ಭಾನುವಾರ, ಮೇ 9, 2021
20 °C

ಎಚ್‌ಡಿಕೆ ದಂಪತಿ ನಿರೀಕ್ಷಣಾ ಜಾಮೀನು: ಗುರುವಾರ ಹೈಕೋರ್ಟ್ ತೀರ್ಪು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಎಚ್‌ಡಿಕೆ ದಂಪತಿ ನಿರೀಕ್ಷಣಾ ಜಾಮೀನು: ಗುರುವಾರ ಹೈಕೋರ್ಟ್ ತೀರ್ಪು

ಬೆಂಗಳೂರು :  ಹಲವು ಆರೋಪಗಳಿಗೆ ತುತ್ತಾಗಿ ವಿಚಾರಣೆ ಎದುರಿಸುತ್ತಿರುವ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ  ಹಾಗೂ ಅವರ ಪತ್ನಿ ಶಾಸಕಿ ಅನಿತಾ ಕುಮಾರಸ್ವಾಮಿ ಅವರ ನಿರೀಕ್ಷಣಾ ಜಾಮೀನು ಅರ್ಜಿಯ ತೀರ್ಪನ್ನು ಹೈಕೋರ್ಟ್ ಗುರುವಾರಕ್ಕೆ ಕಾಯ್ದಿರಿಸಿದ್ದು, ಬುಧವಾರದ ಮಟ್ಟಿಗೆ ನ್ಯಾಯಾಲಯಕ್ಕೆ ಹಾಜರಾಗುವುದರಿಂದ ವಿನಾಯಿತಿ ನೀಡಿದೆ.

ಲೋಕಾಯುಕ್ತ ವಿಶೇಷ ಕೋರ್ಟ್‌ ವಿಚಾರಣೆ ಹಿನ್ನೆಲೆಯಲ್ಲಿ ನಿರೀಕ್ಷಣಾ ಜಾಮೀನು ಕೋರಿದ್ದ  ಎಚ್‌ಡಿಕೆ ದಂಪತಿ ಅರ್ಜಿಯ ವಿಚಾರಣೆಯನ್ನು ಬುಧವಾರ ನಡೆಸಿದ ಹೈಕೋರ್ಟ್‌ ನ್ಯಾಯಮೂರ್ತಿ ಎಲ್.ನಾರಾಯಣಸ್ವಾಮಿ ಅವರ ಏಕಸದಸ್ಯ ಪೀಠವು  ಗುರುವಾರ ಬೆಳಿಗ್ಗೆ 10.30 ಗಂಟೆಗೆ ಎಚ್‌ಡಿಕೆ ತನ್ನ ಆದೇಶ ನೀಡುವುದಾಗಿ ಹೇಳಿ ಅಲ್ಲಿಯವರೆಗೆ ತಾತ್ಕಾಲಿಕ ಜಾಮೀನು ನೀಡಿತು. ಜೊತೆಗೆ ದಂಪತಿಗೆ ವಿಶೇಷ ನ್ಯಾಯಾಲಯದಲ್ಲಿ ಖುದ್ದು ಹಾಜರಾತಿಗೆ ಒಂದು ದಿನದ ವಿನಾಯ್ತಿ ನೀಡಿತು.

ಈ ಮಧ್ಯೆ  ಜಂತಕಲ್ ಮೈನಿಂಗ್ ಕಂಪೆನಿಗೆ ಗಣಿ ಗುತ್ತಿಗೆ ಲೈಸೆನ್ಸ್ ನೀಡುವಲ್ಲಿ ಮತ್ತು ವಿಶ್ವಭಾರತಿ ಗೃಹ ನಿರ್ಮಾಣ ಸಹಕಾರ ಸಂಘಕ್ಕೆ ಭೂಮಿ ಮಂಜೂರು ಮಾಡುವಲ್ಲಿ ಅಕ್ರಮ ಎಸಗಿರುವ ಪ್ರಕರಣಗಳ ವಿಚಾರಣೆ ನಡೆಸುತ್ತಿರುವ  ಲೋಕಾಯುಕ್ತ ವಿಶೇಷ ನ್ಯಾಯಾಲಯಕ್ಕೆ ಮಾಜಿ ಮುಖ್ಯಮಂತ್ರಿ ಕುಮಾರ ಸ್ವಾಮಿ ಮತ್ತು ಅವರ ಪತ್ನಿ ಬುಧವಾರ ಸಹ ಹಾಜರಾಗಲಿಲ್ಲ.ಹೀಗಾಗಿ ಅವರು ನ್ಯಾಯಾಲಯದ ಕೆಂಗಣ್ಣಿಗೆ ಗುರಿಯಾಗಿದ್ದು, ಲೋಕಾಯುಕ್ತ ವಿಶೇಷ ನ್ಯಾಯಾಲಯದ ನ್ಯಾಯಾಧೀಶರು ವಿಚಾರಣೆಯನ್ನು ಮಧ್ಯಾಹ್ನ 1ಗಂಟೆ ಮುಂದೂಡಿದರು, ಆಗಲೂ ದಂಪತಿಗಳು ಹಾಜರಾಗದ ಹಿನ್ನೆಲೆಯಲ್ಲಿ 3 ಗಂಟೆಗೆ ವಿಚಾರಣೆ ಮುಂದೂಡಲಾಗಿದೆ.ವಕೀಲರಾದ ವಿನೋದ್‌ಕುಮಾರ್ ಸಲ್ಲಿಸಿರುವ ಖಾಸಗಿ ದೂರಿನ ವಿಚಾರಣೆ ಆರಂಭಿಸಿರುವ `ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ` (ಲೋಕಾಯುಕ್ತ) ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಎನ್. ಕೆ.ಸುಧೀಂದ್ರ ರಾವ್, ಆಗಸ್ಟ್ 30ರಂದು ಖುದ್ದು ಹಾಜರಾಗುವಂತೆ ಸಮನ್ಸ್ ಜಾರಿ ಮಾಡಿದ್ದರು. ಅನಾರೋಗ್ಯದ ಕಾರಣ ನೀಡಿ ಅಂದು ಇಬ್ಬರೂ ವಿಚಾರಣೆಗೆ ಹಾಜರಾಗಿರಲಿಲ್ಲ. 

ಆಗ ನ್ಯಾಯಾಲಯ ಪ್ರಕರಣದ ವಿಚಾರಣೆಯನ್ನು ಸೆ.5ಕ್ಕೆ ಮುಂದೂಡಿ ಅಂದು ನ್ಯಾಯಾಲಯಕ್ಕೆ ಖುದ್ದು ಹಾಜರಾಗುವಂತೆ ತಿಳಿಸಿತ್ತು.ಎಚ್‌ಡಿಕೆ ದಂಪತಿ ಸೋಮವಾರವೂ ಸಹ ಅನಾರೋಗ್ಯದ ಕಾರಣ ನೀಡಿದ್ದು, ಖುದ್ದು ಹಾಜರಾತಿಯಿಂದ ಎರಡು ವಾರಗಳ ವಿನಾಯಿತಿ ಕೋರಿ ತಮ್ಮ ವಕೀಲರ ಮೂಲಕವಾಗಿ ನ್ಯಾಯಾಲಯಕ್ಕೆ ಮನವಿ ಮಾಡಿಕೊಂಡರು. ಈ ಮನವಿಗೆ ತೀವ್ರವಾಗಿ ಪ್ರತಿಕ್ರಿಯಿಸಿರುವ ನ್ಯಾಯಾಲಯ ಆಪಾದಿತರು ನ್ಯಾಯಾಲಯಕ್ಕೆ ಗಡುವು ನೀಡುವಂತಿಲ್ಲ ಎಂದು ಎಚ್ಚರಿಸಿ, ಸೆ 7ಕ್ಕೆ ವಿಚಾರಣೆಯನ್ನು ಮುಂದೂಡಿತ್ತು.ಪದೇ ಪದೇ ಅನಾರೋಗ್ಯದ ಕಾರಣ ನೀಡಿ ನ್ಯಾಯಾಲಯಕ್ಕೆ ಎಚ್‌ಡಿಕೆ ದಂಪತಿ ಗೈರು ಹಾಜರಾಗುತ್ತಿರುವ ಹಿನ್ನೆಲೆಯಲ್ಲಿ ಬುಧವಾರ ನ್ಯಾಯಾಧೀಶರು ಅವರ ಅನಾರೋಗ್ಯ ಕುರಿತಾದ ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸುವಂತೆ ಎಚ್‌ಡಿಕೆ ಪರ ವಕೀಲರಿಗೆ ಸೂಚಿಸಿದ್ದಾರೆ. 

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.