ಭಾನುವಾರ, ಫೆಬ್ರವರಿ 28, 2021
31 °C
ಕಡೆಕೊಪ್ಪದಲ್ಲಿ ಬಯಲೇ ಬಹಿರ್ದೆಸೆ ತಾಣ; ಚರಂಡಿ ನಿರ್ಮಾಣ ಅವೈಜ್ಞಾನಿಕ

ಊರ ತುಂಬ ಶೌಚಾಲಯ: ಬಳಕೆ ಇಲ್ಲ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಊರ ತುಂಬ ಶೌಚಾಲಯ: ಬಳಕೆ ಇಲ್ಲ!

ಕುಷ್ಟಗಿ: ತಾಲ್ಲೂಕಿನ ಕಡೆಕೊಪ್ಪ ಗ್ರಾಮ ಅಭಿವೃದ್ಧಿ  ಮತ್ತು ನೈರ್ಮಲ್ಯ ವ್ಯವಸ್ಥೆಯಿಂದ ವಂಚಿತವಾಗಿದೆ. ಊರು ಪ್ರವೇಶಿಸುತ್ತಿದ್ದಂತೆ ಬಾಯಿ ಮೂಗು ಮುಚ್ಚಿಕೊಳ್ಳುವುದು ಅನಿವಾರ್ಯ.  ಊರ ತುಂಬ ವೈಯಕ್ತಿಕ ಶೌಚಾಲಯಗಳಿದ್ದರೂ ಅವುಗಳು ಬಳಕೆ ಆಗುತ್ತಿಲ್ಲ.ಸ್ವಚ್ಛ ಭಾರತ ಮಿಷನ್‌ ಯೋಜನೆಯಡಿ ಬಯಲು ಬಹಿರ್ದೆಸೆ ಮುಕ್ತ ಜಿಲ್ಲೆಯನ್ನಾಗಿಸುವ ನಿಟ್ಟಿನಲ್ಲಿ ಜಿಲ್ಲಾ ಪಂಚಾಯಿತಿ ಶ್ರಮವಹಿಸಿದೆ. ಆದರೆ ಕಡೆಕೊಪ್ಪ ಗ್ರಾಮದ ಚಿತ್ರಣ ಗಮನಿಸಿದರೆ ಜಿಲ್ಲೆಯ ಗೌರವಕ್ಕೇ ಕಪ್ಪುಚುಕ್ಕೆ ಬರುತ್ತದೆ. ಜಗತ್ತು ಬದಲಾದರೂ ಇಲ್ಲಿಯ ಜನ ತಂಬಿಗೆ ಹಿಡಿದು ಬಯಲಿಗೆ ಹೋಗುವುದನ್ನು ಬಿಟ್ಟಿಲ್ಲ ಎಂದು ಗ್ರಾಮದ ಕೆಲವರಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.ಕೇಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ 400 ಕುಟುಂಬಗಳಿರುವ ಗ್ರಾಮದಲ್ಲಿ ಸುಮಾರು ಎರಡು ನೂರು ವೈಯಕ್ತಿಕ ಶೌಚಾಲಯಗಳಿವೆ. ಆದರೆ ಬಳಕೆಯಾಗುತ್ತಿರುವವು ಕೇವಲ ಬೆರಳೆಣಿಕ ಶೌಚಾಲಯ ಮಾತ್ರ. ಮಹಿಳೆಯರು ಪುರುಷರು ಬೇಧವಿಲ್ಲದೇ ಈಗಲೂ ರಸ್ತೆ ಪಕ್ಕದ ಬಯಲನ್ನೇ ಬಹಿರ್ದೆಸೆಯ ತಾಣವಾಗಿಸಿಕೊಂಡಿದ್ದಾರೆ.ತಾಂತ್ರಿಕ ಅರಿವಿಲ್ಲದ ಬಹುತೇಕ ಜನರು ಶೌಚಾಲಯಗಳನ್ನು ಬೇಕಾಬಿಟ್ಟಿಯಾಗಿ ಕಟ್ಟಿಕೊಂಡಿದ್ದಾರೆ. ಬಯಲಲ್ಲಿ ಮಲ ವಿಸರ್ಜಿಸಿದರೂ ಸರಿ. ಆದರೆ ಶೌಚಾಲಯ ಬಳಸುವುದಕ್ಕೆ ಕೆಲವರಿಗೆ ನಾಚಿಕೆಯಾಗುತ್ತದೆಯಂತೆ. ಒಂದಷ್ಟು ಹಣದಲ್ಲಿ ಕಾಟಾಚಾರಕ್ಕೆ ಗೋಡೆ ನಿರ್ಮಿಸಿಕೊಂಡು ಸಹಾಯಧನ ಪಡೆಯುವುದಷ್ಟೇ ಇಲ್ಲಿ ಮುಖ್ಯ ಉದ್ದೇಶವಾಗಿದೆಯೇ ಹೊರತು ಬಯಲು ಬಹಿರ್ದೆಸೆ ಮುಕ್ತವಾಗಿಸಬೇಕೆಂಬ ಕಲ್ಪನೆ ಯಾರಲ್ಲಿಯೂ ಇಲ್ಲ ಎಂದು ಗ್ರಾಮದ ಹನುಮಂತಪ್ಪ, ಬಸವರಾಜ  ಅಸಮಾಧಾನ ಹೊರಹಾಕಿದರು.ಪಂಚಾಯಿತಿ ಸದಸ್ಯರೇ ಕೆಲಸದ ಗುತ್ತಿಗೆ ಹಿಡಿದು ಚರಂಡಿ ನಿರ್ಮಿಸಿದ್ದಾರೆ. ಎಂಜಿನಿಯರ್‌ಗಳು ಬಿಲ್‌ ತಯಾರಿಸಿಕೊಟ್ಟಿದ್ದಾರೆ.  ಆದರೆ ಕೊಳಚೆ ನೀರು ಹರಿದು ಹೋಗದೆ ರಸ್ತೆಯಲ್ಲಿಯೇ ಮಡುಗಟ್ಟುತ್ತದೆ. ರಸ್ತೆಗೆ ಅಡ್ಡಲಾಗಿ ಚರಂಡಿ ನಿರ್ಮಿಸಿದ್ದಾರೆ. ತೀರಾ ಕಳಪೆ ಮತ್ತು ಅಷ್ಟೇ ಅವೈಜ್ಞಾನಿಕವಾಗಿದ್ದು, ಈಗಾಗಲೇ ಕುಸಿದುಬಿದ್ದು ವಾಹನ ಸಂಚಾರಕ್ಕೆ ಅಡ್ಡಿಯಾಗಿದೆ ಎಂದು ಜನರು ದೂರಿದರು.ರಾಷ್ಟ್ರೀಯ ಹೆದ್ದಾರಿಯಲ್ಲಿ ಟೋಲ್‌ಗೇಟ್‌ ಶುಲ್ಕ ತಪ್ಪಿಸುವ ಸಲುವಾಗಿ ಅಧಿಕ ಭಾರದ ಲಾರಿಗಳು ಗ್ರಾಮದ ಒಳಗೇ ಸಂಚರಿಸುತ್ತಿದ್ದು ರಸ್ತೆ ಹಾಳಾಗುತ್ತಿದೆ.  ಸರ್ಕಾರದ ಕೆಲಸಗಳನ್ನು ಗುತ್ತಿಗೆ ಹಿಡಿಯುವುದಷ್ಟೆ ತಮ್ಮ ಕರ್ತವ್ಯ ಎಂದು ಪಂಚಾಯಿತಿ ಸದಸ್ಯರು ಭಾವಿಸಿದ್ದಾರೆ. ಅವ್ಯವಸ್ಥೆ ಪ್ರಶ್ನಿಸಿದವರ ಮೇಲೆ ದೌರ್ಜನ್ಯ ನಡೆಸಲಾಗುತ್ತದೆ ಎಂದು ಹೆಸರು ಹೇಳಲು ಇಚ್ಛಿಸದ ಗ್ರಾಮದ ಕೆಲವರು ವಸ್ತುಸ್ಥಿತಿ ಬಿಡಿಸಿಟ್ಟರು.ಒಂದು ಅಂಗನವಾಡಿ ಕೇಂದ್ರ ಮಲೀನ ವಾತಾವರಣದಲ್ಲಿದ್ದರೆ, ಇನ್ನೊಂದು ಕೇಂದ್ರದ ಕಟ್ಟಡ ಅನೇಕ ವರ್ಷಗಳಿಂದ ಅಪೂರ್ಣ ಸ್ಥಿತಿಯಲ್ಲಿದೆ. ಎಂಟನೇ ತರಗತಿವರೆಗಿನ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಕೇವಲ ಮೂರು ಕೊಠಡಿಗಳಿದ್ದು ಹಳೆಯ ಕೊಠಡಿಗಳು ಶಿಥಿಲಾವಸ್ಥೆಯಲ್ಲಿವೆ.

ಹೊಸದಾಗಿ ಕೊಠಡಿ ಮಂಜೂರಾದರೂ ಗ್ರಾಮದ ಕೆಲವರು ಕೊಠಡಿ ನಿರ್ಮಾಣಕ್ಕೆ  ಅಡ್ಡಿಪಡಿಸುತ್ತಿರುವುದರಿಂದ ಮಕ್ಕಳು ಬಯಲಿನಲ್ಲಿ ಕಲಿಯುತ್ತಿದ್ದಾರೆ ಎಂದು ಜನ ವಿವರಿಸಿದರು.ಗ್ರಾಮದಲ್ಲಿ ಮೂವರು ಪಂಚಾಯಿತಿ ಸದಸ್ಯರಿದ್ದರೂ ಜವಾಬ್ದಾರಿ ನಿಭಾಯಿಸದ ಕಾರಣ ಸರ್ಕಾರದ ಸೌಲಭ್ಯಗಳು ಸಿಗುತ್ತಿಲ್ಲ ಎಂದು ಅವರು ಹೇಳಿದರು.

- ನಾರಾಯಣರಾವ ಕುಲಕರ್ಣಿ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.