ಮಂಗಳವಾರ, ಮೇ 11, 2021
20 °C
ಛಪ್ರಾ ಲಾಲೂಗೆ, ಹಂಡಿಯಾ ಮುಲಾಯಂಗೆ, ಹೌರಾ ಮಮತಾಗೆ

ಉಪಚುನಾವಣೆ: ಮೋದಿಗೆ ಭೀಮಬಲ, ನಿತೀಶ್ ಕುಮಾರ್ ಗೆ ಪೆಟ್ಟು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉಪಚುನಾವಣೆ: ಮೋದಿಗೆ ಭೀಮಬಲ, ನಿತೀಶ್ ಕುಮಾರ್ ಗೆ ಪೆಟ್ಟು

ಅಹಮದಾಬಾದ್  (ಪಿಟಿಐ): ಗುಜರಾತಿನಲ್ಲಿ ನಡೆದ ಉಪಚುನಾವಣೆಗಳಲ್ಲಿ ಆಡಳಿತಾರೂಢ ಬಿಜೆಪಿ ಜಯಭೇರಿ ಭಾರಿಸಿದ್ದು ಎರಡು ಲೋಕಸಭಾ ಸ್ಥಾನಗಳು ಮತ್ತು ಮೂರು ವಿಧಾನಸಭಾ ಸ್ಥಾನಗಳನ್ನು ಕಾಂಗ್ರೆಸ್ಸಿನಿಂದ ಕಿತ್ತುಕೊಂಡಿದೆ. ಇನ್ನೂ ಮತ ಎಣಿಕೆ ಮುಂದುವರೆದಿರುವ ಧೋರಜಿ ಕ್ಷೇತ್ರದಲ್ಲೂ ಬಿಜೆಪಿ ಮುನ್ನಡೆಯಲ್ಲಿದೆ.ಪೋರ್ ಬಂದರ್ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಮಹತ್ವದ ಜಯ ಸಾಧಿಸಿದ್ದು ಪಕ್ಷದ ವಿಠ್ಠಲ್ ರಡಾಡಿಯಾ ಅವರು 1,28,000 ಮತಗಳನ್ನು ಗಳಿಸಿ ಜಯ ಗಳಿಸಿದ್ದಾರೆ. ವಿಠ್ಠಲ್ ಅವರು ಕಳೆದ ವರ್ಷ ಕಾಂಗ್ರೆಸ್ ಸಂಸದರಾಗಿದ್ದಾಗ ಮತಗಟ್ಟೆ ಬಳಿ ಬಂದೂಕು ಪ್ರದರ್ಶಿಸಿ ಬಂಧಿತರಾಗಿದ್ದು.  ಆ ನಂತರ ಅವರು ಬಿಜೆಪಿಗೆ ಪಕ್ಷಾಂತರಗೊಂಡಿದ್ದರು.ಕಾಂಗ್ರೆಸ್ ಸಂಸದ ಮುಖೇಶ ಗಢವಿ ನಿಧನದಿಂದ ತೆರವಾಗಿದ್ದ ಸಬರ್ಕಾಂತ ಲೋಕಸಭಾ ಕ್ಷೇತ್ರವನ್ನು ಬಿಜೆಪಿಯ ಹರಿಭಾಯಿ ಚೌಧರಿ ಅವರು 71,000 ಮತಗಳ ಅಂತರದಲ್ಲಿ ಪ್ರತಿಸ್ಪರ್ಧಿ ಕಾಂಗ್ರೆಸ್ಸಿನ ಕೃಷ್ಣಾ ಗಢವಿ ಅವರನ್ನು ಸೋಲಿಸಿ ಗೆದ್ದುಕೊಂಡರು.ಛಪ್ರಾ (ಬಿಹಾರ) ವರದಿ: ಬಿಹಾರಿನ ಮಹಾರಾಜಗಂಜ್ ಲೋಕಸಭಾ ಸ್ಥಾನಕ್ಕೆ ನಡೆದ ಉಪಚುನಾವಣೆಯಲ್ಲಿ ಲಾಲೂ ಪ್ರಸಾದ್ ಅವರ ರಾಷ್ಟ್ರೀಯ ಜನತಾದಳವು (ಆರ್ ಜೆ ಡಿ)  1.37 ಲಕ್ಷ ಮತಗಳ ಭಾರಿ ಅಂತರದಲ್ಲಿ ಗೆಲುವು ಸಾಧಿಸಿದೆ. ಆದರೆ ಸಿವಾನ್ ನ ಗೋರಿಯಾಕೋಥಿಯಲ್ಲಿನ 118ನೇ ಮತಗಟ್ಟೆಯಲ್ಲಿ ಎಲೆಕ್ಟ್ರಾನಿಕ್ ಮತ ಯಂತ್ರದಲ್ಲಿ ತಾಂತ್ರಿಕ ಸಮಸ್ಯೆ ಕಂಡು ಬಂದ ಕಾರಣ ಇಲ್ಲಿ ಮತ ಎಣಿಕೆ ನಡೆಯದ ಹಿನ್ನೆಲೆಯಲ್ಲಿ ಫಲಿತಾಂಶವನ್ನು ಅಧಿಕೃತವಾಗಿ ಪ್ರಕಟಿಸಲಾಗಿಲ್ಲ.ಆರ್ ಜೆಡಿಯ ಪ್ರಭುನಾಥ ಸಿಂಗ್ ಅವರು 3,81,436 ಮತಗಳನ್ನು ಪಡೆದರೆ ಜನತಾದಳ (ಯು) ಅಭ್ಯರ್ಥಿ ಪಿ.ಕೆ. ಶಾಹಿ ಅವರು 2,44,324 ಹಾಗೂ ಕಾಂಗ್ರೆಸ್ಸಿನ ಜಿತೇಂದ್ರ ಸ್ವಾಮಿ ಅವರು 33,905 ಮತಗಳನ್ನು ಗಳಿಸಿದರು.ಅಲಹಾಬಾದ್ ವರದಿ: ಉತ್ತರ ಪ್ರದೇಶದಲ್ಲಿ ಆಡಳಿತಾರೂಢ ಸಮಾಜವಾದಿ ಪಕ್ಷವು ಪ್ರತಿಸ್ಪರ್ಧಿ ಬಿಎಸ್ ಪಿ ಅಭ್ಯರ್ಥಿಯನ್ನು 26,000 ಮತಗಳ ಅಂತರದಿಂದ ಪರಾಭವಗೊಳಿಸುವ ಮೂಲಕ ಹಂಡಿಯಾ ವಿಧಾನಸಭಾ ಕ್ಷೇತ್ರವನ್ನು ಉಳಿಸಿಕೊಂಡಿದೆ.ಜೂನ್ 2ರಂದು ನಡೆದಿದ್ದ ಉಪಚುನಾವಣೆಯಲ್ಲಿ ಸಮಾಜವಾದಿ ಪಕ್ಷದ ಮಹೇಶ ನಾರಾಯಣ ಸಿಂಗ್ ಅವರು 81,655 ಮತಗಳಿಸಿ, ಬಿಎಸ್ ಪಿಯ ಪಂಕಜ್ ತ್ರಿಪಾಠಿ (54838 ಮತಗಳು) ಅವರನ್ನು ಪರಾಭವಗೊಳಿಸಿದರು.ಕೋಲ್ಕತ್ತಾ ವರದಿ: ಹೌರಾ ಲೋಕಸಭಾ ಕ್ಷೇತ್ರದಲ್ಲಿ ತೃಣಮೂಲ ಕಾಂಗ್ರೆಸ್  ಪಕ್ಷದ ಅಭ್ಯರ್ಥಿ ಪ್ರಸುನ್ ಬ್ಯಾನರ್ಜಿ ಅವರು ಸಮೀಪ ಸ್ಪರ್ಧಿ ಸಿಪಿಎಂನ ಶ್ರೀದಿಪ್ ಭಟ್ಟಾಚಾರ್ಜಿ ಅವರನ್ನು 27,000 ಮತಗಳ ಅಂತರದಿಂದ ಸೋಲಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.