ಶುಕ್ರವಾರ, ಮೇ 29, 2020
27 °C

ಎಂಎನ್‌ಪಿ ಸೇವೆಗೆ ಇಂದು ಚಾಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಎಂಎನ್‌ಪಿ ಸೇವೆಗೆ ಇಂದು ಚಾಲನೆ

ನವದೆಹಲಿ (ಪಿಟಿಐ):  ಸೇವಾ ಸಂಸ್ಥೆ ಬದಲಿಸಿದರೂ, ಮೊಬೈಲ್  ಸಂಖ್ಯೆಯನ್ನು ಸ್ಥಿರವಾಗಿ ಉಳಿಸಿಕೊಳ್ಳುವ (ಎಂಎನ್‌ಪಿ) ಸೌಲಭ್ಯವು ಗುರುವಾರದಿಂದ ದೇಶದಾದ್ಯಂತ ಚಾಲನೆಗೆ ಬರಲಿದೆ.

ಗ್ರಾಹಕರು ತಮ್ಮ ಹಲವಾರು ಅಗತ್ಯಗಳಿಗೆ ಸೂಕ್ತವೆನಿಸಿದ ಮೊಬೈಲ್ ಸೇವಾ ಸಂಸ್ಥೆ ಆಯ್ದುಕೊಂಡರೂ, ಮೊಬೈಲ್ ಸಂಖ್ಯೆ ಬದಲಾವಣೆಯಾಗದ  ಈ ವಿಶಿಷ್ಟ ಸೇವೆಯನ್ನು ಪ್ರಧಾನಿ ಮನಮೋಹನ್ ಸಿಂಗ್ ಉದ್ಘಾಟಿಸಲಿದ್ದಾರೆ. ಈ ಸೇವೆ ಜಾರಿಗೆ ಬರುವುದರಿಂದ ಸೇವಾ ಗುಣಮಟ್ಟ ಸುಧಾರಿಸಲು ಮೊಬೈಲ್ ಸೇವಾ ಸಂಸ್ಥೆಗಳು ಅನಿವಾರ್ಯವಾಗಿ ಸೂಕ್ತ ಕ್ರಮಕೈಗೊಳ್ಳಬೇಕಾಗುತ್ತದೆ.

ಗ್ರಾಹಕರು ತಮ್ಮ ಅಗತ್ಯಕ್ಕೆ ತಕ್ಕಂತೆ ಮೊಬೈಲ್ ಸೇವಾ ಸಂಸ್ಥೆ ಇಲ್ಲವೇ ತಂತ್ರಜ್ಞಾನ (ಜಿಎಸ್‌ಎಂ ಅಥವಾ ಸಿಡಿಎಂಎ) ಬದಲಿಸಿದರೂ ಅವರ ಮೊಬೈಲ್ ಸಂಖ್ಯೆ ಸ್ಥಿರವಾಗಿಯೇ ಇರಲಿದೆ. ‘ಎಂಎನ್‌ಪಿ’ ಜಾರಿಯು    ಗ್ರಾಹಕರ ಹಿತದೃಷ್ಟಿಯಲ್ಲಿ ದೊಡ್ಡ ಹೆಜ್ಜೆಯಾಗಿದೆ. ಗ್ರಾಹಕರಿಗೆ ಆಯ್ಕೆಯ ಸ್ವಾತಂತ್ರ್ಯ ಹೆಚ್ಚಿಸಲಿದ್ದು, ಮೊಬೈಲ್ ಸೇವಾ ರಂಗದಲ್ಲಿ ಸ್ಪರ್ಧೆ ಇನ್ನಷ್ಟು ಹೆಚ್ಚಿಸಲಿದೆ.

 ಸಂಸ್ಥೆಯೊಂದರ ಸೇವಾ ದಕ್ಷತೆ ಹೆಚ್ಚಿದಷ್ಟೂ ಗ್ರಾಹಕರು ಆ ಸಂಸ್ಥೆ ಆಯ್ಕೆ ಮಾಡಿಕೊಳ್ಳಲು ಒಲವು ತೋರುತ್ತಾರೆ ಎಂದು ದೂರಸಂಪರ್ಕ ಸಚಿವ ಕಪಿಲ್ ಸಿಬಲ್ ಅಭಿಪ್ರಾಯಪಟ್ಟಿದ್ದಾರೆ. ಹರಿಯಾಣ ವೃತ್ತದಲ್ಲಿ  ನವೆಂಬರ್‌ನಲ್ಲಿಯೇ ಈ ಸೇವೆ ಈಗಾಗಲೇ ಜಾರಿಗೆ ಬಂದಿದೆ. ಗುರುವಾರದಿಂದ ಈ ಸೌಲಭ್ಯವು ದೇಶದ ಎಲ್ಲ ವೃತ್ತಗಳಲ್ಲಿ ಜಾರಿಗೆ ಬರಲಿದೆ.  ಐಡಿಯಾ ಸೆಲ್ಯುಲರ್ ಮತ್ತು ವೊಡಾಫೋನ್ ಸಂಸ್ಥೆಗಳು ಹೊಸ ಗ್ರಾಹಕರನ್ನು ಸೆಳೆಯಲು ಈಗಾಗಲೇ ಜಾಹೀರಾತು ಸಮರ ಆರಂಭಿಸಿವೆ.

 ಸಂಸ್ಥೆಗಳನ್ನು ಬದಲಿಸಲು ಸಿದ್ಧರಾಗಿರುವ ಗ್ರಾಹಕರ ಅನುಕೂಲಕ್ಕಾಗಿ ಉಚಿತ ಕರೆ ಸಂಖ್ಯೆಯನ್ನೂ ಆರಂಭಿಸಿವೆ.  ಇತರ ಸೇವಾ ಸಂಸ್ಥೆಗಳೂ ಇದೇ ಬಗೆಯ ಪ್ರಚಾರ ಕಾರ್ಯಕ್ರಮ ಹಮ್ಮಿಕೊಳ್ಳುವ ಸಾಧ್ಯತೆಗಳಿವೆ.

‘ಎಂಎನ್‌ಪಿ’ ಜಾರಿಗೆ ಬರುತ್ತಿದ್ದಂತೆ ನಂತರ ಪಾವತಿ ಕರೆ ದರಗಳು ಇನ್ನಷ್ಟು ಅಗ್ಗವಾಗಲಿವೆ. ಪೂರ್ವ ಪಾವತಿ ಕರೆ ದರಗಳಲ್ಲಿ ಹೆಚ್ಚಿನ ಬದಲಾವಣೆ ಕಂಡು ಬರಲಿಕ್ಕಿಲ್ಲ ಎಂದು ಸಿಸ್ಟೆಮಾ ಶ್ಯಾಮ್ ಟೆಲಿಸರ್ವಿಸಸ್‌ನ ಅಧ್ಯಕ್ಷ ಸ್ವೆವೊಲ್ಡ್ ರೊಜಾನೊವ್ ಅಭಿಪ್ರಾಯಪಟ್ಟಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.