ಸೋಮವಾರ, ಜೂನ್ 14, 2021
26 °C

ಉಪ್ಪಿಟ್ಟು-ಕಾಫಿ ಮಾಡುವುದೆಂದರೆ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉಪ್ಪಿಟ್ಟು-ಕಾಫಿ ಮಾಡುವುದೆಂದರೆ...

`ಇವಳೇ, ಇವತ್ತು ಸಾಯಂಕಾಲ ನನ್ನ ಸ್ನೇಹಿತರು, ಅದೇ ಉತ್ತರ ಕರ್ನಾಟಕದವರು, ಬರುತ್ತಾರೆ. ಹದವಾಗಿ ಅವರೇಕಾಳು ಹಾಕಿ ಉಪ್ಪಿಟ್ಟು, ಒಳ್ಳೇ ಕಾಫಿ ಮಾಡಿಬಿಡು.~

`ರೀ, ಹೋಮದ ದಿನ ಮಧ್ಯಾಹ್ನದ ಊಟಕ್ಕೆ ಕೇಟರರ್ಸ್‌ಗೆ ಹೇಳಿದರಾಯಿತು.ನಾನೇ ಬೆಳಗಿನ ತಿಂಡಿಗೆ ಬಿಸಿಯಾಗಿ ಉಪ್ಪಿಟ್ಟು ಕಾಫಿ ಮಾಡಿಬಿಡುತ್ತೇನೆ. ಖರ್ಚೂ ಕಡಿಮೆಯಾಗತ್ತೆ, ವಯಸ್ಸಾದವರಿಗೆ ಬೆಳಿಗ್ಗೆ, ಮಧ್ಯಾಹ್ನ ಎರಡು ಹೊತ್ತೂ `ಹೆವಿ~ಯಾಗಿ ತಿನ್ನುವುದೂ ತಪ್ಪುತ್ತೆ.~`ನನ್ನ ತಾಯಿ ಹಲವಾರು ಬಗೆಯ ಉಪ್ಪಿಟ್ಟು ಮಾಡುತ್ತಿದ್ದರಂತೆ ಗೊತ್ತಾ? ಬಹಳ ರುಚಿಯಾಗಿ ಮಾಡುತ್ತಿದ್ದರಿಂದ ಅವರ ಅತ್ತೆ ಮನೆಯಲ್ಲಿ ಅವರನ್ನು `ಉಪ್ಪಿಟ್ಟು ದೇವಿ~ ಎಂದೇ  ಪ್ರೀತಿಯಿಂದ ಕರೆಯುತ್ತಿದ್ದರಂತೆ.~

        

`ಬೇರ್ ಫೂಟ್ ಅಂಡ್ ಪ್ರೆಗ್ನೆಂಟ್~ ಎಂಬುದು ಬಹಳ ಹಳೆಯದಾದ ಒಂದು ನುಡಿಗಟ್ಟು! ಸುಮಾರು 1940ರಿಂದಲೇ ಮಹಿಳೆಯ ಬಗ್ಗೆ ಇರುವ ಈ ನುಡಿಗಟ್ಟಿನ ಅರ್ಥ  `ಮಹಿಳೆಯನ್ನು ಸಂತೋಷವಾಗಿರಿಸುವುದೆಂದರೆ  ಆಕೆಯನ್ನು ಸದಾ ಮನೆಯಲ್ಲಿರುವಂತೆ ಹಾಗೂ  ಗರ್ಭಿಣಿಯಾಗಿರುವಂತೆ ನೋಡಿಕೊಳ್ಳುವುದು~. ಈ ವಿವಾದಾತ್ಮಕ ನುಡಿಗಟ್ಟು,  ಒಟ್ಟಿನಲ್ಲಿ  ಸಮಾಜದಲ್ಲಿರುವ ಲಿಂಗತಾರತಮ್ಯವನ್ನು ತೋರಿಸುವ ಮಾತುಗಳೆಂದು ಒಪ್ಪಿಕೊಳ್ಳಬಹುದು.ಕೇವಲ ಭಾರತವೇ ಅಲ್ಲದೆ ಪ್ರಪಂಚದಾದ್ಯಂತ ಅಸ್ತಿತ್ವದಲ್ಲಿರುವ ಇತರ ದೇಶಗಳ ಸಮಾಜದ ವ್ಯವಸ್ಥೆಗಳಲ್ಲೂ ಮಹಿಳೆಯರ ಬಗ್ಗೆ ಇದೇ ಅಭಿಪ್ರಾಯ ಕಂಡುಬರುತ್ತದೆ. ಸ್ತ್ರೀವಾದಿ ನೆಲೆಯಲ್ಲಿ ಈ ಮಾತುಗಳನ್ನು ಅರ್ಥೈಸುವ ಇತರ ಅಭಿಪ್ರಾಯಗಳನ್ನು ಓದೋಣ-ಶೈನೈನ್ ಆಂಟೋನಿಯವರು ತಮ್ಮ ಕಥಾಸಂಕಲನ `ಬೇರ್ ಫೂಟ್ ಅಂಡ್ ಪ್ರೆಗ್ನೆಂಟ್~ ಎಂಬುದರ ಬಗ್ಗೆ ಚರ್ಚಿಸುತ್ತಾ `ಈ ಕಥಾಸಂಕಲನದ ಉದ್ದೇಶವು- ತಮ್ಮ ಮನೆಯ ಮಹಿಳೆಯರು ಇತರ ಜನರೊಂದಿಗೆ ಬೆರೆಯಬಾರದು ಹಾಗೂ ಸದಾ ಗರ್ಭಿಣಿಯರಾಗಿದ್ದು ಅಸಹಾಯಕ ಸ್ಥಿತಿಯಲ್ಲಿರಬೇಕು ಎಂದು ಬಯಸುವ ಪುರುಷರ ವಿಚಾರರಹಿತ ಹೆಮ್ಮೆಗೆ ಒಂದು ಸವಾಲಾಗಿದೆ.ಇದು ಮಹಿಳೆಯರನ್ನು ಸಮಾಜದಲ್ಲಿ ಕಾಣುವ ಒಂದು ಚಿತ್ರಣವೂ ಕೂಡ~ ಎಂದು ಅಭಿಪ್ರಾಯಪಡುತ್ತಾರೆ.ಜಪಾನ್, ಕೊರಿಯಾ ಹಾಗೂ ಚೀನ ರಾಷ್ಟ್ರಗಳಲ್ಲಿ ಮಹಿಳೆಯರು ಗೃಹಿಣಿಯರಾಗಿ ಹೊಲಿಗೆ, ಅಡುಗೆಕೆಲಸಗಳೇ ಅಲ್ಲದೆ ತಮ್ಮ ಸಂತಾನ ಬಲಿಷ್ಠವಾಗಿ, ಶಿಷ್ಟಾಚಾರಯುಕ್ತರಾಗಿ ಬೆಳೆಯುವಂತೆ ಮಾಡಲು ಸಹಾಯವಾಗುವ ವಿದ್ಯೆಗಳಲ್ಲೂ ಕುಶಲರಾಗಿರುವುದು ಅವಶ್ಯಕವೆನಿಸಿದೆ.ಈ ದೇಶಗಳಲ್ಲಿ ಕಂಡುಬರುವ ಸಾಂಪ್ರದಾಯಿಕ ಮಹಿಳೆಯರನ್ನು ಲು ಕ್ಸುನ್‌ರವರು `ವಿವೇಕವುಳ್ಳ ಮಾತೆ ಹಾಗೂ ನೈತಿಕತೆಯುಳ್ಳ ಪತ್ನಿ~ಯರೆಂದು ಅಭಿಪ್ರಾಯ ಪಡುತ್ತಾರೆ.`ಬೇರ್ ಫೂಟ್ ಅಂಡ್ ಪ್ರೆಗ್ನೆನ್ಸಿ~ ಎಂಬ ನುಡಿಗಟ್ಟು ಚಾಲ್ತಿಯಲ್ಲಿದ್ದ ಕಾಲದಲ್ಲಿ ಪುರುಷನು ಸ್ತ್ರೀಯರನ್ನು ಕೇವಲ ಗೃಹಿಣಿಯನ್ನಾಗಿ ನೋಡುತ್ತಿದ್ದದ್ದು ಸತ್ಯ! ಹಾಗೆಯೇ ಸ್ತ್ರೀಯರಿಗೆ ತಮ್ಮ ಸ್ಥಾನವು ಕೇವಲ ರುಚಿಯಾದ ಉಪ್ಪಿಟ್ಟು/ ಕಾಫಿ ಮಾಡುವುದಲ್ಲದೆ ಮನೆಯ ಇತರ ವಾರ್ತೆಗಳೊಂದಿಗೆ ಮಕ್ಕಳ ಜವಾಬ್ದಾರಿಯನ್ನೂ ಹೊರುತ್ತ ಜೀವನ ನಡೆಸಬೇಕೆಂಬ ಅರಿವಿದ್ದರೂ ಆ ಜವಾಬ್ದಾರಿಗಳನ್ನು ~ದೇಶಪ್ರೇಮ~ದ ಹೆಸರಿನಲ್ಲಿ ಸಂತೋಷವಾಗಿ ಸ್ವೀಕರಿಸುತ್ತಿದ್ದದ್ದು ಅಷ್ಟೇ ನಿಜವೂ ಕೂಡಾ!! ಸಮಕಾಲೀನ ಸಮಾಜದಲ್ಲಿ ಸ್ತ್ರೀಯ ಸ್ಥಾನವು ಹಿಂದಿನದಕ್ಕಿಂತಲೂ ಎಷ್ಟೋ ಸುಧಾರಿಸಿದೆ.     ಉಪ್ಪಿಟ್ಟು ಕಾಫಿ

`ಈ ಕಾಲವು ನನ್ನದು~ ಎಂದು ಅರಿತಿರುವ ಆಕೆಯು ತನ್ನನ್ನು ಪುರುಷನ ಸರಿಸಮಳಾಗಿ ಭಾವಿಸುತ್ತಾ, 

ತನ್ನ ಪ್ರತಿಭೆಯಿಂದ/ ಧನಾತ್ಮಕ ಚಿಂತನೆಯಿಂದ ಸ್ವಚ್ಛವಾದ ಜಗತ್ತನ್ನು ರೂಪಿಸುತ್ತಿದ್ದಾಳೆ.

ಮಮತೆಯನ್ನು ಸ್ವೀಕರಿಸುವ, ಹಂಚುವ, ಆಕೆ ಸಂತೋಷವನ್ನು ಹೊಮ್ಮಿಸುವ ಭಂಡಾರವಾಗಿದ್ದಾಳೆ.ಧರ್ಮನಿಷ್ಠಳಾಗಿ ತನ್ನ ಸಂತಾನವನ್ನು ಆ ಹಾದಿಯಲ್ಲಿ ಕೊಂಡೊಯ್ಯುವ ನಾವಿಕಳಾಗಿದ್ದಾಳೆ.ತಮ್ಮೆಡೆಗೆ ಬಂದ ಅವಕಾಶಗಳನ್ನು, ಉತ್ಸಾಹ ಹಾಗೂ ಒಳ್ಳೆಯ ಉದ್ದೇಶಗಳಿಂದ, ಹಿಡಿದಿಟ್ಟುಕೊಂಡು ಬೆಳೆಯುತ್ತಿದ್ದಾಳೆ.ಜಗತ್ತಿನೊಂದಿಗೆಯೇ ಅಲ್ಲದೆ ಇತರ ಮಹಿಳೆಯರೊಡನೆ ಸಂಪರ್ಕ ಕಲ್ಪಿಸಿಕೊಂಡು ಮಹತ್ತರವಾದ ಉದ್ದೇಶ/ಗುರಿಯನ್ನು ಹೊಂದಿದವಳಾಗಿದ್ದಾಳೆ.ಸಾಧಿಸಬೇಕೆಂದು ಆಶಿಸುವ ಕನಸುಗಳನ್ನು ಗುರಿಯನ್ನಾಗಿ ಮಾಡಿಕೊಂಡು ಅವುಗಳ ಯಶಸ್ಸಿಗೆ ಹಾತೊರೆಯುತ್ತಿದ್ದಾಳೆ.

                     

ಉಪ್ಪಿಟ್ಟು / ಕಾಫಿಗಳನ್ನು ತಯಾರಿಸುವುದು ಸುಲಭಸಾಧ್ಯವಲ್ಲ ಮತ್ತು ಸಾಧಾರಣ ವಿಷಯವೂ ಅಲ್ಲ! ಕೇವಲ ರವೆ- ನೀರು-ಉಪ್ಪುಗಳ ಮಿಶ್ರಣದಿಂದ ಉಪ್ಪಿಟ್ಟು, ನೀರು- ಹಾಲು-ಕಾಫಿ ಪುಡಿಗಳಿಂದ ಕಾಫಿಯೂ `ರೆಡಿ~ಯಾಗುವುದಿಲ್ಲ!! ಆದರೆ ಅವುಗಳನ್ನು ತಯಾರಿಸುವ ಮಹಿಳೆಯ `ಕೈಗುಣ~, ಕಚ್ಚಾವಸ್ತುಗಳ ಹದವಾದ ಮಿಶ್ರಣದಿಂದ ಮಾತ್ರ `ರುಚಿಯಾದ~ ಆಹಾರ  ತಿನ್ನಲು ಸಾಧ್ಯವಾಗುವುದು.ಹಲವಾರು ಕುಟುಂಬಗಳಲ್ಲಿ ಉಪ್ಪಿಟ್ಟು/ಕಾಫಿಗಳೆಂಬುದು ಬಹಳ ಸುಲಭವಾಗಿ, ಯಾವುದೇ ವಿಶೇಷ ಜ್ಞಾನವಿಲ್ಲದೆ  ತಯಾರಿಸಿಬಿಡಬಹುದಾದ ತಿಂಡಿ-ತೀರ್ಥವೆಂಬ ಅಭಿಪ್ರಾಯವಿದೆ.

 

ಅಂತಹ ಕುಟುಂಬಗಳಲ್ಲಿ ಮಹಿಳೆಯು ಕೇವಲ ರುಚಿಯಾದ ತಿಂಡಿ-ಅಡುಗೆಗಳನ್ನು ~ತಯಾರಿಸುವ ಮೆಷೀನು~ ಆಗುತ್ತಾಳೆಯೇ ವಿನಃ ಆಕೆಯು ತಯಾರಿಸುವ ಉಪ್ಪಿಟ್ಟು- ಕಾಫಿಗಳು ಆಕೆಯ `ಕುಕಿಂಗ್ ಎಕ್ಸ್‌ಪರ್ಟೈ್~ ಅನ್ನು ತೋರಿಸುವ `ಸಿಗ್ನೇಚರ್ ಡಿಶ್~ ಎಂದಂತೂ ಹೊಗಳಿಕೆಗೆ ಪಾತ್ರವಾಗುವುದಿಲ್ಲ!ಮಹಿಳೆಯರ ಜಾಗೃತಿಯು ಆಕೆಯು ಉಪ್ಪಿಟ್ಟು/ ಕಾಫಿ ಮಾಡುವಷ್ಟೇ ಸುಲಭಸಾಧ್ಯವಾಗಿ (ಪುರುಷರು ಹಾಗೆ ತಿಳಿದಿದ್ದಲ್ಲಿ) ಆಗುವುದಾಗಿದ್ದರೆ ಸ್ತ್ರೀವಾದಿ ತತ್ವಗಳು/ ವಿಚಾರಮಂಡನೆಗಳು/ ಹೋರಾಟಗಳ ಅವಶ್ಯಕತೆ ಇರುತ್ತಿರಲಿಲ್ಲವೇನೋ? ಅಡುಗೆಯ ಮನೆಯನ್ನು ಸಮರ್ಥವಾಗಿ ಸಂಭಾಳಿಸುವ ಆಕೆ ಕುಟುಂಬದ ಹೊರತಾದ ಜವಾಬ್ದಾರಿಗಳು ದೊರೆತಲ್ಲಿ ತನ್ನ ~ಸಿಗ್ನೇಚರ್ ಪ್ರಿಂಟ್~ ಒತ್ತಲಾರಳೇ?`ಬೇರ್ ಫೂಟ್ ಅಂಡ್ ಪ್ರೆಗ್ನೆಂಟ್~ ಎಂಬುದು ಇಂಗ್ಲಿಷ್‌ನಲ್ಲಿ ಬಹಳ ಹಳೆಯದಾದ ಒಂದು ನುಡಿಗಟ್ಟು! ಮನೆಯೊಳಗೇ ಸದಾ ಇದ್ದು ಗರ್ಭಿಣಿಯಾಗಿಯೇ ಇರುವ ಸ್ಥಿತಿ ಮಹಿಳೆಗೆ ಸಂತಸ ನೀಡುವಂತಹದ್ದು ಎಂಬ ಭಾವನೆ ಇದು....

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.