ಭಾನುವಾರ, ಫೆಬ್ರವರಿ 28, 2021
23 °C
ನಗರ ಸಂಚಾರ

ಉಪಯೋಗಕ್ಕೆ ಬಾರದ ಯಾಂತ್ರೀಕೃತ ದೋಣಿ

ಪ್ರಜಾವಾಣಿ ವಾರ್ತೆ/ಪಿ.ಕೆ. ರವಿಕುಮಾರ್‌ Updated:

ಅಕ್ಷರ ಗಾತ್ರ : | |

ಉಪಯೋಗಕ್ಕೆ ಬಾರದ ಯಾಂತ್ರೀಕೃತ ದೋಣಿ

ಕಾರವಾರ: ಪ್ರಕೃತಿ ವಿಕೋಪ ಸಂದರ್ಭದಲ್ಲಿ ಸಂತ್ರಸ್ತರ ನೆರವು ಹಾಗೂ ರಕ್ಷಣೆಗಾಗಿ ಸರ್ಕಾರ ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ ಗೃಹರಕ್ಷಕ ಇಲಾಖೆಗೆ ನೀಡಿದ್ದ ಯಾಂತ್ರೀಕೃತ ದೋಣಿ ಉಪಯೋಗಕ್ಕೆ ಬಾರದೆ ನಾಲ್ಕೈದು ವರ್ಷಗಳಿಂದ ನಿಂತಲ್ಲೇ ನಿಂತಿದೆ.ನಗರದ ಹಳೇ ಎಸ್ಪಿ ಕಚೇರಿ ಆವರಣದಲ್ಲಿ ನಿಂತಿರುವ ಈ ದೋಣಿಯನ್ನು ಒಮ್ಮೆಯೂ ಬಳಕೆ ಮಾಡಿಲ್ಲ. ಈ ದೋಣಿಗೆ ಹೊದಿಕೆ ಹಾಕದೇ ಇರುವುದರಿಂದ ಬಿಸಿಲು, ಮಳೆಗೆ ಸಿಲುಕಿ ಹಾಳಾಗುತ್ತಿದೆ. ದೋಣಿಯ ಎಂಜಿನ್‌ ಮಾತ್ರ ಹಾಳಾಗದಂತೆ ಪ್ಲಾಸ್ಟಿಕ್‌ ಹೊದಿಕೆಯಿಂದ ರಕ್ಷಣೆ ಮಾಡಲಾಗಿದೆ.ಪ್ರಕೃತಿ ವಿಕೋಪ, ನೆರೆ ಹಾವಳಿ, ಪ್ರವಾಹದಂತಹ ಸಂದರ್ಭದಲ್ಲಿ ಸಂತ್ರಸ್ತರ ನೆರವಿಗೆ ಉಪಯೋಗವಾಗಲಿ ಎಂಬ ಉದ್ದೇಶದಿಂದ ನಾಲ್ಕು ವರ್ಷದ ಹಿಂದೆ ರಾಜ್ಯ ಸರ್ಕಾರವು ಹೆಚ್ಚು ಪ್ರವಾಹ ಉಂಟಾಗುವ 10ಕ್ಕೂ ಹೆಚ್ಚು ಜಿಲ್ಲೆಗಳಿಗೆ ₨ 10 ಲಕ್ಷ ಮೌಲ್ಯದ ಯಾಂತ್ರೀಕೃತ ದೋಣಿ ನೀಡಿತ್ತು. ಆ ಸಂದರ್ಭದಲ್ಲಿ ಉತ್ತರ ಕನ್ನಡ ಜಿಲ್ಲೆಗೂ ಸಹ ಇಂತಹ ಒಂದು ಬೋಟ್​ ಅನ್ನು ನೀಡಿ ಅದನ್ನು ಗೃಹರಕ್ಷಕ ಇಲಾಖೆಯ ಸುಪರ್ದಿಗೆ ನೀಡಲಾಗಿತ್ತು.ಈ ಯಾಂತ್ರೀಕೃತ ದೋಣಿ ತುಂಬಾ ತೂಕ ಹೊಂದಿದ್ದು, ನೆರೆ ಹಾಗೂ ಪ್ರವಾಹ ಉಂಟಾದ ಸ್ಥಳಕ್ಕೆ ಸಾಗಿಸುವುದು ಕಷ್ಟಕರ. ಇದನ್ನು ಸ್ಥಳಾಂತರಿಸಬೇಕಾದರೆ ಕ್ರೇನ್‌ ಸಹಾಯ ಬೇಕು. ಇದರ ಬದಲೂ ಹಗುರವಾದ ಹಾಗೂ ಪ್ರವಾಹ ಉಂಟಾದ ಸ್ಥಳಕ್ಕೆ ಸರಾಗವಾಗಿ ಸಾಗಿಸಬಹುದಾದ ರಬ್ಬರ್‌ ದೋಣಿಗಳನ್ನು ನೀಡಿದರೆ ಉಪಯುಕ್ತವಾಗುತ್ತಿತ್ತು ಎನ್ನುವುದು ಸ್ಥಳೀಯರ ಅಭಿಪ್ರಾಯ. ‘ಸರ್ಕಾರ ಹಿಂದೆ ಮುಂದೆ ಯೋಚನೆ ಮಾಡದೇ ಲಕ್ಷಾಂತರ ರೂಪಾಯಿ ವ್ಯಯ ಮಾಡಿ ದೋಣಿಗಳನ್ನು ನೀಡಿದೆ. ಉಪಯೋಗಕ್ಕೆ ಬಾರದೇ ಇರುವ ಇಂತಹ ಯೋಜನೆಗಳಿಂದ ಸರ್ಕಾರದ ಬೊಕ್ಕಸವನ್ನು ಬರಿದು ಮಾಡುವ ಬದಲು ಪರ್ಯಾಯ ಮಾರ್ಗ ಕಂಡುಕೊಳ್ಳುವುದು ಒಳಿತು. ತುಕ್ಕು ಹಿಡಿಯುತ್ತಿರುವ ಈ ದೋಣಿಯನ್ನು ಪ್ರವಾಸೋದ್ಯಮ ಅಥವಾ ಮೀನುಗಾರಿಕೆ ಇಲಾಖೆಗೆ ನೀಡಿದರೆ ಸದುಪಯೋಗವಾಗಲಿದೆ’ ಎನ್ನುತ್ತಾರೆ ಸ್ಥಳೀಯ ಕಿಶೋರ್‌ ನಾಯ್ಕ.‘ನಾಲ್ಕೈದು ವರ್ಷಗಳ ಅವಧಿಯಲ್ಲಿ ಪ್ರಕೃತಿ ವಿಕೋಪ ಕಾಣಿಸಿಕೊಳ್ಳದೇ ಇರುವುದರಿಂದ ಈ ದೋಣಿಯನ್ನು ಬಳಕೆ ಮಾಡಿಲ್ಲ’ ಎಂದು ಗೃಹರಕ್ಷಕ ಇಲಾಖೆಯ ಡೆಪ್ಯುಟಿ ಕಮಾಂಡೆಂಟ್‌ ಜಯರಾಮ ‘ಪ್ರಜಾವಾಣಿ’ಗೆ ತಿಳಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.