಂದಿನ ಭವಿಷ್ಯಕ್ಕೆ ಬೇಕಾಗುವಂತಹ ಸಾಫ್ಟವೇರ್ ತರಬೇತಿ, ಹೊರದೇಶಕ್ಕೆ ಹೋಗಲು ಬೇಕಾಗುವಂತಹ ಮಾಹಿತಿಯೊಂದಿಗೆ ಇಡೀ ರಾಜ್ಯದಲ್ಲಿ ಐಟಿಐ, ಡಿಪ್ಲೊಮಾ ಮತ್ತು ಬಿಇ ವಿದ್ಯಾರ್ಥಿಗಳಿಗೆ ತಾಂತ್ರಿಕ ನಿರುದ್ಯೋಗ ನಿವಾರಣೆ ಮಾಡುವಂತಹ ಮಾಹಿತಿಯನ್ನು ಒದಗಿಸಲಾಗುವುದು ಎಂದು ಗ್ರಾಮೀಣ ಮಾನವ ಸಂಪನ್ಮೂಲ ತಾಂತ್ರಿಕ ಪ್ರತಿಷ್ಠಾನದ ಅಧ್ಯಕ್ಷ ಬಿ.ಪಿ.ನಟರಾಜ್ ಹೇಳಿದರು.ಈ ಮೇಳದಲ್ಲಿ ಉದ್ಯೋಗ, ಅಪ್ರೆಂಟಿಸ್ ಮತ್ತು ಮಾಹಿತಿ ಎಲ್ಲವೂ ಒಂದೇ ವೇದಿಕೆ ಅಡಿಯಲ್ಲಿ ದೊರೆಯಲಿದೆ. ಮೇಳವು ಮಾರ್ಚ್ 4 ರವರೆಗೆ ನಡೆಯಲಿದೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.