ಶನಿವಾರ, ಜೂಲೈ 11, 2020
28 °C

ಎಚ್‌ಡಿಕೆ ವಿರುದ್ಧ ಹಕ್ಕುಚ್ಯುತಿ ನಿರ್ಣಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ವಿಧಾನಸಭೆಯನ್ನು ಹೆಂಡದ ಅಂಗಡಿಗೆ ಹೋಲಿಸಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ವಿಧಾನಸಭೆಗೆ ಅಗೌರವ ಸೂಚಿಸಿದ್ದು, ಅವರ ವಿರುದ್ಧ ಬಿಜೆಪಿ ಸದಸ್ಯರು ಬುಧವಾರ ಹಕ್ಕುಚ್ಯುತಿ ನಿರ್ಣಯ  ಮಂಡಿಸಿದರು.ಪ್ರತಿಪಕ್ಷ ಸದಸ್ಯರು ಸಭಾಧ್ಯಕ್ಷರ ಪೀಠದ ಮುಂದೆ ಧರಣಿ ನಡೆಸುತ್ತಿದ್ದ ಸಂದರ್ಭದಲ್ಲೇ ತುಮಕೂರು ಗ್ರಾಮಾಂತರ ಕ್ಷೇತ್ರದ ಶಾಸಕ ಸುರೇಶಗೌಡ ವಿಧಾನಸಭೆಯಲ್ಲಿ ನಿರ್ಣಯ ಮಂಡಿಸಿ, ಕುಮಾರಸ್ವಾಮಿ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದರು. ಈ ನಿರ್ಣಯಕ್ಕೆ ಬಿಜೆಪಿ ಸದಸ್ಯರಾದ ನಂದೀಶ್‌ರೆಡ್ಡಿ, ಸಿದ್ದು ಸವದಿ ಮತ್ತು ಎಂ.ಪಿ.ಕುಮಾರಸ್ವಾಮಿ ಸಹಿ ಹಾಕಿದ್ದಾರೆ.ಸಂಸದೀಯ ವ್ಯವಹಾರಗಳ ಸಚಿವ ಸುರೇಶ್‌ಕುಮಾರ್ ಮಾತನಾಡಿ, ಕುಮಾರಸ್ವಾಮಿ ಅವರು ಲೋಕಸಭಾ ಸದಸ್ಯರಾಗಿರುವ ಕಾರಣ, ಅವರ ವಿರುದ್ಧ ನೇರವಾಗಿ ಕ್ರಮ ತೆಗೆದುಕೊಳ್ಳಲು ಸಾಧ್ಯ ಇಲ್ಲ. ಹೀಗಾಗಿ ಲೋಕಸಭಾಧ್ಯಕ್ಷರಿಗೆ ಪತ್ರ ಬರೆದು, ಕ್ರಮಕ್ಕೆ ಒತ್ತಾಯಿಸಬಹುದು ಎಂದು ಹೇಳಿದರು.ನಂತರ ವಿಧಾನಸಭಾಧ್ಯಕ್ಷ ಕೆ.ಜಿ.ಬೋಪಯ್ಯ ಮಾತನಾಡಿ, ‘ನಿರ್ಣಯವನ್ನು ಪರಿಶೀಲಿಸಿ, ಮುಂದಿನ ಕ್ರಮಕ್ಕೆ ಲೋಕಸಭಾಧ್ಯಕ್ಷರಿಗೆ ಕಳುಹಿಸಲಾಗುವುದು’ ಎಂದು ಹೇಳಿದರು.ಪರಿಷತ್‌ನಲ್ಲೂ ಮಂಡನೆ: ಕುಮಾರಸ್ವಾಮಿ ಅವರ ಹೇಳಿಕೆಯಿಂದ ಸದನದ ಹಕ್ಕುಚ್ಯುತಿ ಆಗಿದ್ದು, ಅವರನ್ನು ಸದನಕ್ಕೆ ಕರೆಸಿ ಛೀಮಾರಿ ಹಾಕಬೇಕು ಎಂಬ ಬೇಡಿಕೆಯುಳ್ಳ ಹಕ್ಕುಚ್ಯುತಿ ಪ್ರಸ್ತಾವವನ್ನು ವಿಧಾನ ಪರಿಷತ್‌ನಲ್ಲಿ ಬಿಜೆಪಿಯ ಗೋ.ಮಧುಸೂದನ್ ಮತ್ತು ಮನೋಹರ ಮಸ್ಕಿ ಮಂಡಿಸಿದರು. ಸಿದ್ದರಾಜು ಅನುಮೋದಿಸಿದರು.ಸಚಿವ ಬಸವರಾಜ ಬೊಮ್ಮಾಯಿ ಪ್ರಸ್ತಾವವನ್ನು ಲೋಕಸಭೆಯ ಅಧ್ಯಕ್ಷರಿಗೆ ಕಳುಹಿಸಬೇಕೆಂದು ಸಲಹೆ ಮಾಡಿದರು. ಈ ಹಿನ್ನೆಲೆಯಲ್ಲಿ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಸಭಾಪತಿ ಡಿ.ಎಚ್.ಶಂಕರಮೂರ್ತಿ ಪ್ರಕಟಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.