ಸೋಮವಾರ, ಮೇ 23, 2022
26 °C

ಉಪಗ್ರಹ ಯಶಸ್ವಿ ಉಡ್ಡಯನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶ್ರೀಹರಿಕೋಟಾ (ಎಪಿ): ಭೂಸ್ಥಳ ಮಾಹಿತಿ ರವಾನೆಗೆಂದೇ ರೂಪಿಸಲಾದ `ಐಆರ್‌ಎನ್‌ಎಸ್‌ಎಸ್-1ಎ' ಉಪಗ್ರಹ ವನ್ನು ಹೊತ್ತ `ಪಿಎಸ್‌ಎಲ್‌ವಿ-ಸಿ 22' ರಾಕೆಟ್ ಉಡಾವಣೆ ಇಲ್ಲಿನ ಸತೀಶ ಧವನ್ ಅಂತರಿಕ್ಷ ಕೇಂದ್ರದಿಂದ ಯಶಸ್ವಿ ಯಾಗಿ ನಡೆಯಿತು.ಸೋಮವಾರ ರಾತ್ರಿ ಸರಿಯಾಗಿ 11.41ಕ್ಕೆ ಕ್ಷಣಗಣನೆ ಅಂತ್ಯವಾಗುತ್ತಿದ್ದಂತೆ ಹೊಗೆಯುಗುಳುತ್ತ ಆಗಸಕ್ಕೆ ಅಗಾಧ ವೇಗದೊಂದಿಗೆ ಚಿಮ್ಮಿದ ರಾಕೆಟ್, 20 ನಿಮಿಷಗಳ ತರುವಾಯ ಉಪಗ್ರಹವನ್ನು ನಿಗದಿತ ಕಕ್ಷೆಯಲ್ಲಿ ಇರಿಸಿತು. `ಪಿಎಸ್‌ಎಲ್‌ವಿ ಅತ್ಯಂತ ನಂಬುಗೆಯ ಉಡ್ಡಯನ ವಾಹಕ ಎಂಬುದು ಇದರಿಂದ ಮತ್ತೊಮ್ಮೆ ಸಾಬೀತಾಗಿದೆ. ಈ ಉಪಗ್ರಹ ಉಡಾವಣೆಯೊಂದಿಗೆ ನಾವು ಬಾಹ್ಯಾಕಾಶ ಕ್ಷೇತ್ರದಲ್ಲಿ ಮತ್ತೊಂದು ಹೊಸ ಶಕೆ ಆರಂಭಿಸಿದಂತಾಗಿದೆ' ಎಂದು ಇಸ್ರೋ ಅಧ್ಯಕ್ಷ ಕೆ.ರಾಧಾಕೃಷ್ಣನ್ ಸಂತಸ ವ್ಯಕ್ತಪಡಿಸಿದರು.ದೇಶದಲ್ಲಿನ ಬಳಕೆದಾರರಿಗೆ ಭೂಸ್ಥಳ ಮಾಹಿತಿ ನೀಡಲೆಂದೇ ವಿಶೇಷವಾಗಿ ರೂಪಿಸಲಾದ ಈ ಉಪಗ್ರಹವು 10 ವರ್ಷಗಳ ಅವಧಿಯವರೆಗೆ ಕಾರ್ಯನಿರ್ವಹಿಸಲಿದೆ. `ಪಿಎಸ್‌ಎಲ್‌ವಿ ರಾಕೆಟ್‌ನಿಂದ ಇನ್ನೊಂದು ಉಪಗ್ರಹವನ್ನು ನಾವು ಯಶಸ್ವಿಯಾಗಿ ಕಕ್ಷೆಗೆ ಸೇರಿಸಿದ್ದೇವೆ. ಇದು ಪಿಎಸ್‌ಎಲ್‌ವಿಯ 23ನೇ ಉಡ್ಡಯನ' ಎಂದು ರಾಧಾಕೃಷ್ಣನ್ ತಿಳಿಸಿದರು.ಉಪಗ್ರಹದಿಂದ ಲಭ್ಯವಾಗಲಿರುವ ಮಾಹಿತಿಯು ಪ್ರಾಕೃತಿಕ ವಿಕೋಪ ನಿರ್ವಹಣೆ, ವಾಹನಗಳ ಸಂಚಾರ ಹಾಗೂ ನೌಕಾ ಸಂಚಾರ ಸೇರಿದಂತೆ ಹಲವು ಬಗೆಯಲ್ಲಿ ನೆರವು ನೀಡಲಿದೆ. ನಕ್ಷೆ ತಯಾರಿಕೆ, ಭೌಗೋಳಿಕ ದತ್ತಾಂಶ ಸಂಗ್ರಹ, ಕರಾರುವಾಕ್ಕು ಸಮಯ ನಿಗದಿ, ಚಾಲಕರಿಗೆ ದೃಶ್ಯ ಹಾಗೂ ಧ್ವನಿ ಸೂಚನೆ, ಮೊಬೈಲ್ ಫೋನ್‌ಗಳಲ್ಲಿ ಭೌಗೋಳಿಕ ಮಾಹಿತಿ ನೀಡುವುದು, ಪ್ರವಾಸಿಗರು ಹಾಗೂ ಚಾರಣಿಗರಿಗೆ ದಿಕ್ಸೂಚಿ ನೆರವನ್ನು ಈ ಉಪಗ್ರಹ ಒದಗಿಸಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.