ಶುಕ್ರವಾರ, ಮೇ 20, 2022
23 °C

ಉಪ ಕಾಲುವೆ ಒಡೆದು ಅಪಾರ ಹಾನಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉಪ ಕಾಲುವೆ ಒಡೆದು ಅಪಾರ ಹಾನಿ

ದೇವದುರ್ಗ (ರಾಯಚೂರು ಜಿಲ್ಲೆ): ನಾರಾಯಣಪುರ ಬಲದಂಡೆ ಯೋಜನೆಯ ಸುಮಾರು 200 ಕ್ಯೂಸೆಕ್ ಸಾಮರ್ಥ್ಯದ 17ನೇ ಉಪಕಾಲುವೆ ಗುರುವಾರ ಮುಂಜಾನೆ ಭಾರಿ ಪ್ರಮಾಣದಲ್ಲಿ ಒಡೆದಿದ್ದು, ಇದರ ವ್ಯಾಪ್ತಿಯ 10 ಸಾವಿರ ಹೆಕ್ಟೇರ್ ಪ್ರದೇಶದ ಬೆಳೆಗೆ ಹಾನಿಯಾಗಿದೆ.ತಾಲ್ಲೂಕಿನ ರಾಮದುರ್ಗ ಗ್ರಾ.ಪಂ ವ್ಯಾಪ್ತಿಯ ಆಲ್ದರ್ತಿ ಗ್ರಾಮದ ವ್ಯಾಪ್ತಿಯಲ್ಲಿ ಹಾದು ಹೋಗುತ್ತಿರುವ ಈ ಉಪ ಕಾಲುವೆಯು ಏಕಾಏಕಿಯಾಗಿ ಹೆಚ್ಚು ನೀರು ಹರಿದು ಬಂದುದರಿಂದ ಒಡೆದಿದೆ. ಕಾಲುವೆಗೆ ನೀರು ಬಿಟ್ಟು ಎರಡು ತಿಂಗಳು ಕಳೆದಿಲ್ಲ. ಅಧಿಕಾರಿಗಳು ಕಾಲುವೆ ನಿರ್ವಹಣೆಗೆ ಬಗ್ಗೆ ನಿರ್ಲಕ್ಷಿಸಿದ್ದರಿಂದ ಬಿರುಕು ಬಿಟ್ಟು ಒಡೆದಿದೆ ಎಂದು ಸ್ಥಳದಲ್ಲಿದ್ದ ರೈತರು ದೂರಿದರು.ಕಾಲುವೆ ಪಕ್ಕದ ರೈತರಾದ ಅಯ್ಯಪ್ಪ ರಾಮದುರ್ಗ, ಸಿದ್ದಪ್ಪ, ಭೀಮಣ್ಣ, ಮಲ್ಲಪ್ಪ ಅವರ ಜಮೀನಿಗೆ ನೀರು ನುಗ್ಗಿ ನೂರಾರು ಎಕರೆ ಬತ್ತದ ಗದ್ದೆಗಳು ನೀರಿನ ರಭಸಕ್ಕೆ ಕೊಚ್ಚಿ ಹೋಗಿ ಬೆಳೆ ನಾಶವಾಗಿದೆ. ನೂರಾರು ರೈತರ ವಿವಿಧ ಬೆಳೆಗಳು ಜಲಾವೃತಗೊಂಡಿದ್ದು ಲಕ್ಷಗಟ್ಟಲೆ ರೂಪಾಯಿ ಹಾನಿಯಾಗಿದೆ.ತಾಲ್ಲೂಕಿನಲ್ಲಿ ಮುಂಗಾರು ಮತ್ತು ಹಿಂಗಾರು ಮಳೆ ಕೈಕೊಟ್ಟದ್ದರಿಂದ ರೈತರು ಕಂಗಾಲಾಗಿದ್ದಾರೆ. ಕಾಲುವೆ ನೀರು ನಂಬಿಕೊಂಡು ಬಿತ್ತನೆ ಮಾಡಿದರೆ ಕಾಲುವೆ ಕುಸಿತದ ಪ್ರಕರಣಗಳು ನಡೆದಿವೆ. ಇದಕ್ಕೆಲ್ಲ ಅಧಿಕಾರಿ ಮತ್ತು ಗುತ್ತೆಗೆದಾರರ ನಿರ್ಲಕ್ಷ್ಯವೇ ಕಾರಣ ಎಂದು ರೈತರು ದೂರಿದರು.ಕಾಲುವೆ ವ್ಯಾಪ್ತಿಯ 20ಕ್ಕೂ ಹೆಚ್ಚು ಗ್ರಾಮಗಳಲ್ಲಿ ಬೆಳೆ ಅಂತಿಮ ಹಂತದಲ್ಲಿದೆ. ನೀರು ಅವಶ್ಯಕವಾಗಿರುವುದರಿಂದ ಕಾಲುವೆ ಒಡೆದುದರಿಂದ ಇನ್ನೆರಡು ದಿನಗಳಲ್ಲಿ ಬೆಳೆಗಳು ಬಾಡುವ ಸಂಭವವಿದೆ. ದೊಡ್ಡ ಪ್ರಮಾಣದಲ್ಲಿ ಕಾಲುವೆ ಒಡೆದಿದ್ದು, ದುರಸ್ತಿಗೆ ಕನಿಷ್ಠ 15 ದಿನಗಳು ಬೇಕಾಗುತ್ತದೆ ಆಂದಾಜಿಸಲಾಗಿದೆ.ಕಾಲುವೆ ಒಡೆದು 16 ತಾಸು ಕಳೆದರೂ ನೀರು ಸ್ಥಗಿತಗೊಳ್ಳದ್ದರಿಂದ ಕೆಳಭಾಗದ  ಆಲ್ದರ್ತಿ ಗ್ರಾಮದ ಆಶ್ರಯ ಮನೆಗಳಿಗೆ ನೀರು ನುಗ್ಗಿದೆ. ಮುಖ್ಯ ಕಾಲುವೆಯಲ್ಲಿ ನೀರು ಸ್ಥಗಿತಗೊಳಿಸಲು ಸಮಸ್ಯೆ ಎದುರಾಗಿದ್ದು ಕಾಲುವೆಗೆ ಇದೇರೀತಿ ನೀರು ಹರಿದು ಬಂದರೆ ಹಳ್ಳದ ಪಕ್ಕದ ಆಲ್ದರ್ತಿ ತಾಂಡಾಕ್ಕೆ ನೀರು ನುಗ್ಗಬಹುದೆಂದು ಜನರು ಆತಂಕ ವ್ಯಕ್ತಪಡಿಸಿದ್ದಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.