ಬುಧವಾರ, ಮೇ 19, 2021
22 °C
ವಿದೇಶ ವಿದ್ಯಮಾನ

ಎಂಜಿನಿಯರಿಂಗ್ ಕೌತುಕ: ಪನಾಮ ಕಾಲುವೆ ವಿಸ್ತರಣೆ

ಜಯಸಿಂಹ ಆರ್‌. Updated:

ಅಕ್ಷರ ಗಾತ್ರ : | |

ಎಂಜಿನಿಯರಿಂಗ್ ಕೌತುಕ: ಪನಾಮ ಕಾಲುವೆ ವಿಸ್ತರಣೆ

ಬರೋಬ್ಬರಿ ಏಳು ವರ್ಷಗಳ ಕಾಮಗಾರಿಯ ನಂತರ ಪನಾಮಾ ಸರ್ಕಾರ ಪನಾಮ ಕಾಲುವೆ ವಿಸ್ತರಣೆಯನ್ನು ಮುಗಿಸಿದೆ. ಚೀನಾದ ದೊಡ್ಡ ಸರಕು ಸಾಗಣೆ ಹಡಗು ಈ ಕಾಲುವೆಯನ್ನು ಭಾನುವಾರ ಹಾದುಹೋಗಿದೆ. ಪನಾಮ ಕಾಲುವೆ ಅಂದರೆ ತೊಟ್ಟಿಗಳು, ನೀರು ಕಾಲುವೆ ಮತ್ತು ಸರೋವರಗಳಿಂದ ಕೂಡಿರುವ ಒಂದು ಜಲಮಾರ್ಗ. ಇಲ್ಲಿನ ಕಾಲುವೆ ಮತ್ತು ಸರೋವರಗಳು ಬೃಹತ್ ಹಡಗುಗಳು ಲಂಗರು ಹಾಕಿ ನಿಲ್ಲುವಷ್ಟು ವಿಸ್ತಾರವಾಗಿವೆ. ಆದರೆ ಇವುಗಳ ನಡುವೆ ಸಂಪರ್ಕ ಕಲ್ಪಿಸುವ ತೊಟ್ಟಿಗಳ ಅಗಲ ಮತ್ತು ಆಳ ಸಣ್ಣ ಹಡಗುಗಳು ಸಾಗುವಷ್ಟು ಮಾತ್ರ ವಿಸ್ತಾರವಾಗಿದೆ.ಶತಮಾನದಷ್ಟು ಹಳೆಯದಾದ ಈ ತೊಟ್ಟಿಗಳ ಮೂಲಕ ಈ ಕಾಲದ ಬೃಹತ್‌ ಹಡಗುಗಳು ಸಾಗುವುದು ಸಾಧ್ಯವಿಲ್ಲ. ಆದರೂ ವಿಶ್ವದಲ್ಲಿ ಸಂಚರಿಸುವ ಸರಕು ಸಾಗಣೆ ಹಡಗುಗಳಲ್ಲಿ ಶೇ 5ರಷ್ಟು  ಈ ಕಾಲುವೆಯನ್ನು ಬಳಸುತ್ತವೆ. ಪನಾಮದ ಆದಾಯಗಳಲ್ಲಿ ಈ ಕಾಲುವೆಯ ಕೊಡುಗೆಯೂ ಸಾಕಷ್ಟಿದೆ. ಆದರೆ ಬೃಹತ್‌ ಹಡಗುಗಳು ಬೇರೆ ಮಾರ್ಗವನ್ನು ಬಳಸುತ್ತವೆ.ಹೀಗಾಗಿ ಪನಾಮ ಸರ್ಕಾರ ಮೊದಲಿಗೆ ಕಾಲುವೆಯಲ್ಲಿರುವ ತೊಟ್ಟಿಗಳ ಅಗಲವನ್ನು ಹೆಚ್ಚಿಸಲು ಯೋಜಿಸಿತು. ಆದರೆ ಹಳೆಯ ತೊಟ್ಟಿಗಳನ್ನು ಅಗಲಿಸದೆ ಅವುಗಳಿಗೆ  ಸಮನಾಂತರವಾಗಿ ದೊಡ್ಡ ತೊಟ್ಟಿಗಳನ್ನು ನಿರ್ಮಿಸಿದೆ. ಜತೆಗೆ ದೊಡ್ಡ ಕಾಲುವೆಯನ್ನೂ ನಿರ್ಮಿಸಿದೆ. ಕಾಲುವೆ ವಿಸ್ತರಣೆಯಿಂದ ಏಷ್ಯಾ ಮತ್ತು ಅಮೆರಿಕ  ನಡುವೆ ಸರಕು ಸಾಗಣೆ ಸಾಮರ್ಥ್ಯ ಹೆಚ್ಚಳಕ್ಕೆ ಇನ್ನಷ್ಟು ಉತ್ತೇಜನ ಸಿಗಲಿದೆ. ಅಲ್ಲದೆ ಬೃಹತ್‌ ಗಾತ್ರದ ಹಡಗುಗಳು ದಕ್ಷಿಣ ಅಮೆರಿಕ ಖಂಡವನ್ನು ಸುತ್ತು ಹಾಕುವ ಅಗತ್ಯ ಇರುವುದಿಲ್ಲ. ಇದರಿಂದ ಸಮಯ, ಇಂಧನ, ವೆಚ್ಚಗಳಲ್ಲಿ ಭಾರಿ  ಉಳಿತಾಯವಾಗುತ್ತದೆ.ಹೀಗಿದೆ ಪನಾಮ ಕಾಲುವೆ

ಪನಾಮ ಕಾಲುವೆ ಪೆಸಿಫಿಕ್ ಮತ್ತು ಅಟ್ಲಾಂಟಿಕ್ ಸಮುದ್ರಗಳನ್ನು ಜೋಡಿಸುತ್ತದೆ. ಉತ್ತರ ಮತ್ತು ದಕ್ಷಿಣ ಅಮೆರಿಕವನ್ನು  ಕೂಡಿಸುವ ಸುಮಾರು 50 ಕಿ.ಮೀ ಅಗಲದ ಭೂಭಾಗದಲ್ಲಿ ಈ ಕಾಲುವೆ ಇದೆ. ಈ ಭೂಭಾಗ ಘಟ್ಟ ಪ್ರದೇಶವಾಗಿದ್ದು, ಸಮುದ್ರ ಮಟ್ಟದಿಂದ ಅತ್ಯಂತ ಕಡಿಮೆ ಎತ್ತರದ ಜಾಗದ ಎತ್ತರವೇ 320 ಅಡಿ ಇದೆ.

ಹೀಗಾಗಿ ನೇರವಾಗಿ ಒಂದು ಕಾಲುವೆ ತೋಡಿ ಹಡಗುಗಳನ್ನು ಸಾಗಿಸಲು ಇಲ್ಲಿ ಸಾಧ್ಯವಿಲ್ಲ. ಈ ಭಾಗದಿಂದ ಪೆಸಿಫಿಕ್ ಸಮುದ್ರಕ್ಕೆ ಹರಿಯುತ್ತಿದ್ದ ನದಿಯೊಂದಕ್ಕೆ ಅಡ್ಡಲಾಗಿ ನಾಲ್ಕು ಅಣೆಕಟ್ಟೆಗಳನ್ನು ಕಟ್ಟಿ, ಎರಡು ಕೃತಕ ಸರೋವರಗಳನ್ನು ನಿರ್ಮಿಸಲಾಗಿದೆ. ದೊಡ್ಡ ಗಾಟನ್ ಸರೋವರ ಕೆರಿಬಿಯನ್ ಸಮುದ್ರದ ಬಳಿ ಇದೆ. ಚಿಕ್ಕ ಸರೋವರ ಮಿರಾಫ್ಲೋರ್ಸ್ ಫೆಸಿಫಿಕ್ ಸಮುದ್ರದ ಬಳಿ ಇದೆ. ಈ ಎರಡೂ ಸರೋವರಗಳ ನಡುವೆ ಒಂದು ಕಾಲುವೆ ಹರಿಯುತ್ತದೆ.ಈ ಕೃತಕ ಸರೋವರಗಳು ಮತ್ತು ಕಾಲುವೆಯ ನೀರಿನ ಮಟ್ಟ ಸಮುದ್ರದ ನೀರಿನ ಮಟ್ಟಕ್ಕಿಂತ 26 ಮೀಟರ್ ಎತ್ತರದಲ್ಲಿದೆ. ಸಮುದ್ರ ಮಟ್ಟದಿಂದ ಹಡಗುಗಳನ್ನು  26 ಮೀಟರ್‌ ಮೇಲಕ್ಕೆ ಎತ್ತಿ ಸರೋವರಗಳಿಗೆ ಬಿಡುವುದು ಹಾಗೂ ಮತ್ತೆ ಸಮುದ್ರದ ಮಟ್ಟಕ್ಕೆ ಇಳಿಸುವುದು ಈ ಕಾಲುವೆಯ ವೈಶಿಷ್ಟ್ಯ. ಹಡಗುಗಳನ್ನು ಮೇಲಕ್ಕೆ ಎತ್ತಿ ನಂತರ ಕೆಳಗಿಳಿಸಲು ನೀರಿನ ತೊಟ್ಟಿಗಳನ್ನು ಬಳಸಲಾಗುತ್ತದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.